ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ–ಪ್ರೇಮದ ಹೊಸ ಬೆಳ್ಳಿಬಿಂಬ

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಾದಂಬರಿ ಆಧರಿತ ಸಿನಿಮಾಗಳು ಬರುತ್ತಿಲ್ಲ ಎಂಬ ಕೊರಗನ್ನು ತಕ್ಕಮಟ್ಟಿಗಾದರೂ ದೂರ ಮಾಡಲು ನಾಗತಿಹಳ್ಳಿ ಚಂದ್ರಶೇಖರ ಮುಂದಾಗಿದ್ದಾರೆ. 80ರ ದಶಕದಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ಇಷ್ಟಕಾಮ್ಯ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಅವರು ಸಿನಿಮಾರೂಪಕ್ಕೆ ತರುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿದ ನಾಗತಿಹಳ್ಳಿ, ಆ ಕುರಿತ ವಿವರ ಹಂಚಿಕೊಳ್ಳುವ ಉದ್ದೇಶದಿಂದ ಸುದ್ದಿಮಿತ್ರರನ್ನು ಆಹ್ವಾನಿಸಿದ್ದರು.

ಸಾಹಿತ್ಯ, ಪರಿಸರ ಹೋರಾಟದ ಜತೆಜತೆಗೇ ಸಿನಿಮಾವನ್ನೂ ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಂಡಿರುವ ನಾಗತಿಹಳ್ಳಿ, ‘ಇಷ್ಟಕಾಮ್ಯ’ದ ಜಾಹೀರಾತು ವಿನ್ಯಾಸಗಳನ್ನು ಬಿಡುಗಡೆ ಮಾಡಲು ಪರಿಸರವಾದಿ, ನಟ, ನಿರ್ದೇಶಕ ಸುರೇಶ ಹೆಬ್ಳೀಕರ್ ಅವರನ್ನು ಆಹ್ವಾನಿಸಿದ್ದರು. ‘ನಾನೊಬ್ಬ ಅಪ್ಪಟ ಕಮರ್ಷಿಯಲ್ ಸಿನಿಮಾದವನು ಅಲ್ಲವೇ ಅಲ್ಲ. ಇಂಥ ಕಾರ್ಯಕ್ರಮಕ್ಕೆ ನನ್ನನ್ನು ಯಾಕೆ ಕರೆದಿದ್ದಾರೋ ಗೊತ್ತಿಲ್ಲ’ ಎಂದು ಹೆಬ್ಳೀಕರ್ ಅಚ್ಚರಿ ವ್ಯಕ್ತಪಡಿಸಿದರು. ನಾಗತಿಹಳ್ಳಿ ನಿರ್ದೇಶನದ ಸಿನಿಮಾ ಅಂದ ಮೇಲೆ ಅದು ಸದಭಿರುಚಿಯದ್ದೇ ಆಗಿರುತ್ತದೆ ಎಂಬ ವಿಶ್ವಾಸ ಅವರದು.

‘ಕ್ರೇಜಿಲೋಕ’ದ ಬಳಿಕ ಮೂರೂವರೆ ವರ್ಷ ಸಿನಿಮಾದಿಂದ ದೂರವುಳಿದಿದ್ದ ವಿಜಯಸೂರ್ಯ, ‘ಇಷ್ಟಕಾಮ್ಯ’ದ ನಾಯಕ. ಟೀವಿಯಲ್ಲಿ ಬಿಜಿಯಾಗಿದ್ದ ಅವರನ್ನು ನಾಗತಿಹಳ್ಳಿ ಮತ್ತೆ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ವಿದೇಶದಲ್ಲಿ ಓದಿ ಹಳ್ಳಿಗೆ ಬಂದು ಜನರಿಗೆ ಚಿಕಿತ್ಸೆ ನೀಡುವ ವೈದ್ಯನ ಪಾತ್ರ ಅವರದು. ‘ನನ್ನ ವೃತ್ತಿ ಬದುಕಿನಲ್ಲಿ ಈ ಚಿತ್ರ ಮಹತ್ವದ ಘಟ್ಟವಾಗಲಿದೆ’ ಎಂದು ವಿಜಯಸೂರ್ಯ ಹೇಳಿಕೊಂಡರು. ‘ಕೃಷ್ಣಲೀಲಾ’ ಬಳಿಕ ಒಳ್ಳೆಯ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ಮಯೂರಿ ಹೇಳಿದರೆ, ಇನ್ನೊಬ್ಬ ನಾಯಕಿ ಕಾವ್ಯಾ ಶೆಟ್ಟಿ ‘ನಾಗತಿಹಳ್ಳಿ ಅವರ ಚಿತ್ರದಲ್ಲಿ ಕೆಲಸ ಮಾಡುವುದು ಅದೃಷ್ಟ’ ಎಂದು ಖುಷಿಪಟ್ಟರು.

ಚಿತ್ರ ನಿರ್ಮಾಣದ ಹಿನ್ನೆಲೆ ತೆರೆದಿಟ್ಟ ನಿರ್ದೇಶಕ ನಾಗತಿಹಳ್ಳಿ, ಕಾದಂಬರಿ ಆಧರಿಸಿದ ಸಿನಿಮಾಕ್ಕೆ ಬಂಡವಾಳ ಹಾಕಲು ಮುಂದಾದ ಕೆ.ವಿ.ಶಂಕರೇಗೌಡ ಅವರಿಗೆ ಧನ್ಯವಾದ ಸಲ್ಲಿಸಿದರು. ‘ಸಿನಿಮಾದ ಕೆಲಸಗಳಲ್ಲಿ ಯಾವತ್ತೂ ಗೌಡರು ಹಸ್ತಕ್ಷೇಪ ಮಾಡಲಿಲ್ಲ. ಕಲಾವಿದರು ನಮ್ಮ ನಿರೀಕ್ಷೆಗೂ ಮೀರಿ ಶ್ರದ್ಧೆಯಿಂದ ದುಡಿದಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಸಿನಿಮಾಕ್ಕೆ ನಾನು ಬರೆದ ಎರಡು ಹಾಡುಗಳನ್ನು ನಿರ್ದೇಶಕರು ಖುಷಿಯಿಂದ ಒಪ್ಪಿದ್ದಾರೆ; ಅದು ನನಗೂ ಖುಷಿ’ ಎಂದು ಯೋಗರಾಜ ಭಟ್ ನುಡಿದರು. ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಹೇಳುವ ಈ ಚಿತ್ರದಲ್ಲಿ ತಮಗೂ ಒಂದು ಪಾತ್ರ ಕೊಟ್ಟಿದ್ದಕ್ಕೆ ರಂಗಾಯಣ ರಘು ಕೃತಜ್ಞತೆ ಸಲ್ಲಿಸಿದರು. ರಂಗಕರ್ಮಿ ಬಿ.ಜಯಶ್ರೀ, ಸಂಗೀತ ನಿರ್ದೇಶಕ ಅಜನೀಶ ಲೋಕನಾಥ್, ಛಾಯಾಗ್ರಾಹಕ ಸನಾ ರವಿಕುಮಾರ್ ಇತರರು ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT