ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ರೈತರಿಗೆ ಆರ್ಗ್ಯಾನಿಕ್‌ ಮಂಡ್ಯ

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಓದಿದ್ದು ಎಂಜಿನಿಯರಿಂಗ್. ವಿಪ್ರೊ ಸೇರಿದಂತೆ ಹಲವು ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಕೆಲಸ. ಕೈತುಂಬಾ ಸಂಬಳ. ಆ ಕಂಪೆನಿಗಳನ್ನು ಬಿಟ್ಟು ತಮ್ಮದೇ ಕಂಪೆನಿ ಆರಂಭಿಸಿದರು. ಆದರೂ ಬಿಡದ ಮಣ್ಣಿನ ಸೆಳೆತ. ಸ್ವಂತ ಜಿಲ್ಲೆಯಾದ ಮಂಡ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆಯ ಘಟನೆಗಳು ಮಣ್ಣಿನಲ್ಲಿ ಕೆಲಸ ಮಾಡುವ ಅವರ ನಿರ್ಧಾರವನ್ನು ಮತ್ತೆ ಗಟ್ಟಿಗೊಳಿಸಿತು.

ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲೇಬೇಕು ಎಂದು ನಿರ್ಧರಿಸಿ ಮಂಡ್ಯಕ್ಕೆ ಬಂದ ಸೂನಗನಹಳ್ಳಿಯ ಮಧುಚಂದನ್‌ ಅವರು, ಮೊದಲು ಮಾಡಿದ ಕೆಲಸ ಎಂದರೆ ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ ಸ್ಥಾಪಿಸಿದರು. ಇವರ ತಂದೆ ಚಿಕ್ಕದೇವಯ್ಯ ಅವರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಕುಲಪತಿಯಾಗಿದ್ದರು. ಅವರ ಕೃಷಿ ನಂಟು ಇವರನ್ನೂ ಇಲ್ಲಿಗೆ ಸೆಳೆಯುವ ಅಂಶಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಈಗಲೂ ಐಟಿ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ.

ಹಲವಾರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ 270ಕ್ಕೂ ಹೆಚ್ಚು ಮಂದಿ ರೈತರನ್ನು ಸಂಘಕ್ಕೆ ಸೇರಿಸಿಕೊಂಡಿದ್ದಾರೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸಮಾನ ಮನಸ್ಕರಿಂದ ಆರ್ಥಿಕ ನೆರವು ಪಡೆದು ‘ಆರ್ಗ್ಯಾನಿಕ್‌ ಮಂಡ್ಯ’ ಎಂಬ ಸೂಪರ್‌ ಮಾರ್ಕೆಟ್‌ ಮಳಿಗೆಯನ್ನು ಬೆಂಗಳೂರು–ಮೈಸೂರು ಹೆದ್ದಾರಿಯ ಮಂಡ್ಯ ತಾಲ್ಲೂಕಿನ ಬೂದನೂರು ಬಳಿ ಸಮಾನ ಮನಸ್ಕರೊಂದಿಗೆ ಸೇರಿ ಆರಂಭಿಸಿದ್ದಾರೆ.

‘ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ರೈತರು ಸಾವಯವ ಕೃಷಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರುಕಟ್ಟೆಯ ಕೊರತೆ ಇದೆ. ಎಪಿಎಂಸಿ, ಹಾಪ್‌ಕಾಮ್‌ಗಳು ಇವತ್ತಿನ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ರೈತರು ಹಾಗೂ ಗ್ರಾಹಕರ ನಡುವೆ ಸಂಪರ್ಕ ತಪ್ಪಿದ್ದು, ನಡುವೆ ದಲ್ಲಾಳಿಗಳು ನುಸುಳಿಕೊಂಡಿದ್ದಾರೆ. ಇದನ್ನು ತಪ್ಪಿಸಿ ನೇರ ಸಂಪರ್ಕಗೊಳಿಸುವ ಉದ್ದೇಶದಿಂದ ಆರ್ಗ್ಯಾನಿಕ್‌ ಮಂಡ್ಯ ಎಂಬ ಸೂಪರ್‌ ಮಾರ್ಕೆಟ್‌ ಹುಟ್ಟು ಹಾಕಿದ್ದೇವೆ’ ಎನ್ನುತ್ತಾರೆ ಸಂಸ್ಥಾಪಕ ಮಧುಚಂದನ್‌.

ಉತ್ತಮ ಬೆಲೆ: ಸಾವಯವ, ನೈಸರ್ಗಿಕ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಲಾಗುತ್ತಿದೆ. ಪ್ರತಿ ಕ್ವಿಂಟಾಲ್‌ ಬೆಲ್ಲಕ್ಕೆ ₹ 3,501, ರಾಜಮುಡಿ ಅಕ್ಕಿ ಪ್ರತಿ ಕೆ.ಜಿಗೆ ₹50, ನಾಟಿ ಕೋಳಿಯ ಪ್ರತಿ  ಮೊಟ್ಟೆಗೆ ₹ 8, ನಾಟಿ ಹಸುವಿನ ಪ್ರತಿ ಲೀಟರ್‌ ಹಾಲಿಗೆ ₹ 90, ಪ್ರತಿ ಕೆ.ಜಿ ತುಪ್ಪಕ್ಕೆ ₹800 ನೀಡಲಾಗುತ್ತದೆ ಎನ್ನುತ್ತಾರೆ ಅವರು.

ಮಳಿಗೆ ಆರಂಭಿಸಿದ್ದಲ್ಲದೇ ಅವರ ಎದುರಿಗೇ ಸಾವಯವ ವಸ್ತುಗಳ ಮಾರಾಟ ಆರಂಭಿಸಿರುವುದರಿಂದ ರೈತರಲ್ಲಿ ಆತ್ಮವಿಶ್ವಾಸ ಮೂಡಿದೆ. ಸಾವಯದ ಪದ್ಧತಿಯಲ್ಲಿ ಬೆಳೆದರೆ ತೆಗೆದುಕೊಳ್ಳುತ್ತಾರೆ ಎಂಬ ಖಾತರಿಯಾಗಿದೆ. ಈಗ ಕೆಲವರಿಗೆ ಸಿಕ್ಕಿರುವ ಬೆಲೆ ನೋಡಿ ಉಳಿದ ರೈತರು ಸಾವಯವ ಪದ್ಧತಿಯಲ್ಲಿ ಬೆಳೆಯಲು ಮುಂದಾಗುತ್ತಾರೆ. ಗ್ರಾಹಕರಿಗೂ ರೈತರಿಂದ ನೇರವಾಗಿ ಖರೀದಿ ಮಾಡಿ ಕೊಡುತ್ತೇವೆ ಎಂಬ ಭರವಸೆ ಮೂಡಿಸುತ್ತಿದ್ದೇವೆ. ಹಾಗಾಗಿ ಗ್ರಾಹಕರು ಉತ್ತಮ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಒಂದು ತಿಂಗಳಲ್ಲಿ 15 ಲಕ್ಷ ವಹಿವಾಟು ನಡೆಸಿದ್ದೇವೆ ಎಂದು ವಿವರಿಸಿದರು.

ತಂತ್ರಜ್ಞಾನದ ಬಳಕೆ: ‘ಆರ್ಗ್ಯಾನಿಕ್‌ ಮಂಡ್ಯ ಸೂಪರ್‌ ಮಾರ್ಕೆಟ್‌’ನ ವಸ್ತುಗಳನ್ನು ಮಾರಾಟ ಮಾಡಲು ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಫೇಸ್‌ಬುಕ್‌ ಖಾತೆ ತೆರೆಯಲಾಗಿದ್ದು, ಆನ್‌ಲೈನ್ ಬುಕ್ಕಿಂಗ್‌ ಮಾಡಬಹುದು. ಸದ್ಯಕ್ಕೆ ಬೆಂಗಳೂರು ಹಾಗೂ ಮಂಡ್ಯದ ಜನರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ.

ಕುಟುಂಬದ ದಿನಸಿ ಖರ್ಚನ್ನು ಗಮನದಲ್ಲಿಟ್ಟುಕೊಂಡು ಮೂರು ಬಾಸ್ಕೆಟ್‌ ಮಾಡಲಾಗಿದೆ. 20 ಸಾಮಗ್ರಿ ಒಳಗೊಂಡದ್ದು ₹ 99, 29 ಸಾಮಗ್ರಿ ಒಳಗೊಂಡದ್ದು ₹ 1,999, 36 ಸಾಮಗ್ರಿ ಒಳಗೊಂಡದ್ದನ್ನು ₹2,499ಕ್ಕೆ ಕೊಡಲಾಗುತ್ತಿದೆ. ರಾಜಮುಡಿ, ಸೋನಾ ಮಸೂರಿ ಅಕ್ಕಿ, ತೊಗರಿ ಬೇಳೆ, ಗೋಧಿ ಹಿಟ್ಟು, ಕಡ್ಲೆ ಬೀಜ, ಹೆಸರು ಬೇಳೆ, ಜೋನಿ ಬೆಲ್ಲ, ಅಚ್ಚು ಬೆಲ್ಲ ಸೇರಿದಂತೆ ಹಲವು ಬಗೆಯ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಜತೆಗೆ ಪತಂಜಲಿ ಅವರ ವಸ್ತುಗಳೂ ಇಲ್ಲಿ ಸಿಗುತ್ತವೆ.

ಮಂಡ್ಯ ಬೆಲ್ಲ: ರಾಸಾಯನಿಕ ಬಳಕೆಯಿಂದಾಗಿ ದೇಶದ ವಿವಿಧೆಡೆ ರವಾನೆಯಾಗುತ್ತಿದ್ದ ಮಂಡ್ಯದ ಬೆಲ್ಲಕ್ಕೆ ವಹಿವಾಟಿನಲ್ಲಿ ಹೊಡೆತ ಬಿದ್ದಿತ್ತು. ಅದರ ಅಧಿಪತ್ಯವನ್ನು ಮರುಸ್ಥಾಪಿಸಲು ‘ಮಂಡ್ಯ ಬೆಲ್ಲ’ ಹೆಸರಿನಲ್ಲಿ ಸಾವಯವ ಪದ್ಧತಿ ಹಾಗೂ ರಾಸಾಯನಿಕ ಮುಕ್ತ ತಯಾರಿಕೆ ಪದ್ಧತಿಯಲ್ಲಿ ಬೆಲ್ಲವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ವಿಸಿ ಫಾರ್ಮ್‌ನಲ್ಲಿ ಬೆಲ್ಲದ ಪಾರ್ಕ್‌ ಅನ್ನು ಟೆಂಡರ್‌ನಲ್ಲಿ ಗುತ್ತಿಗೆಗೆ ಪಡೆಯಲಾಗಿದೆ. ಅಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಲ್ಲವನ್ನು ತಯಾರು ಮಾಡಲಾಗುತ್ತಿದೆ. ಸ್ಟಾಂಡರ್ಡ್‌ ಹಾಗೂ ಪ್ರಿಮಿಯರ್‌ ಎಂದು ಎರಡು ವಿಭಾಗ ಮಾಡಲಾಗಿದೆ.

‘ಸದಸ್ಯರಾಗುವವರ ಹೆಸರಿನಲ್ಲಿ ಆರ್‌ಟಿಸಿ ಇರಬೇಕು. ಮಂಡ್ಯ ಜಿಲ್ಲೆಯಲ್ಲಿ ವಾಸವಾಗಿರಬೇಕು ಎನ್ನುವ ಷರತ್ತಿನ ಮೇಲೆ ಸದಸ್ಯತ್ವ ನೀಡುತ್ತಿದ್ದೇವೆ. ಇವರ ಸಂಖ್ಯೆಯನ್ನು ವರ್ಷದಲ್ಲಿ 2 ರಿಂದ 3 ಸಾವಿರಕ್ಕೆ ಹೆಚ್ಚಿಸುವ ಗುರಿ ಇದೆ. ಗುಣಮಟ್ಟ ಪರಿಶೀಲಿಸಲು ತಂಡವೊಂದನ್ನು ರಚಿಸಲಾಗಿದೆ. ಗುಣಮಟ್ಟದ ಪ್ಯಾಕಿಂಗ್‌ ಮೂಲಕ ಬ್ರಾಂಡ್‌ ವಸ್ತುವಾಗಿ ಪರಿವರ್ತಿಸಿದ್ದೇವೆ’ ಎನ್ನುತ್ತಾರೆ ಮಧು ಚಂದನ್‌.

ಕೃಷಿ ಪ್ರವಾಸದ ಯೋಜನೆ: ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಗಳು ರಜೆ ಕಳೆಯಲು ರೆಸಾರ್ಟ್‌ಗಳ ಮೊರೆ ಹೋಗುತ್ತಾರೆ. ಅಂತಹವರನ್ನು ಸಾವಯವ, ನೈಸರ್ಗಿಕ ಕೃಷಿ ಭೂಮಿಗಳ ಕಡೆಗೆ ಕರೆತರುವ ‘ಕೃಷಿ ಪ್ರವಾಸ’ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಇದರಿಂದ ಸಾವಯವ ಆಹಾರದ ಮಹತ್ವ, ನಿಸರ್ಗ ಸೌಂದರ್ಯ, ರೈತರ ನೋವು–ನಲಿವಿನ ಕುರಿತ ವಿಚಾರಗಳು ಅನುಭವಕ್ಕೆ ಬರಲಿವೆ. ಈಗಾಗಲೇ ಮೂರು ಕಾರ್ಪೊರೇಟ್‌ ತಂಡಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಮಳಿಗೆಯ ಹಿಂದೆಯೇ ನಾಲ್ಕು ಎಕರೆ ಭೂಮಿಯನ್ನು ಗುತ್ತಿಗೆ ತೆಗೆದುಕೊಂಡು ತಾವೇ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತರಕಾರಿ ಬೆಳೆಯುತ್ತಿದ್ದಾರೆ. ಆ ಮೂಲಕ ಸಾವಯವ ತರಕಾರಿಗೂ ಮಾರುಕಟ್ಟೆ ಒದಗಿಸಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT