ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಆಹಾರ ಮಾರುಕಟ್ಟೆ

Last Updated 26 ಜನವರಿ 2016, 19:30 IST
ಅಕ್ಷರ ಗಾತ್ರ

ಸಾವಯವ ಆಹಾರ ಬೆಳೆಯುವ ಪ್ರಪಂಚದ ಅಗ್ರ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಹೊಂದಿದೆ. ಸದ್ಯ ದೇಶದ ಸಾವಯವ ಆಹಾರ ಮಾರುಕಟ್ಟೆಯ ಗಾತ್ರ ₹1 ಸಾವಿರ ಕೋಟಿಯಷ್ಟಿದೆ. 2020ರ ವೇಳೆಗೆ ಅಂದರೆ ಇನ್ನು 4 ವರ್ಷಗಳಲ್ಲಿ ಇದು 1.39 ಶತಕೋಟಿ ಡಾಲರ್‌ ( ₹ 4,489 ಕೋಟಿ) ಗಾತ್ರಕ್ಕೆ  ಬೆಳೆಯುವ ಸಾಮರ್ಥ್ಯ ಹೊಂದಿದೆ ಎನ್ನುತ್ತದೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಇತ್ತೀಚೆಗೆ ನಡೆಸಿದ ಸಮೀಕ್ಷೆ.

ಈ ಅಧ್ಯಯನದಂತೆ  ದೇಶೀಯ ಸಾವಯವ ಆಹಾರ ಉತ್ಪನ್ನಗಳ ಮಾರುಕಟ್ಟೆ ವಾರ್ಷಿಕ ಸರಾಸರಿ ಶೇ 25ರಿಂದ ಶೇ 30ರಷ್ಟು ಪ್ರಗತಿ ದಾಖಲಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಕೆಲವೇ ಕೆಲವು ಮೆಟ್ರೊ ನಗರಗಳಲ್ಲಿ ಮಾತ್ರ ಇಂತಹ ಉತ್ಪನ್ನಗಳಿಗೆ ಸೀಮಿತ ಸಂಖ್ಯೆಯ ಗ್ರಾಹಕರಿದ್ದಾರೆ. ಇದಕ್ಕೆ ಮುಖ್ಯ ಕಾರಣ ದುಬಾರಿ ಬೆಲೆ.  ಪೂರೈಕೆ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಸಿಗುವ ಸಾವಯವ ಉತ್ಪನ್ನಗಳ ಬೆಲೆ ಗಗನಮುಖಿಯಾಗಿದೆ.

ಹೀಗಾಗಿ ಮಧ್ಯಮವರ್ಗದವರಿಗೆ ಇದು ಸುಲಭವಾಗಿ ಕೈಗೆಟುಕುತ್ತಿಲ್ಲ.  ಆರ್ಥಿಕವಾಗಿ ಶಕ್ತರಿರುವ ಮೇಲ್ಮಧ್ಯಮ ವರ್ಗದ ಶೇ 62ರಷ್ಟು ಕುಟುಂಬಗಳು ಸಾವಯವ ಆಹಾರ ಶೈಲಿಗೆ ಬದಲಾಗುವ ಆಸಕ್ತಿ ಹೊಂದಿವೆ. ಬೆಲೆ ಪ್ರಮುಖ ಸವಾಲಾದರೂ   5 ವರ್ಷಗಳಲ್ಲಿ  ನಗರಗಳಲ್ಲಿ ಸಾವಯವ ಆಹಾರ ಶೈಲಿಗೆ ಬದಲಾಗುವವರ ಸಂಖ್ಯೆಯಲ್ಲಿ ಶೇ 95ರಷ್ಟು ಏರಿಕೆ ಕಂಡುಬಂದಿರುವುದು ಗಮನಾರ್ಹ ಎಂದೂ ಈ ಸಮೀಕ್ಷೆ ಗಮನ ಸೆಳೆಯುತ್ತದೆ.

ಸಾವಯವ ಆಹಾರಕ್ಕಾಗಿ ಹೆಚ್ಚು ಹಣ ವ್ಯಯಿಸುವ ನಗರಗಳಲ್ಲಿ ಮುಂಬೈ (ಶೇ 65), ದೆಹಲಿ (ಶೇ 61) ಮತ್ತು ಬೆಂಗಳೂರು (ಶೇ 58) ಮೊದಲ ಮೂರು ಸ್ಥಾನಗಳಲ್ಲಿವೆ ಎನ್ನುತ್ತದೆ ಈ ಅಧ್ಯಯನ. ದುಬಾರಿ ಬೆಲೆಯ ಜತೆಗೆ ಸಾವಯವ ಜಾಗೃತಿ ಕೂಡ ತೀರಾ ನಿರಾಶಾದಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಸರ್ಕಾರ ಸಾಕಷ್ಟು ಉತ್ತೇಜನ ನೀಡಿದರೆ ಮಾತ್ರ ದೇಶದ ಸಾವಯವ ಮಾರುಕಟ್ಟೆ ಬೆಳೆಯಲು ಸಾಧ್ಯ  ಎನ್ನುತ್ತಾರೆ ಉದ್ಯಮ ತಜ್ಞರು.

‘ಸುಮಾರು 15 ವರ್ಷಗಳ ಹಿಂದೆ ಈಗಿನಂತೆ ಜನರು ತಾವು ತಿನ್ನುವ ಆಹಾರದ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ.  ಊಟದ ತಟ್ಟೆಯಲ್ಲಿ ಇರುವುದೆಲ್ಲವೂ ಆರೋಗ್ಯವೇ ಎನ್ನುವ ಸ್ಥಿತಿ ಇತ್ತು.  ಹೀಗಾಗಿ ಸಾವಯವ ಆಹಾರ ಎನ್ನುವ ಕಲ್ಪನೆ ಆಗ ಇರಲಿಲ್ಲ. ಅಷ್ಟೇ ಯಾಕೆ 2007ರಲ್ಲಿ ನಾವು ಸಾವಯವ ಉತ್ಪನ್ನಗಳ ಆನ್‌ಲೈನ್‌ ಮಾರಾಟ ಸಂಸ್ಥೆ ಆರಂಭಿಸಿದಾಗ ಸಾಕಷ್ಟು ಸವಾಲು ಎದುರಿಸಬೇಕಾಯಿತು. 

ಸಾವಯವ–ಸಾವಯವ ಅಲ್ಲದ  ಆಹಾರದ ನಡುವಿನ ವ್ಯತ್ಯಾಸದ ಕುರಿತು ಜನರಿಗೆ ಅಷ್ಟೊಂದು ಜಾಗೃತಿ ಇರಲಿಲ್ಲ. ಆದರೆ,   2 ವರ್ಷಗಳಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚಿದೆ. ಆರೋಗ್ಯಕ್ಕಾಗಿ ಆಹಾರ ಎನ್ನವ  ಕಲ್ಪನೆ ಶಕ್ತಗೊಂಡಿದೆ. ಜನರು ತಾವು ತಿನ್ನುವ ಪ್ರತಿ ಆಹಾರದ ಬಗ್ಗೆಯೂ ಕಾಳಜಿ ವಹಿಸತೊಡಗಿದ್ದಾರೆ. ಹೀಗಾಗಿ ಸಾವಯವ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಹೈದರಾಬಾದ್‌ ಮೂಲದ ‘24 ಮಂತ್ರ ಆರ್ಗ್ಯಾನಿಕ್‌’ ಫುಡ್‌ ಬ್ರಾಂಡ್‌ನ ಸಿಇಒ ಎನ್‌. ಬಾಲಸುಬ್ರಮಣಿಯನ್‌.

ಧಾನ್ಯಗಳು, ಬೇಳೆಕಾಳು, ಎಣ್ಣೆ, ಮಸಾಲೆ ಪದಾರ್ಥಗಳು ಸೇರಿದಂತೆ ಆನ್‌ಲೈನ್‌ ಮೂಲಕ ಸುಮಾರು 200ಕ್ಕೂ ಹೆಚ್ಚು ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಈ ಸಂಸ್ಥೆ ದೇಶದ ಸಾವಯವ ಆಹಾರ ಮಾರುಕಟ್ಟೆಯಲ್ಲಿ ಶೇ 60ರಷ್ಟು ಪಾಲು (ಚಹಾ ಹೊರತುಪಡಿಸಿ) ಹೊಂದಿದೆ.  ಪ್ರೊ ನೇಚರ್‌ ಡಾಟ್‌ ಕಾಂ, ಆರ್ಗ್ಯಾನಿಕ್‌ ತತ್ವ ಡಾಟ್‌ ಕಾಂನಂತಹ ಕಂಪೆನಿಗಳು ನಂತರದ ಸ್ಥಾನಗಳಲ್ಲಿವೆ.

ದೇಶದ ಒಟ್ಟಾರೆ ಆಹಾರ ಉತ್ಪನ್ನಗಳ ಬಳಕೆ ಪ್ರಮಾಣದಲ್ಲಿ ಸಾವಯವದ ಪಾಲು 0.25ರಷ್ಟಿದೆ. 2020ರ ವೇಳೆಗೆ ಇದು ಶೇ 2ಕ್ಕೆ ಏರುವ ಸಾಧ್ಯತೆ ಇದೆ ಎನ್ನುತ್ತಾರೆ  ಆನ್‌ಲೈನ್‌ ಮೂಲಕ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಜಾಯ್‌ ಬೈ ನೇಚರ್‌ ಡಾಟ್‌ ಕಾಂನ ಸಿಇಒ ಮತ್ತು ಸಹಸ್ಥಾಪಕ ಶೈಲೇಶ್‌ ಮೆಹ್ತಾ.

ಭಾರತೀಯರಿಗೆ ಸಾವಯವ, ನೈಸರ್ಗಿಕ  ಆಹಾರ, ಗಿಡಮೂಲಿಕೆಗಳ ಬಳಕೆಯ ಜ್ಞಾನ ಸಹಜವಾಗಿಯೇ ಬಂದಿದೆ. ನೈಸರ್ಗಿಕ ಆಹಾರ ಮತ್ತು ಔಷಧ ಪದ್ಧತಿಗಳ ಕುರಿತು ಶ್ರೀಮಂತ ಇತಿಹಾಸವನ್ನೇ ಭಾರತ ಹೊಂದಿದೆ. ಆದರೆ ಸಮಸ್ಯೆ ಇರುವುದು ಈ ಉತ್ಪನ್ನಗಳ ಲಭ್ಯತೆ ಮತ್ತು  ಇದಕ್ಕೆ ತೆರಬೇಕಾದ ಬೆಲೆಯಲ್ಲಿ ಎನ್ನುತ್ತಾರೆ ಮೆಹ್ತಾ.

ಸಾವಯವ ಕೃಷಿಗೆ ಉತ್ತೇಜನ ನೀಡುವ ಇಟಲಿ ಮೂಲದ ಅಂತರರಾಷ್ಟ್ರಿಯ ಸಂಸ್ಥೆ ‘ಬಯೊಅಗ್ರಿಕಾಪ್‌’ನ ಸಹಾಯಕ ಯೋಜನಾ ವ್ಯವಸ್ಥಾಪಕ  ಡಾ. ಲೊರೆಂಜೊ ಬೊನಿ ಅವರೂ ಕೂಡ ಸಾವಯವ ಉತ್ಪನ್ನಗಳ ಜನಪ್ರಿಯತೆ ಹೆಚ್ಚಬೇಕಾದರೆ ಬೆಲೆ ತಗ್ಗಬೇಕಾದ ಅನಿವಾರ್ಯತೆ ಇದೆ ಎನ್ನುವುದನ್ನು ಒಪ್ಪುತ್ತಾರೆ.

ಸಾವಯವ ಜಾಗೃತಿ:
ಸೂಪರ್‌ ಮಾರ್ಕೆಟ್‌ಗಳಿಗೆ ಸಾವಯವ ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವ ಬಿಗ್‌ಬಾಸ್ಕೆಟ್‌ ಡಾಟ್‌ ಕಾಂನ ದೇಶೀಯ ಮುಖ್ಯಸ್ಥ ವಿಪುಲ್‌ ಮಿತ್ತಲ್‌ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸಾವಯವ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜನರು ಇಂಥದ್ದೇ ಉತ್ಪನ್ನಗಳನ್ನು ಕೇಳಿ ಖರೀದಿಸುತ್ತಿದ್ದಾರೆ. ನಗರಗಳಲ್ಲಿ ನಡೆಯುವ ಸಾವಯವ ಮೇಳಗಳಲ್ಲಿ ಕೂಡ ಹೆಚ್ಚಿನ ಜನದಟ್ಟಣೆ ಕಂಡುಬರುತ್ತಿದೆ  ಎನ್ನುತ್ತಾರೆ. ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮೊಟೊ ಇವು ಭಾರತೀಯರ ಅಡುಗೆಮನೆಯ ಅವಿಭಾಜ್ಯ ಅಂಗಗಳು.    ಇವು ಹೆಚ್ಚು ಬಳಸುವ ತರಕಾರಿಗಳಾದರೆ, ಧಾನ್ಯಗಳಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟು ಮುಂಚೂಣಿಯಲ್ಲಿವೆ. ಸಾವಯವ ಉತ್ಪನ್ನಗಳಲ್ಲಿ ಹೆಚ್ಚು ಬೇಡಿಕೆ ಇರುವ ಪದಾರ್ಥಗಳೂ ಇವೇ ಎನ್ನುತ್ತಾರೆ ಅವರು.

ನಗರದ ಜನತೆ  ತಾವು ಪ್ರತಿ ವರ್ಷ ಆಸ್ಪತ್ರೆಗೆ ವ್ಯಯಿಸುವ ದುಡ್ಡಿನಲ್ಲಿ ಅರ್ಧದಷ್ಟನ್ನೂ ಆರೋಗ್ಯ ಕಾಳಜಿಗಾಗಿ ಮೀಸಲಿಡುತ್ತಿಲ್ಲ. ಆರೋಗ್ಯಕರ ಜೀವನ ಶೈಲಿಗೆ ಬದಲಾಗಲು ಬಯಸುವವರಿಗೆ ಸಾವಯವ ಆಹಾರವೇ ಮೊದಲ ಆದ್ಯತೆಯಾಗಬೇಕು ಎನ್ನುವುದು ಮಿತ್ತಲ್‌ ಅವರ ವಿಶ್ಲೇಷಣೆ.

ರಾಸಾಯನಿಕ, ರಸಗೊಬ್ಬರ, ಕ್ರಿಮಿನಾಶಕ ಬಳಸುತ್ತಿದ್ದ ಸಹಜ ಕೃಷಿ ಭೂಮಿಯು /ಮಣ್ಣು ಸಾವಯವ ಕೃಷಿ ಪದ್ಧತಿಗೆ ಸಂಪೂರ್ಣವಾಗಿ ಬದಲಾಗಬೇಕಾದರೆ 3–4 ವರ್ಷ ಬೇಕು.   ಆ ನಂತರವೇ ನಿಜವಾದ ಸಾವಯವ ಉತ್ಪನ್ನಗಳು ಲಭಿಸುತ್ತವೆ.  ಹೈಬ್ರಿಡ್‌ ಬೀಜಗಳು, ರಸಗೊಬ್ಬರದಂತಹ ಯಾವುದೇ ಉತ್ತೇಜಕಗಳು ಇಲ್ಲದಿರುವುದರಿಂದ ಆರಂಭದ ವರ್ಷಗಳಲ್ಲಿ ಇಳುವರಿ ಪ್ರಮಾಣವು ಕಡಿಮೆ ಇರುತ್ತದೆ. ಇದು ಮಾರುಕಟ್ಟೆಗೆ ಸಾವಯವ ಆಹಾರಗಳ ಪೂರೈಕೆ ಮತ್ತು ಬೆಲೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ 24 ಮಂತ್ರ ಆರ್ಗ್ಯಾನಿಕ್‌ ಡಾಟ್‌ ಕಾಂನ ಬಾಲಸುಬ್ರಮಣಿಯನ್‌.

ಸಾವಯವ ಉತ್ಪನ್ನಗಳಿಗೆ ರೈತನಿಗೆ ಸಿಗುವ ಬೆಲೆಗೂ ಮಾರುಕಟ್ಟೆ ದರಕ್ಕೂ ಕನಿಷ್ಠ ಶೇ 10ರಿಂದ ಗರಿಷ್ಠ ಶೇ 40ರಷ್ಟು ವ್ಯತ್ಯಾಸ ಇರುತ್ತದೆ ಎನ್ನುವುದನ್ನು  ಅವರು ಒಪ್ಪಿಕೊಳ್ಳುತ್ತಾರೆ. 4 ಮಂದಿ ಇರುವ ಕುಟುಂಬವೊಂದು ತಿಂಗಳಿಗೆ ಆಹಾರಕ್ಕಾಗಿ  ಸರಾಸರಿ ₹4 ಸಾವಿರ ಖರ್ಚು ಮಾಡುತ್ತದೆ. ಈ ಕುಟುಂಬ ಸಂಪೂರ್ಣವಾಗಿ ಸಾವಯವ ಆಹಾರಕ್ಕೆ ಬದಲಾಗಬೇಕಾದರೆ ಈ ಮೊತ್ತದ ಜತೆಗೆ ಹೆಚ್ಚುವರಿಯಾಗಿ ₹1,200 ರಿಂದ ₹1,400 ಖರ್ಚು ಮಾಡಬೇಕು ಎಂಬ ಲೆಕ್ಕಾಚಾರ ಮುಂದಿಡುತ್ತಾರೆ. ‘ದರದಲ್ಲಿ ಭಾರಿ ಅಂತರ ಇರುವುದರಿಂದ  ಸಾವಯವ ಉತ್ಪನ್ನಗಳು ಸಾವಯವರಹಿತ ಉತ್ಪನ್ನಗಳ ಜತೆ ಸ್ಪರ್ಧಿಸುವುದೂ ಇಂದಿನ ದಿನಗಳಲ್ಲಿ ಸವಾಲು.

ಉದಾಹರಣೆಗೆ 1 ಕೆ.ಜಿ ಸಾವಯವ ಹೆಸರು ಬೇಳೆಗೆ ₹280 ಬೆಲೆ ಇದೆ. ಸಾವಯವ ಅಲ್ಲದ ಹೆಸರು ಬೇಳೆ ಇದರ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭಿಸುತ್ತದೆ.  ಆದರೆ, ಪೂರೈಕೆ ಹೆಚ್ಚಿ, ಬೆಲೆ ಇಳಿದರೆ ಜನರು ಸಾವಯವ ಉತ್ಪನ್ನಗಳ ಖರೀದಿಗೆ ಮನಸ್ಸು ಮಾಡಬಹುದು.  ಹೀಗಾಗಿ ಜನರು ಹೆಚ್ಚು ಬಳಸುವ ಉತ್ಪನ್ನಗಳನ್ನು ನಾವು ಹೆಚ್ಚಿನ  ಲಾಭ ಬಯಸದೇ ಸಾಮಾನ್ಯ ದರದಲ್ಲೇ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಮಿತ್ತಲ್‌.

ಸಾವಯವ ಉತ್ಪನ್ನಗಳನ್ನು ಪರಿಶೀಲಿಸಿ ಪ್ರಮಾಣೀಕರಿಸುವುದೂ  ಅಷ್ಟೇ ಅಗತ್ಯ. ಈಗಂತೂ ಸಾವಯವದ ಹೆಸರಿನಲ್ಲಿ ಮಾರುಕಟ್ಟೆಗೆ ಸಾಕಷ್ಟು ನಕಲಿ ಉತ್ಪನ್ನಗಳು ಬರುತ್ತಿವೆ. ಇದನ್ನು ನಿಯಂತಸಲು ಸರ್ಕಾರದ ಹಸ್ತಕ್ಷೇಪ ಅಗತ್ಯ. ಸಾವಯವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸಂಸ್ಕರಣೆ ಆಧರಿಸಿ, ಕೃಷಿ ಭೂಮಿ ಆಧರಿಸಿದ ಪ್ರಮಾಣ ಪತ್ರಗಳನ್ನು ನೀಡುವ ವ್ಯವಸ್ಥೆ ಇದೆ. ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು  (ಎಪಿಇಡಿಎ)  ದೇಶದಲ್ಲಿ ಬೆಳೆಯುವ ಸಾವಯವ ಉತ್ಪನ್ನಗಳಿಗೆ ರಾಷ್ಟ್ರೀಯ ಮಾನದಂಡದ ಪ್ರಮಾಣ ಪತ್ರ ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಗ್ರಾಹಕ ಖರೀದಿಸುವ ಆಹಾರ ಪದಾರ್ಥ ಸಾವಯವ ಉತ್ಪನ್ನವೇ ಅಲ್ಲವೇ ಎನ್ನುವುದನ್ನು ಖಚಿತಪಡಿಸಲು ಯಾವುದೇ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಅವರು .

ಆನ್‌ಲೈನ್‌ನಲ್ಲಿ ಸಾವಯವ
6ಡಬ್ಲ್ಯೂ ರಿಸರ್ಚ್‌ ಸಂಸ್ಥೆಯ ಸಮೀಕ್ಷೆ ಪ್ರಕಾರ, ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ.   ಆನ್‌ಲೈನ್‌ ಮೂಲಕ ಮಾರಾಟವಾಗುವ ದಿನಸಿ ವಸ್ತುಗಳ ಮಾರುಕಟ್ಟೆ  ಮುಂದಿನ 6 ವರ್ಷಗಳಲ್ಲಿ ಅಂದರೆ 2022ರ ವೇಳೆಗೆ ಶೇ 62ರಷ್ಟು ಹೆಚ್ಚಲಿದೆ ಎನ್ನುತ್ತದೆ ಈ ಅಧ್ಯಯನ.  ಆನ್‌ಲೈನ್‌ ಮೂಲಕ ದಿನಸಿ ಖರೀದಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.  ಮುಂಬೈ ಮತ್ತು ದೆಹಲಿ ನಂತರದ ಸ್ಥಾನಗಳಲ್ಲಿವೆ. 

ಈ ನಡುವೆ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಫಾರ್ಮ್‌ ಟು ಕಿಚನ್‌, ಮೈ ಗ್ರೀನ್‌ ಕಾರ್ಟ್‌, ಗ್ರೀನ್‌ಗುಡ್‌, ಡೌನ್‌ಟು ಅರ್ಥ್‌ನಂತಹ ತಾಣಗಳಲ್ಲಿ ಸಾವಯವ  ಹಣ್ಣು, ತರಕಾರಿಗಳ ಖರೀದಿ ಪ್ರಮಾಣವೂ ಹೆಚ್ಚುತ್ತಿದೆ. ಬಿಗ್‌ ಬಾಸ್ಕೆಟ್‌ನಂತಹ ತಾಣಗಳಲ್ಲಿ ಮಾರಾಟವಾಗುವ ಒಟ್ಟು ಸಾವಯವ ಉತ್ಪನ್ನಗಳಲ್ಲಿ ತರಕಾರಿ ಮತ್ತು ಹಣ್ಣುಗಳೇ ಪಾಲೇ ಶೇ 45ರಷ್ಟಿದೆ. 

ಸಾವಯವ ಅಲ್ಲದ ಆಹಾರ ಉತ್ಪನ್ನ ಖರೀದಿಸುವ ಗ್ರಾಹಕರಲ್ಲಿ ಶೇ 5ರಷ್ಟು ಮಂದಿಯಾದರೂ ಹಣ್ಣು ಅಥವಾ ತರಕಾರಿ ವಿಚಾರಕ್ಕೆ ಬಂದಾಗ ಸಾವಯವ ಉತ್ಪನ್ನವನ್ನೇ ಆಯ್ದುಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ ಎನ್ನುತ್ತಾರೆ ಬಾಲಸುಬ್ರಮಣಿಯನ್‌. ಮುಂದಿನ 5 ವರ್ಷಗಳಲ್ಲಿ ಇದು ಶೇ 5ರಷ್ಟು ಹೆಚ್ಚುವ ಅಂದಾಜಿದೆ. ನಮ್ಮ ಮಾರುಕಟ್ಟೆ ಗಾತ್ರ ಕೂಡ ₹30 ಸಾವಿರ ಕೋಟಿಗೆ ಹೆಚ್ಚಲಿದೆ. ಆಹಾರ ಎಂದರೆ ಸಾವಯವ ಎನ್ನುವ ಕಾಲ ದೂರವಿಲ್ಲ ಎನ್ನುತ್ತಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT