ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಹಾಗಲ; ಬೇಡಿಕೆ ಭರಪೂರ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಹಸಿರು ಬಳ್ಳಿಯ ತುಂಬೆಲ್ಲಾ ಹಳದಿ ಹೂವು, ಬಳ್ಳಿಯ ಕೆಳಭಾಗದಲ್ಲಿ ಜೋತು ಬಿದ್ದಿರುವ ಕಾಯಿಗಳು, ಸಾಲು ಸಾಲು ಕೊಯ್ಲು ಮಾಡಿ ಇಟ್ಟಿರುವ ಕಾಯಿ, ಮತ್ತೊಂದೆಡೆ ಕೊಯ್ಲು ಮಾಡಿರುವ ಕಾಯಿಯ ರಾಶಿಯನ್ನು ಒಂದೊಂದಾಗಿ ಪೆಟ್ಟಿಗೆಗೆ ಜೋಡಿಸುತ್ತಿರುವ ದೃಶ್ಯ. ದೂರದಿಂದ ನೋಡಿದವರಿಗೆ ಇದು ಸೋರೆಯೋ, ಪಡುವಲ ಕಾಯಿಯೋ ಅಥವಾ ಹೀರೇಕಾಯಿಯೋ ಮತ್ತಾವುದೊ ಎಂಬ ಗೊಂದಲದಲ್ಲಿ ಹತ್ತಿರ ಬಂದು ನೋಡಿದಾಗಲೇ ಖಚಿತವಾದದ್ದು ಇದು ಹಾಗಲಕಾಯಿ ತೋಟ ಎಂದು.

ಸಾವಯುವ ಕೃಷಿಯನ್ನು ಹತ್ತಾರು ಎಕರೆಯಲ್ಲಿ ವಿಸ್ತರಿಸಿಕೊಂಡಿರುವ ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿ ಸಾವಯವ ಕೃಷಿಕ ಜಯರಾಮಪ್ಪ ತಮ್ಮ ತೋಟದ ಒಂದು ಮುಕ್ಕಾಲು ಎಕರೆಯಲ್ಲಿ ಪ್ರಾಯೋಗಿಕವಾಗಿ ಹಾಗಲಕಾಯಿ ಬೆಳೆದು ಯಶಸ್ವಿಯಾಗಿದ್ದಾರೆ. ಈ  ಹಾಗಲಕಾಯಿ ಈಗ ದುಬೈಗೆ ರಫ್ತಾಗುತ್ತಿದೆ.

ಹೀಗಿದೆ ಕೃಷಿ
ಒಂದು ಮುಕ್ಕಾಲು ಎಕರೆಯಲ್ಲಿ ಈ ಹಿಂದೆ ತಂತಿ ಬೇಲಿ ಆಧರಿಸಿ ಚಪ್ಪರದ ಬದನೆಕಾಯಿ ಬೆಳೆಯುತ್ತಿದ್ದರು ಜಯರಾಮಪ್ಪ. ಅದೇ ತಂತಿ ಬೇಲಿಯಲ್ಲಿ ಇದೀಗ ಹಾಗಲಕಾಯಿ ಬೆಳೆಸಲಾಗುತ್ತಿದೆ. ಸಸಿಯಿಂದ ಸಸಿಗೆ ನಾಲ್ಕು ಅಡಿ ಅಂತರದಲ್ಲಿ ಒಟ್ಟು ಹನ್ನೆರಡು ಅಡಿಗಳಲ್ಲಿ ಹಾಗಲ ಬೆಳೆಸಲಾಗುತ್ತಿದೆ.

ಪ್ರತಿ ಸಸಿಗೂ ಹನಿ ನೀರಾವರಿಯ ಜೊತೆಗೆ ಜೀವಾಮೃತ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಗಿಡಕ್ಕೆ ಪ್ಲಾಸ್ಟಿಕ್ ಹಾಳೆಯಿಂದ ಹೊದಿಕೆ ಕಲ್ಪಿಸಲಾಗಿದೆ. ಇದರಿಂದ ತೇವಾಂಶ ಕಾಯ್ದುಕೊಳ್ಳಲು ಹಾಗೂ ಕಳೆಗೆ ಕಡಿವಾಣ ಹಾಕಲು ಸಾಧ್ಯ ಎಂಬುದು ಜಯರಾಮಪ್ಪ ಅವರ ಅಭಿಮತ. ಇದನ್ನು ಪ್ರಾಯೋಗಿಕವಾಗಿಯೂ ಅವರು ತೋರಿಸಿದ್ದಾರೆ.

ಹದಿನೈದು ಟನ್ ಕೊಟ್ಟಿಗೆ ಗೊಬ್ಬರ ಹೊರತು ಪಡಿಸಿ ‘ಬಿಟ್ಟರ್’ ತಳಿಯ ಹಾಗಲಕಾಯಿ ಸಸಿ ಖರೀದಿ ಇತರೆ ಕೂಲಿ ಖರ್ಚಿಗೆ ಐವತ್ತು ಸಾವಿರ ವೆಚ್ಚವಾಗಿದೆ. ಸಸಿ ನಾಟಿ ಮಾಡಿದ ನಲವತ್ತೈದು ದಿನಕ್ಕೆ ಕೊಯ್ಲು ಆರಂಭವಾಗಿದೆ. ಈಗಾಗಲೇ ಮೂರನೇ ಕೊಯ್ಲು ಮುಗಿದಿದ್ದು ಎರಡೂವರೆ ಟನ್ ಹಾಗಲಕಾಯಿ ದುಬೈಗೆ ರಫ್ತಾಗಿದೆ.

‘ಹಾಗಲಕಾಯಿಗೆ ಪೋಷಕಾಂಶ ಸೂಕ್ತವಾಗಿದ್ದರೆ ಮುಂದಿನ ನಾಲ್ಕು ತಿಂಗಳುಗಳ ಕಾಲ, ಪ್ರತಿ ನಾಲ್ಕು ದಿನಕ್ಕೊಮ್ಮೆ ಕೊಯ್ಲಿಗೆ ಬರುತ್ತದೆ. ಶ್ರಮದ ಜೊತೆಗೆ ಖರ್ಚು ಕಡಿಮೆ. ಪ್ರತಿ ದಿನ ಎರಡು ಗಂಟೆ ನೀರು ಹಾಯಿಸಿದರೆ ಸಾಕು. ನೀರಿನ ಬಳಕೆಯು ಕಡಿಮೆ. ಹೊದಿಕೆ  ಕ್ರಮದಿಂದ ಇಳುವರಿಯು ಹೆಚ್ಚಳ ಬರುತ್ತದೆ. ಒಂದೊಂದು ಹಾಗಲಕಾಯಿ 350 ಗ್ರಾಂ ನಿಂದ 700 ಗ್ರಾಂ ತೂಕವಿದೆ. ಒಂದು ಅಡಿಯಿಂದ ಒಂದು ಕಾಲು ಅಡಿ ಉದ್ದವಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಜಯರಾಮಪ್ಪ.

ಇಂದು, ಸ್ಥಳೀಯ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಹಾಕಿದ ಬಂಡವಾಳ ಹಿಂದುರಿಗಿದರೆ ಸಾಕಪ್ಪ ಎಂಬಂತಾಗಿದೆ ರೈತರ ಪರಿಸ್ಥಿತಿ. ಆದರೆ ಜಯರಾಮಪ್ಪನವರು ಬೆಳೆದ ಹಾಗಲಕಾಯಿಗೆ ಸ್ಥಳದಲ್ಲಿಯೇ ಲಾಭವಿದೆ. ರಪ್ತು ವಹಿವಾಟುದಾರರು ನೇರವಾಗಿ ತೋಟಕ್ಕೆ ಬಂದು ಪ್ರತಿ ಕೆ.ಜಿಗೆ 23 ರಿಂದ 26 ರೂಪಾಯಿಗೆ ಖರೀದಿಸುತ್ತಾರೆ. ‘ಕೃಷಿಯ ಜೀವಾಳ ಮಣ್ಣು. ಮಣ್ಣಿನಲ್ಲಿರುವ ಸತ್ವ ಸರಿಯಿದ್ದರೆ ಸಂಪದ್ಭರಿತ ಫಸಲು ಹೊರಬರಲು ಸಾಧ್ಯ, ಬೆಳೆಗಳಿಗೆ ಪೂರಕವಾಗಿರುವ ಎಲ್ಲಾ ರೀತಿ ಹದಿನಾರು ಪೋಷಕಾಂಶಗಳು ಬೇಕು. ಜೊತೆಗೆ ಬೆಳೆ ತಜ್ಞರ ಸಲಹೆ ಅವಶ್ಯಕ’ ಎನ್ನುತ್ತಾರೆ ಜಯರಾಮಪ್ಪ.

ಈಗಾಲೇ ಎರಡೂವರೆ ಟನ್ ಮಾರಾಟವಾಗಿದೆ. ಹಾಕಿರುವ ಬಂಡವಾಳ ಸಿಕ್ಕಿದೆ. ಇನ್ನೂ ಹತ್ತು ಟನ್ ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಸಾವಯವ ಕೃಷಿಯಲ್ಲಿ ಈವರೆಗೂ ನಷ್ಟವಿಲ್ಲ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸಾವಯುವ ಕೃಷಿಕ ಜಯರಾಮಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT