ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ, ಕಲ್ಪನೆಯ ಗಡಿ ದಾಟಿದ ಭಾರತ

ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು : ‘ಭಾರತವು ಮನುಷ್ಯನ ಸಾಹಸ ಪ್ರವೃತ್ತಿ ಹಾಗೂ ಕಲ್ಪನೆಯ ಚೌಕಟ್ಟನ್ನು ದಾಟಿ ಮುಂದೆ ಸಾಗಿದೆ.’ – ಇಸ್ರೊ ಉಡಾಯಿ­ಸಿದ ಮಂಗಳನೌಕೆಯು ಯಶಸ್ವಿಯಾಗಿ ಆ ಗ್ರಹದ ಕಕ್ಷೆ ಸೇರಿದ ಚಾರಿತ್ರಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎದೆತುಂಬಿ ಬಣ್ಣಿಸಿದ್ದು ಹೀಗೆ.

ಇಸ್ರೊದ ಮಾರ್ಸ್‌ ಆರ್ಬಿಟರ್‌ ಮಿಷನ್‌ (ಎಂಒಎಂ– ಮಾಮ್‌) ಮಂಗಳನ ಕಕ್ಷೆಯನ್ನು ಸಂಧಿಸಿದ ಐತಿಹಾಸಿಕ ಕ್ಷಣಕ್ಕೆ ಇಲ್ಲಿನ ಪೀಣ್ಯ­ದಲ್ಲಿರುವ /ಇಸ್‌ಟ್ರ್ಯಾಕ್‌ ಕೇಂದ್ರದಲ್ಲಿ ಸಾಕ್ಷಿ­ಯಾದ ಮೋದಿ ಅವರು, ಈ ಯಶಸ್ಸಿಗೆ ಕಾರಣ­ರಾದ ಎಲ್ಲಾ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದರು.

‘ಭಾರತ ಮಂಗಳವನ್ನು ಯಶಸ್ವಿ­ಯಾಗಿ ತಲು­ಪಿದೆ. ನಿಮ್ಮೆಲ್ಲರಿಗೂ ಅಭಿನಂದನೆ­ಗಳು. ರಾಷ್ಟ್ರದ ಜನರಿಗೂ ಅಭಿನಂದನೆಗಳು. ಇವತ್ತು ಇತಿಹಾಸ­ವನ್ನು ನಿರ್ಮಿಸಲಾಗಿದೆ. ಯಾವುದನ್ನು ಅಸಾಧ್ಯವೆ­ನ್ನಲಾಗಿತ್ತೋ ಅದನ್ನು ಸಾಧಿಸಿದ್ದೇವೆ’ ಎಂದರು. ‘ನೌಕೆಯು 65 ಕೋಟಿ ಕಿ.ಮೀ.ಗಳಿಗಿಂತಲೂ ಹೆಚ್ಚು ಅಗಾಧ ದೂರವನ್ನು ಕ್ರಮಿಸಿದೆ. ಕೆಲವೇ ಕೆಲವರಿಗೆ ಗೊತ್ತಿರುವ ಪಥದ ಮೂಲಕ ನಾವು ನೌಕೆಯನ್ನು ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಸೂರ್ಯನಿಂದ ಬೆಳಕು ಭೂಮಿಗೆ ತಲುಪಲು ಎಷ್ಟು ಸಮಯ ಹಿಡಿ­ಯುತ್ತದೋ ಅದಕ್ಕಿಂತ ಹೆಚ್ಚು ಸಮಯ ಇಲ್ಲಿನ ರೇಡಿಯೊ ಸಂಕೇತ ಮಂಗಳನಲ್ಲಿಗೆ ಹೋಗಲು ಹಿಡಿಯುತ್ತದೆ. ಅದನ್ನು ನಾವು ಸಾಧಿಸಿದ್ದೇವೆ. ನಿಮ್ಮ ಬುದ್ಧಿವಂತಿಕೆ ಮತ್ತು ಪರಿಶ್ರಮದ ಬಲ­ದಿಂದಾಗಿ ಅಸಾಧ್ಯವಾದುದನ್ನು ಸಾಧಿಸು­ವುದನ್ನು ನೀವು ಕರಗತ ಮಾಡಿಕೊಂಡಿದ್ದೀರಿ. ಅಜ್ಞಾತವಾ­ದುದನ್ನು ಶೋಧಿಸುವುದರಲ್ಲಿ ಇಸ್ರೊ ವಿಜ್ಞಾನಿ­ಗಳಿಗೆ ಇರುವಷ್ಟು ಹಂಬಲ ಬೇರೆ ಯಾರಲ್ಲೂ ಕಂಡುಬರದು’ ಎಂದರು.

‘ಈ ಮಾರ್ಸ್‌ ಆರ್ಬಿಟರ್‌ನ್ನು ದೇಶೀಯವಾ­ಗಿಯೇ ನಿರ್ಮಿಸಲಾಗಿದೆ. ಬೆಂಗಳೂರಿನಿಂದ ಭುವನೇಶ್ವರದವರೆಗಿನ ಹಾಗೂ ಫರೀದಾ­ಬಾದ್‌­ನಿಂದ ರಾಜಕೋಟ್‌ವರೆಗಿನ ಹಲವರು ಇದರಲ್ಲಿ ಭಾಗಿಯಾಗಿದ್ದಾರೆ. ಯೋಜನೆಯ ಕಾರ್ಯ­ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿದ ಮೂರು ವರ್ಷದ ಕ್ಷಿಪ್ರ ಅವಧಿಯೊಳಗೆ ಅದನ್ನು ಮುಗಿಸಿ­ರುವುದು ಒಂದು ದಾಖಲೆ ಎಂಬುದು ಕೂಡ ಭಾರತೀಯರಿಗೆ ಹೆಮ್ಮೆ ತರುವ ಸಂಗತಿ’ ಎಂದರು. ‘ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರು ಕನಸು ನಮ್ಮನ್ನು ಚಂದ್ರಯಾನಕ್ಕೆ ಪ್ರೇರೇಪಿಸಿತ್ತು.

ಆ ಚಂದ್ರಯಾನದ ಯಶಸ್ಸು ಈ ಮಂಗಳಯಾನ ಯೋಜನೆಗೆ ಸ್ಫೂರ್ತಿಯಾಯಿತು’ ಎಂದರು. ‘ಪರಂಪರೆಯಿಂದ ಹರಿದುಬಂದ ಜ್ಞಾನಕ್ಕೆ ನಾವು ಋಣಿಯಾಗಿರಬೇಕಾಗಿದೆ. ನಮ್ಮ ಪೂರ್ವಿ­ಕರು ಅಂತರಿಕ್ಷದ ರಹಸ್ಯಗಳನ್ನು ಜಗತ್ತಿಗೇ ಪರಿಚ­ಯಿಸಿದ್ದರು. ಶೂನ್ಯದ ಪರಿಕಲ್ಪನೆಯನ್ನು ಗ್ರಹಿಸಿದ್ದ ಅವರು ಭೂಮಿಯ ಸುತ್ತುವಿಕೆ, ಗ್ರಹ­ ಗಳ ಚಲನೆ, ಗ್ರಹಣಗಳ ಸಂಭವಿಸುವಿಕೆ ಬಗ್ಗೆ ಬಹುಹಿಂದೆಯೇ ನಕಾಶೆಗಳನ್ನು ರಚಿಸಿದ್ದರು.

ಇವತ್ತಿನ ಆಧುನಿಕ ಭಾರತ ಕೂಡ ಅದೇ ರೀತಿಯಲ್ಲಿ ‘ಜಗದ್ಗುರು ಭಾರತ’ ಎಂಬ ಹೆಸರಿಗೆ ಅನ್ವರ್ಥವಾಗುವಂತೆಯೇ ಮುಂದುವರಿಯ­ಬೇಕು’ ಎಂದರು. ‘ದಿಗಂತಗಳನ್ನು ವಿಸ್ತರಿಸಬಯಸುವ ಶೋಧಕನ ಪಯಣದ ಹಾದಿಯಲ್ಲಿ ಅನಿಶ್ಚಿತತೆಯು ಅವಿ­ಭಾಜ್ಯ ಅಂಗವಾಗಿದೆ. ಶೋಧನೆಯ ಹಸಿವು ಹಾಗೂ ಆವಿಷ್ಕಾರದ ರೋಚಕತೆಗಳು ಅಳ್ಳೆದೆ­ಯ­ವರಿಗೆ ನಿಲುಕುವುದಿಲ್ಲ’ ಎಂದು  ನುಡಿದರು.

ಕ್ರಿಕೆಟ್‌ ಗೆಲುವಿಗಿಂತ ಸಾವಿರ ಪಟ್ಟು ದೊಡ್ಡ ಸಾಧನೆ\

ಕ್ರಿಕೆಟ್‌ ಪಂದ್ಯದ ಗೆಲುವಿಗಿಂತ ಸಾವಿರ ಪಟ್ಟು ದೊಡ್ಡ ಗೆಲುವು ಇದು.  ಕ್ರಿಕೆಟ್‌ ಪಂದ್ಯದಲ್ಲಿ ನಮ್ಮ ತಂಡ ಗೆದ್ದಾಗ ಇಡೀ ದೇಶ ಖುಷಿಪಡುತ್ತದೆ. ನಮ್ಮ ವಿಜ್ಞಾನಿಗಳ ಸಾಧನೆ ಇದಕ್ಕಿಂತ ಸಾವಿರ ಪಟ್ಟು ದೊಡ್ಡದು. ಕನಿಷ್ಠ ಪಕ್ಷ ಐದು ನಿಮಿಷವಾದರೂ ಈ ವಿಜ್ಞಾನಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ.

ಮಂಗಳನಿಗೆ ‘ಮಾಮ್‌’ ಸಿಕ್ಕಿದ್ದಾಳೆ
‘‘ಇವತ್ತು ‘ಮಾಮ್‌’ ಮಂಗಳನನ್ನು ಸಂಧಿ­ಸಿದೆ; ಇದೇ ವೇಳೆ ಮಂಗಳ ಗ್ರಹಕ್ಕೆ ‘ಮಾಮ್‌’  (ಅಮ್ಮ ಎನ್ನುವ ಅರ್ಥದಲ್ಲಿ) ಕೂಡ ಸಿಕ್ಕಿದ್ದಾಳೆ. ಈ ಯೋಜನೆಗೆ ಸಂಕ್ಷಿಪ್ತ ರೂಪ­ದಲ್ಲಿ ‘ಮಾಮ್‌’ ಎಂದು ಹೆಸರು ಇರಿಸಿದಾಗಲೇ ಈ ಯೋಜನೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂಬುದು ನನಗೆ ನಿಶ್ಚಯವಾಗಿತ್ತು’’ ಎಂದು ಮಂಗಳಗ್ರಹದ ಬಣ್ಣಕ್ಕೆ ಸಂವಾದಿಯಾದ ಕೆಂಪುಬಣ್ಣದ ಜಾಕೆಟ್‌ ಧರಿಸಿದ್ದ ಮೋದಿ ಹೇಳಿದರು.

‘ವೈಫಲ್ಯದ ಹೊಣೆ ಹೊರುತ್ತಿದ್ದೆ’
ಮಂಗಳಯಾನ ನೌಕೆಯನ್ನು ಆ ಗ್ರಹದ ಕಕ್ಷೆ ಸೇರಿಸುವ ಅಂತಿಮ ಹಂತದ ಕಾರ್ಯಾ­ಚರಣೆಗೆ ಸಾಕ್ಷಿಯಾಗಲು ನನ್ನನ್ನು ಕರೆಯ­ಬೇಕೋ ಅಥವಾ ಕರೆಯುವುದು ಬೇಡವೋ ಎಂಬ ದ್ವಂದ್ವ ಇಸ್ರೊ ವಿಜ್ಞಾನಿಗಳನ್ನು ಕಾಡಿತ್ತು. ಕಡೆಯ ಗಳಿಗೆಯಲ್ಲಿ ಎಲ್ಲಿ ಯೋಜನೆ ವಿಫಲವಾಗಿಬಿಡುತ್ತದೋ ಎಂಬ ಆತಂಕವೇ ಈ ದ್ವಂದ್ವಕ್ಕೆ ಕಾರಣ. ಆದರೆ ಒಂದೊಮ್ಮೆ ಇದು ವಿಫಲವಾಗಿದ್ದರೂ ಅದರ ಹೊಣೆಯನ್ನು ನಾನೇ ಹೊರುತ್ತಿದ್ದೆ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿಜ್ಞಾನಿಗಳ ಸಮೂಹದಲ್ಲಿ ವಿಶ್ವಾಸ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT