ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಸೀಟು: ವಿದ್ಯಾರ್ಥಿಗಳಲ್ಲಿ ಗೊಂದಲ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ಇನ್ನೂ ಆರಂಭಿಸದಿರುವುದರಿಂದ ವಿದ್ಯಾರ್ಥಿಗಳು ಕಾಮೆಡ್‌–ಕೆ ಕೌನ್ಸೆಲಿಂಗ್‌ನಲ್ಲಿ ಎಂಜಿನಿಯರಿಂಗ್‌ ಸೀಟು ಪಡೆಯಬೇಕೆ? ಬೇಡವೇ? ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.
ಕಾಮೆಡ್‌–ಕೆ ಬುಧವಾರ ಎರಡನೇ ದಿನದ ಕೌನ್ಸೆಲಿಂಗ್‌ ಪೂರ್ಣಗೊಳಿಸಿತು. ಇಲ್ಲಿಗೆ ಬಂದಿದ್ದ ರಾಜ್ಯದ ಬಹುತೇಕ ವಿದ್ಯಾರ್ಥಿಗಳಿಗೆ ಇಂತಹ ಗೊಂದಲ ಕಾಡುತ್ತಿತ್ತು.

‘ಕಾಮೆಡ್‌–ಕೆ ಪರೀಕ್ಷೆಯಲ್ಲಿ 4,163 ರ‍್ಯಾಂಕ್ ಬಂದಿದೆ. ಸಿಇಟಿಯಲ್ಲಿ 5,800 ರ‍್ಯಾಂಕ್ ಇದೆ. ಪಿಇಎಸ್‌ ತಾಂತ್ರಿಕ ಕಾಲೇಜಿನಲ್ಲಿ  ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ಸೀಟು ಪಡೆಯಬೇಕು ಎಂಬ ಆಸಕ್ತಿ ಇದೆ. ಸಿಇಟಿ ಸೀಟು ಹಂಚಿಕೆ ಇನ್ನೂ ಆರಂಭ ಆಗಿಲ್ಲ. ಈಗ ಕಾಮೆಡ್‌–ಕೆ ಕೌನ್ಸೆಲಿಂಗ್‌ನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳಬೇಕೆ? ಸಿಇಟಿ ಕೌನ್ಸೆಲಿಂಗ್‌ವರೆಗೆ ಕಾಯಬೇಕೆ? ಎಂಬ ಗೊಂದಲ ಉಂಟಾಗಿದೆ’ ಎಂದು ವಿದ್ಯಾರ್ಥಿ ಬೆಂಗಳೂರಿನ ರಾಮ್‌ ಗೋಪಿ ಹೇಳಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೇಳಾಪಟ್ಟಿ ಪ್ರಕಾರ ಜುಲೈ 26ರಿಂದಲೇ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ ಆಗಬೇಕಿತ್ತು. ಆದರೆ, ಈಗಿನ್ನೂ ಅಣಕು ಸೀಟು ಹಂಚಿಕೆ ನಡೆಯುತ್ತಿದ್ದು, ಜುಲೈ 1ರಿಂದ ಸೀಟು ಹಂಚಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿದ ಬೇಡಿಕೆ:  ಕಾಮೆಡ್‌–ಕೆ ಬುಧವಾರ 3001ರಿಂದ 6000 ರ್‌್ಯಾಂಕ್‌ ವರೆಗಿನ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ಗೆ ಕರೆದಿತ್ತು. ಮುಖ್ಯವಾಗಿ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌, ಇನ್‌ಫರ್ಮೇಷನ್‌ ಸೈನ್ಸ್‌, ಮೆಕಾನಿಕಲ್‌ ಎಂಜಿನಿಯರ್‌ಗೆ ಹೆಚ್ಚಿನ ಬೇಡಿಕೆ ಕಂಡುಬಂದಿತು.
ಕಾಮೆಡ್‌–ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಸ್‌. ಶ್ರೀಕಾಂತ್‌, ‘ಸಾಮಾನ್ಯವಾಗಿ 5000 ರ‍್ಯಾಂಕ್‍ವರೆಗಿನ ವಿದ್ಯಾರ್ಥಿಗಳು ಪ್ರಮುಖ ಕಾಲೇಜುಗಳಲ್ಲಿ ಸೀಟು ಪಡೆಯುತ್ತಾರೆ. ಬುಧವಾರವೇ ಇಷ್ಟು ಸೀಟುಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.

ಮೊದಲನೇ ದಿನ ತಾಂತ್ರಿಕ ದೋಷದಿಂದಾಗಿ ಕೌನ್ಸೆಲಿಂಗ್‌ ಪ್ರಕ್ರಿಯೆ ಸಾಕಷ್ಟು ವಿಳಂಬ ಆಗಿತ್ತು. ಆದರೆ, ಬುಧವಾರ ಆ ಸಮಸ್ಯೆ ಕಾಡಲಿಲ್ಲ. ಮಧ್ಯಾಹ್ನದ ವೇಳೆಗೆ 5000 ನಂತರದ ರ‍್ಯಾಂಕ್‍ನವರಿಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಯಿತು. ಸಂಜೆ ವೇಳೆಗೆ ನಿಗದಿತ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT