ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಭೀತಿಯಲಿ ‘ಮಂಗನ ರೊಟ್ಟಿ’

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ವಿಜಯಪುರದಲ್ಲಿರುವ ‘ಮಂಗನ ರೊಟ್ಟಿ’ಗೆ ಸಾವಿನ ಭೀತಿ ಎದುರಾಗಿದೆ. ಕಪ್ಪು ತಾಜಮಹಲ್ ಎಂದೇ ಪ್ರಸಿದ್ಧವಾದ ಇಬ್ರಾಹಿಂ ರೋಜಾ ಪಕ್ಕದಲ್ಲಿರುವ ಖಾಸಗಿ ಜಮೀನೊಂದರಲ್ಲಿ ಇರುವ ಈ ಮಂಗನ ರೊಟ್ಟಿಗೆ ಈಗ 600 ವರ್ಷ!

ಇದೇನಿದು ‘ಮಂಗನ ರೊಟ್ಟಿ’ ಎಂದು ಅಚ್ಚರಿಯಾಯಿತಲ್ಲವೇ? ಇದು ಒಂದು ಜಾತಿಯ ಮರ. ಇಂಗ್ಲಿಷ್‌ನಲ್ಲಿ ಇದನ್ನು ‘ಮಂಕಿ ಬ್ರೆಡ್‌ ಟ್ರೀ’ ಎಂದು ಕರೆಯತ್ತಾರೆ.ಇದಕ್ಕೆ ಬಾವೋಬಾ, ಬಾವಬಾಬ, ಬಾಟಲ್ ಟ್ರೀ, ತಲೆಕೆಳಗಾದ ಮರ, ಗೋರಖ ವೃಕ್ಷ ಎಂಬೆಲ್ಲ ಹೆಸರುಗಳಿವೆ. ದೈತ್ಯಾಕಾರದ ಈ ಅಪರೂಪದ ಮರ ‘ಪಾರಂಪರಿಕ ವೃಕ್ಷ’ವೂ ಹೌದು. ಆದಿಲ್‌ಶಾಹಿ ಆಡಳಿತದಲ್ಲಿ ಮೊಳೆತು-ಬೆಳೆದ ಈ ಮರ ಆರು ಶತಮಾನಗಳ ಇತಿಹಾಸ ಹೊಂದಿದೆ. ಇಬ್ರಾಹಿಂ ರೋಜಾ ನೋಡಲು ಬರುವ ಪ್ರವಾಸಿಗರ ಗಮನ ಸೆಳೆಯುವ ರೀತಿಯಲ್ಲಿ ಈ ಮರ ಮೈದಳೆದಿದೆ.

ಆಫ್ರಿಕಾ ಖಂಡದಿಂದ ತಂದ ಈ ಮರದ ಬೀಜವನ್ನು ಅರೇಬಿಯನ್ ವ್ಯಾಪಾರಿಗಳು ಇಲ್ಲಿ ನೆಟ್ಟರಂತೆ. ಮುಂದೆ ಅದನ್ನು ಪೋಷಿಸಿ ಬೆಳೆಸಿದವರು 200ವರ್ಷಗಳ ಕಾಲ ವಿಜಯಪುರವನ್ನು ಆಳಿದ 8 ಜನ ಆದಿಲ್‌ಶಾಹಿ ಅರಸರು. ಈ ಮರದ ಎತ್ತರ 5 ಮೀಟರ್‌. ಇದರ ಬೃಹತ್ ಗಾತ್ರದ ಕಾಂಡದ ಸುತ್ತಳತೆ 10.85 ಮೀಟರ್‌ ಎಂದು ಈ ಮರದ ಪಕ್ಕದಲ್ಲಿ ನಿಲ್ಲಿಸಿದ ಮಾಹಿತಿ ಫಲಕ ಹೇಳುತ್ತದೆ. 

2002ರಲ್ಲಿ ಜೀವವೈವಿಧ್ಯ ಮಂಡಳಿಯು ಪಾರಂಪರಿಕ ವೃಕ್ಷ ಎಂದು ಘೋಷಿಸಿದೆ. ಇದರ ವೈಜ್ಞಾನಿಕ ಹೆಸರು ಅಡನಸೋನಯಾ ಡಿಜಿಟಾಟಾ.  ಇದು ಬೊಂಬಾಕೆಸಿಯ ಕುಟುಂಬಕ್ಕೆ ಹಾಗೂ  ಮಾಲವೆಸಿಯಾ ಉಪಕುಟುಂಬಕ್ಕೆ ಸೇರಿದೆ.  ಈ ವೃಕ್ಷಕ್ಕೆ ಸೇರಿದ ಮರಗಳಲ್ಲಿ 8 ಪ್ರಕಾರಗಳಿವೆ. ಅವುಗಳಲ್ಲಿ ಆರು ಪ್ರಕಾರಗಳು ಮಡಗಾಸ್ಕರ ದೇಶದಲ್ಲಿಯೇ ಇವೆ.  ಹೀಗಾಗಿ ‘ಮಂಗನ ರೊಟ್ಟಿ’, ಮಡಗಾಸ್ಕರ ದೇಶದ ರಾಷ್ಟ್ರೀಯ ವೃಕ್ಷವೂ ಹೌದು. ಉಳಿದ ಎರಡು ಪ್ರಕಾರದ ಮರಗಳು ಆಫ್ರಿಕಾ ಹಾಗು ಆಸ್ಟ್ರೇಲಿಯಾ ದೇಶಗಳಲ್ಲಿ ಕಂಡು ಬರುತ್ತವೆ.

ವಿಜಯಪುರದಲ್ಲಿರುವ ಏಕಮೇವ ಮಂಗನ ರೊಟ್ಟಿ ಈಗ ಜಾರಿ ಬೀಳುವುದೇನೋ ಎಂಬ ಆತಂಕ ಉಂಟಾಗಿದೆ. ಅದು ಈಗ ಒಂದು ಕಡೆ ಸ್ವಲ್ಪ ವಾಲಿದೆ.  ಅದರಿಂದಾಗಿ ಮತ್ತೊಂದು ಕಡೆ ಏಳೆಂಟು ಅಂಗುಲದ ಬಿರುಕೊಂದು ಕಾಣಿಸಿಕೊಂಡಿದೆ.  ಅದು ಇನ್ನಷ್ಟು ಬಾಗದಿರಿಲಿ ಎಂದು ಚಿಂತಿಸಿ, ಅದು ಬಾಗಿದ ಕಡೆಗಿನ ಒಂದಿಷ್ಟು ಕೊಂಬೆಗಳನ್ನು ಕಡಿದು ಹಾಕಲಾಗಿದೆ.  ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಪರವಾನಗಿಯನ್ನೂ ಪಡೆಯಲಾಗಿದೆ ಎಂದು ಮರದ ಸಮೀಪವೇ ವಾಸಿಸುವ ಶಾಂತು ಬಾಗಲಕೋಟಿ ಹೇಳುತ್ತಾರೆ. 

ಶಾಂತು ಅವರಿಗೆ ಆ ಮರದ ಬಗ್ಗೆ ಪ್ರೀತಿ-ಅಭಿಮಾನ. ‘ಈ ಮರದ ಕಾಯಿಗಳ ಹೊರ ಆವರಣ ಮೊಲದ ಮೈಯಂತೆ ಮೃದುವಾಗಿ ಇರುತ್ತದೆ. ಇದರಲ್ಲಿ ಬಿಡುವ ಬಿಳಿ ಹೂವುಗಳು ಹಾಗೂ ತೆಂಗಿನ ಗಾತ್ರದ ಕಾಯಿಗಳು ತುಂಬಾ ಆಕರ್ಷಕವಾಗಿರುತ್ತವೆ’ ಎಂದು ಅವರು ವಿವರಿಸುತ್ತಾರೆ. ಈ ಬೃಹತ್ ಆಕರ್ಷಕ ಮರಕ್ಕೀಗ ಬ್ಯಾಕ್ಟೀರಿಯಾ, ಫಂಗಸ್ ಹಾಗೂ ಗೆದ್ದಲುಗಳ ಕಾಟ ಉಂಟಾಗಿದೆಯಂತೆ. ಇದನ್ನು ಬಹಳ ದಿನಗಳವರೆಗೆ ಉಳಿಸುವುದು ತುಂಬಾ ಕಷ್ಟ ಎಂದು ಅರಣ್ಯ ರಕ್ಷಣಾ ಇಲಾಖೆಯ ಅಧಿಕಾರಗಳು ಹೇಳುತ್ತಾರೆ.

ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಇಷ್ಟು ವರ್ಷ ಈ ಮರ ವಿಜಯಪುರ ನೆಲದಲ್ಲಿ ಬಾಳಿ ಬದುಕಿದ್ದರೂ, ಇಂಥದೇ ಮತ್ತೊಂದು ಮರ ಇಲ್ಲೆಲ್ಲೂ ಹುಟ್ಟಲಿಲ್ಲ ಎಂಬುದು.  ಇಲ್ಲಿನ ಸಸ್ಯ ಶಾಸ್ತ್ರಜ್ಞರು ಈ ಐತಿಹಾಸಿಕ ಮರವನ್ನು ಉಳಿಸುವತ್ತ ಪ್ರಯತ್ನಿಸಬೇಕಲ್ಲದೇ, ಇದರ ಬೀಜದಿಂದ ಇನ್ನಷ್ಟು ಮರಗಳನ್ನು ಅಭಿವೃದ್ಧಿ ಪಡಿಸುವತ್ತಲೂ ಶ್ರಮಿಸಬೇಕು. ಇಲ್ಲವಾದರೆ ಈ ಮರದೊಂದಿಗೆ ಇದರ ವಂಶವೇ ನಾಶವಾಗಿ ಹೋಗಿ ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT