ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು–ಮದುವೆ ತಲ್ಲಣದ ನಡುವೆ...

Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಆ ಹಿರಿ  ಜೀವದ ಮುದ್ದಿನ ಮಗ ನನ್ನ ಗಂಡ. ದಶಕಗಳ ಕಾಲವೂ ಅವನ ಬೆನ್ನು ಮೂಳೆ ಮುರಿಸಿ ಕಥೆ ಮುಗಿಸಿತ್ತು ಸಾವು.. ಮಗನಿಂದ ಏನೇನೆಲ್ಲಾ ಬಯಸಿದ್ದ ಜೀವ ಶೂನ್ಯದಲ್ಲಿ ಸುಖ ಕಾಣಲು ಒದ್ದಾಡಿತು. ಬೆಂಕಿ ಹೊಗೆ ಆರುವ ಮುನ್ನವೇ ಮತ್ತೊಂದು ಬಾಂಬು. 50 ವರ್ಷ ದಾಂಪತ್ಯ ಗೀತೆ ಹಾಡಿದ್ದ ಅತ್ತೆ.. ಆ ದಿನ ಕಣ್ಣಿನ ಪೊರೆ ಕಳಚಿಕೊಂಡು ಬರಲು ಆಸ್ಪತ್ರೆಗೆ ಹೋದವರು ತಾವೆ ಜೀವನದ ಪೊರೆ ಕಳಚಿದರು. ಇಷ್ಟೆಲ್ಲ ಕಷ್ಟದಲ್ಲೂ ಕತ್ತಲೆ..  ಮನೆ ದೂರ ಕಳವಳಿಸದೇ ನಡೆ ಮಗಳೇ..! ಎಂದು ಕೈಹಿಡಿದು ನಡೆಸಿದರು. ಎದೆ ಒಡೆದರೂ ಮುಂದಿರುವ ಜವಾಬ್ದಾರಿಗಳ ಬಗ್ಗೆ ಎಚ್ಚರಿಸಿದರು.

ನನ್ನ ಮಗಳು ಅವರಿಗೆ ಮೊಮ್ಮಗಳು ಮಾತ್ರವಲ್ಲ. ಮಗಳು, ಗೆಳತಿ, ತಾಯಿ, ಮಗ ಎಲ್ಲವೂ ಆಗಿದ್ದಳು.  ಅವಳಿಗೆ ಚಂದದ ವರ ಸಿಕ್ಕ. ವಿದ್ಯಾವಂತ ವಿನಯವಂತ. ಸಣ್ಣ ಮಕ್ಕಳಂತೆ ಕುಣಿದಾಡಿದರು. ಬಂದ ಬಂದವರಿಗೆ ಅಗೋ ನೋಡಿ ಬೆಳ್ಳಿ ಚುಕ್ಕಿ, ಎಂದು ಮಕ್ಕಳಿಗೆ ತೋರಿಸಿದಂತೆ ತೋರಿಸಿ ಸಂಭ್ರಮಿಸಿದರು. ಮಗಳನ್ನು ಕೇಳಿ ಅದು ಬೇಕಾ? ಇದು ಬೇಕಾ ? ಜರತಾರೀ ಸೀರೆ..! ಬೆಳ್ಳಿ, ಬಂಗಾರ ಎಂದರು.

ಆನೆ ಅಂಬಾರಿ ಕೊಡುವ ಶಕ್ತಿ ಇರಲಿಲ್ಲ. ಮೊವ್ಮ್ಮಗಳು ಕೇಳಿದ್ದರೆ ಯಾರನ್ನಾದರೂ ಕೇಳಿ ತಂದು ಕೊಡುತ್ತಿದ್ದರೇನೋ? 
ಮನೆಯಲ್ಲಿ ಮದುವೆ ಸಂಭ್ರಮ. ತಾವೇ ಬಾಂಧವರಿಗೆ ಕರೆ ಮಾಡಿ ಆಮಂತ್ರಿಸಿದರು. ಮಲಗಿದವರು ಆಕಳಿಸಿದಷ್ಟೇ. ಯಾರೆಲ್ಲಾ ಇದ್ದರು, ವೈದ್ಯರೂ ಬಂದರು. ಉಳಿಸಿಕೊಳ್ಳಲಾಗಲಿಲ್ಲ. ಪ್ರೊಫೆಸರ್ ಆಗಿದ್ದ ಮಾವ ಆಜಾತಶತ್ರು. ಅವರ ದೃಷ್ಟಿಯಲ್ಲಿ ಎಲ್ಲರೂ ಒಳ್ಳೆಯಯವರೇ.   ಗಾಳಿಯಲ್ಲಿ, ಮುಗಿಲಲ್ಲಿ ಮನೆಯಲ್ಲಿ, ನೆಲದಲ್ಲಿ ಹೊಂಚು Pಹಾಕಿ ಕುಳಿತಿದ್ದ ಸಾವು ಇವರನ್ನು ಇಷ್ಟ ಪಟ್ಟಿತ್ತು. ಯಾರಿಗೂ ಸುಳಿವೂ ಕೊಡದೇ ಕರೆದುಕೊಂಡು ಹೋಗೇ ಬಿಟ್ಟಿತ್ತು.

ಅವರ ಆಯ್ಕೆ ಸಾವಾಗಿರಲಿಲ್ಲ.. ಹೀಗೆ ಕಿರುಬೆರೆಳು ಹಿಡಿದವಳನ್ನು  ಕೈ ಬಿಟ್ಟು ನಡೆದರೆ ನಾನೇನು ಮಾಡಲಿ. ಕಣ್ಣು ಮುಚ್ಚಿದವರನ್ನು ಕೇಳಿದೆ. ಅವರೆಲ್ಲಿ  ಉತ್ತರಿಸಿಯಾರು? ಆಕಾಶ ಬಹಳ ಸಾರಿ ಕಳಚಿ ಬಿದ್ದಂತೆ ನಾಟಕ ಮಾಡಿತ್ತು. ನಾನೇನು ಹೆದರಿರಲಿಲ್ಲ. ಹೋಗೋಗು. ಯಾರೂ ಇಲ್ಲದವಳೆಂದು ಅಳಲು ಕೊಡಬೇಡ ಕಂಡಯ್ಯ..! ಮಾವ ನನ್ನೊಂದಿಗಿದ್ದಾನೆ ಎಂದೆ. ಈಗ ಅವರೇ ಕೈ ಬಿಟ್ಟಿದ್ದರು. ಭೂಮಿಯೇ ಕುಸಿದರೆ ನಿಲ್ಲುವುದೆಲ್ಲಿ?.  ನನ್ನ ಮೇಲೆ ಭಾರ ಹೊರಸಿದ್ದರು. ಅವರ ಜಡ ದೇಹ ನನ್ನ ಯಾವ ಮೊರೆಯನ್ನು ಕೇಳಲಿಲ್ಲ. 

ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವುದಕ್ಕೆ ಆದ್ಯತೆ ಕೊಡಬೇಕು ತಿಳಿಯಲಿಲ್ಲ. ಒಂದು ಕಡೆ ಮಾವನ ಅಗಲಿಕೆ. ಇನ್ನೊಂದು ಕಡೆ  ಖುಷಿಯಿಂದ ನಿಗದಿ ಮಾಡಿದ್ದ ಮದುವೆ.. ನೋವು ಒಳಗೇ ಉಳಿಯಿತು.. ಕಣ್ಣೀರು ಬಾರದಂತೆ ತುಟಿ Pಕಚ್ಚಿದೆ. ಗಟ್ಟಿ ಜೀವ. ಸ್ವಾರ್ಥಿಯಾದೆ. ಮದುವೆಯನ್ನೇ ಆಯ್ಕೆ ಮಾಡಿಕೊಂಡೆ.

ಯಾರು ನಿಜವಾದ ಬಂಧುಗಳು ಎಂಬುದು ಕಷ್ಟಕಾಲದಲ್ಲಿ ತಿಳಿಯುವುದಂತೆ. ನಿಜವಾದ ಬಂಧುಗಳು ಕೈ ಬಿಡಲಿಲ್ಲ. ಹೊರಟು ಹೋದ ಮಾವನವರ ನೆನೆದು ಸಂತಾಪಕ್ಕೆ ಆದ್ಯತೆ ಕೊಡಬೇಕಾಗಿತ್ತು. ಹಾಗೆ ಮಾಡಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿರಲಿಲ್ಲ. ಆಯ್ಕೆ, ಆದ್ಯತೆ ಎಂಬ ತಲ್ಲಣಗಳ ಮಧ್ಯೆ ಆಯ್ಕೆ ಗೆದ್ದೆನೆಂದು ಬೀಗಿತು. ಆದ್ಯತೆ ಎದೆಯೊಳಗೆ ಒದ್ದಾಡಿ ಕಣ್ಣಂಚಿನಲ್ಲಿ ಮಡುಗಟ್ಟಿತ್ತು.
ಕಾಕಾ ಸುಧೀಂದ್ರ ಧಾರೆ ಎರೆಯಲು ತಯಾರಾದರು. ಅಕ್ಕಂದಿರು ಅರಿಷಿಣ ಹಚ್ಚಿದರು. ಅತ್ತೆಯಂದಿರು ಆರತಿ ಬೆಳೆಗಿದರು. ಅಣ್ಣಂದಿರು ಊಟ ಮಾಡಿಸಿದರು. ಮಾವನ ಆಸೆ ನೆರವೇರಿದ್ದಕ್ಕೆ ಎದೆ ಮುಟ್ಟಿಕೊಂಡೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT