ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಮತ್ತು ವೈಭವೀಕರಣ

ಅಗಲಿದ ಧೀಮಂತರ ಚೇತನವನ್ನು ಕಾಣಬೇಕಾದುದು ಸ್ಥಾವರದಲ್ಲಲ್ಲ. ಅವರು ಸಾಗಿದ ಋಜುಹಾದಿಯ ಅನುಸರಣೆಯಲ್ಲಿ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

‘ಜಾತಸ್ಯ ಮರಣಂ ಧ್ರುವಂ’- ಹುಟ್ಟಿದ್ದೆಲ್ಲವೂ ಒಂದಲ್ಲೊಂದು ದಿನ ಮರಣಿಸುವುದು ಅನಿವಾರ್ಯ. ಯಾವುದೇ ಜೀವಿಗೆ ಅಳಿಯುವುದರಿಂದ ವಿನಾಯಿತಿ ಇಲ್ಲ. ಅಸುನೀಗಿದ ತನ್ನ ಮಗುವನ್ನು ಬದುಕಿಸಿಕೊಡುವಂತೆ ಮಹಿಳೆಯೊಬ್ಬಳು ಬುದ್ಧನಲ್ಲಿಗೆ ಬಂದು ಪ್ರಲಾಪಿಸುತ್ತಾಳೆ. ಆಗ ಆಕೆಗೆ ‘ಸಾವಿಲ್ಲದ ಮನೆಯ ಸಾಸಿವೆ ತಾ’ ಎಂದು ಹೇಳುವ ಮೂಲಕ ಮನಮುಟ್ಟುವಂತೆ ಬುದ್ಧ ಸಾವಿಲ್ಲದ ಮನೆಯೇ ಇಲ್ಲವೆಂಬ ಪರಮ ಸತ್ಯವನ್ನು ಬಿಂಬಿಸುತ್ತಾನೆ. ಯಾರದೇ ಸಾವು ಎಂಥವರನ್ನಾದರೂ ದುಃಖಕ್ಕೀಡಾಗಿಸುತ್ತದೆ. ಅದು ಸರಿ ಮತ್ತು ಸಹಜ.

ಆದರೆ ಸಾವು ಸಹಜವೆನ್ನುವುದನ್ನು ನಾವು ಗ್ರಹಿಸುವ ಮಾತಿರಲಿ, ಅದು ನಡೆಯಲೇಬಾರದಿದ್ದ ಘಟನೆ ಎನ್ನುವಂತೆ ಏಕೆ ಉದ್ವೇಗಕ್ಕೊಳಗಾಗುತ್ತೇವೆ? ರಾಮಾಯಣದಲ್ಲಿ ಭರತ, ತಂದೆ ದಶರಥನ ನಿಧನಕ್ಕೆ ಶೋಕಿಸುತ್ತಿದ್ದಾಗ ಋಷಿಮುನಿಗಳಿಂದ ದೊರಕುವ ಸಾಂತ್ವನ ಸಾರ್ವಕಾಲಿಕ: ‘ಎಲ್ಲರೂ ಒಂದಲ್ಲೊಂದು ದಿನ ತಮ್ಮ ತಂದೆಯನ್ನು ಕಳೆದುಕೊಳ್ಳಲೇಬೇಕು.

ಆದ್ದರಿಂದ ಕೊರಗದೆ ನಿನ್ನ ಕರ್ತವ್ಯದಲ್ಲಿ ನಿರತನಾಗು’. ಅಂತೆಯೇ ಮಹಾಭಾರತದಲ್ಲಿ ‘ಲೋಕದಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಯಾವುದು?’ ಎಂಬ ಯಕ್ಷನ ಪ್ರಶ್ನೆಗೆ ಧರ್ಮರಾಜ ‘ಜಗತ್ತಿನಲ್ಲಿ ಒಬ್ಬರಾದ ಮೇಲೆ ಇನ್ನೊಬ್ಬರು ಸಾವನ್ನಪ್ಪುತ್ತಿರುವುದನ್ನು ನೋಡಿಯೂ  ಮನುಷ್ಯ ತಾನು ಅಮರನೆಂದುಕೊಂಡಿರುವುದು’ ಎಂದು ಉತ್ತರಿಸುತ್ತಾನೆ.

ವೇದವ್ಯಾಸರು ಸಾವು ಒಂದು ನಿಯತಕ್ರಮವೆ ಹೊರತು ಅದರಲ್ಲಿ ಅತಿಶಯವನ್ನು ಕಾಣಬಾರದಾಗಿ ಈ ಮೂಲಕ ಸಾರುತ್ತಾರೆ. ‘ಶರಣರಿಗೆ ಮರಣವೆ ಮಹಾನವಮಿ’, ‘ಸಾವು ನಾಳೆ ಬರುವುದಾದರೆ ಇಂದೇ ಬರಲಿ’ ಎಂಬಿತ್ಯಾದಿ ಉದ್ಗಾರಗಳು ಮರಣವನ್ನು ನಿರ್ಭಾವದಿಂದ ಪರಿಭಾವಿಸಬೇಕೆನ್ನುವುದನ್ನು ಸಾದರಪಡಿಸುತ್ತವೆ.

ಇಂಗ್ಲೆಂಡಿನ ಪ್ರಸಿದ್ಧ ಫುಟ್‌ಬಾಲ್ ಆಟಗಾರನಾಗಿದ್ದ ಬ್ರೈನ್ ಕ್ಲೋಗ್ ‘ನಾನು ಸತ್ತಾಗ ಯಾರೂ ಹೂ ಗುಚ್ಛ ಅರ್ಪಿಸಬೇಡಿ. ನಾನು ನಿಮಗೆ ಇಷ್ಟವಾದರೆ ಬದುಕಿರುವಾಗಲೇ ಕಳಿಸಿ’ ಎನ್ನುತ್ತಿದ್ದ. ‘ಇದ್ದಾಗ ಮಾರಕ, ಸತ್ತಾಗ ಸ್ಮಾರಕ’ ಎಂಬ ವ್ಯಂಗೋಕ್ತಿ ನಿಷ್ಠುರ ಸತ್ಯ. ವ್ಯಕ್ತಿ ಗತಿಸಿದ ನಂತರ ತುಂಬಲಾರದ ನಷ್ಟ, ಅಂಥವರಿನ್ನೆಲ್ಲಿ, ಮತ್ತೆ ಹುಟ್ಟಿ ಬರಲಿ ಮುಂತಾಗಿ ಸಂತಾಪಗಳ ಸುರಿಮಳೆ.

ಅವರಿದ್ದಾಗ ಅವರಿಂದ ಪಡೆದುಕೊಂಡ ಲಾಭವೇನು! ಇತ್ತೀಚೆಗೆ ನಿಧನರಾದ ಹೆಸರಾಂತ ಸಾಹಿತಿಯೊಬ್ಬರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಗೆ ನಾನೂ ಹೋಗಿದ್ದೆ. ದಿವಂಗತರ ಹೆಸರನ್ನು ಸರಿಯಾಗಿ ಹೇಳಲಾರದವರೂ ಅವರೊಂದಿಗಿನ ಒಡನಾಟವನ್ನು ಬಣ್ಣಿಸುತ್ತ, ಅವರ ಗುಣಗಾನಕ್ಕಿಳಿದಿದ್ದರು! ಕೆಲವರೊ  ಮಾತಿನುದ್ದಕ್ಕೂ ಅಳು ಉಮ್ಮಳಿಸಿ ಧಾರಾಳವಾಗಿ ಕರವಸ್ತ್ರ ಬಳಸಿದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಅಗಲಿದ ಸಾಹಿತಿಯ ಕುಟುಂಬದವರು, ಹೇಗೊ ನಾವಷ್ಟು ಸುಧಾರಿಸಿಕೊಳ್ಳುತ್ತಿದ್ದೇವೆ, ಇಲ್ಲಿಗೆ ಏಕಾದರೂ ಬಂದೆವು ಅಳು ಮುಂದುವರಿಸಲು ಅಂದುಕೊಂಡಿರಬೇಕು.

ಕನ್ನಡದ ‘ರತ್ನ’ರೆಂದು ಮನೆಮಾತಾಗಿರುವ ಜಿ.ಪಿ.ರಾಜರತ್ನಂ ಅವರಿಗೆ ಯಾವುದೇ ಪ್ರಶಸ್ತಿ, ಸನ್ಮಾನ ಪ್ರಾಪ್ತವಾದಾಗಲೂ ಅವರ ಅಭಿಮಾನಿಗಳು, ‘ಸಾರ್, ನಿಮಗೆ ಇದು ಯಾವತ್ತೊ ದೊರಕಬೇಕಿತ್ತು, ತಡವಾಯಿತು’ ಎನ್ನುತ್ತಿದ್ದರಂತೆ. ರಾಜರತ್ನಂ ಒಂದು ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದರು. ‘ನೋಡಿ ಹೇಗೆ ಜನ.

ನಾನು ಮೇಲಕ್ಕೆ ಹೋದಮೇಲೂ ಖಂಡಿತ ಇವರು ಯಾವತ್ತೋ ಇವನು...’ ಎನ್ನುತ್ತಿದ್ದಂತೆಯೆ ಸಭೆ ಸೂರು ಹಾರಿಹೋಗುವಂತೆ ಚಪ್ಪಾಳೆ ತಟ್ಟಿತು. ಅಕ್ಷರದ ಅನಿವಾರ್ಯವಿಲ್ಲದ ಜನಪದರು ಸಂಪನ್ನರ ಸಾವನ್ನು ನಿರಾಕರಿಸುವ ಬಗೆ ಗಮನೀಯ: ‘ಸತ್ಯವುಳ್ಳ ಧರ್ಮರು ಸತ್ತರು ಎನದಿರಿ/ ಸತ್ತರೆ ಲೋಕ ಉಳಿಯದು/ ಧರ್ಮರು ಬಿತ್ತಿ ಹೋಗ್ಯವರೆ ಅವರೇಯ’.

ಆಶಾದಾಯಕವೆಂದರೆ ತಾವು ಗತಿಸಿದ ತರುವಾಯ ಕಣ್ಣು, ದೇಹದಾನ ಮಾಡುವ ಹಂಬಲದ ಮನಸ್ಸುಗಳು ಹೆಚ್ಚುತ್ತಿರುವುದು. ಆವೇಗ, ಆವೇಶಕ್ಕೊಳಗಾಗದೆ ಅಂಥ ಉದಾತ್ತ ಆಶಯವನ್ನು ಈಡೇರಿಸುವ ಅವರ ಕುಟುಂಬದವರು ಶ್ಲಾಘನಾರ್ಹರು. ವಯಸ್ಸು ತೊಂಬತ್ತೆಂಟು, ನೂರು ದಾಟಿರಲಿ ಅಂಥವರ ಸಾವು ದಿಗ್ಭ್ರಮೆಯನ್ನೇ ಉಂಟುಮಾಡಿರುತ್ತದೆ!  ಪ್ರಸಿದ್ಧ ಕವಿಯೊಬ್ಬ ಏಳೂರು ಕೂಳಿಗೆ ಭಿಕ್ಷೆ ಬೇಡುತ್ತಿದ್ದನಂತೆ.

ಅವನು ಸತ್ತಮೇಲೆ ಒಂದೊಂದೂ ಊರಿನವರು ‘ಅಂವ ನಮ್ಮೂರಿನವ’ ಎಂದು ಹೇಳಿಕೊಳ್ಳಲು ಪೈಪೋಟಿಗಿಳಿದರಂತೆ. ಅಂದಹಾಗೆ ಪಂಚಭೂತಗಳಿಂದ ರೂಪಿತವಾದ ಶರೀರ ಮತ್ತೆ ಪಂಚಭೂತಗಳಲ್ಲಿ ಲೀನವಾಗುವುದು ಸ್ವಾಭಾವಿಕ. ಸಾವನ್ನು ವೈಭವೀಕರಿಸಿದಷ್ಟೂ ಅನಗತ್ಯ ಭಾವಪರವಶತೆಯೆ. ತಮ್ಮ ನಂಟರಿಷ್ಟರ, ಆಪ್ತರ ಅಗಲಿಕೆ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಅಪ್ರಬುದ್ಧ, ಅತಿರೇಕದ ಪ್ರಸಂಗಗಳೂ ಉಂಟು.

ಶ್ರದ್ಧಾಂಜಲಿ ಸಭೆಗಳು ಭಾವೋದ್ವೇಗ ಮೀರಿ ಮೃತರ ಬದುಕಿನ ರಚನಾತ್ಮಕ ವಿಮರ್ಶೆಗೆ ಒತ್ತು ಕೊಡುವುದು ಯುಕ್ತ. ಇದರಿಂದ ಗತಿಸಿದವರಿಗೆ ಅಗೌರವ ಸಲ್ಲಿಸಿದಂತೇನೂ ಆಗದು. ಮೃತರನ್ನು ವೃಥಾ ಅಳತೆ ಮೀರಿ ಹೊಗಳುವ ಸಂದರ್ಭಗಳೇ ಹೆಚ್ಚು.  ಬದಲಿಗೆ ಇವರು ಹೀಗೆ ಒದಗಿದ ಸಂದರ್ಭಗಳನ್ನು ಎದುರಿಸಬಹುದಿತ್ತು.

ಈ ನಿರ್ಧಾರ ಸರಿ, ಇವರ ಬದುಕು ನಮಗೆಂಥ ಸ್ಫೂರ್ತಿ ನೀಡಬಹುದು  ಮುಂತಾಗಿ ವಸ್ತುನಿಷ್ಠವಾದ ಪರಾಮರ್ಶೆ ಏಕಾಗಬಾರದು? ಅಗಲಿದವರ ದೇಹವನ್ನೇ ವೈದ್ಯಕೀಯ ಶಿಕ್ಷಣಾಲಯಕ್ಕೆ ಅಧ್ಯಯನಾರ್ಥವಾಗಿ ನೀಡಬಹುದಾದ ಹಿನ್ನೆಲೆಯಲ್ಲಿ ಅವರು ಬದುಕಿ ಬಾಳಿದ
ಸನ್ನಿವೇಶಗಳನ್ನು ಒರೆಗೆ ಹಚ್ಚುವುದು ಅಸಿಂಧುವೆನ್ನಿಸದು.

ಖ್ಯಾತನಾಮರು ಅಗಲಿದ ಬೆನ್ನಲ್ಲೇ ಅವರ ಹೆಸರನ್ನು ಇಂಥ ರಸ್ತೆಗೆ, ನಿಲ್ದಾಣ, ಉದ್ಯಾನವನ ಅಥವಾ ಕಟ್ಟಡಕ್ಕಿಡಿ ಎಂದೊ ಇಲ್ಲವೆ ಪ್ರತಿಮೆ ಸ್ಥಾಪಿಸಿ ಎಂದೊ ಒತ್ತಾಸೆಗಳು ಇದ್ದಿದ್ದೆ. ಅಗಲಿದ ಧೀಮಂತರ ಚೇತನವನ್ನು ಕಾಣಬೇಕಾದುದು ಸ್ಥಾವರದಲ್ಲಲ್ಲ. ಅವರು ಸಾಗಿದ ಋಜುಹಾದಿಯ ಅನುಸರಣೆಯಲ್ಲಿ.

ಇಪ್ಪತ್ತನೆಯ ಶತಮಾನದ ಕ್ರಾಂತಿಕಾರಿ, ಆಂಗ್ಲಭಾಷೆಯ ಬರಹಗಾರ್ತಿ ವಿರ್ಜಿನಿಯಾ ವೂಲ್ಫ್ ‘ಜೀವಿಸಿರುವವರು ಬದುಕಿನ ಬೆಲೆಯೇನೆಂಬುದನ್ನು ಸಮರ್ಥವಾಗಿ ಅರಿಯಲು ಒಬ್ಬರ ಹಿಂದೆ ಒಬ್ಬರು ನಿರ್ಗಮಿಸುತ್ತಿರಲೇಬೇಕಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT