ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನದುರ್ಗ ಹತ್ತಿದಷ್ಟೂ ಹತ್ತಿರ

ಸುತ್ತಾಣ
Last Updated 2 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಆಸುಪಾಸಿನಲ್ಲಿರುವ ಚಾರಣಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಸಾವನದುರ್ಗವೂ ಒಂದು. ಒಂದು ದಿನದ ಪ್ರವಾಸಕ್ಕೆ, ಚಾರಣದ ಹಿತ ಅನುಭವಕ್ಕೆ ಸಾವನದುರ್ಗ ಹೇಳಿ ಮಾಡಿಸಿದ ಸ್ಥಳ.

ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಸಾವನದುರ್ಗ, ಐತಿಹಾಸಿಕ ಸ್ಥಳವೂ ಹೌದು. ಹೊಯ್ಸಳರ ಅರಸ ಮೂರನೇ ಬಲ್ಲಾಳ 1340ರಲ್ಲಿ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬೆಟ್ಟಕ್ಕೆ ‘ಸಾವಂದಿ’ ಎಂದು ಹೆಸರನಿಟ್ಟ ಎಂಬ ಐತಿಹ್ಯವಿದೆ.

ಅಚ್ಯುತರಾಯನ ಕಾಲದಲ್ಲಿ ಮಾಗಡಿಯ ಸಾಮಂತನೊಬ್ಬನ ಆಳ್ವಿಕೆಗೆ ಒಳಪಟ್ಟಿದ್ದ ಈ ದುರ್ಗಕ್ಕೆ ‘ಸಾಮಂತದುರ್ಗ’ ಎಂಬ ಹೆಸರು ಬಂದು ಕ್ರಮೇಣ ಅದು ಸಾವನದುರ್ಗ ಎಂದಾಗಿದೆ ಎಂದೂ ಹೇಳುತ್ತಾರೆ.

ಬೆಟ್ಟ ಹತ್ತುವ ಕಡಿದಾದ ಹಾದಿಯಲ್ಲಿ ಹಲವರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವುದರಿಂದ ಈ ಬೆಟ್ಟಕ್ಕೆ ಸಾವಿನದುರ್ಗ ಎಂಬ ಹೆಸರು ಬಂದು ಕಾಲಾನಂತರ ಅದು ಸಾವನದುರ್ಗವಾಗಿದೆ ಎಂದು ಹೇಳುವುವರೂ ಉಂಟು. ಮಾಗಡಿಯ ನಾಡಪ್ರಭು ಕೆಂಪೇಗೌಡ ಸಾವನದುರ್ಗವನ್ನು ತನ್ನ ಎರಡನೇ ರಾಜಧಾನಿಯಾಗಿ ಮಾಡಿಕೊಂಡಿದ್ದ ಎನ್ನುತ್ತದೆ ಚರಿತ್ರೆ.

ಹಲವು ಐತಿಹ್ಯಗಳನ್ನು ಹೊಂದಿರುವ ಸಾವನದುರ್ಗ ಸಮುದ್ರ ಮಟ್ಟದಿಂದ 1,226 ಮೀಟರ್‌ ಎತ್ತರದಲ್ಲಿದೆ. ಹಲವು ಅಪರೂಪದ ಹಾಗೂ ಔಷಧೀಯ ಸಸ್ಯ ಪ್ರಭೇದಗಳಿಗೆ ಪ್ರಸಿದ್ಧಿಯಾಗಿರುವ ಸಾವನದುರ್ಗವು ನೂರಾರು ಪ್ರಭೇದದ ಸುಂದರ ಹೂಗಿಡಗಳಿಗೂ ಹೆಸರಾಗಿದೆ.

ದುರ್ಗ ಏರುವ ಮುನ್ನ ಬೆಟ್ಟದ ಬುಡದಲ್ಲಿರುವ ವೀರಭದ್ರೇಶ್ವರ ಸ್ವಾಮಿ ಮತ್ತು ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಗಳು ನಿಮಗೆ ಎದುರಾಗುತ್ತವೆ. ಧಾರ್ಮಿಕ ನಂಬಿಕೆಗಳು ಇಲ್ಲವಾದರೂ ಪುರಾತನವಾದ ಇಲ್ಲಿನ ವಾಸ್ತುಶಿಲ್ಪದ ಸೊಬಗನ್ನು ಕಣ್ತುಂಬಿಕೊಳ್ಳಲಾದರೂ ಈ ದೇವಾಲಯಗಳಿಗೆ ಭೇಟಿ ನೀಡಬಹುದು.

ದೇವಾಲಯಗಳನ್ನು ಸುತ್ತಾಡಿ, ಬೆಟ್ಟದ ಪಾದ ತಲುಪಿ ಮುಂದೆ ವಿಶಾಲವಾದ ಹಾಸು ಬಂಡೆ ಏರುತ್ತಾ ಹೋದಂತೆ ಬೆಟ್ಟ ನಿಮಗೆ ಹತ್ತಿರವಾಗುತ್ತದೆ. ಬೆಟ್ಟದ ತುದಿ ತಲುಪುವ ಮಾರ್ಗ ಮಧ್ಯೆ ಅಲ್ಲಲ್ಲಿ ಇರುವ ಮರಗಳು ಬೆಟ್ಟ ಹತ್ತಿದ ದಣಿವನ್ನು ನೀಗಿಸುತ್ತವೆ. ಬೆಟ್ಟದ ತುದಿ ತಲುಪಿ, ಸುತ್ತಲಿನ ಹಸಿರನ್ನು ಕಂಡ ಮೇಲೆ ಬೆಟ್ಟ ಹತ್ತಿದ ಸುಸ್ತು ಎಷ್ಟೋ ದೂರಕ್ಕೆ ಓಡಿರುತ್ತದೆ.

ಬೆಟ್ಟದ ಮೇಲಿನ ತಣ್ಣನೆಯ ಗಾಳಿಗೆ ಮೈಯೊಡ್ಡಿ ಒಂದಷ್ಟು ಹೊತ್ತು ವಿರಮಿಸಿದ ಮೇಲೆ ಬೆಟ್ಟ ಇಳಿಯುವ ಸವಾಲು. ಸಾವನದುರ್ಗ ಬೆಟ್ಟದ ವೈಶಿಷ್ಟ್ಯವೇ ಅದು. ಹತ್ತುವಾಗ ಹತ್ತಿರ ಹತ್ತಿರವಾಗುವ ಬೆಟ್ಟ ಇಳಿಯುವಾಗ ದುರ್ಗಮವೆನಿಸುತ್ತದೆ. ಸಪಾಟಾದ ಮೆಟ್ಟಿಲುಗಳ
ಜಾರುವ ಹಾದಿಯಲ್ಲಿ ಇಳಿಯುವುದು ಕಾಲುಗಳ ಸತ್ವ ಪರೀಕ್ಷೆ ಮಾಡಿದಂತೆಯೇ ಸರಿ.

ಸಾವನದುರ್ಗ ಬೆಟ್ಟ ಹತ್ತುವಾಗ ತೆಗೆದುಕೊಳ್ಳುವ ಎಚ್ಚರಕ್ಕಿಂತ ಬೆಟ್ಟ ಇಳಿಯುವಾಗ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಬೆಟ್ಟ ಇಳಿಯುವಾಗ ಸ್ವಲ್ಪ ಆಯ ತಪ್ಪಿದರೂ ಸಾವನದುರ್ಗ ಸಾವಿನದುರ್ಗವಾಗುತ್ತದೆ. ಹೀಗಾಗಿ ಬೆಟ್ಟ ಹತ್ತುವಾಗ ಇರುವ ಕೀಟಲೆ, ತರಲೆಗಳು ಇಳಿಯುವಾಗ ಇಲ್ಲದಂತೆ ನೋಡಿಕೊಳ್ಳುವುದು ಹೆಚ್ಚು ಒಳಿತು.

ಬೆಟ್ಟ ಇಳಿದ ಮೇಲೆ ಸಮಯವಿದ್ದರೆ ದುರ್ಗದಿಂದ 12 ಕಿ.ಮೀ ದೂರದಲ್ಲಿರುವ ಮಂಚನಬೆಲೆ ಜಲಾಶಯಕ್ಕೆ ಭೇಟಿ ನೀಡಬಹುದು. ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಂಚನಬೆಲೆ ಜಲಾಶಯದ ತಣ್ಣನೆಯ ವಾತಾವರಣ ಬೆಟ್ಟ ಹತ್ತಿಳಿದ ದಣಿವನ್ನು ಆರಿಸಬಲ್ಲದು. ಮಂಚನಬೆಲೆಯಿಂದ ದೊಡ್ಡೇರಿ, ಹೆಜ್ಜಾಲ ಮಾರ್ಗವಾಗಿ ಮೈಸೂರು ರಸ್ತೆ ತಲುಪಿ ಅಲ್ಲಿಂದ ಬೆಂಗಳೂರಿಗೆ ಮರಳಬಹುದು.

ಮಂಚನಬೆಲೆಗೆ ಹೋಗದಿದ್ದರೆ ಮಾಗಡಿ ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುವ ದಾರಿಯ ಮಧ್ಯೆ ತಿಪ್ಪಗೊಂಡನಹಳ್ಳಿ ಜಲಾಶಯ ನೋಡಿಕೊಂಡು ಬರಬಹುದು. ಜಲಾಶಯದ ನೀರು ಹರಿಯುವ ಜಾಗದಲ್ಲಿ ಅಪರೂಪದ ಹಕ್ಕಿಗಳನ್ನು ಕಣ್ತುಂಬಿಕೊಳ್ಳಬಹುದು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿದಿಟ್ಟುಕೊಳ್ಳಬಹುದು.

ನಗರದಿಂದ ದೂರದ ಬೆಟ್ಟಗಳಿಗೆ ಹೋಗಿ, ಬೆಟ್ಟ ಹತ್ತಿ ಸುಸ್ತಾಗಿ ಹಿಂದಿರುಗಿ ಮರುದಿನ ಕಚೇರಿಗೆ ರಜೆ ಹೇಳುವುದಕ್ಕಿಂತ ನಗರಕ್ಕೆ ಹತ್ತಿರದಲ್ಲೇ ಇರುವ ಸಾವನದುರ್ಗಕ್ಕೆ ಭೇಟಿ ನೀಡಿದರೆ ಒಂದೇ ದಿನದಲ್ಲಿ ಚಾರಣದ ಹಿತ–ಮಿತ ಅನುಭವ ನಿಮ್ಮದಾಗುತ್ತದೆ.

ಬೆಟ್ಟದ ದಾರಿ
ಬೆಂಗಳೂರಿನಿಂದ ಮೈಸೂರು ರಸ್ತೆಯ ಮೂಲಕ ಸಾಗಿ ಹೆಜ್ಜಾಲ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ, ದೊಡ್ಡೇರಿ, ಮಂಚನಬೆಲೆ ಮಾರ್ಗವಾಗಿ ಸಾವನದುರ್ಗಕ್ಕೆ ಹೋಗಬಹುದು. ಮಾಗಡಿ ಮಾರ್ಗವಾಗಿ ಹೋಗುವುದಾದರೆ ಮಾಗಡಿಗೆ ಹೋಗಿ ಅಲ್ಲಿಂದ ಸಾವನದುರ್ಗ ತಲುಪಬಹುದು. ಎರಡೂ ಮಾರ್ಗದ ದೂರ ಬಹುತೇಕ ಒಂದೇ. ಮೈಸೂರು ರಸ್ತೆಗಿಂತ ಮಾಗಡಿ ರಸ್ತೆಯಲ್ಲಿ ಸಂಚಾರ ದಟ್ಟಣೆ ವಿರಳ ಎಂಬುದಷ್ಟೇ ವ್ಯತ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT