ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಊಟ ಹಸಿರು ನೋಟ

ರಸಾಸ್ವಾದ
Last Updated 26 ಏಪ್ರಿಲ್ 2016, 19:58 IST
ಅಕ್ಷರ ಗಾತ್ರ

‘ಗ್ರೀನ್ ಪಾಥ್’, ‘ಹಸಿರು ತೋಟ’ ‘ಆರ್ಗ್ಯಾನಿಕ್ ಸ್ಟೇಟ್’ ಬಿರು ಬೇಸಿಗೆಯಲ್ಲಿ ಇವನ್ನೆಲ್ಲ ಕೇಳಿದರೇ ಮನಸ್ಸಿನಲ್ಲಿ ಆಹ್ಲಾದಕರ ಭಾವ ಮೂಡುತ್ತದೆ. ಅಂತಹುದರಲ್ಲಿ ಈ ಹೆಸರಿನ ಹೋಟೆಲ್‌ವೊಂದಿದೆ ಎಂದರೆ ಭೋಜನ ಪ್ರಿಯರಿಗಂತೂ ಸಂತಸದ ವಿಷಯ.

ಶೇಷಾದ್ರಿಪುರದ ರಾಜೀವ್​ಗಾಂಧಿ ವೃತ್ತದ ಬಳಿಯ ಮೆಟ್ರೋ ರೈಲು ನಿಲ್ದಾಣದ ಮುಂದೆ ‘ದಿ ಗ್ರೀನ್ ಪಾಥ್ ಸಮೂಹ’ ನಿರ್ಮಿಸಿರುವ ಸಾವಯವ ಉತ್ಪನ್ನಗಳ ಹೋಟೆಲ್‌ಗೆ ಹೊಕ್ಕಾಗ  ಆದದ್ದು ಅಂತಹದೇ ಅನುಭವ.   ಗ್ರೀನ್‌ ಪಾಥ್‌ ಹೋಟೆಲ್‌ಗೆ ಅಡಿ ಇಡುತ್ತಿದ್ದಂತೆ ಸ್ವಾಗತಿಸಿದ್ದು ಹಸಿರು ಗಿಡಗಳು. ಕಣ್ಣು ಹಾಯಿಸಿದೆಡೆಯಲ್ಲ ಕಂಡಿದ್ದು ಪ್ರಾಕೃತಿಕ ಸೊಬಗು.

ಪರಿಸರ ಪ್ರೇಮ ಸಾರುವ ಈ ಹೋಟೆಲ್‌ನ ಕೆಲವು ಗೋಡೆಗಳಿಗೆ ಮಣ್ಣನ್ನೇ ಬಳಸಿ ಬಣ್ಣ ಹಾಕಲಾಗಿದೆ. ಒಳಾಂಗಣದಲ್ಲಿ ಹೆಚ್ಚು ಆಮ್ಲಜನಕ ಹೊರಸೂಸುವ ಗಿಡಗಳನ್ನು ಹಾಕಲಾಗಿದ್ದು, ವಾತಾವರಣದಲ್ಲಿ ಆರೋಗ್ಯ ಮತ್ತು ಆಹ್ಲಾದಕರ ವಾತಾವರಣ ಇದೆ.

ಎಲ್ಲಾ ಕಡೆ ‘ಸಾವಯವ ಸಾವಯವ’ ಎನ್ನುವುದು ಅನುರಣಿಸುತ್ತಿರುವಾಗ ಊಟ ಹೇಗಿರುವುದೋ ಎಂಬ ಭಯದಿಂದಲೇ ಟೇಬಲ್‌ ಎದುರು ಕೂತೆ. ಹಿಂದೆ ನಿಧಾನಕ್ಕೆ ಹರಿಯುತ್ತಿದ್ದ ನೀರಿನ ಜತೆ ಊಟ ಮಾಡುವುದನ್ನು ಕಲ್ಪಿಸಿಕೊಂಡೇ ಮನದಲ್ಲಿ ಆನಂದ ಮನೆ ಮಾಡಿತು.

ಹೀಗೆ ಎಲ್ಲಿಯೋ ವಿಹರಿಸುತ್ತಿದ್ದ ನನ್ನನ್ನು ಮತ್ತೆ ಹೋಟೆಲ್‌ ಒಳಗೆ ಕರೆತಂದದ್ದು, ನಾನಾ ಧಾನ್ಯ ಮತ್ತು ಸೊಪ್ಪುಗಳ ಮಿಶ್ರಣದ ಸೂಪ್‌ನ ಘಮ. ಉಪ್ಪು, ಹುಳಿ, ಖಾರ ಹದವಾಗಿ ಮಿಳಿತಗೊಂಡಿದ್ದ ಸೂಪ್‌ ಹೀರುತ್ತಿದ್ದಂತೆ ಊಟಕ್ಕೆ ಮೊದಲು ಇಂತಹುದೊಂದು ಪಾನೀಯವನ್ನು ಹೀರಲೇಬೇಕೆನ್ನುವ ನಿಯಮವನ್ನು ಮನಸ್ಸು ಹಾಕಿಕೊಂಡು ಬಿಡುತ್ತದೆ.

ಅದರ ನಂತರ ಟೇಬಲ್‌ಗೆ ಬಂದದ್ದು ರಾಗಿ ಅಂಬಲಿ. ಹುಳಿ ಮಜ್ಜಿಗೆ ಜತೆ ರುಚಿ ನೋಡಿದ್ದ ರಾಗಿ ಗಂಜಿ ಮಸಾಲೆ ಮಜ್ಜಿಗೆ ಜತೆ ಬೆರೆತರೆ ಇನ್ನೂ ಹೆಚ್ಚಿನ ರುಚಿ ನೀಡುತ್ತದೆ ಎಂದು ಅದನ್ನು ಕುಡಿದ ನಂತರವೇ ತಿಳಿದದ್ದು. ಧಾನ್ಯಗಳ ವಡೆ, ಕಾಳಿನ ಹಪ್ಪಳ, ಕಾಳುಗಳ ಪಲ್ಯ, ಸಲಾಡ್‌, ಸೊಪ್ಪಿನ ಪಲ್ಯ ಹೀಗೆ ಒಂದಾದ ನಂತರ ಒಂದು ರಾಸಾಯನಿಕ ಮುಕ್ತ ಪದಾರ್ಥ ತಿನ್ನುತ್ತಿದ್ದೇನೆ ಎನ್ನುವುದನ್ನು ಅವುಗಳ ರುಚಿಯೇ ಖಾತರಿಪಡಿಸುತ್ತಿದ್ದವು.

ಊರಿನಲ್ಲಿ ಅಜ್ಜಿ ಮಾಡಿಕೊಡುತ್ತಿದ್ದ ರಾಗಿ ರೊಟ್ಟಿ, ಅಕ್ಕಿ ರೊಟ್ಟಿ ಅದಕ್ಕೆ  ಕೆಂಪು ಚಟ್ನಿ ಮೇಲೊಂದು ಚಮಚ ತುಪ್ಪ... ಅಬ್ಬ ಅದರ ರುಚಿಗೆ ಸಾಟಿ ಯಾವುದು? ತಿನ್ನುತ್ತಿದ್ದರೆ ಎಷ್ಟಿದ್ದರೂ ಮುಗಿಯದೆ ನಾಲಿಗೆಯಲ್ಲಿ ಅದರ ರುಚಿ ಹಾಗೆ ಇರಲಿ ಎಂದು ಮನ ಬಯಸುತ್ತದೆ.

ರೊಟ್ಟಿ–ಚಟ್ನಿಯನ್ನು ಮುಗಿಸಲು ಮನಸ್ಸು ಬೇಡ ಎನ್ನುತ್ತಿದ್ದರೂ ಶೆಫ್‌ ತಂದಿಟ್ಟ ನವಣೆ ಬಿಸಿಬೇಳೆ ಭಾತ್‌ನ ಪರಿಮಳ ತನ್ನ ಕಡೆಗೆ ಆಕರ್ಷಿಸಿತು. ಅನ್ನ ಇಲ್ಲದೆ ಬಿಸಿಬೇಳೆ ಭಾತ್‌ ಎಂದು ಮೂಗು ಮುರಿಯುತ್ತಿದ್ದವಳಿಗೆ ಒಂದು ಸ್ಪೂನ್‌ ಬಿಸಿಬೇಳೆ ಭಾತ್‌ ಬಾಯಿಗೆ ಹೋಗುತ್ತಿದ್ದಂತೆ ಎಲ್ಲವೂ ಗಪ್‌ಚುಪ್‌. ಸ್ಪಲ್ಪ ಖಾರ ಖಾರವಾಗಿ, ಸ್ವಲ್ಪವೇ ಸ್ವಲ್ಪ ಹುಳಿ, ಕಾಳು ಮೆಣಸಿನ ಅದ್ಭುತ ರುಚಿಗೆ ಕಾರಣವಾಗಿತ್ತು. ಅದರ ಜತೆಗೆ ತಟ್ಟೆಗೆ ಹಾಕಿದ ಕೆಂಪನ್ನ, ಸೊಪ್ಪಿನ ಸಾರು ಮನೆ ಊಟವನ್ನು ನೆನಪಿಸಿತು.

ಖಾರ ಮತ್ತು ಹುಳಿಯನ್ನು ಚಪ್ಪರಿಸುತ್ತಿದ್ದ ನಾಲಿಗೆ ಎದುರಿಗೆ ‘ಬೀಟ್‌ರೂಟ್‌ ಪಾಯಸ’ವನ್ನು ಶೆಫ್‌ ತಂದಿಟ್ಟರು. ಥಟ್ಟನೆ ಅದರ ರುಚಿ ನೋಡಬೇಕು ಎನ್ನುವಂತೆ ಮಾಡಿದ್ದು, ಅದರ ಕೆಂಗುಲಾಬಿ ಬಣ್ಣ. ಬೀಟ್‌ರೂಟ್‌ನ ಸಿಹಿ ಜತೆಗೆ ಜೋನಿ ಬೆಲ್ಲ, ಏಲಕ್ಕಿ ಸ್ವಾದ ಪಾಯಸಕ್ಕೆ ವಿಶಿಷ್ಟ ರುಚಿ ತಂದಿತ್ತು. ಇದು ಗ್ರೀನ್‌ ಪಾಥ್‌ ಮಾಲೀಕರಾದ ಜಯರಾಂ ಅವರ ಸ್ವಂತ ರೆಸಿಪಿ. ಇಲ್ಲಿನ ಮತ್ತೊಂದು ವೈಶಿಷ್ಟ್ಯ ಎಂದರೆ ಬೆಲ್ಲದಿಂದ ತಯಾರಿಸುವ ಐಸ್‌ಕ್ರೀಂಗಳು. ಮುಖ್ಯ ಬಾಣಸಿಗ ಸಚಿನ್‌ ಕಶ್ಯಪ್‌ ತಂದಿಟ್ಟ ‘ರಾ ಕೊಕೊ ಐಸ್‌ಕ್ರೀಂ’ ಎಷ್ಟು ತಿಂದರೂ ಇನ್ನೂ ಬೇಕು ಎನ್ನಿಸುತ್ತಿತ್ತು. ಅದರ ರುಚಿಗೆ ಎಲ್ಲರೂ ಮನಸೋತು ಎರಡೆರಡು ಕಪ್‌್ ತರಿಸಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. 

ಇದೆಲ್ಲ ಮುಗಿಯುತ್ತಿದ್ದಂತೆ ನಮ್ಮದೇ ಕೆಫೆಯಲ್ಲಿನ ಪಿಜ್ಜಾ ಎಂದು ಕಾರ್ನ್‌ ಮತ್ತು ಪನ್ನೀರ್‌ ಪಿಜ್ಜಾಗಳನ್ನು ಶೆಫ್‌ ತಂದು ಮುಂದಿಟ್ಟರು. ಮೈದಾ ಬೇಸ್‌ನಿಂದ ತಯಾರಿಸಿದ ಪಿಜ್ಜಾದ ರುಚಿಹಿಡಿಸಿದ್ದ ನಾಲಿಗೆಗೆ ಧಾನ್ಯಗಳ ಮಿಶ್ರಣದ ಪಿಜ್ಜಾ ಬೇಸ್‌ ಮೊದಲಿಗೆ ಅಷ್ಟು ರುಚಿಸಲಿಲ್ಲ. ಆದರೆ ಅದಕ್ಕೆ ಹಾಕಿದ್ದ ಅಲ್ಲೇ ತಯಾರಿಸಿದ್ದ ರಾಸಾಯನಿಕ ಮುಕ್ತ ಟೊಮೆಟೊ ಸಾಸ್‌, ತರಕಾರಿಗಳು, ಉತ್ತಮ ರುಚಿಯ ಚೀಸ್‌ಗಳ ರುಚಿ ಚಪಾತಿಯಂತಿದ್ದ ಬೇಸ್‌ ಅನ್ನೂ ಒಪ್ಪಿಕೊಳ್ಳುವಂತೆ ಮಾಡಿತು.

ರಾಸಾಯನಿಕಗಳ ಬಳಕೆ ಇಲ್ಲ
‘ಇಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಮೈದಾ ಹಿಟ್ಟು, ಅತಿ ಸಂಸ್ಕರಿತ ಸಕ್ಕರೆ, ಎಣ್ಣೆ, ವನಸ್ಪತಿ, ಉಪ್ಪು ಮತ್ತು ಯಾವುದೇ ರೀತಿಯ ರಾಸಾಯನಿಕ ಬಣ್ಣಗಳನ್ನು ಬಳಸದೆ ಆಹಾರ ತಿನಿಸುಗಳನ್ನು ತಯಾರಿಸಲಾಗುತ್ತದೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕರಾದ ಜಯರಾಮ್‌.

ಆಕರ್ಷಕ ಒಳಾಂಗಣ ವಿನ್ಯಾಸ
ಕಟ್ಟಡದ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಒಂದು ಅಂತಸ್ತಿಗೆ ಅದನ್ನು ವಿನಿಯೋಗಿಸಲಾಗಿದೆ. ಹಳೆಯ ಮತ್ತು ಪ್ಯಾಕಿಂಗ್ ಮರಗಳ ಮರು ಉಪಯೋಗ ಮಾಡಿ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಒಳಭಾಗದ ಗೋಡೆಗಳನ್ನು ಹಸಿ ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

ಗಿಡಗಳಿಗೆ ನೇರವಾಗಿ ಸೂರ್ಯನ ಕಿರಣಗಳನ್ನು ಹಾಯಿಸಲು ಸೋಲಾರ್ ಟ್ಯೂಬ್‌ಗಳನ್ನು ಅಳವಡಿಸಲಾಗಿದೆ. ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ಹಸಿ ತ್ಯಾಜ್ಯವನ್ನು ಬಳಸಿ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಇಡೀ ಕಟ್ಟಡದ ಸುತ್ತ ಮರಗಿಡಗಳನ್ನು ಬೆಳೆಸಿದ್ದು ಮತ್ತು ತಾರಸಿಯ ಮೇಲೆ ಸಾವಯವ ಕೈತೋಟವನ್ನು ನಿರ್ಮಿಸಿ ತರಕಾರಿ, ಹಣ್ಣು ಮತ್ತು ಗಿಡಮೂಲಿಕೆಗಳನ್ನು ಬೆಳೆದು ಬಳಸಲಾಗುತ್ತಿದೆ. ಒಟ್ಟಾರೆಯಾಗಿ ವಿದ್ಯುಚ್ಛಕ್ತಿ ಉತ್ಪಾದನೆ-ಬಳಕೆ, ಕಸ ನಿರ್ವಹಣೆ, ತಾರಸಿ ತೋಟಗಳೊಂದಿಗೆ ನಗರ ಸುಸ್ಥಿರತೆಯ ಮಾದರಿಗಳೂ ಇಲ್ಲಿವೆ.

ಏನಿದು ಹಸಿರು ತೋಟ?
ಸಾವಯವ ಕೃಷಿಕ ಎಚ್.ಆರ್. ಜಯರಾಮ್ ಅವರು ವಿಶಾಲವಾದ ಕಟ್ಟಡದೊಳಗೆ ಹಸಿರು ತೋಟವನ್ನು ನಿರ್ಮಿಸಿದ್ದಾರೆ.

ರೆಸ್ಟೋರೆಂಟ್‌: ಗ್ರೀನ್ ಪಾಥ್’
ಊಟದ ಸಮಯ: ಮಧ್ಯಾಹ್ನ 12ರಿಂದ 3 ಸಂಜೆ 7ರಿಂದ ರಾತ್ರಿ 11.
₹ 550  ಒಬ್ಬರಿಗೆ

ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ:  95388 63537

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT