ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳ ಜತೆ ಕೃಷ್ಣ ಉಪಾಹಾರ

Last Updated 26 ಜುಲೈ 2016, 20:06 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರು ಸಾಹಿತಿಗಳು ಹಾಗೂ ಚಿಂತಕರೊಂದಿಗೆ ಜಯನಗರದ ಮಯ್ಯಾಸ್‌ ಹೋಟೆಲ್‌ನಲ್ಲಿ ಮಂಗಳವಾರ ಉಪಾಹಾರ ಸೇವಿಸಿದರು.

ಕಾಂಗ್ರೆಸ್‌ ಮುಖಂಡ ಎಂ.ಸಿ. ವೇಣುಗೋಪಾಲ್ ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಕೃಷ್ಣ ಹಾಗೂ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಕೆ.ಮರುಳಸಿದ್ದಪ್ಪ, ನಾಗತಿಹಳ್ಳಿ ಚಂದ್ರಶೇಖರ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ‘ಮುಖ್ಯಮಂತ್ರಿ’ ಚಂದ್ರು, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಪರಿಸರವಾದಿ ಸುರೇಶ್‌ ಹೆಬ್ಳೀಕರ್‌, ಗಾಯಕ ವೈ.ಕೆ.ಮುದ್ದುಕೃಷ್ಣ ಅವರು ಪಾಲ್ಗೊಂಡಿದ್ದರು.

ಹೋಟೆಲ್‌ಗೆ ಬಂದ ಈ ವಿಶೇಷ ಅತಿಥಿಗಳಿಗೆ ದೋಸೆ, ಬಿಸಿ ಬೇಳೆಬಾತ್‌, ಇಡ್ಲಿ, ವಡೆ,  ಜಾಮೂನು ನೀಡಲಾಯಿತು ಎಂದು ಸಿಬ್ಬಂದಿ ತಿಳಿಸಿದರು.
ಕೃಷ್ಣ ಅವರು ಈ ಸಂದರ್ಭದಲ್ಲಿ ಕನ್ನಡ ಭಾಷೆ, ನಗರದ ಪರಿಸರ ಹಾಗೂ  ಉದ್ಯಾನ ಸೇರಿದಂತೆ ಹಲವು ವಿಷಯಗಳಿಗೆ  ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.

ಇಂಗ್ಲಿಷ್‌ ಪ್ರಭಾವದಿಂದ ಕನ್ನಡ ಸೇರಿದಂತೆ ದೇಶೀಯ ಭಾಷೆಗಳ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಚಂದ್ರಶೇಖರ ಕಂಬಾರ ಅವರು ವಿವರಿಸಿದರು.

‘ಇಂಗ್ಲಿಷ್‌ ಪ್ರಭಾವದಿಂದ ಎಲ್ಲ ದೇಶೀಯ ಭಾಷೆಗಳ ಭವಿಷ್ಯ ಮಂಕಾಗಿದೆ. ರಾಜ್ಯ ಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿ ಮಾಡದಿದ್ದರೆ ಭಾಷೆಗಳಿಗೆ ಉಳಿಗಾಲವಿಲ್ಲ. 1ರಿಂದ 10ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು. ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕು. ಎಲ್ಲರ ನೆರವು ಪಡೆದು ದೇಶೀಯ ಭಾಷೆಗಳ ಉಳಿವಿಗೆ ಹೋರಾಟ ಮಾಡಿ ಕಾಯ್ದೆ ರೂಪಿಸಬೇಕು. ಇದಕ್ಕೆ ನಿಮ್ಮ ಬೆಂಬಲ ಅಗತ್ಯವಿದೆ ಎಂದು ಮನವಿ ಮಾಡಿದೆ’ ಎಂದು ಕಂಬಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶೀಯ ಭಾಷೆಗಳ ಉಳಿವಿಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ನಿಲುವನ್ನು ಬದಲಿಸುವಂತೆ ಮಾಡುವಲ್ಲಿ ಎಸ್‌.ಎಲ್‌. ಭೈರಪ್ಪ ಅವರು ಯಶಸ್ವಿಯಾಗಿದ್ದಾರೆ. ಉಳಿದ ಪಕ್ಷಗಳ ನಾಯಕರ ಬೆಂಬಲ ಅಗತ್ಯವಿದೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು, ‘ಬೆಂಗಳೂರಿನಲ್ಲಿ ಭೂಗಳ್ಳರು ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದರು.

ಗಾಯಕ ವೈ.ಕೆ.ಮುದ್ದುಕೃಷ್ಣ ಅವರು, ‘ಕೃಷ್ಣ ಅವರು ಸಾಹಿತಿಗಳು, ಚಿಂತಕರ ಜತೆ ಉಪಾಹಾರ ಸೇವಿಸಲು ಬಯಸಿದ್ದಾರೆ. ನೀವು ಬರಬೇಕು ಎಂದು ಮರುಳಸಿದ್ದಪ್ಪ ಅವರು ದೂರವಾಣಿಕರೆ ಮಾಡಿದ್ದರು. ಹೀಗಾಗಿ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದೆ. ನಾಡಿನ ಸಂಸ್ಕೃತಿ, ಪರಂಪರೆ ಬಗ್ಗೆಸಮಾಲೋಚನೆ ನಡೆಸಲಾಯಿತು’ ಎಂದರು.

ಕೃಷ್ಣ ಅವರ ಈ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT