ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಫಲಿತಾಂಶ: ಅನಂತ್‌ಗೆ ನಾಲ್ಕು ರ‍್ಯಾಂಕ್

ಜೂನ್ 14ರಿಂದ ಕೌನ್ಸೆಲಿಂಗ್‌
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜಿ. ಅನಂತ್‌ ಸಿಇಟಿಯಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೇರಿ ಮೂರು ಕೋರ್ಸ್‌ಗಳಲ್ಲಿ ಮೊದಲ ಮತ್ತು ಬಿ.ಫಾರ್ಮಾದಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾನೆ.

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಶನಿವಾರ ಬಿಡುಗಡೆ ಮಾಡಿದರು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಮಾತ್ರ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರಿಂದ ಸಿಇಟಿ ರ‍್ಯಾಂಕ್‌ಗೆ ಮಾನ್ಯತೆ ಇದೆಯೋ, ಇಲ್ಲವೋ ಎಂಬ ಗೊಂದಲ ಇತ್ತು. ಆದರೆ, ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ರಾಜ್ಯ ಸರ್ಕಾರ ನಡೆಸುವ ಪರೀಕ್ಷೆ ಮೂಲಕ ಹಂಚಬಹುದು ಎಂದು ಕೇಂದ್ರ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ವರ್ಷದಂತೆ ಎಲ್ಲ ಕೋರ್ಸ್‌ಗಳಿಗೂ ರ‍್ಯಾಂಕಿಂಗ್‌ ಪ್ರಕಟಿಸಿದೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಬಿ.ಎಸ್‌ಸಿ ಅಗ್ರಿ ಹಾಗೂ ಪಶು ವೈದ್ಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಜಿ. ಅನಂತ್‌ ಮೊದಲ ರ್‌್ಯಾಂಕ್‌ ಗಳಿಸಿದರೆ, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ವಿಭಾಗದಲ್ಲಿ ಮೂರನೇ ರ‍್ಯಾಂಕ್‌ ಪಡೆದಿದ್ದಾನೆ.

ಎಂಜಿನಿಯರಿಂಗ್‌ ಹಾಗೂ ಬಿ.ಫಾರ್ಮಾ ಮತ್ತು ಡಿ.ಫಾರ್ಮಾ ವಿಭಾಗದಲ್ಲಿ ಬೆಂಗಳೂರಿನ ವಿವಿಎಸ್‌ ಸರ್ದಾರ್‌ ಪಟೇಲ್‌ ಪಿಯು ಕಾಲೇಜು ವಿದ್ಯಾರ್ಥಿ ಮಿಲಿಂದ್‌ ಕುಮಾರ್‌ ವಾದಿರಾಜು ಮೊದಲ ರ‍್ಯಾಂಕ್‌ ಪಡೆದಿದ್ದಾನೆ. ಆರ್ಕಿಟೆಕ್ಚರ್‌ ವಿಭಾಗದಲ್ಲಿ ಸಿಎಂಆರ್‌ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಸಿ.ಆರ್‌. ಮೃದುಲಾ, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ವಿಭಾಗದಲ್ಲಿ ಯಲಹಂಕ ಶೇಷಾದ್ರಿಪುರ ಕಾಲೇಜು ವಿದ್ಯಾರ್ಥಿ ಸಂಜಯ್ ಎಂ.ಗೌಡರ್ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ಮೊದಲ ಐವರಿಗೆ ಶುಲ್ಕ ವಿನಾಯಿತಿ: ‘ಯಾವುದೇ ಕೋರ್ಸ್‌ನಲ್ಲಿ ಸಿಇಟಿಯಲ್ಲಿ  ಮೊದಲ ಐದು ರ‍್ಯಾಂಕ್‌ ಪಡೆದವರಿಗೆ ಈ ಮೊದಲು ಪ್ರಥಮ ವರ್ಷಕ್ಕೆ ಶುಲ್ಕ ವಿನಾಯಿತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಕೋರ್ಸ್‌ ಮುಗಿಯುವರೆಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಜೂನ್‌ 14ರಿಂದ ಕೌನ್ಸೆಲಿಂಗ್‌ ನಡೆಯಲಿದೆ. ಜೂನ್‌ 3ರಿಂದ ದಾಖಲಾತಿಗಳ ಪರಿಶೀಲನೆ ಕಾರ್ಯ ಆರಂಭವಾಗುತ್ತದೆ.

ಬೆಂಗಳೂರು, ದಾವಣಗೆರೆ, ಬಳ್ಳಾರಿ, ರಾಯಚೂರು, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ, ಮೈಸೂರು, ತುಮಕೂರು ಮತ್ತು ಬೀದರ್‌ನಲ್ಲಿ ಸಹಾಯ ಕೇಂದ್ರಗಳನ್ನು ಆರಂಭಿಸ ಲಾಗಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT