ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಾಭಿಮಾನಿಗಳಿಂದ ತುಂಬಿದ ಶ್ರವಣಬೆಳಗೊಳ

Last Updated 31 ಜನವರಿ 2015, 15:19 IST
ಅಕ್ಷರ ಗಾತ್ರ

ಹಾಸನ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಶನಿವಾರ ಸಂಜೆ ಶ್ರವಣ ಬೆಳಗೊಳದಲ್ಲಿ ನಡೆಯಲಿದ್ದು, ಶುಕ್ರವಾರವೇ ಜಿಲ್ಲೆಗೆ ಅತಿಥಿಗಳು ಬರಲಾರಂಭಿಸಿದ್ದಾರೆ. ಶುಕ್ರವಾರ ಸಂಜೆ ಸಮ್ಮೇಳನಾಧ್ಯಕ್ಷರು ಜಿಲ್ಲೆಗೆ ಬಂದಿದ್ದಾರೆ. ಸಂಜೆ ಹೊತ್ತಿನಲ್ಲಿ ಬೆಳಗಾವಿ, ಧಾರವಾಡ ಹಾಗೂ ಬೆಂಗಳೂರಿನ ಕೆಲವು ತಂಡಗಳು ಬೆಳಗೊಳಕ್ಕೆ ಬಂದು ತಂಗಿವೆ.

ದಕ್ಷಿಣದ ಜೈನಕಾಶಿ ಎನಿಸಿಕೊಂಡಿರುವ ಶ್ರವಣ ಬೆಳಗೊಳವೂ ಶೃಂಗಾರಗೊಂಡು ರಾಜ್ಯದ ನಾನಾಭಾಗಗಳಿಂದ ಬರುವ ಅತಿಥಿಗಳನ್ನು ಎದುರು ನೋಡುತ್ತಿದೆ. ಶ್ರವಣ ಬೆಳಗೊಳದಲ್ಲೀಗ ಮಸ್ತಕಾಭಿಷೇಕವನ್ನು ನೆನಪಿಸುವಂಥ ಉತ್ಸಾಹ, ಉಲ್ಲಾಸ ಗೋಚರಿಸುತ್ತಿದೆ. ಬೀದಿ ಬೀದಿಗಳು, ಮನೆ, ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡದ ಧ್ವಜಗಳು ರಾರಾಜಿಸುತ್ತಿವೆ.

ಒಂದು ಕಡೆ ಅತಿಥಿಗಳ ಆಗಮನ, ಇನ್ನೊಂದೆಡೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಮ್ಮೇಳನಕ್ಕೆ ಭದ್ರತಾ ವ್ಯವಸ್ಥೆ ಮಾಡಲಿರುವ ನೂರಾರು ಪೊಲೀಸರು ಬಂದು ಸಿದ್ಧತೆ ಮಾಡಿಕೊಂಡಿದ್ದಾರೆ. ವಿವಿಧ ಭಾಗಗಳಿಂದ ಬಂದಿರುವ ಪೊಲೀಸರು, ಹೋಮ್‌ಗಾರ್ಡ್‌ಗಳು, ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ನೀಡಲು ಬಂದಿದ್ದ ವೈದ್ಯರು ಹಾಗೂ ಇತರ ಸಿಬ್ಬಂದಿ ಶ್ರವಣ ಬೆಳಗೊಳ ಮಠದಲ್ಲಿ ಊಟ ಮಾಡಿ ತಮ್ಮ ಕರ್ತವ್ಯಕ್ಕೆ ತೆರಳಿದರು.

ಅತ್ತ, ಬೆಟ್ಟದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಭವ್ಯ ವೇದಿಕೆ, ಅಡುಗೆ ಮನೆ, ಪುಸ್ತಕ ಮಳಿಗೆ ಹೀಗೆ ಎಲ್ಲ ಕಡೆಗಳಲ್ಲೂ ಕಾರ್ಮಿಕರು ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ನಾಳೆ (ಶನಿವಾರ) ಸಂಜೆಯೊಳಗೆ ಸುಸಜ್ಜಿತ ವೇದಿಕೆಯನ್ನು ಇವರು ಬಿಟ್ಟುಕೊಡಬೇಕಾಗಿದೆ.  15ಸಾವಿರ ಜನರು ಕೂರಬಹುದಾದ ಸಭಾಂಗಣದಲ್ಲಿ ಹಿಂಬದಿ ಕೂರುವವರಿಗೆ ವೇದಿಕೆಯ ಚಟುವಟಿಕೆಗಳು ಕಾಣಿಸುವಂತೆ ಎರಡು ಪ್ಲಾಸ್ಮಾ ಟಿ.ವಿ. ವ್ಯವಸ್ಥೆ ಮಾಡಲಾಗುತ್ತಿದೆ.

ಸುಸಜ್ಜಿತ ಮಾಧ್ಯಮ ಕೇಂದ್ರ: ಮುಖ್ಯ ವೇದಿಕೆಯ ಹಿಂಭಾಗದಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ಸಿದ್ಧವಾಗಿದೆ. 40 ಕಂಪ್ಯೂಟರ್‌, ಇಂಟರ್‌ನೆಟ್‌ ವ್ಯವಸ್ಥೆ, ಪ್ರಿಂಟರ್‌ ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿಯೂ ವೇದಿಕೆಯ ಚಟುವಟಿಕೆಗಳನ್ನು ನೇರವಾಗಿ ಪ್ರಸಾರ ಮಾಡಲು ಪ್ಲಾಸ್ಮಾ ಟಿ.ವಿ. ವ್ಯವಸ್ಥೆ ಇದೆ. ಸಮ್ಮೇಳನದ ಮೂರೂ ದಿನಗಳಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಒಂಬತ್ತು ಸಾವಿರ ನೋಂದಣಿ
ಸಮ್ಮೇಳನಕ್ಕೆ ಬರುವವರಿಗಾಗಿ ಶ್ರವಣಬೆಳಗೊಳ ಮಾತ್ರವಲ್ಲದೆ ಹಿರೀಸಾವೆ ಹಾಗೂ ಚನ್ನರಾಯಪಟ್ಟಣಗಳಲ್ಲೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ 1805 ಮಹಿಳೆಯರು ಹಾಗೂ 8ಸಾವಿರ ಪುರುಷರು ನೋಂದಣಿ ಮಾಡಿಕೊಂಡಿದ್ದಾರೆ. ಮಹಿಳೆಯರಿಗೆ ಶ್ರವಣಬೆಳಗೊಳದಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.

ವಿಶೇಷ ಬಸ್‌ ವ್ಯವಸ್ಥೆ
ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿ ಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದವರು ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಿದ್ದಾರೆ.

ಹಾಸನ ವಿಭಾಗದಿಂದ ಸಾಹಿತ್ಯ ಸಮ್ಮೇಳನಕ್ಕಾಗಿಯೇ 40 ಬಸ್‌ಗಳನ್ನು ಮೀಸಲಿಡಲಾಗಿದೆ. ಇವುಗಳಲ್ಲಿ 10 ಬಸ್ಸುಗಳು ನೇರವಾಗಿ ಹಾಸನದಿಂದ ಶ್ರವಣಬೆಳಗೊಳಕ್ಕೆ ಸಂಚಾರ ನಡೆಸಲಿವೆ. ಉಳಿದ 30 ಬಸ್‌ಗಳನ್ನು ಹಾಸನದಿಂದ ಬೇರೆ ಬೇರೆ ಮಾರ್ಗಗಳ ಮೂಲಕ ಶ್ರವಣಬೆಳಗೊಳಕ್ಕೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

ಇವುಗಳಲ್ಲದೆ ಪ್ರತಿ ತಾಲ್ಲೂಕು ಡಿಪೋಗಳಿಂದ ತಲಾ  5 ಬಸ್‌ಗಳು ಶ್ರವಣಬೆಳಗೊಳಕ್ಕೆ ಬರಲಿವೆ. ಜಿಲ್ಲೆಯ ಗಡಿಭಾಗವಾಗಿರುವ ಹಿರೀಸಾವೆ ಹಾಗೂ ಚನ್ನರಾಯಪಟ್ಟಣಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಜನರು ಬರುವ ನಿರೀಕ್ಷೆಯಿದ್ದು, ಈ ಭಾಗದಲ್ಲಿ ಹೆಚ್ಚಿನ ಬಸ್‌ ಓಡಿಸಲು ನಿರ್ಧರಿಸಲಾಗಿದೆ.

ಸಮ್ಮೇಳನದ ಸ್ಥಳದ ವರೆಗೆ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲದಿರುವುದರಿಂದ ಶ್ರವಣಬೆಳಗೊಳದ ಬಸ್‌ ನಿಲ್ದಾಣದಿಂದ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ ಸಮೀಪದವರೆಗೆ ಪ್ರತ್ಯೇಕ ಬಸ್‌ಗಳು ಸಂಚಾರ ಮಾಡಲಿದ್ದು, ಈ ಬಸ್ಸುಗಳಲ್ಲಿ ಜನರು ಉಚಿತವಾಗಿ ಓಡಾಡಬಹುದು.

ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದಲೇ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಣ ನೀಡಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಬಿ. ಶ್ರೀನಿವಾಸ್‌ ತಿಳಿಸಿದ್ದಾರೆ.

ಮಾತೃ ಭಾಷಾ ಮಾಧ್ಯಮಕ್ಕೆ ಆದ್ಯತೆ; ಸಮ್ಮೇಳನ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ
ಹಿರೀಸಾವೆ:  ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರಾಧಾನ್ಯತೆ ನೀಡುಬೇಕು ಎಂಬುದಕ್ಕೆ 81 ನೇ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ವೇದಿಕೆಯಾಗಲಿದೆ ಎಂದು ಸಮ್ಮೇಳನದ ಅಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯ ಮಂಗಳವಾರ ಹಿರೀಸಾವೆ ಸಮೀಪದ ಕಿರೀಸಾವೆ ಗಡಿಯಲ್ಲಿ ಹೇಳಿದರು.

ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ಬರುವಾಗ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕನ್ನಡ ಭಾಷ ಮಾಧ್ಯಮ ಆಗಬೇಕು ಎಂಬ ಬಗ್ಗೆ ನಡೆಯುತ್ತಿರುವ ಎಲ್ಲ ಹೋರಾಟಗಳಿಗೆ ಪರಿಹಾರ ಸಿಗುವ ವಿಶ್ವಾಸವಿದೆ. ಸಮ್ಮೇಳನದಲ್ಲಿ ಭಾಷ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆವಕಾಶ ಸಿಕ್ಕಿದೆ. ಈ ಬಗ್ಗೆ ನಾನು ಪ್ರತಿಪಾದನೆ ಮಾಡುತ್ತೆನೆ. ಮಾತೃ ಭಾಷೆ ಸಮಸ್ಯೆ ಪರಿಹರಿಸುವ ಸಂಬಂಧ ದೊಡ್ಡ ಆಂದೋಲನ ರೂಪಿಸಬೇಕು ಎಂಬ ಕೂಗಿಗೆ ಧ್ವನಿಯಾಗುವೆ ಎಂದು ಅವರು ಹೇಳಿದರು.

ಸಂಜೆ ಸಮ್ಮೇಳನ ಅಧ್ಯಕ್ಷರು ಡಾ. ಸಿದ್ದಲಿಂಗಯ್ಯ ಹಾಸನ ಜಿಲ್ಲಾ ಗಡಿಗೆ ಬಂದಾಗ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಕಸಾಪ ಅಧ್ಯಕ್ಷ  ಡಾ. ಎಚ್.ಎಲ್. ಜನಾರ್ಧನ್, ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ವಿಜಯ, ತಹಶೀಲ್ದಾರ್ ಕೆ. ಕೃಷ್ಣ ಸೇರಿದಂತೆ ಜಿಲ್ಲಾ ಕಸಾಪ, ತಾಲ್ಲೂಕು ಕಸಾಪ, ಹೋಬಳಿ ಕಸಾಪ ಘಟಗಳ ಪದಾಧಿಕಾರಿಗಳು. ವಿವಿಧ ಸಂಘಟನೆಗಳು ಸದಸ್ಯರು ಸೇರಿದಂತೆ ವಿವಿಧ ಗಣ್ಯರು ಅಧ್ಯಕ್ಷರನ್ನು ಸ್ವಾಗತಿಸಿದರು.

ಅದ್ದೂರಿ ಸ್ವಾಗತ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರಿಗೆ ಶ್ರವಣಬೆಳಗೊಳದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಶುಕ್ರವಾರ ಸಂಜೆ ಸಮ್ಮೇಳನಾಧ್ಯಕ್ಷರು ಮತ್ತವರ ಕುಟುಂಬ ವರ್ಗದವರು ಆಗಮಿಸಿದರು. ವಿಂಧ್ಯಗಿರಿ ಬೆಟ್ಟದ ತಪ್ಪಲಿನಲ್ಲಿ  ಅರತಿ ಎತ್ತಿ, ಹಣೆಗೆ ತಿಲಕ ಇಟ್ಟು ಮಂಗಳವಾದ್ಯದ ನಾದದೊಂದಿಗೆ ಸ್ವಾಗತಿಸಲಾಯಿತು.

ಪ್ರಚಾರ ರಥದ ಮೆರವಣಿಗೆ
ಅರಸೀಕೆರೆ: ಶ್ರವಣ ಬೆಳಗೊಳದಲ್ಲಿ ಫೆ1.2ಮತ್ತು 3ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ‘ ‘ ಶ್ರೀ ಸ್ವರ್ಣಗೌರಿ ದೇವಿ ಸನ್ನಿಧಿಯಿಂದ ಬೆಳಗೊಳ ನೆಲೆವರೆಗೆ‘ ಪ್ರಚಾರ ಅಕ್ಷರ ತೇರಿಗೆ ದೇವಾಲಯದ ಮುಂಭಾಗ ಶುಕ್ರವಾರ ಗ್ರಾ.ಪಂ ಸದಸ್ಯ ಎಂ. ಪ್ರಕಾಶಮೂರ್ತಿ ಮಹಾ ಮಂಗಳಾರತಿ ಸಲ್ಲಿಸಿ ಚಾಲನೆ ನೀಡಿದರು.

ಈ ಅಕ್ಷರ ತೇರಿನ ರುವಾರಿ ಹೊಳೆನರಸೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎನ್‌. ಚೇತನ್‌, ನಾಗಭೂಷಣ ಎನ್‌. ಘನವಂತ, ಎಂ.ಸಿ. ಹೇಮಂತ್‌ ಹಾಗೂ ಯೋಗಿಶ್‌ ಮತ್ತು ವೀರಗಾಸೆ ತಂಡ ಪ್ರಚಾರ ಕನ್ನಡ ರಥಯಾತ್ರೆಯನ್ನು ಆಯೋಜಿಸಿದ್ದು ಇಂದು ಬೆಳಿಗ್ಗೆ ರಥಯಾತ್ರೆಯ ಮೂಲಕ ಮಾಡಾಳಿಗೆ ಬಂದಾಗ  ಗ್ರಾ.ಪಂ ಸದಸ್ಯ ಎಂ. ಪ್ರಕಾಶಮೂರ್ತಿ ಹಾಗೂ ಗ್ರಾಮಸ್ಥರು ಬರಮಾಡಿಕೊಂಡರು.

ನಂತರ ಗ್ರಾಮದ ಆರಾಧ್ಯ ದೇವತೆ ಸ್ವರ್ಣಗೌರಿದೇವಿ ಮತ್ತು ಬಸವೇಶ್ವರ ಸ್ವಾಮಿಗೆ ಅರ್ಚಕ  ರೇಣುಕಾ ಮೂರ್ತಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಚೇತನ್‌ ಈ ಹಿಂದೆ ಗಂಗಾವತಿಯಲ್ಲಿ ನಡೆದ 78ನೇ  ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್‌ ಜಾಥಾ ಮತ್ತು 79ನೇ ವಿಜಯಪುರದಲ್ಲಿ ನಡೆದ 79ನೇ ಸಾಹಿತ್ಯ ಸಮ್ಮೇಳನಕ್ಕೆ ಮೋಟಾರ್‌ ಬೈಕ್‌ನಲ್ಲಿ 79 ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ಸಮ್ಮೇಳನದ ಬಗ್ಗೆ  ಜನರಲ್ಲಿ ಅರಿವು ಮೂಡಿಸಲು ತೆರಳಿದ್ದೆ ಎಂದು ಅವರು ಹೇಳಿದರು.

ಈ ಅಕ್ಷರ ತೇರಿನ ಪ್ರಚಾರದ ಉದ್ದೇಶ ಎಂದರೆ ತಾವು ಕೈಗೊಂಡಿರುವ ಬಗ್ಗೆ ವಿವಿರಿಸಿದ ಅವರು ಸರ್ಕಾರ, ಮುಖ್ಯಮಂತ್ರಿ ಹಾಗೂ ಸಾಹಿತ್ಯ ಸಮ್ಮೇಣದ ಅಧ್ಯಕ್ಷರಿಗೆ ಮೂರು ಪ್ರಶ್ನೆಗಳನ್ನು ಕೇಳಲಾಗಿದ್ದು ಅವುಗಳಿಗೆ ಅವರು ಸಮ್ಮೇಳನದಲ್ಲಿಯೇ ಉತ್ತರ ಕೊಡಬೇಕು.

ತಾವು ಕೇಳಿರುವ ಮೊದಲನೇ ಪ್ರಶ್ನೆ ನಮ್ಮ ಮಕ್ಕಳನ್ನು ಶಾಲೆಗೆ ಸೇರಿ ಸುವಾಗ ಜಾತಿ ಕಾಲಂನಲ್ಲಿ ಕನ್ನಡಿಗ ಎಂದು ನಮೂದಿಸಬಹುದೇ? ಎರಡನೇ ಪ್ರಶ್ನೆ ಇದಕ್ಕೆ ಸಂವಿಧಾನ ಬದ್ದವಾಗಿ ಹಾಗೂ ಕಾನೂನು ಬದ್ದವಾಗಿ ಮಾನ್ಯತೆ ನೀಡುವಿರಾ ಮೂರನೇ ಪ್ರಶ್ನೆ ಆಖಂಡ ಕರ್ನಾಟಕದ ಏಕತೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿರುವ ಕನ್ನಡ ವಿರೋಧಿಗಳನ್ನು ಹದ್ದುಬಸ್ತಿನಲ್ಲಿಡಲು ಕಠಿಣ ಕಾನೂನು ಕಾಯ್ದೆಗಳನ್ನು ಜಾರಿಗೊಳಿಸುವಿರಾ ಎಂದು ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಗ್ರಾಮದ ಹಿರಿಯರಾದ   ಕೆ.ಎಸ್‌. ಚನ್ನಬಸಪ್ಪ, ಬಸವರಾಜು, ಶಿಕ್ಷಕಿ ಸಿದ್ರಾಮಕ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT