ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಜೊತೆ ಸೆಣಸಾಟ

ಹದಗೆಡುತ್ತಿರುವ ಕೊಪ್ಪದ ಆರೋಗ್ಯ * ಸೇನಾ ಆಸ್ಪತ್ರೆ ವೈದ್ಯರ ಜತೆ ಕೈಜೋಡಿಸಿದ ಏಮ್ಸ್‌
Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆರು ದಿನಗಳ ಕಾಲ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಹಿಮರಾಶಿಯಲ್ಲಿ ಹೂತು ಹೋಗಿದ್ದರೂ ಬದುಕಿ ಬಂದ ಕುಂದಗೋಳ ತಾಲ್ಲೂಕು ಬೆಟದೂರಿನ ಯೋಧ ಲ್ಯಾನ್ಸ್‌ನಾಯಕ್‌ ಹನುಮಂತಪ್ಪ ಕೊಪ್ಪದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ.

‘ಅವರಿಗೆ ಅತ್ಯುತ್ತಮ ಚಿಕಿತ್ಸೆ ಮತ್ತು ಆರೈಕೆ ಒದಗಿಸಲಾಗಿದೆ. ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಹಾಗಿದ್ದರೂ ಅವರ ದೇಹಸ್ಥಿತಿ ಇನ್ನಷ್ಟು ಕ್ಷೀಣಿಸಿದೆ’ ಎಂದು ಸೇನಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಜಗತ್ತಿನ ಅತ್ಯುತ್ತಮ ತಜ್ಞರು ಅವರಿಗೆ ಚಿಕಿತ್ಸೆ ಒದಗಿಸುತ್ತಿದ್ದಾರೆ. ದೇಹ ಉಷ್ಣತೆಗೆ ಮತ್ತೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗಬಹುದು. ಮುಂದಿನ 24 ತಾಸು ನಿರ್ಣಾಯಕವಾಗಿರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ತಜ್ಞರ ತಂಡವು ಸೇನಾ ಆಸ್ಪತ್ರೆಯ ವೈದ್ಯರ ತಂಡದ ಜತೆ  ಕೊಪ್ಪದ ಅವರ ದೇಹ ಸ್ಥಿತಿ ಸುಧಾರಿಸಲು ಶ್ರಮಿಸುತ್ತಿದೆ. ಮಿದುಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂಬುದು ಸಿ.ಟಿ. ಸ್ಕ್ಯಾನ್‌ನಿಂದ ತಿಳಿದು ಬಂದಿದ್ದು, ಅವರ ಸ್ಥಿತಿ ಇನ್ನಷ್ಟು ಗಂಭೀರವಾಗಲು ಇದೂ ಒಂದು ಕಾರಣ ಎಂದು ಸೇನಾ ಆಸ್ಪತ್ರೆಯ ಹೇಳಿಕೆಯಲ್ಲಿ ವಿವರಿಸಲಾಗಿದೆ. ಅವರ ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾದ ಲಕ್ಷಣಗಳು ಇವೆ. ವಿವಿಧ ಅಂಗಗಳ ವೈಫಲ್ಯದ ಸ್ಥಿತಿ ಹಾಗೆಯೇ ಮುಂದುವರಿದಿದೆ ಎಂದು ವೈದ್ಯರು ಹೇಳಿದ್ದಾರೆ.

ಕೊಪ್ಪದ ಅವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಈತನಕ ಅತ್ಯುತ್ತಮವಾಗಿ ನಿಭಾಯಿಸಲಾಗಿದೆ. ಮುಂದಿನ ಚಿಕಿತ್ಸಾ ಯೋಜನೆಯನ್ನೂ ಅದೇ ರೀತಿಯಲ್ಲಿ ರೂಪಿಸಲಾಗಿದೆ  ಎಂದು ಸೇನಾ ಆಸ್ಪತ್ರೆ ಮತ್ತು ಏಮ್ಸ್‌ನ ವೈದ್ಯರು ಹೇಳಿದ್ದಾರೆ.

ಸುಳಿವು ಕೊಟ್ಟ ರೇಡಿಯೊ ಸಂಕೇತ: ಹಿಮಪಾತ ಉಂಟಾದದ್ದು ಫೆ. 3ರಂದು. ಕೊಪ್ಪದ ಅವರು ಸಮುದ್ರ ಮಟ್ಟದಿಂದ 19,600 ಅಡಿ ಎತ್ತರದಲ್ಲಿ ಹಿಮರಾಶಿಯ ಅಡಿಯಲ್ಲಿ ಜೀವಂತವಾಗಿ ಪತ್ತೆಯಾದದ್ದು ಆರು ದಿನಗಳ ಬಳಿಕ. ಅವರ ಪಕ್ಕದಲ್ಲೇ 9 ಯೋಧರ ಮೃತದೇಹಗಳೂ ಸಿಕ್ಕವು.

‘ಫೆ. 4ರಂದು ಹಿಮಪಾತಕ್ಕೆ ಸಿಲುಕಿದ ಯೋಧರ ಕೈಯಲ್ಲಿದ್ದ ರೇಡಿಯೊ ಜತೆ ಸಂಪರ್ಕ ಸಾಧ್ಯವಾಗಿತ್ತು. 10 ಯೋಧರಲ್ಲಿ ಕನಿಷ್ಠ ಒಬ್ಬ ಅಲ್ಲಿ ಸೃಷ್ಟಿಯಾಗಿದ್ದ ಗಾಳಿ ಗುಳ್ಳೆಯೊಳಗೆ ಜೀವಂತವಾಗಿದ್ದಾರೆ ಎಂಬುದು ನಮಗೆ ಖಚಿತವಾಗಿತ್ತು ಎಂದು ಜ. ದಲ್ಬೀರ್ ಸಿಂಗ್‌ ಸುಹಾಗ್‌ ಹೇಳಿದ್ದಾರೆ.

ರೇಡಿಯೊ ಸಂಪರ್ಕ ಸಾಧ್ಯವಾದ ನಂತರ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಂಡಿತು. ರಕ್ಷಣಾ ಕಾರ್ಯಾಚರಣೆ ಕಮಾಂಡರ್‌ ನಂತರದ ಐದು ದಿನ ಯೋಧರ ಶಿಬಿರ ಹಿಮಪಾತಕ್ಕೆ ತುತ್ತಾಗಿದ್ದ ಸೋನಮ್‌ ಪ್ರದೇಶದಿಂದ ಕದಲಲಿಲ್ಲ. ಹೆಚ್ಚು ಊಟ ಮಾಡಿದರೆ ಕೆಲಸ ತಡವಾಗಬಹುದು ಎಂಬ ಕಾರಣಕ್ಕೆ ಅವರು ಚಾಕ್ಲೇಟ್‌ ತುಂಡುಗಳನ್ನಷ್ಟೇ ತಿನ್ನುತ್ತಿದ್ದರು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆ. 5ರಂದು ಭಾರಿ ಹಿಮಗಾಳಿಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು. ಅಂದು ಅತ್ಯಂತ ಬೇಸರದಿಂದಲೇ ಕಮಾಂಡರ್‌ ಕೆಲಸ ಸ್ಥಗಿತಗೊಳಿಸಿದ್ದರು. ಅಷ್ಟೊಂದು ದೀರ್ಘ ಕಾಲ ಹಿಮದ ರಾಶಿಯ ಅಡಿಯಲ್ಲಿ ಜೀವ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಅರಿವು ಎಲ್ಲರಿಗೂ ಇತ್ತು. ಆದರೆ ಮನಸು ತಡೆಯಲಿಲ್ಲ. ಹಾಗಾಗಿ ರಕ್ಷಣಾ ಕಾರ್ಯಾಚರಣೆಯ ಯೋಧರು ಮಂಜುಗಡ್ಡೆಯ ರಾಶಿಯನ್ನು ನಿರಂತರವಾಗಿ ಅಗೆದರು ಎಂದು ಅವರು ಕಾರ್ಯಾಚರಣೆ ನಡೆದ ಬಗೆಯನ್ನು ಬಿಚ್ಚಿಟ್ಟಿದ್ದಾರೆ.

ಸಂಜೆ 3.30ರ ವರೆಗೆ ಸುರಕ್ಷಿತ: ಫೆ. 3ರಂದು ಸಿಯಾಚಿನ್‌ ನೀರ್ಗಲ್ಲಿನ ಉತ್ತರ ಭಾಗದಲ್ಲಿರುವ ಅತ್ಯಂತ ನಿರ್ಣಾಯಕ ಸೋನಮ್‌ ಠಾಣೆಯಲ್ಲಿದ್ದ 10 ಯೋಧರು ಬೆಳಗ್ಗೆ ನಿತ್ಯದ ಗಸ್ತು ನಡೆಸಿದ್ದಾರೆ. ಮಧ್ಯಾಹ್ನ 1.30ಕ್ಕೆ ಹಿಂದಿರುಗಿ ಬೇಸ್‌ ಕ್ಯಾಂಪ್‌ಗೆ ಮಾಹಿತಿ ನೀಡಿದ್ದಾರೆ.

3.30ಕ್ಕೆ ಮತ್ತೆ ರೇಡಿಯೊ ಮೂಲಕ ಎಲ್ಲರೂ ಸುರಕ್ಷಿತವಾಗಿರುವ ಮಾಹಿತಿ ತಿಳಿಸಿದ್ದಾರೆ.

ಆದರೆ ಸಂಜೆ5.5.30ರ ಹೊತ್ತಿಗೆ ಸೋನಮ್‌ ಠಾಣೆ ಸಾವಿರ ಅಡಿ ಅಗಲ, 800 ಅಡಿ ಎತ್ತರದ ಮಂಜಿನ ಗುಡ್ಡದಡಿ ಅಪ್ಪಚ್ಚಿಯಾಗಿದೆ. ಹತ್ತು ಯೋಧರು ಅದರಡಿ ಸಿಲುಕಿದ್ದಾರೆ.

ಖ್ಯಾತನಾಮರ ಟ್ವೀಟ್‌: ಸಾಮಾನ್ಯ ಜನರ ಜತೆಗೆ ದೇಶದ ಖ್ಯಾತನಾಮರೂ ಕೊಪ್ಪದ ಅವರು ಚೇತರಿಸಿಕೊಳ್ಳಲು ಪ್ರಾರ್ಥನೆ ನಡೆಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಬಾಲಿ­ವುಡ್‌ ತಾರೆಯರಾದ ಅಮಿತಾಭ್‌ ಬಚ್ಚನ್‌, ಅಮೀರ್‌ ಖಾನ್‌ ಮುಂತಾದವರು ಟ್ವೀಟ್‌ ಮಾಡಿ ಕೊಪ್ಪದ ಅವರಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಜನರಲ್ ಕಣ್ಣೀರು
ಒಬ್ಬ ಯೋಧನನ್ನು ಜೀವಂತ ರಕ್ಷಿಸಲಾಗಿದೆ ಎಂಬ ಮಾಹಿತಿಯನ್ನು ಸೋಮವಾರ ದೂರವಾಣಿ ಮೂಲಕ ಸೇನಾ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸುಹಾಗ್‌ ಅವರಿಗೆ ತಲುಪಿಸಿದಾಗ ಅವರಿಗೆ ತಮ್ಮ ಭಾವನೆಗಳನ್ನು ಅದುಮಿಡಲಾಗಲಿಲ್ಲ.

ತಡೆದರೂ ನಿಲ್ಲದೆ ಕಣ್ಣಿಂದ ಜಾರಿದ ಹನಿಯನ್ನು ಅವರು ತಕ್ಷಣವೇ ಒರೆಸಿಕೊಂಡರು. ‘ಓ ಎಂಥಾ ಒಳ್ಳೆ ಸುದ್ದಿ’ ಎಂದರು. ಆದರೆ ಕಣ್ಣೀರನ್ನು ಒರೆಸಿಕೊಂಡರೂ ಧ್ವನಿಯಲ್ಲಿನ ಭಾವುಕತೆ ಅವರ ಮನದ ಭಾವನೆಯನ್ನು ಅದುಮಿಡುವ ಯತ್ನವನ್ನು ಯಶಸ್ವಿಯಾಗಿಸಲಿಲ್ಲ. ಯುದ್ಧ, ಸಾವು, ನೋವು, ದುಃಖದ 30 ವರ್ಷಗಳ ಅನುಭವದ ಕಾಠಿಣ್ಯ ಕೂಡ ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರಲಿಲ್ಲ. ಮೃತರಾದ ಒಂಬತ್ತು ಯೋಧರನ್ನು ನೆನೆದು ಅವರಲ್ಲಿ ದುಃಖ ಉಕ್ಕಿಬಂತು.

ಯೋಧನ ಚೇತರಿಕೆಗೆ ಪೂಜೆ–ಪ್ರಾರ್ಥನೆ (ಪ್ರಜಾವಾಣಿ ವರದಿ/ಹುಬ್ಬಳ್ಳಿ/ ಮಂಗಳೂರು): ಸಿಯಾಚಿನ್‌ ಪ್ರದೇಶದಲ್ಲಿ ಹಿಮಪಾತದಲ್ಲಿ ಸಿಲುಕಿ, ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಹನುಮಂತಪ್ಪ ಕೊಪ್ಪದ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಉತ್ತರ ಕರ್ನಾಟಕದ ವಿವಿಧೆಡೆ, ದಾವಣಗೆರೆ, ಮಂಗಳೂರಿನಲ್ಲಿ  ಬುಧವಾರ ಪ್ರಾರ್ಥನೆ ಮತ್ತು ಪೂಜೆ ನಡೆದವು.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹನುಮಂತಪ್ಪ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಲಾಯಿತು.

ಕಿಡ್ನಿ ದಾನಕ್ಕೆ  ಮುಂದಾದ ಗೃಹಿಣಿ
ಲಖನೌ/ಮುಂಬೈ: 
ಕೊಪ್ಪದ ಅವರು ಬದುಕುಳಿಯಲಿ ಎಂದು ದೇಶದಾದ್ಯಂತ ಪ್ರಾರ್ಥನೆ ನಡೆಯುತ್ತಿದೆ. ಉತ್ತರ ಪ್ರದೇಶದ ಒಬ್ಬ ಗೃಹಿಣಿ ಮತ್ತು ನೌಕಾಪಡೆಯ ನಿವೃತ್ತ ನಾವಿಕರೊಬ್ಬರು ಕೊಪ್ಪದ ಅವರಿಗಾಗಿ ತಮ್ಮ ಅಂಗಾಂಗಳನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ.

ಲಖನೌದಿಂದ ಸುಮಾರು 150 ಕಿ.ಮೀ. ದೂರದ ಪದರಿಯ ತುಲಾ ಗ್ರಾಮದ ಗೃಹಿಣಿ ನಿಧಿ ಪಾಂಡೆ ತಮ್ಮ ಒಂದು ಮೂತ್ರ ಪಿಂಡವನ್ನು (ಕಿಡ್ನಿ) ದಾನ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ ನಿಧಿ ಅವರು ಮೂತ್ರಪಿಂಡ ದಾನ ಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರಕ್ಕೆ ತಮ್ಮ ಗಂಡನ ಅನುಮತಿಯೂ ಇದೆ ಎಂದು ಅವರು ತಿಳಿಸಿದ್ದಾರೆ.

‘ಯಾವ ಅಂಗ ಬೇಕಿದ್ದರೂ ಕೊಡುವೆ’: ಕೊಪ್ಪದ ಅವರ ಜೀವ ರಕ್ಷಿಸುವುದಕ್ಕಾಗಿ ತಮ್ಮ ದೇಹದ ಯಾವುದೇ ಅಂಗವನ್ನು ದಾನ ಮಾಡಲು ಸಿದ್ಧ ಎಂದು ನೌಕಾಪಡೆಯ ನಿವೃತ್ತ ನಾವಿಕ ಎಸ್‌.ಎಸ್‌. ರಾಜು ಹೇಳಿದ್ದಾರೆ.

‘ಸೇನಾ ಆಸ್ಪತ್ರೆಯ ವೈದ್ಯರು ತಕ್ಷಣವೇ ನನ್ನನ್ನು ಸಂಪರ್ಕಿಸಬಹುದು. ಮೂತ್ರಪಿಂಡ, ಪಿತ್ತಜನಕಾಂಗ ಸೇರಿ ಯಾವುದೇ ಅಂಗವನ್ನು ದಾನ ನೀಡಲು ನಾನು ಸಿದ್ಧನಿದ್ದೇನೆ. ಗಂಭೀರ ಸ್ಥಿತಿಯಲ್ಲಿರುವ ಸಹಯೋಧನನ್ನು ಬದುಕಿಸುವುದಷ್ಟೇ ಈಗ ಮುಖ್ಯ’ ಎಂದು ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT