ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ಜಲಪಾತಗಳ ಭುವನಮೋಹಿನಿ

Last Updated 13 ಜುಲೈ 2016, 10:55 IST
ಅಕ್ಷರ ಗಾತ್ರ

ಚಿರಾಪುಂಜಿಯ ವರ್ಷ ಋತು ವಿಶ್ವಪ್ರಸಿದ್ಧವಾದುದು. ಮಳೆಯ ಸಮೃದ್ಧಿಯಿಂದಾಗಿ ಸಾಲು ಸಾಲು ಜಲಪಾತಗಳನ್ನು ಹೊಂದಿರುವ ಚಿರಾಪುಂಜಿಯ ಪರಿಸರ ಸೃಷ್ಟಿಸಿರುವ ರುದ್ರ–ರಮಣೀಯ ಕಾವ್ಯದಂತೆ ಕಾಣಿಸುತ್ತದೆ.

‘ಪ್ರಪಂಚದ ಅತ್ಯಂತ ತೇವವಾದ ನೆಲ’ ಎನ್ನುವುದು ಮೇಘಾಲಯದ ಚಿರಾಪುಂಜಿಯ ಜೊತೆಗೆ ತಳಕು ಹಾಕಿಕೊಂಡಿರುವ ವಿಶೇಷಣ. ಚಿರಾಪುಂಜಿಯ ಕುರಿತ ಮಾತೆಂದರೆ ಅದು ಮಳೆ ಹಾಗೂ ಮಳೆಕಾಡುಗಳ ಕುರಿತ ಮಾತಲ್ಲದೆ ಬೇರೆಯಾಗಿರಲು ಸಾಧ್ಯವಿಲ್ಲ. ಚಿರಾಪುಂಜಿಯ ಮಳೆಯ ನಂಟಿಗೆ ದಾಖಲೆಗಳು ಹುಡುಕುತ್ತಾ ಹೋದರೆ ಎದುರಾಗುತ್ತಲೇ ಇರುತ್ತವೆ. ಉದಾ: 1974ರಲ್ಲಿ ಒಂದೇ ವರ್ಷದಲ್ಲಿ ಇಲ್ಲಿ 24555.4 ಮಿ.ಮೀ. ಮಳೆ ಸುರಿದಿದೆ. 1995ರ ಜೂನ್ 16ರ 24 ಗಂಟೆಗಳಲ್ಲಿ 1563 ಮಿ.ಮೀ. ಮಳೆ ಸುರಿದಿದೆ.

ಅಂದಹಾಗೆ, ಚಿರಾಪುಂಜಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳಲು ಕಾರಣ ಏನು? ಆ ಕಾರಣವನ್ನು ಒಂದು ಕುತೂಹಲಕರ ವೈಜ್ಞಾನಿಕ ಕಥೆಯಂತೆ ಹೇಳಬಹುದು. ಭೂಮಿಯ ಮೇಲೆ 6 ತಿಂಗಳು ಕಾಲ ಈಶಾನ್ಯ, 6 ತಿಂಗಳು ಕಾಲ ನೈಋತ್ಯ ದಿಕ್ಕಿನಲ್ಲಿ ಗಾಳಿ ಬೀಸುತ್ತದೆ. ಸಮಭಾಜಕ ವೃತ್ತದ ಕೆಳಗೆ ಬಂಗಾಳಕೊಲ್ಲಿಯ ಕಡೆಯಿಂದ ಪಶ್ಚಿಮದತ್ತ ಗಾಳಿ ಬೀಸುತ್ತದೆ. ಮಾರ್ಚ್ ವೇಳೆಗೆ ಸೂರ್ಯನ ಪ್ರಖರ ಕಿರಣಗಳು ಈ ವಲಯದ ಮೇಲೆ ನೇರವಾಗಿ ಬಿದ್ದು ಸಮುದ್ರ ಶಾಖಗೊಳ್ಳುತ್ತದೆ.

ನಿಧಾನವಾಗಿ ಸೂರ್ಯನ ಪ್ರಖರತೆ ಸಮಭಾಜಕ ವೃತ್ತದ ಉತ್ತರದಲ್ಲಿ ಬೀಳುತ್ತಿದ್ದಂತೆ ಸಮುದ್ರದ ಮೇಲೆ ಮೋಡಗಳು ರೂಪುಗೊಳ್ಳುವ ಕ್ರಿಯೆ ಪ್ರಾರಂಭವಾಗುತ್ತದೆ. ಏಪ್ರಿಲ್ ಹೊತ್ತಿಗೆ ಸಮುದ್ರ ಇನ್ನಷ್ಟು ಉಷ್ಣಗೊಂಡು, ಮೇ ತಿಂಗಳ ಮೊದಲ ವಾರದಲ್ಲಿ ನೈಋತ್ಯ ದಿಕ್ಕಿನ ಮುಂಗಾರು ಮೋಡಗಳು ಸಮುದ್ರದಿಂದ ಎದ್ದುಬರುತ್ತವೆ. ಮುಂಗಾರು ಮೋಡಗಳ ಒಂದು ರೆಕ್ಕೆ ಶ್ರೀಲಂಕಾದ ಹತ್ತಿರ ಕಾಣಿಸಿಕೊಂಡರೆ, ಇನ್ನೊಂದು ರೆಕ್ಕೆ ಬಂಗಾಲಕೊಲ್ಲಿಯಲ್ಲಿ ಇರುತ್ತದೆ. ಕೊನೆಗೆ ಮೋಡಗಳು ಇಡೀ ಭಾರತವನ್ನು ಸುತ್ತುವರಿದುಬಿಡುತ್ತವೆ.

ಸೂರ್ಯನ ಕಿರಣಗಳು ಈಗ ಇನ್ನಷ್ಟು ನೇರವಾಗಿ ಭಾರತ ಉಪಖಂಡದ ಮೇಲೆ ಬಿದ್ದು ಉಪಖಂಡ ಬಿಸಿಯಾಗಿ ಮುಂಗಾರು ಮೋಡಗಳನ್ನು ತನ್ನ ಕಡೆಗೆ ಅಯಸ್ಕಾಂತದಂತೆ ಸೆಳೆದುಕೊಳ್ಳುತ್ತದೆ. ಸಾಗರಗಳಿಂದ ನೀರು ಆವಿಯಾಗಿ ಮೇಲೆ ಹೋಗಿ ಮೋಡಗಳಾಗಿ ಪರಿವರ್ತನೆಯಾಗುವುದು ಒಂದು ನೈಸರ್ಗಿಕ ಕ್ರಿಯೆ. ಬಂಗಾಳಕೊಲ್ಲಿಯ ಜೊತೆಗೆ ಹಿಂದೂಮಹಾಸಾಗರದಲ್ಲಿನ ಮೋಡಗಳು ಕೂಡ ನೈಋತ್ಯ ದಿಕ್ಕಿನ ಕಡೆಯಿಂದ ಭಾರತ ಮತ್ತು ದಕ್ಷಿಣಪೂರ್ವ ದೇಶಗಳ ಮಧ್ಯೆ ಇರುವ ಬಂಗಾಳಕೊಲ್ಲಿಯ ಕಡೆಗೆ ಪ್ರಯಾಣ ಬೆಳೆಸುತ್ತವೆ.

(ಕೊಲ್ಲಿ: ಎರಡು ಅಥವಾ ಮೂರು ಕಡೆ ನೆಲವಿದ್ದು ಒಂದು ಕಡೆ ಸಮುದ್ರ ಇದ್ದರೆ ಅದನ್ನು ಕೊಲ್ಲಿ ಎನ್ನುತ್ತಾರೆ). ಕೊಲ್ಲಿಗಳಲ್ಲಿ ಯಾವ ಅಡೆತಡೆಯೂ ಇಲ್ಲದೆ ಚಂಡಮಾರುತ – ಸುನಾಮಿ ಅಲೆಗಳು ಮತ್ತು ಮೋಡಗಳು ನುಗ್ಗುತ್ತವೆ. ಜೊತೆಗೆ ಗಾಳಿ ಈ ಮೋಡಗಳಿಗೆ ರೆಕ್ಕೆಗಳನ್ನು ಕಟ್ಟಿ ಹಾರಿಸಿಕೊಂಡು ಹೋಗಿ ಬಾಂಗ್ಲಾದೇಶದ ಬಯಲುಗಳ ಮೂಲಕ ಹಿಮಾಲಯದ ಕಡೆಗೆ ಧಾವಿಸುತ್ತವೆ. ಮೋಡಗಳು ಸಾಮಾನ್ಯವಾಗಿ 3000 ಅಡಿಗಳ ಮೇಲೆ ಹಾರುತ್ತಿರುತ್ತವೆ.

ಸಮುದ್ರ ಮಟ್ಟದಿಂದ ಕೇವಲ ಹತ್ತಾರು ಮೀಟರ್ ಎತ್ತರದ ಬಾಂಗ್ಲಾದೇಶದ ಬಯಲುಗಳನ್ನು ಸಲೀಸಾಗಿ ದಾಟಿ, ಚಿರಾಪುಂಜಿಯ ಸಮೀಪ ಬರುತ್ತವೆ. ಆಗ ಒಂದು ಜಾದೂ ಸಂಭವಿಸುತ್ತದೆ. ಸುಮಾರು 4500 ಅಡಿ ಎತ್ತರದ ದಟ್ಟವಾದ ಹಸಿರು ಪರ್ವತಗಳು (ಪೂರ್ವ ಹಿಮಾಲಯ) ಮೋಡಗಳನ್ನು ಚಿರಾಪುಂಜಿಯ ಪರಿಸರದಲ್ಲಿ ಅಡ್ಡಗಟ್ಟಿ ನಿಲ್ಲಿಸಿಬಿಡುತ್ತವೆ. ಹಸಿರು, ನದಿ, ಕಣಿವೆ ತಪ್ಪಲುಗಳ ಮಧ್ಯೆ ಸಿಕ್ಕಿಕೊಳ್ಳುವ ಮೋಡಗಳು ತಣ್ಣಗಾಗಿ ಒಂದೇ ಸಮನೆ ಮಳೆ ಸುರಿಯತೊಡಗುತ್ತದೆ.

ಸಮುದ್ರದಿಂದ ನೀರನ್ನು ಒಂದೇ ಸಮನೆ ಮೊಗೆದು ತರುವ ರಾಶಿರಾಶಿ ಮೋಡಗಳು ಮೇ ತಿಂಗಳ ಮೊದಲು ವಾರ ಪ್ರಾರಂಭವಾದರೆ, ಕೆಲವೊಮ್ಮೆ ಅಕ್ಟೋಬರ್ ತಿಂಗಳವರೆಗೂ ಮುಂದುವರಿಯುತ್ತವೆ. ಇನ್ನೂ ಸರಳವಾಗಿ ಹೇಳುವುದಾದರೆ– ಚಿರಾಪುಂಜಿ ಮತ್ತು ಸುತ್ತಮುತ್ತಲ ಕಣಿವೆ ಪರ್ವತಗಳು ನೈಋತ್ಯ ಮುಂಗಾರು ಮೋಡಗಳು ಸಾಗುವ ದಾರಿಯಲ್ಲಿವೆ. ಇದೇ ಕಾರಣದಿಂದ ಚಿರಾಪುಂಜಿ ಪ್ರಪಂಚದಲ್ಲಿಯೇ ಹೆಚ್ಚು ಮಳೆ ಸುರಿಯುವ ಸ್ಥಳಗಳಲ್ಲೊಂದಾಗಿದೆ. ಚಿರಾಪುಂಜಿಯ ಸುತ್ತಮುತ್ತಲ ಜಲಪಾತಗಳು ಮಳೆಯ ನೀರನ್ನು ಲಾಳಿಕೆಯಲ್ಲಿ ಬಟ್ಟಿ ಇಳಿಸಿದಂತೆ ಬಾಂಗ್ಲಾದೇಶದ ಬಯಲುಗಳ ಮೇಲೆ ಹರಿಹಾಯುತ್ತವೆ.

ಈ ವಲಯದಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಿಂದ ಇಲ್ಲಿನ ಮರಳು ಮತ್ತು ಸುಣ್ಣದ ಶಿಲೆಗಳು ಮುರಿದುಬಿದ್ದು, ಮಳೆ ನೀರಿಗೆ ಕೊಚ್ಚಿಹೋಗಿ, ಆಳವಾದ ಪ್ರಪಾತಗಳು ಮತ್ತು ಕಮರಿಗಳು ಸೃಷ್ಟಿಯಾಗಿವೆ. ಕೆಲವಂತೂ ಪ್ರಪಂಚದಲ್ಲಿಯೇ ಆಳವಾದ ಪ್ರಪಾತಗಳು. ನಾಲ್ಕೈದು ಸಾವಿರ ಅಡಿಗಳ ಎತ್ತರದಿಂದ ಧುಮುಕುವ ಈ ಜಲಪಾತಗಳು ಬಾಂಗ್ಲಾದೇಶವನ್ನು ಹೈರಾಣ ಮಾಡಿಬಿಡುತ್ತವೆ. ಮಳೆಗಾಲದಲ್ಲಿ ಚಿರಾಪುಂಜಿಯ ಸುತ್ತಮುತ್ತಲಿರುವ ಗುಂಪು ಗುಂಪು ಜಲಪಾತಗಳನ್ನು ನೋಡುವುದೊಂದು ಅದ್ಭುತ ಅನುಭವ.

ಈ ಜಲಧಾರೆಗಳದು ವಿಶ್ವಖ್ಯಾತಿ. ಆದರೆ ಅದೃಷ್ಟ ಚೆನ್ನಾಗಿಲ್ಲವೆಂದರೆ ಇಡೀ ದಿನ ಕಾದು ಕುಳಿತರೂ ಮಳೆಗಾಲದ ಮೋಡಗಳು ಕಣಿವೆಗಳನ್ನು ಬಿಟ್ಟು ಕದಲುವುದಿಲ್ಲ. ಮೋಡಗಳ ದಟ್ಟೈಸುವಿಕೆಯಲ್ಲಿ ಸೂರ್ಯ ಕಣ್ಮರೆಯಾಗಿಬಿಡುತ್ತಾನೆ. ಅದೃಷ್ಟ ಚೆನ್ನಾಗಿದ್ದರೆ ಬಿಸಿಲು ಮತ್ತು ಮೋಡಗಳ ಕಣ್ಣಾಮುಚ್ಚಾಲೆಯ ದೊಂಬರಾಟ ಅಪೂರ್ವ ಚೆಲುವನ್ನು ಸೃಷ್ಟಿಸುತ್ತದೆ. ಮೋಡಗಳ ನಡುವೆಯೇ ನಾವು ಸುರಲೋಕದ ದೇವರುಗಳಂತೆ ನಡೆದಾಡುವ ಅನುಭವವನ್ನು ಸವಿದೇ ಅರ್ಥ ಮಾಡಿಕೊಳ್ಳಬೇಕು. ಶಿಲ್ಲಾಂಗ್ ಸುತ್ತಮುತ್ತ ಹಲವು ರಮಣೀಯ ಪ್ರವಾಸಿ ತಾಣಗಳಿವೆ. ಅಂದಹಾಗೆ, ಚಿರಾಪುಂಜಿ ಪ್ರವಾಸದಲ್ಲಿ ಮರೆಯಲೇ ಬಾರದ ಒಂದು ವಸ್ತುವೆಂದರೆ, ಗಟ್ಟಿಮುಟ್ಟಾದ ಛತ್ರಿ.

ಪೂರ್ವದ ಸ್ಕಾಟಿಷ್
ಹೆಸರಿನಲ್ಲೇ ಮಳೆಯ ನಂಟನ್ನು ಹೊಂದಿರುವ ಮೇಘಾಲಯ ರಾಜ್ಯ ‘ಮೋಡಗಳ ಆಲಯ’ ಎಂದೇ ಜನಜನಿತ. 22500 ಚ. ಕಿ.ಮೀ. ವಿಸ್ತೀರ್ಣದ ಈ ಪುಟ್ಟ ರಾಜ್ಯ ಬ್ರಹ್ಮಪುತ್ರ ನದಿಯ ದಕ್ಷಿಣಕ್ಕೆ, ಹಿಮಾಲಯ ಪರ್ವತ ಶ್ರೇಣಿಗಳಿಗೆ ಅಂಟಿಕೊಂಡಂತಿದೆ. ಈ ರಾಜ್ಯದ ಕೆಳಭಾಗದಲ್ಲಿ ಬಾಂಗ್ಲಾದೇಶದ ಬಯಲುಗಳು ಸುತ್ತುವರಿದಿವೆ. ಅಗಾಧ ಹಸಿರು ಕಣಿವೆ ತಪ್ಪಲುಗಳ ಈ ಹರಿದ್ವರ್ಣ ಅರಣ್ಯಗಳನ್ನು ಬ್ರಿಟಿಷರು ‘ಪೂರ್ವದ ಸ್ಕಾಟಿಷ್’ ಎಂದು ಕರೆದರು. ವಿದ್ಯಾಕೇಂದ್ರ ಗುರ್ತಿಸಿಕೊಂಡಿರುವ ಶಿಲ್ಲಾಂಗ್ ನಗರಕ್ಕೆ ‘ಭಾರತದ ಫ್ಯಾಶನ್ ನಗರ’ ಎನ್ನುವ ಅಗ್ಗಳಿಕೆಯೂ ಇದೆ.

ಮೇಘಾಲಯವನ್ನು ಮುಖ್ಯವಾಗಿ ಘಾರೋ, ಜಯಂತಿ ಮತ್ತು ಕಾಶಿ ಪರ್ವತಗಳೆಂದು ವಿಭಾಗಿಸಿದ್ದು, ಅದೇ ಹೆಸರಿನ ಬುಡಕಟ್ಟು ಜನಾಂಗಗಳು ಇಲ್ಲಿ ನೆಲೆಯೂರಿವೆ. ಘಾರೋ ಜನರು ಮೂಲವಾಗಿ ಟಿಬೆಟೋ–ಬರ್ಮಾ ಜನಾಂಗಕ್ಕೆ ಸೇರಿದವರಾದರೆ, ಕಾಶಿ ಜನರು ಮೋನ್–ಕೇಮರ್ ಗುಂಪಿನವರು, ಜಯಂತಿ ಜನಾಂಗದವರು ದಕ್ಷಿಣ ಪೂರ್ವ ಏಷಿಯಾ ಮೂಲದ ಜನರೆಂದು ಹೇಳುತ್ತಾರೆ. ಇವರಲ್ಲಿ ಅನೇಕ ಉಪಬಡುಕಟ್ಟುಗಳು ಇವೆ. ಪ್ರತಿಯೊಂದು ಬುಡಕಟ್ಟಿಗೂ ತನ್ನದೇ ಆದ ಪ್ರತ್ಯೇಕ ಭಾಷೆ ಇದ್ದು, ಒಂದು ಸಮುದಾಯದ ಭಾಷೆ ಇನ್ನೊಬ್ಬರಿಗೆ ಅರ್ಥವಾಗುವುದಿಲ್ಲ. ಅಂದಹಾಗೆ, ಇಲ್ಲಿನ ಯಾವ ಭಾಷೆಗೂ ಲಿಪಿ ಇಲ್ಲ. ಕಾಶಿ, ಘಾರೋ, ಜಯಂತಿ ಭಾಷೆಗಳಿಗೆ ಪಶ್ಚಿಮದಿಂದ ಬಂದ ಮಿಷನರಿಗಳು ಇಂಗ್ಲಿಷ್–ರೋಮನ್ ಅಕ್ಷರಗಳನ್ನೇ ಬಳಸಿದ್ದಾರೆ.

ಪ್ರವಾಸಕ್ಕಿದು ಪ್ರಶಸ್ತ ಸಮಯ
ಅಸ್ಸಾಂ ರಾಜಧಾನಿ ಗೌಹಾಟಿಯಿಂದ 100 ಕಿ.ಮೀ. ದಕ್ಷಿಣಕ್ಕೆ ರಸ್ತೆಯ ಮೂಲಕ ಸಾಗಿದರೆ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಎದುರಾಗುತ್ತದೆ. ಅಲ್ಲಿಂದ ದಕ್ಷಿಣಕ್ಕೆ 56 ಕಿ.ಮೀ. ಸಾಗಿದರೆ ಚಿರಾಪುಂಜಿ! ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ನಡುವೆ ಯಾವಾಗ ಬೇಕಾದರೂ ಚಿರಾಪುಂಜಿಗೆ ಹೋಗಬಹುದು. ಇದು ಪ್ರವಾಸಿಗರ ಪಾಲಿಗೆ ಪ್ರಶಸ್ತ ಸಮಯ. ಶಿಲ್ಲಾಂಗ್‌ನಲ್ಲಿ ಒಂದು ಆಟೋ ಕೂಡ ದೊರಕುವುದಿಲ್ಲ. ಎಲ್ಲವೂ ಮಾರುತಿ 800 ಕಾರುಗಳು. ನಾಲ್ವರು ಪಯಣಿಸಬಹುದಾದ ಈ ಕಾರುಗಳಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಸುತ್ತಬಹುದು. ಮೇಘಾಲಯದ ಪ್ರವಾಸಿ ಬಸ್‌ಗಳು ಕೂಡ ಪ್ರಯಾಣಿಕರ ಅನುಕೂಲಕ್ಕೆ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT