ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ ಕ್ರೀಡೆಗಳ ತಾಣ ಶಿಲ್ಹಾಂದರ

ಸುತ್ತಾಣ
Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬೆಟ್ಟದ ಒಂದು ತುದಿಯಿಂದ ಕೆಳಗೆ ಧುಮುಕಿ ಜಿಪ್‌ಲೈನ್‌ ಮೂಲಕ ಸುಯ್ಯೆಂದು ತೂರಿ ಬರುವ ಮೋಜು, ರಸವತ್ತಾದ ಕ್ವಾಡ್ ಬೈಕಿಂಗ್‌ ಅನುಭವ, ಹಗ್ಗದ ಮೇಲೆ ನಡೆಯುವ ಸರ್ಕಸ್‌....

ಇದೆಲ್ಲವನ್ನೂ ಒಂದೇ ಕಡೆ ಸವಿಯಬೇಕೆನ್ನುವ ಸಾಹಸಪ್ರಿಯರು, ಪ್ರವಾಸಪ್ರಿಯರು ನೀವಾಗಿದ್ದಲ್ಲಿ ಒಮ್ಮೆ ‘ಶಿಲ್ಹಾಂದರ’ಕ್ಕೆ ಬರಬೇಕು.
ಸಾಲು ಬೆಟ್ಟಗಳ ನಡುವೆ ಹರಡಿಕೊಂಡಿರುವ ಈ ಕ್ರೀಡಾ ಮತ್ತು ಕಲಾಗ್ರಾಮವು ವಿಶಿಷ್ಟ ಬಗೆಯ ಅನುಭವ ನೀಡುತ್ತದೆ. ಸಾಹಸ ಕ್ರೀಡೆಗಳಿಗೆ ಹೇಳಿ ಮಾಡಿಸಿದಂತಿದೆ.

ಬೆಂಗಳೂರಿನಿಂದ ಸುಮಾರು 49 ಕಿ.ಮೀ. ಕ್ರಮಿಸಿದರೆ ರಾಮನಗರ ಸಿಗುತ್ತದೆ. ಅಲ್ಲಿಂದ ಮಾಗಡಿ ರಸ್ತೆ ಹಿಡಿದು ಸುಮಾರು ಏಳೆಂಟು ಕಿಲೋಮೀಟರ್‌ ಸಾಗಿದರೆ ‘ಶಿಲ್ಹಾಂದರ’ದ ಫಲಕ ನಿಮ್ಮನ್ನು ಸ್ವಾಗತಿಸುತ್ತದೆ.

ರಸ್ತೆಯ ಬದಿಗಳಲ್ಲಿ ಹಾಕಿರುವ ನಾಡಿನ ಪ್ರಸಿದ್ಧ ರಾಜಮನೆತನಗಳ ಸಂಕ್ಷಿಪ್ತ ಇತಿಹಾಸವನ್ನು ಓದುತ್ತ ಮುಖ್ಯದ್ವಾರ ತಲುಪಿದರೆ ಕ್ರೀಡಾ ಗ್ರಾಮಕ್ಕೆ ಪ್ರವೇಶ ಸಿಗುತ್ತದೆ.

ಇದು ರಾಶಿ ಇಕೊ ಟೂರಿಸಂ ಕಂಪೆನಿಯ ಕನಸಿನ ಕೂಸು. ಶಿಲ್ಹಾಂದರ ಎಂಬ ಹೆಸರೇ ಹೇಳುವಂತೆ ಶಿಲಾಯುಗದ ನೆನಪು ಮರುಕಳಿಸುವಂತೆ ಪ್ರವೇಶ ದ್ವಾರವನ್ನು ವಿನ್ಯಾಸಗೊಳಿಸಲಾಗಿದೆ.

ಪ್ರಾಚೀನ ಕಾಲದ ಗುಹೆ ಹೊಕ್ಕ ವಿಶಿಷ್ಟ ಅನುಭವ ಪಡೆಯುತ್ತಾ ಮುಂದುವರಿದರೆ ಸಾಮಂತ ಮನೆತನವೊಂದರ ಅರಮನೆಯ ನೆನಪಾಗದೇ ಇರದು. ಡೈನಿಂಗ್‌ ಹಾಲ್‌, ಸಭಾಂಗಣ ಎಲ್ಲವನ್ನೂ ಮಂಟಪದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಲ್ಲಿ ವ್ಯವಸ್ಥೆ ಇದೆ. ವೈವಿಧ್ಯಮಯ ಸಾಹಸಕ್ರೀಡೆಗಳಿಗೆ ಹೆಚ್ಚು ಅವಕಾಶ ಇದೆ. ಹಿನ್ನೆಲೆಯಲ್ಲಿ ಶ್ರೀರಂಗನಾಥನಂತೆ ಮಲಗಿರುವ ಬೃಹತ್‌ ಕಲ್ಲುಬಂಡೆಯನ್ನು ಒಳಗೊಂಡ ಬೆಟ್ಟದ ಮಧ್ಯಭಾಗದಿಂದ ಕ್ರೀಡಾಗ್ರಾಮದವರೆಗೂ ‘ಜಿಪ್‌ಲೈನ್’ ಎಳೆಯಲಾಗಿದೆ.

ಗುಡ್ಡವನ್ನೇರಿ, ಸುರಕ್ಷತಾ ಸಾಧನಗಳನ್ನು ಮೈಗೆ ಕಟ್ಟಿಕೊಂಡು ಟವರಿನಿಂದ ಕೆಳಗೆ ಜಿಗಿದರೆ ಕೆಲವೇ ಸೆಕೆಂಡ್‌ನಲ್ಲಿ ರೆಸಾರ್ಟ್‌ ಒಳಗಿರುತ್ತೀರಿ. ರೇಸ್‌ ಪ್ರಿಯರಿಗಾಗಿ ಕ್ವಾಡ್‌ ಬೈಕ್‌ ಟ್ರ್ಯಾಕ್‌ ಕೂಡ ನಿರ್ಮಿಸಲಾಗಿದೆ.

ಭಿನ್ನ ಬಗೆಯ ಬೈಕನ್ನೇರಿ ಬುರ್ರೆಂದು ಸದ್ದು ಮಾಡುತ್ತಾ ಸುತ್ತು ಹೊಡೆಯಬಹುದು. ಒಟ್ಟೊಟ್ಟಿಗೆ ತಂಡವಾಗಿ ಬಂದವರು ಪೇಂಟ್‌ ಬಾಲ್ ಮೂಲಕ ಪರಸ್ಪರ ‘ಹೊಡೆದಾಡಿಕೊಳ್ಳುವ’ ಅವಕಾಶ ಸಹ ಇದೆ.

ಕ್ರೀಡಾಗ್ರಾಮದ ಒಂದು ಮೂಲೆಯಲ್ಲಿ ಶೋಲೆ ಬ್ರಿಜ್‌, ಬರ್ಮಾ ಬ್ರಿಜ್‌ ಸಹಿತ ಒಟ್ಟು ಆರು ಬಗೆಯ ಸೇತುವೆಗಳು ಇವೆ. ಒಂದಕ್ಕಿಂತ ಒಂದು ಭಿನ್ನವಾದ ಈ ಸೇತುವೆಗಳ ಮೇಲೆ ನಡೆಯುವುದು ಕತ್ತಿ ಅಲಗಿನ ಮೇಲೆ ನಡೆಯುವ ಅನುಭವ ಕೊಡುತ್ತದೆ.

ವಾಲಿಬಾಲ್‌, ಬ್ಯಾಡ್ಮಿಂಟನ್‌, ಸ್ನೂಕರ್, ಕೇರಂ ಮೊದಲಾದ ಆಟಗಳನ್ನು ಆಡುತ್ತಾ ಕಾಲ ಕಳೆಯಬಹುದು. ಆಟ ಆಡಿ ಸುಸ್ತಾದವರು ವಿರಮಿಸಲು ಈಜಕೊಳವೂ ಇಲ್ಲುಂಟು.

‘ಮಳೆ ಸ್ನಾನ’ ಇಲ್ಲಿನ ವಿಶೇಷ. ಕಟ್ಟಡದ ಒಳಗೆ ಮರದ ಬಿಳಲುಗಳ ರೀತಿ ವಿನ್ಯಾಸಗೊಳಿಸಿದ ಒಳಾಂಗಣದಲ್ಲಿ ಕಣ್ಣಿಗೆ ಹಿತವೆನಿಸುವ ದೀಪಗಳ ಬೆಳಕು, ಅಬ್ಬರದ ಡಿ.ಜೆ. ಸಂಗೀತದೊಂದಿಗೆ ನೀರಿನಲ್ಲಿ ನೆನೆಯುತ್ತಾ ನೃತ್ಯ ಮಾಡಬಹುದು.

ಸಾಹಸ ಚಟುವಟಿಕೆಗಳ ನಿರ್ವಹಣೆಗೆಂದೇ ಆರು ಮಂದಿ ತರಬೇತುದಾರರು ಇದ್ದಾರೆ. ಸಾಹಸ ಚಟುವಟಿಕೆಗಳಲ್ಲಿ ಪ್ರಮಾಣ ಪತ್ರದ ಜೊತೆಗೆ ನಾಲ್ಕಾರು ವರ್ಷ ಅನುಭವ ಹೊಂದಿರುವ ಈ ತರಬೇತುದಾರರು ಸೂಕ್ತರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ. ಸುರಕ್ಷತೆಗೆ ಮೊದಲ ಆದ್ಯತೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಪರಿಸರ ಸ್ನೇಹಿ ವ್ಯವಸ್ಥೆ
ಸಂಪೂರ್ಣ ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಂಡಿರುವುದು ಇಲ್ಲಿನ ಮತ್ತೊಂದು ವಿಶೇಷ. ‘ರಾಶಿ ಟೂರಿಸಂನ ಮುಖ್ಯ ಉದ್ದೇಶವೇ ಪರಿಸರ ಸ್ನೇಹಿ ಮನೋರಂಜನಾ ವ್ಯವಸ್ಥೆ ಕಲ್ಪಿಸುವುದು. ಹೀಗಾಗಿ ಇಲ್ಲಿ ಗಿಡಮರ ಕಡಿಯದೇ, ಅವುಗಳನ್ನು ಹಾಗೆಯೇ ಉಳಿಸಿಕೊಂಡು ವಿನ್ಯಾಸ ರೂಪಿಸಿದ್ದೇವೆ.

ಮಂಟಪಗಳ ಮೇಲೆ ಸುಮಾರು 20 ಕಿಲೋವಾಟ್‌ ಸಾಮರ್ಥ್ಯದ ಸೌರಕೋಶಗಳನ್ನು ಅಳವಡಿಸಿದ್ದು, ಅದರಿಂದ ಉತ್ಪಾದನೆಯಾಗುವ ವಿದ್ಯುತ್‌ ಬಳಸಿಕೊಳ್ಳಲಾಗುತ್ತಿದೆ. 15 ಸಾವಿರ ಗಿಡಗಳನ್ನು ನೆಟ್ಟಿದ್ದು, ಶೌಚಕ್ಕೆ ಬಳಸಿದ ನೀರನ್ನು ಶುದ್ಧೀಕರಿಸಿ, ಗಿಡಗಳಿಗೆ ಹರಿಸಲಾಗುತ್ತಿದೆ’ ಎಂದು ವಿವರಿಸುತ್ತಾರೆ ಶಿಲ್ಹಾಂದರದ ವಿನ್ಯಾಸಕರೂ ಆದ ರಾಶಿ ಇಕೊ ಟೂರಿಸಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌. ರಮೇಶ್‌.

ಕ್ರೀಡಾ ಗ್ರಾಮದಲ್ಲಿ ರಾತ್ರಿ ಕಳೆಯುವುದು ವಿಶೇಷ ಅನುಭವ ನೀಡುತ್ತದೆ. ಕತ್ತಲಲ್ಲಿ ದೀಪಗಳ ಬೆಳಕಲ್ಲಿ ಹೊಳೆಯುವ ‘ಗುಹೆ’ಗಳು, ಕೃತಕ ಚಂದಿರನ ಬೆಳದಿಂಗಳ ಜತೆಗೆ ಪ್ರಕೃತಿಯ ಮಡಿಲಲ್ಲಿ ಮಲಗಲು ಟೆಂಟ್‌ಗಳ ವ್ಯವಸ್ಥೆ ಇದೆ. ಬೆಟ್ಟಗುಡ್ಡದ ನಡುವೆ ಹಸಿರು ಹುಲ್ಲುಹಾಸಿನ ಮೇಲೆ ಮಲಗಲು ಟೆಂಟ್‌ ಹಾಕಿಕೊಡಲಾಗುತ್ತದೆ.

ಸುತ್ತಮುತ್ತ ನೋಡೋಕೆ
ಶಿಲ್ಹಾಂದರದ ಸುತ್ತಮುತ್ತ ಪ್ರಮುಖ ಪ್ರವಾಸಿತಾಣಗಳಿವೆ. ರಾಮನದುರ್ಗ (8, ಕಿ.ಮೀ, ಸಾವನದುರ್ಗ (22 ಕಿ.ಮೀ), ರೇವಣಸಿದ್ದೇಶ್ವರಬೆಟ್ಟ (13 ಕಿ.ಮೀ), ಜಾನಪದಲೋಕ (15 ಕಿ.ಮೀ).

ಉಪಚಾರದ ವಿಚಾರ
ಪ್ರವಾಸಿಗರು ಸಂಜೆ 5:30ರ ಒಳಗೆ ಶಿಲ್ಹಾಂದರ ತಲುಪಬೇಕು. ಆವರಣದಲ್ಲಿ ರುಚಿಕಟ್ಟಾದ ಸಸ್ಯಾಹಾರ ಮತ್ತು ಮಾಂಸಾಹಾರ ಊಟದ ವ್ಯವಸ್ಥೆ ಇದೆ.

ಹಗಲು ಭೇಟಿ ಅಥವಾ ರಾತ್ರಿ ಉಳಿಯಲು ಮುಂಗಡ ಬುಕ್ಕಿಂಗ್‌ಗಾಗಿ ಮೊಬೈಲ್‌ ಸಂಖ್ಯೆ 8494949186/85 ಸಂಪರ್ಕಿಸಬಹುದು. ಒಂದು ದಿನಕ್ಕೆ ವಾರದ ದಿನಗಳಲ್ಲಿ ₹700, ವಾರಾಂತ್ಯದ ದಿನಗಳಲ್ಲಿ ₹800. ಊಟೋಪಚಾರದ ವೆಚ್ಚ ಸೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT