ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳೇ, ದಂತಗೋಪುರದಿಂದ ಕೆಳಬನ್ನಿ

ಸಾಹಿತ್ಯ ಸಮ್ಮೇಳನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಒತ್ತಾಯ
Last Updated 6 ಮೇ 2015, 20:29 IST
ಅಕ್ಷರ ಗಾತ್ರ

ಬೆಂಗಳೂರು:  ‘ಸಾಹಿತಿಗಳೇ, ದಯ ವಿಟ್ಟು  ದಂತಗೋಪುರದಿಂದ ಕೆಳಗಿಳಿದು ಬನ್ನಿ. ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಚಳವಳಿಗಾರರೊಂದಿಗೆ ಕೈಜೋಡಿಸಿ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ನಡೆದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 9ನೇ ಸಾಹಿತ್ಯ ಸಮ್ಮೇಳನದಲ್ಲಿ ‘ಶತಮಾನೋತ್ಸವ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

‘ಈಗಿನ ಜನರಲ್ಲಿ ಹೋರಾಟದ ಮನೋಭಾವ ಇಲ್ಲ. ಸಾರಸ್ವತ ಲೋಕದವರು ಮತ್ತು ಚಳವಳಿಗಾರರ ಮಧ್ಯ ಕಂದಕ, ಗುಂಪುಗಾರಿಕೆ ಇದೆ. ನಗರದಲ್ಲಿ ಹತ್ತಾರು ಸಾವಿರ ಸಂಘ ಸಂಸ್ಥೆಗಳಿವೆ. ಆದರೂ, ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ನಾವು ಒದ್ದಾಡುತ್ತಿದ್ದೇವೆ. ನಿಮ್ಮ ಕಣ್ಣಿಗೆ ನಾವು ಅಸ್ಪೃಶ್ಯರಂತೆ ಕಾಣುತ್ತಿದ್ದೇವಾ? ನೀವು (ಸಾಹಿತಿಗಳು) ನಮ್ಮೊಂದಿಗೆ ಸೇರಿ ತಿಳವಳಿಕೆ ನೀಡಿ, ಚಳವಳಿಗಳಿಗೆ ಬೆಂಬಲ ನೀಡಿದರೆ ಹೋರಾಟಕ್ಕೆ ಬೆಲೆ ಬರುತ್ತದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಕನ್ನಡ ಪರಿಚಾರಕರೆಂದು ಕೆಲಸ ಮಾಡುವವರು ಬರೀ ಮಾತನಾಡುವುದು ಬಿಟ್ಟು ಮೊದಲು ಸಾಹಿತ್ಯ ಓದಬೇಕು. ಸಾಹಿತ್ಯ ಓದದೆ ಮಾಡುವ ಕನ್ನಡದ ಕೆಲಸ ಅಪೂರ್ಣ. ಕನ್ನಡದ ಸಂಘ ಸಂಸ್ಥೆಗಳು ವಾರ ಅಥವಾ ತಿಂಗಳಿಗೊಮ್ಮೆಯಾದರೂ ಕವಿಗಳನ್ನು ಕರೆಯಿಸಿ ಸಾಹಿತ್ಯ ಸಂವಾದಗಳನ್ನು ಏರ್ಪಡಿಸುವ ಕಾರ್ಯ ಮಾಡಬೇಕು’ ಎಂದು ಹೇಳಿದರು.

ಸಾಹಿತಿ ಹಂಪ ನಾಗರಾಜಯ್ಯ  ಮಾತನಾಡಿ, ‘ಪರಿಷತ್ತು ಆರಂಭದ ಆರೇಳು ದಶಕದವರೆಗೆ ವೈಭವದಲ್ಲಿ ಇರಲಿಲ್ಲ. ಅದರ ವ್ಯಾಪ್ತಿ ಚಿಕ್ಕದಾಗಿತ್ತು. ಆದರೆ, ಇದಕ್ಕೆ ದೊಡ್ಡ ವೈಭವ ಮತ್ತು ವಿಸ್ತಾರ ತಂದುಕೊಡುವಲ್ಲಿ ಬಿ.ಶಿವಮೂರ್ತಿ ಶಾಸ್ತ್ರಿಗಳು ಮೊದಲಿಗರಾಗಿ ದಿಟ್ಟ ಹೆಜ್ಜೆ ಇಟ್ಟರು. ಅವರಿಂದಾಗಿ ಪರಿಷತ್ತು ಜನರ ಬಳಿ ಬರಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ಪರಿಷತ್ತನ್ನು ಗೌರವಿಸುವುದು ಎಂದರೆ ಕನ್ನಡವನ್ನು ಮತ್ತು ಅದರ ಪರಂಪರೆ ಗೌರವಿಸಿದಂತೆ. ಏಕೆಂದರೆ, ಆ ಪರಂಪರೆ ಒಂದೆರಡು ದಿನಗಳಲ್ಲಿ ಕಟ್ಟಿದಲ್ಲ. ಅದಕ್ಕೆ ಸಾವಿರಾರು ವರ್ಷದ ಸುಧೀರ್ಘವಾದ ಐತಿಹಾಸಿಕ ಹಿನ್ನೆಲೆ, ಸಮೃದ್ಧಿ ಇದೆ. ಪರಂಪರೆ ಮುಂದುವರಿದ ಭಾಗವಾಗಿ ಪರಿಷತ್ತು ಕನ್ನಡವನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾದ, ಮೌಲಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ’ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ, ಗೊ.ರು.ಚನ್ನಬಸಪ್ಪ, ಹಂಪ ನಾಗರಾಜಯ್ಯ, ಸಾ.ಶಿ.ಮರುಳಯ್ಯ, ಆರ್‌.ಕೆ.ನಲ್ಲೂರು ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT