ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಲ್ಲಿ ‘ಊಲಮ್‌ನ ದ್ವಂದ್ವ’

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಯಾವುದೇ ಕ್ಷೇತ್ರದಲ್ಲಿ ಲೇಖನಗಳು ವಿಪುಲವಾಗಿ ಬಂದಾಗ ಏನಾಗುತ್ತದೆ? ಆಗ ಎಲ್ಲವನ್ನೂ ಓದಲು ಆಗುವುದಿಲ್ಲ, ಆದ್ದರಿಂದ ಗುಣನಿರ್ಣಯ ಅಸಾಧ್ಯವಾಗುತ್ತದೆ, ಅಥವಾ ಕಷ್ಟಸಾಧ್ಯವಾಗುತ್ತದೆ. ಈ ಸಮಸ್ಯೆಯನ್ನು ‘ಊಲಮ್‌ನ ದ್ವಂದ್ವ (Ulam’s dilemma) ಎಂದು ಕರೆಯುತ್ತಾರೆ.

ಸ್ಟಾನಿಸ್ಲಾವ್ ಊಲಮ್ (1909-1984) ಪ್ರಸಿದ್ಧ  ಪೋಲಿಶ್–ಅಮೇರಿಕನ್ ಗಣಿತಜ್ಞ, ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಅಮೇರಿಕದ ಅಣ್ವಸ್ತ್ರ ತಯಾರಿಕೆಯ ಮನ್ಹಾಟನ್ ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದವನು. ‘ಇಂದು ಇಷ್ಟೊಂದು ಗಣಿತವಿರುವಾಗ, ಯಾವುದು ಮುಖ್ಯ ಯಾವುದು ಅಮುಖ್ಯ ಎನ್ನುವುದನ್ನು ಯಾರು ನಿರ್ಧರಿಸುತ್ತಾರೆ?’ ಎಂಬುದು ಅವನ ಪ್ರಶ್ನೆ: ಇದೇ ಊಲಮ್‌ನ ದ್ವಂದ್ವ.

ಗಣಿತಕ್ಕೆ ಸಂಬಂಧಿಸಿದಂತೆ ನೂರಾರು ಪತ್ರಿಕೆಗಳಿವೆ; ಇವುಗಳ ಒಂದೊಂದು ಸಂಚಿಕೆಯಲ್ಲೂ ಹಲವು ಹತ್ತು ಹೊಸ ಥಿಯರಮ್‌ಗಳು ಪ್ರಕಟವಾಗುತ್ತವೆ. ವರ್ಷಕ್ಕೆ ಸಾವಿರ ಥಿಯರಮುಗಳಂತೆ ಹತ್ತು ವರ್ಷಗಳಲ್ಲಿ ಎಷ್ಟಾಗುತ್ತವೆ? ಇದನ್ನು ಲೆಕ್ಕ ಹಾಕುವುದಕ್ಕೆ ನಾವು ಪ್ರತಿಭಾವಂತ ಗಣಿತಜ್ಞರೇನೂ ಆಗಬೇಕಿಲ್ಲ: ಹತ್ತು ಸಾವಿರ ಆಗುತ್ತವೆ! ಗಣಿತದಲ್ಲಿ ಇಂಥ ಬೆಳವಣಿಗೆ ನಡೆಯುತ್ತಿರುವಾಗ ಒಬ್ಬ ಗಣಿತ ವಿದ್ಯಾರ್ಥಿಯನ್ನು ಊಹಿಸಿಕೊಳ್ಳಿ. ಆತ ಗಣಿತಪಠ್ಯ ಪುಸ್ತಕಗಳನ್ನು ಅಭ್ಯಾಸಮಾಡುತ್ತ ಗಣಿತ ಕ್ಷೇತ್ರವನ್ನು ಪ್ರವೇಶಿಸುತ್ತಾನೆ; ಗಣಿತ ಪಠ್ಯಪುಸ್ತಕಗಳು ಅದು ಹೇಗೋ ಯಾವುದು ಮುಖ್ಯ ಎನ್ನುವುದನ್ನು ಕಂಡುಕೊಳ್ಳುತ್ತವೆ! ಬಹುಶಃ ಪರಂಪರೆಯಿಂದ. ಈಗ ಈ ಮಜಲನ್ನು ದಾಟಿದ ಒಬ್ಬ ಗಣಿತ ಸಂಶೋಧಕನನ್ನು ಊಹಿಸಿಕೊಳ್ಳಿ, ಆತ ಕೆಲವು ಪ್ರಮುಖ ಲೇಖನಗಳನ್ನು, ಪುಸ್ತಕಗಳನ್ನು ಓದಬಹುದು.

ಎಲ್ಲವನ್ನೂ ಓದಲಾರ; ಆಸಕ್ತಿಯ ಪರಿಮಿತಿಯಂತೆ ಸಮಯದ ಪರಿಮಿತಿಯೂ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ ಮತ್ತು ಉಪಕ್ಷೇತ್ರದಲ್ಲಿ ಈಗಾಗಲೇ ಬಂದ, ಈಗ ಬರುತ್ತಿರುವ ಮತ್ತು ಮುಂದೆ ಬರಲಿರುವ ಲೇಖನಗಳನ್ನೆಲ್ಲ ದೇವರು ಮಾತ್ರವೇ ಓದಬಲ್ಲ, ಹುಲು ಮಾನವರು ಯಾರೂ ಓದಲಾರರು, ಓದುವುದಿಲ್ಲ. ಆದ್ದರಿಂದ ಊಲಮ್‌ನ ಸಮಸ್ಯೆ ಮಹತ್ವ ಪಡೆದುಕೊಳ್ಳುತ್ತದೆ: ಸಂಖ್ಯೆಗಳು ಜಾಸ್ತಿಯಾದಂತೆಲ್ಲ, ಓದುವ ಲೇಖನಗಳನ್ನು, ಕ್ಷೇತ್ರಗಳನ್ನು,  ಲೇಖಕರನ್ನು ಆಯ್ದುಕೊಳ್ಳಬೇಕಾಗುತ್ತದೆ, ಎಂದರೆ ಆಯಾ ಕ್ಷೇತ್ರದ ಮುಖ್ಯ ಲೇಖನ ಮತ್ತು ಪುಸ್ತಕಗಳನ್ನು ಆರಿಸಿಕೊಂಡು ಓದಬೇಕಾಗುತ್ತದೆ. ಆದರೆ ಯಾವುದು ಮುಖ್ಯ, ಯಾವುದು ಅಲ್ಲ ಎನ್ನುವುದನ್ನು ಯಾರು ನಿರ್ಧರಿಸಬಲ್ಲರು ಎನ್ನುವುದೇ ಪ್ರಶ್ನೆ. ಯಾರೂ ನಿರ್ಧರಿಸಲಾರರು ಎನ್ನುವುದು ಉತ್ತರ. ಅಂಥ ಸರ್ವಜ್ಞರು ಯಾರೂ ಇಲ್ಲ, ಗಣಿತದಲ್ಲಾಗಲಿ ಇನ್ನು ಯಾವುದೇ ಕ್ಷೇತ್ರದಲ್ಲಾಗಲಿ.

ಅದು ಹೇಗೋ ಮುಖ್ಯವಾಹಿನಿಯೊಂದು ನಿರ್ಮಾಣವಾಗುತ್ತದೆ; ಅದರಲ್ಲಿ ಕೆಲವು ಪಠ್ಯಗಳು ಸೇರಿಕೊಳ್ಳುತ್ತವೆ. ಹೊಸತಾಗಿ ಬರೆಯುವ ಪ್ರತಿಯೊಬ್ಬನೂ ಅದರಲ್ಲಿ ಸೇರಿಕೊಳ್ಳುವುದಕ್ಕೆ   ಕಾತರನಾಗಿರುತ್ತಾನೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಅಂಥವರು ಬೆಳಕಿಗೆ ಬರುವುದಿಲ್ಲ. ಮುಖ್ಯವಾಹಿನಿ ಎನ್ನುವುದು ಸಮಗ್ರವಾಹಿನಿಯಲ್ಲ, ಹಾಗೂ ಎಲ್ಲಾ ಉತ್ತಮ ಕೃತಿಗಳೂ ಅದರಲ್ಲಿ ಸ್ಥಾನಪಡೆದಿವೆ ಎಂದೂ ಹೇಳುವಂತಿಲ್ಲ. ಪ್ರತಿಯೊಂದು ಆಯ್ಕೆಯೂ ಆಯಲಾರದ್ದರ ಬಗ್ಗೆ ತಪ್ಪು ಮಾಡಿರುತ್ತದೆ.

ಗಣಿತ ಕ್ಷೇತ್ರವನ್ನು ಬಿಟ್ಟುಬಿಡೋಣ. ಒಬ್ಬ ಸಾಹಿತ್ಯಾಸಕ್ತನಾಗಿ ನನ್ನ ಗಮನವಿರುವುದು ಸಾಹಿತ್ಯ ಕೃತಿಗಳ ಮೇಲೆ. ಈಗ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಕವನಸಂಕಲನಗಳನ್ನಷ್ಟೇ ನೋಡಿದರೂ ಸಾಕು, ವರ್ಷವೊಂದಕ್ಕೆ ಸುಮಾರು ನೂರು ಕವನ ಸಂಕಲನಗಳಾದರೂ ಬರುತ್ತಿವೆ ಎನಿಸುತ್ತದೆ. ಇತರ ಭಾಷೆಗಳಿಗೆ ಹೋಲಿಸಿದರೆ ಇದೊಂದು ದೊಡ್ಡ ಸಂಖ್ಯೆ ಎನ್ನುವಂತಿಲ್ಲ.

ಆದರೂ ಒಬ್ಬ ಓದುಗನ ಮಟ್ಟಿಗೆ ದೊಡ್ಡದೇ. ಯಾಕೆಂದರೆ ಒಂದೊಂದು ಸಂಕಲನದಲ್ಲೂ ಸರಾಸರಿ ನೂರು ಕವನಗಳಿರುತ್ತವೆ ಎಂದಾದರೆ, ವರ್ಷಕ್ಕೆ ಸಾವಿರ ಹೊಸ ಕವನಗಳಾದವು. ವರ್ಷಗಳು ಸಾಗುತ್ತಿರುವಂತೆ ಒಟ್ಟು ಕವನಗಳ ಸಂಖ್ಯೆ ವರ್ಧಿಸುತ್ತ ಹೋಗುತ್ತದೆ. ಇವನ್ನೆಲ್ಲ ಓದುವ ವ್ಯಕ್ತಿಯೊಬ್ಬ ಇದ್ದಾನೆಯೇ? ಊಲಮ್‌ನ ದ್ವಂದ್ವ ಇಲ್ಲೂ ಅನ್ವಯವಾಗುತ್ತದೆ: ಈ ಕವಿತೆಗಳಲ್ಲಿ ಯಾವುದು ಸಮಯಯೋಗ್ಯ, ಯಾವುದು ಅಲ್ಲ ಎಂದು ಯಾರು ನಿರ್ಣಯಿಸುತ್ತಾರೆ, ಯಾವ ಮಾನದಂಡದ ಮೇಲಿಂದ? ಅದು ತಾನಾಗಿಯೇ ನಿರ್ಣಯಿತವಾಗುತ್ತದೆ ಎಂದು ಹೇಳಿ ಜಾರಿಕೊಳ್ಳಬಹುದು; ಆದರೆ ಮನುಷ್ಯ ಲೋಕದಲ್ಲಿ ತಾನಾಗಿಯೇ ಯಾವುದೂ ಆಗುವುದಿಲ್ಲ.

ಹೊಸ ಪುಸ್ತಕಗಳ ಸಂಖ್ಯೆ ಹಿತಮಿತವಾಗಿದ್ದ ಕಾಲದಲ್ಲಿ ಪತ್ರಿಕೆಗಳು ವಿಮರ್ಶೆಗೆ ಬಂದ ಪುಸ್ತಕಗಳಲ್ಲಿ ಕೆಲವನ್ನಾದರೂ ಆಯ್ದು, ವಿಮರ್ಶಕರಿಂದ ಪುಸ್ತಕ ವಿಮರ್ಶೆ ಬರೆಯಿಸಿ ಪ್ರಕಟಿಸುತ್ತಿದ್ದರು. ಅವು ಓದುಗರಿಗೊಂದು ದಾರಿದೀಪದಂತೆ ಆಗುತ್ತಿದ್ದವು. ‘ಈಗ ಪತ್ರಿಕೆಗಳಲ್ಲಿ ಇಂಥ ಪುಸ್ತಕ ವಿಮರ್ಶೆಗಳು ಬರುತ್ತಿಲ್ಲ. ಹಾಗೂ ವಿಮರ್ಶಕರೇ ಕಡಿಮೆಯಾಗಿದ್ದಾರೆ’ ಎಂಬ ಅಹವಾಲು ಕೂಡ ಕೇಳಿಬರುತ್ತಿದೆ. ಯಾಕೆ ವಿಮರ್ಶಕರು ಬರುತ್ತಿಲ್ಲ, ವಿಮರ್ಶೆ ಕಡಿಮೆಯಾಗಿದೆ ಎಂಬ ಪ್ರಶ್ನೆ ನಮ್ಮನ್ನು ಅದರ ಮೂಲಕ್ಕೆ ಕೊಂಡೊಯ್ಯಬಹುದು. ವಿಮರ್ಶೆ ಮಾನದಂಡದ ಮೇಲೆ ನಡೆಯುವ ವಿಶ್ಲೇಷಣೆ. ಮಾನದಂಡವೇ ಮಾಯವಾದಾಗ, ಇಲ್ಲವೇ ಅನುಮಾನಕ್ಕೆ ಒಳಗಾದಾಗ, ವಿಮರ್ಶಕರಿಗೆ ಏನು ಮಾಡುವುದೆಂದು ತೋರುವುದಿಲ್ಲ.

ಇದು ಒಂದು ಸಮಸ್ಯೆಯಾದರೆ, ಇದಕ್ಕೆ ವ್ಯತಿರಿಕ್ತವಾದ ಸಮಸ್ಯೆ ‘ಗುಂಪುಗಾರಿಕೆಯದು. ‘ಗುಂಪುಗಾರಿಕೆಯೆಂಬ ಪದಕ್ಕೆ ತೀರ ಇತ್ತೀಚಿನವರೆಗೆ ಋಣಾತ್ಮಕವಾದ ಅರ್ಥವೊಂದು ಇತ್ತು, ಆದರೆ ಈಗ ಗುಂಪುಗಾರಿಕೆಯನ್ನು ಒಂದು ಪಾಸಿಟಿವ್ ಅಗತ್ಯದಂತೆ ಕಾಣಲಾಗುತ್ತಿದೆ. ಅದು ಸಹಜ ವಿದ್ಯಮಾನವೂ ಅಗಿರಬಹುದು. ಇಂಥ ಗುಂಪುಗಳ ಹಿಂದೆ ಹೆಚ್ಚಾಗಿ ವ್ಯಕ್ತ ಅಥವಾ ಅವ್ಯಕ್ತ ಐಡಿಯಾಲಜಿಯೊಂದು ಕೆಲಸಮಾಡುತ್ತಿರುತ್ತದೆ: ಜಾತಿ, ವರ್ಗ, ಲಿಂಗ, ರಾಜಕೀಯತ್ವ, ಸಾಮಾಜಿಕ ತತ್ವ ಮುಂತಾದವು. ಎಂದರೆ ಗುಂಪು ಒಂದು ಪಂಥವಾಗಿರುತ್ತದೆ. ಇಂಥ ವರ್ಗೀಕರಣವೇನೂ ಹೊಸತಲ್ಲ, ಇದು ಹಿಂದೆಯೂ ಇತ್ತು: ಜೈನ ಸಾಹಿತ್ಯ, ವೀರಶೈವ ಸಾಹಿತ್ಯ, ವೈಷ್ಣವ ಸಾಹಿತ್ಯ ಇತ್ಯಾದಿ. ಆದರೆ ಇಂದು ಗುಂಪುರಹಿತರಾದ ಲೇಖಕರೇ ಕಮ್ಮಿ. ಗುಂಪು ಐಡಿಯಲಾಜಿಕಲ್ ಆದಾಗ, ಅರ್ಥಾತ್ ಒಂದು ಪಂಥವಾಗಿರುವಾಗ ಸ್ವತಃ ಲೇಖಕರೇ ಗುಂಪಿನಲ್ಲಿರಲು ಬಯಸುವುದನ್ನು ಕಾಣುತ್ತೇವೆ.

ಇನ್ನು ಒಂದೊಂದು ಗುಂಪಿನೊಳಗೂ ಎಡ, ಬಲ, ಮಧ್ಯಮ ಎಂಬ ಮರುವರ್ಗೀಕರಣ ಕೂಡ ಆಗಬಹುದು. ಮತ್ತು ಈ ಗುಂಪುಗಳ ನಡುವೆ ಅಡ್ಡವರ್ಗೀಕರಣ (cross-classification) ಸಾಧ್ಯ. ಉದಾಹರಣೆಗೆ ಒಬ್ಬ ಕವಿ ದಲಿತಳೂ, ಸ್ತ್ರೀ(ವಾದಿ)ಯೂ ಏಕ ಕಾಲಕ್ಕೆ ಆಗಿರಬಹುದು. ಈ ಅಡ್ಡವರ್ಗೀಕರಣವನ್ನು ಬಿಟ್ಟರೆ ಉಳಿದಂತೆ ಲೇಖಕರು ಶುದ್ಧವಾಗಿ ಯಾವುದಾದರೊಂದು ವರ್ಗಕ್ಕೆ ಮಾತ್ರ ಸೇರಿದವರಾಗಿರುತ್ತಾರೆ. ಕೆಲವೊಮ್ಮೆ ಇಂಥ ವರ್ಗೀಕರಣವನ್ನು ಲೇಖಕರು ಸ್ವತಃ ಮಾಡಿಕೊಳ್ಳುವುದಲ್ಲ; ಅದು ವಿಮರ್ಶಕರು ಮಾಡುವಂಥದು. ವಿಮರ್ಶಕರು ಸ್ವತಃ ವರ್ಗೀಕರಣಕ್ಕೆ ಹೊರತಲ್ಲ ಎನ್ನುವುದು ಗಮನಾರ್ಹ.

ಇಲ್ಲಿ ಊಲಮ್‌ನ ದ್ವಂದ್ವವೆಂದರೆ, ಇಂಥ ಗಡಿಗಳನ್ನು ಮೀರಿ ಒಟ್ಟಾರೆ ಸಾಹಿತ್ಯಕೃತಿಗಳಲ್ಲಿ ಯಾವುದು ಒಳ್ಳೆಯದು, ಯಾವುದು ಅಲ್ಲ ಎನ್ನುವುದನ್ನು ಯಾರಾದರೂ ಹೇಳುವುದು ಸಾಧ್ಯವೇ ಎನ್ನುವುದು? ಸಾಧ್ಯವಿಲ್ಲ ಎನ್ನುವುದೇ ಉತ್ತರ. ಯಾಕೆಂದರೆ ಎಲ್ಲವನ್ನು ಓದಿದ ಒಬ್ಬನೂ ಇರುವುದಿಲ್ಲ. ಕೇವಲ ಸಂಖ್ಯೆಯ ವಿಪುಲತೆಯಿಂದ ಮಾತ್ರವೂ ಅಲ್ಲ, ಒಬ್ಬೊಬ್ಬ ಓದುಗನೂ ತನ್ನ ಒಲವಿಗೆ ಅನುಸಾರ ಆಯ್ಕೆಗಳನ್ನು ಮಾಡಿಕೊಂಡಿರುತ್ತಾನೆ.

ವಿಪುಲತೆಯಿದ್ದಲ್ಲಿ ಆಯ್ಕೆ ಅನಿವಾರ್ಯವಾಗುತ್ತದೆ. ಹಾಗೂ ಆಯ್ಕೆಗಳು ಯಾವ ಯಾವದೋ ಮಾನದಂಡಗಳ ಮೇಲೆ ನಿಂತಿರುತ್ತವೆ; ಹಲವು ಸಲ ಈ ಮಾನದಂಡಗಳೇನು ಎನ್ನುವುದೇ ಸ್ಪಷ್ಟವಿರುವುದಿಲ್ಲ. ಹಿಂದೆ ಏನನ್ನು ಸಾಹಿತ್ಯದ ಮಹತ್ತಿಗೆ ಬಾಹ್ಯವೆಂದು ತಿಳಿದುಕೊಂಡಿದ್ದೆವೋ, ಅವು ಇಂದು ಅದರ ಒಂದು ಅಂಗವೇ ಆಗಿಬಿಟ್ಟಿವೆ: ಉದಾಹರಣೆಗೆ, ಲೇಖಕನ ಜಾತಿ ಮತ, ಪ್ರದೇಶ, ಲಿಂಗ, ವರ್ಗ ಇತ್ಯಾದಿ. ಹಿಂದೆ ಈ ತಳಹದಿಗಳು ಇದ್ದಾಗಲೂ ಅವನ್ನು ಪ್ರಕಟವಾಗಿ ಹೇಳುತ್ತಿರಲಿಲ್ಲ. ಇಂದು ಅವನ್ನು ಹೇಳದಿರುವುದೇ ತಪ್ಪೆಂದು ಪರಿಗಣಿಸಲಾಗುತ್ತಿದೆ. ಯಾವ ಯಾವುದೋ ಸಮ್ಮೇಳನಗಳ ಅಧ್ಯಕ್ಷಗಿರಿಗೆ, ಪ್ರಶಸ್ತಿಗೆ ಶಿಫಾರಸು ಮಾಡುವಲ್ಲಿ ನಡೆಯುವ ಚರ್ಚೆಗಳಿಗೆ ಇವೇ ನಿರ್ಣಾಯಕ ಮಾನದಂಡಗಳಾಗುತ್ತವೆ. ಸಾಹಿತ್ಯದ ಶ್ರೇಷ್ಠತೆಯನ್ನು ನಿರ್ಣಯಿಸುವಲ್ಲಿ ಮುಕ್ತವಾದೊಂದು ಮಾನದಂಡವಿಲ್ಲದಿರುವುದೇ ಈ ಸ್ಥಿತಿಗೆ ಒಂದು ಕಾರಣ ಎನಿಸುತ್ತದೆ. ಬಹುಶಃ ಇದು ಅನಿವಾರ್ಯ.

ಒಂದು ಗಂಭೀರವಾದ ಕ್ರಿಮಿನಲ್ ಮೊಕದ್ದಮೆಯಲ್ಲಿ ಸಿಲುಕಿಹಾಕಿಕೊಂಡಿದ್ದರೆ ನೀವು ಅತ್ಯಂತ ಜಾಣ ಲಾಯರನ್ನು ಹುಡುಕುತ್ತೀರಿ; ಗಂಭೀರವಾದ ರೋಗ ತಗಲಿಸಿಕೊಂಡಿದ್ದರೆ ಅತ್ಯುತ್ತಮ ಡಾಕ್ಟರರನ್ನು ಅನ್ವೇಷಿಸುತ್ತೀರಿ; ಮಕ್ಕಳನ್ನು ಶಾಲೆಗೆ ಕಳಿಸಲು ಸರಿಯಾದ ಶಾಲೆ ಯಾವುದೆಂದು ವಿಚಾರಿಸುತ್ತೀರಿ. ಇಲ್ಲೆಲ್ಲವೂ ಒಂದು ಸ್ಪಷ್ಟವಾದ ಮಾನದಂಡವಿದೆ; ಆದರೆ ಸಾಹಿತ್ಯದಲ್ಲಿ ಅಂಥ ಯಾವ ಮಾನದಂಡವೂ ಇಲ್ಲ. ಆದ್ದರಿಂದಲೇ ‘ಶ್ರೇಷ್ಠತೆ’ ಎನ್ನುವುದು ‘ಶ್ರೇಷ್ಠತೆಯ ವ್ಯಸನ’ವಾಗಿ ಕಾಣಿಸುವುದು. ಊಲಮ್‌ನ ದ್ವಂದ್ವ ಇದಲ್ಲ, ಆದರೆ ಇದು ಆ ದ್ವಂದ್ವವನ್ನು ಇನ್ನಷ್ಟು ಬಿಗಡಾಯಿಸುತ್ತದೆ.

ಊಲಮ್‌ನ ದ್ವಂದ್ವ ಎಂದರೆ, ಒಂದು ವೇಳೆ ಸಾಹಿತ್ಯದ ಮಾನದಂಡ ನಿಮ್ಮಲ್ಲಿ ಇದ್ದರೂ, ನೀವು (ಅಥವಾ ಯಾರೂ) ಎಲ್ಲಾ ಕೃತಿಗಳಿಗೆ ನ್ಯಾಯ ಒದಗಿಸಲಾರಿರಿ ಎನ್ನುವುದು; ಯಾಕೆಂದರೆ ನೀವು ಎಲ್ಲವನ್ನೂ ಓದಿರುವುದಿಲ್ಲ. ಎಲ್ಲವನ್ನೂ ಓದುವುದು ನಿಮಗೆ ಸಾಧ್ಯವಿಲ್ಲ ಎನ್ನುವುದು ಒಂದು ಸಮಸ್ಯೆಯಾದರೆ (ಊಲಮ್‌ನ ದ್ವಂದ್ವ ಇದೇ), ಎಲ್ಲವನ್ನೂ ಓದುವುದು ನಿಮಗೆ ಬೇಕಾಗಿಯೂ ಇಲ್ಲ ಎನ್ನುವುದು ಇನ್ನೊಂದು ಸಮಸ್ಯೆ. ಅದು ಸದ್ಯದ ದ್ವಂದ್ವ: ಆದ್ದರಿಂದ ನೀವು ನಿಮ್ಮ ವಲಯವನ್ನೇ (ಅರ್ಥಾತ್ ಪಂಥವನ್ನೇ) ಮೌಲ್ಯನಿರ್ಣಯದ ಒಂದು ಅಂಶವನ್ನಾಗಿ ಮಾಡಿಕೊಳ್ಳುತ್ತೀರಿ. ಇದು ನಿಮ್ಮ ಕೆಲಸವನ್ನು ಸುಲಭವೂ ಸ್ಪಷ್ಟವೂ ಆಗಿ ಮಾಡುತ್ತದೆ.

ಗಣಿತದಲ್ಲಿ ಅಷ್ಟೊಂದು ಸಂಖ್ಯೆಯ ಲೇಖನಗಳು ಬರುತ್ತಿದ್ದು ಅವುಗಳನ್ನೆಲ್ಲ ಯಾರೂ ಓದದೆ ಇದ್ದರೂ, ಗಣಿತದ ಪರಂಪರೆ ಮುಂದುವರಿಯುತ್ತಲೂ, ಹೊಸ ಸಂಗತಿಗಳು ಅದಕ್ಕೆ ಸೇರುತ್ತಲೂ ಇವೆಯಲ್ಲ ಎಂದು ವಾದಿಸಬಹುದು. ಅದು ನಿಜ, ಹಾಗೂ ಸಾಹಿತ್ಯಕ್ಕೆ ಕೂಡಾ ಈ ಮಾತು ಅನ್ವಯಿಸುತ್ತದೆ. ಸಾಹಿತ್ಯ ಮುಂದುವರಿಯುತ್ತಿದೆ, ಹೊಸ ಹೊಸ ಸಂಗತಿಗಳು ಅದಕ್ಕೆ ಸೇರುತ್ತಿವೆ– ಊಲಮ್‌ನ ದ್ವಂದ್ವದ ಹೊರತಾಗಿಯೂ. ಇದು ಹೇಗೆ ಸಾಧ್ಯ?

ಇದು ಸಾಧ್ಯವಾಗಬೇಕಾದರೆ, ಯಾರೂ ಓದದ ಲೇಖನಗಳು ಬಹು ಸಂಖ್ಯೆಯಲ್ಲಿ ಮೂಲೆಯಲ್ಲಿ ಬಿದ್ದಿರಬೇಕು. ಹೀಗೆ ಮೂಲೆಗುಂಪಾದ ಲೇಖನಗಳಲ್ಲಿ ಕೆಲವಾದರೂ ಉತ್ತಮ ಮಟ್ಟದ್ದಾಗಿರುವುದು ಸಾಧ್ಯ. ಹಾಗೂ ಅವುಗಳಲ್ಲಿ ಅತ್ಯಲ್ಪ ಪ್ರಮಾಣದ ಲೇಖನಗಳು ಮುಂದೆ ಯಾರಾದರೂ ಕೆಲವರಿಗೆ ಸಿಕ್ಕಿ ಪುನರುಜ್ಜೀವನ ಪಡೆಯಬಹುದು. ಸಮಕಾಲೀನ ಓದಿಗೆ ಸಿಗದ ಕೃತಿಗಳು ನಂತರ ಬೆಳಕಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ. ಆದರೂ ಕೇವಲ ಸಂಖ್ಯೆಯ ದೃಷ್ಟಿಯಿಂದ ಊಲಮ್‌ನ ದ್ವಂದ್ವ ಅನಿವಾರ್ಯವೆಂದು ಅನಿಸುತ್ತದೆ. ಅನಿವಾರ್ಯವಾದುದರ ಬಗ್ಗೆ ನಾವು ಏನೂ ಮಾಡಲಾರೆವು. ಆದರೆ ನಮ್ಮ ಮನಸ್ಸನ್ನು ಅದಷ್ಟೂ ಮಟ್ಟಿಗೆ ಮುಕ್ತವಾಗಿರಿಸುವ ಮೂಲಕ ನಷ್ಟವನ್ನು ಕಡಿಮೆ ಮಾಡುವುದು ಬಹುಶಃ ಸಾಧ್ಯ.

ಬರಹಗಾರನಂತೂ ಸ್ವತಂತ್ರನಾಗಿ ಇರದಿದ್ದರೆ ಆತ ನಿರುಪಯೋಗಿ ಎಂದೇ ಅರ್ಥ. ಆದರೂ ಊಲಮ್‌ನ ದ್ವಂದ್ವದ ಆತಂಕದಲ್ಲಿರುವ (ನನ್ನನ್ನು ಯಾರು ಓದುತ್ತಾರೆ ಎಂಬ ಆತಂಕದಲ್ಲಿ) ಲೇಖಕರು ಗುಂಪಿನ ಯೋಚನೆಗೆ ಅನುಸಾರ ಬರೆಯಲು ತೊಡಗುತ್ತಾರೆ. ಈ ಮೂಲಕ ಅವರ ಕ್ರಿಯೇಟಿವಿಟಿಗೆ ಅನ್ಯಾಯವಾಗುತ್ತದೆ. ಒಬ್ಬ ಸಮಾಜವಿಜ್ಞಾನಿ, ಮನೋವಿಜ್ಞಾನಿ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಿಕಾಕರ್ತ ಮಾಡುವ ಕೆಲಸಗಳನ್ನು ಸಾಹಿತಿ ಮಾಡುವುದಾದರೆ ಮತ್ತೆ ಅವನಿಗಿಂತಲೂ ಚೆನ್ನಾಗಿ ಮಾಡಬಲ್ಲ ಈ ತಜ್ಞರು ಇರುವುದು ಯಾಕೆ? ಯು. ಆರ್. ಅನಂತಮೂರ್ತಿಯವರು ಈ ಪ್ರಶ್ನೆಯನ್ನು ಅರ್ಧ ಶತಮಾನದಷ್ಟು ಹಿಂದೆಯೇ ಎತ್ತಿದ್ದರು. (ನೋಡಿ: ಮಾರ್ಕ್ಸ್‌ವಾದ ಮತ್ತು ಸಾಹಿತ್ಯದಲ್ಲಿ ನಿಷ್ಠೆಯ ಪ್ರಶ್ನೆ).

ಮಾರ್ಕ್ಸ್ ಅಥವಾ ಫ್ರಾಯ್ಡ್ (ಮತ್ತು ಅವರ ಅನುಸಾರಿಗಳು) ಮಾರ್ಕ್ಸಿಸ್ಟ್ ಅಥವಾ ಮನೋವೈಜ್ಞಾನಿಕ ಕಾದಂಬರಿಗಳಿಂದ ಕಲಿಯುವುದಕ್ಕೆ ಏನೂ ಇರುವುದಿಲ್ಲ; ಬದಲಿಗೆ ಅಂಥ ಯಾವ ಪಂಥಕ್ಕೂ ಸೇರಿರದ ಶೇಕ್ಸ್‌ಪಿಯರ್ ಅಥವಾ ಬ್ಲೇಕ್‌ನ ಕೃತಿಗಳಿಂದ ಕಲಿಯುವುದಕ್ಕೆ ಇರಬಹುದು. ಸಾಹಿತ್ಯ ಕೃತಿಗಳಲ್ಲಿ ಮಾರ್ಕ್ಸಿಸ್ಟ್, ಮನೋವೈಜ್ಞಾನಿಕ, ಸ್ತ್ರೀವಾದಿ ಎಂಬಿತ್ಯಾದಿ ಗುಣಗಳನ್ನು ಕಾಣುವುದರಲ್ಲಿ ತಪ್ಪೇನಿಲ್ಲ. ಓದು ಅಥವಾ ವಿಮರ್ಶೆ ಬರೇ ಏಸ್ಥೆಟಿಕ್ ಕ್ರಿಯೆಯಲ್ಲ; ಆದರೆ ಅವುಗಳನ್ನು ಇಡಿಯಾಗಿ ಮಾರ್ಕ್ಸಿಸ್ಟ್ ಅಥವಾ ಮನೋವೈಜ್ಞಾನಿಕ ಎಂದು ವರ್ಗೀಕರಿಸಿ, ಆಯಾ ಪಂಥದ ಅತ್ಯುನ್ನತ ಕೃತಿಗಳೆಂದು ಆರಾಧಿಸುವುದರಲ್ಲಿ ಸಮಸ್ಯೆಯಿದೆ.

ಇದಕ್ಕಿಂತಲೂ ಆಘಾತಕಾರಿ ಸಮಸ್ಯೆಯೆಂದರೆ, ಬರೆಯುವ ಲೇಖಕನೇ ತನ್ನ ಕೃತಿಯನ್ನು ಹೀಗೆ ಕಲ್ಪಿಸಿಕೊಂಡರೆ ಆಗುವ ಕೆಟ್ಟ ಪರಿಣಾಮ. ಆಗ ಅವನು ತನ್ನ ಕೃತಿಯನ್ನು ಯಾವುದೋ ಇಸಂ ಅನ್ನು ಬೆಂಬಲಿಸುವುದಕ್ಕೆ ಬರೆಯುವ ಹಾಗೆ ಅನಿಸುತ್ತದೆ: ಆ ಇಸಮಿಗೆ ಅವನ ಕೃತಿಯ ಬೆಂಬಲ ಬೇಡ, ಅಲ್ಲದೆ ಅದೊಂದು ಮುಜುಗರವಾಗುವುದೇ ಹೆಚ್ಚು. ಇಸಂಗೆ ಅದರಿಂದ ಲಾಭವೇನೂ ಆಗುವುದಿಲ್ಲ. ಸಾಹಿತ್ಯಕ್ಕೆ ಮಾತ್ರ ಕೊರತೆಯಾಗುವುದು ಖಂಡಿತ. ಅಂಥವರ ಕೈಯಲ್ಲಿ ಸಾಹಿತ್ಯ ಒಂದು ಆಕ್ಸೀಲಿಯರಿ ಸ್ಥಾನವನ್ನೇನೋ ಪಡೆಯುತ್ತದೆ, ಅದಕ್ಕೆ ಅದರದೇ ವಲಯದಲ್ಲಿ ಮನ್ನಣೆಯೂ ಸಿಗಬಹುದು; ಆದರೆ ಸಾಹಿತ್ಯ ತನಗೆ ಬಹು ಮುಖ್ಯವಾದ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತದೆ.

ಸಾಹಿತ್ಯಕ್ಕೆ ಸ್ವಾಯತ್ತತೆಯೇ ಇಲ್ಲ, ಅದೊಂದು ಹತ್ಯಾರ ಎಂಬ ಹತ್ಯಾರವಾದಿಗಳಿದ್ದಾರೆ: ಎಂದರೆ ಸಾಹಿತ್ಯವಿರುವುದು ಮನುಷ್ಯಸಮೂಹದ ಉದ್ಧಾರಕ್ಕೆ ಎಂಬ ವಾದ. ಅವರ ಪ್ರಕಾರ, ಸ್ವಾಯತ್ತತೆ ಎನ್ನುವುದೊಂದು ಏಸ್ಥೆಟೆಟಿಸಂ, ಅರ್ಥಾತ್ ಸೌಂದರ್ಯವಾದ. ಯಾವ ಕೃತಿ ಸಾಮಾಜಿಕವಾಗಿ ಮುಖ್ಯವೋ ಅದು ತನ್ನಿಂತಾನೇ ಉಳಿಯುತ್ತದೆ, ಮಹತ್ವ ಪಡೆಯುತ್ತದೆ. ಎಂದರೆ ಯಾರೂ ಏನೂ ಮಾಡಬೇಕಾಗಿಲ್ಲ. ಇದೊಂದು ಅರ್ಧಸತ್ಯವೆನ್ನುವುದು ಎಲ್ಲರಿಗೂ ಗೊತ್ತು.

ಹಾಗಿದ್ದರೆ ಪ್ರತಿಯೊಬ್ಬ ಮನುಷ್ಯನೂ ಸಮಾಜದ ಭಾಗವೇ ಆಗಿರುತ್ತ, ಪ್ರತಿಯೊಬ್ಬ ಲೇಖಕನ ಬರಹಗಳು ಕೂಡ ಸಮಾಜಕ್ಕೆ ಮುಖ್ಯವಲ್ಲವೇ ಎಂದು ಕೇಳಬೇಕಾಗುತ್ತದೆ? ಯಾರೂ ಒಂದು ದ್ವೀಪವಲ್ಲ ಎನ್ನುವ ಜಾನ್ ಡನ್‌ನ ಮಾತಿಗೆ ಅರ್ಥವೇನು? ಮಾತ್ರವಲ್ಲ, ಅತಿಚರ್ಚೆಗೆ ಬಂದು ಸ್ವಾರಸ್ಯ ಕಳೆದುಕೊಂಡ ಬರಹಗಳನ್ನು ಸ್ವಲ್ಪ ಕಾಲ ಬದಿಗಿರಿಸಿ ಇತರ ಲೇಖಕರು ಏನು ಮಾಡುತ್ತಿದ್ದಾರೆ ಎಂದು ನೋಡಿದರೆ ಏನಾದರೂ ಹೊಸತು ಸಿಗಬಹುದಲ್ಲವೇ? ಚರ್ಚೆ ಹೀಗೆ ಮುಂದುವರಿಯುತ್ತ ಇರುವಂತೆ, ಊಲಮ್‌ನ ದ್ವಂದ್ವ ಇನ್ನಷ್ಟು ತೀವ್ರವಾಗುತ್ತ ಹೋಗುತ್ತದೆ. ಯಾವ ನಿಟ್ಟಿನಿಂದ ನೋಡಿದರೂ ಅದರಿಂದ ನಮಗೆ ಬಿಡುಗಡೆಯಿಲ್ಲ: ನಾವದನ್ನು ಧಿಕ್ಕರಿಸುವುದಕ್ಕಿಂತ ಅನಿವಾರ್ಯವೆಂದು ಸ್ವೀಕರಿಸಬೇಕು. ಇದರಿಂದ ದೊರಕುವ ಪಾಠವೆಂದರೆ: ನಮ್ಮ ಯಾವ ನಿರ್ಣಯವೂ ನಿರ್ಣಾಯಕವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT