ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಆಗುವ ಕನಸು ನನಸಾಗಲಿಲ್ಲ

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆ­ಯಲ್ಲಿ  ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ದೊರಕಿಸಿ­ಕೊಡುವ ಜವಾಬ್ದಾರಿ­ಯನ್ನು ಸಮರ್ಥ­ವಾಗಿ ನಿಭಾಯಿಸಿದ್ದ ಗೋಪಿನಾಥ್‌ ಮುಂಡೆ ಅವರು ವಿಧಾನಸಭೆ ಚುನಾವಣೆ­ಯಲ್ಲೂ ಪಕ್ಷ­ವನ್ನು ಅಧಿಕಾರಕ್ಕೆ ತರುವ ಹೊಣೆ ಹೊತ್ತಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಅವರು ಅದು ಕೈಗೂಡುವ ಮುನ್ನವೇ  ಇನ್ನಿಲ್ಲವಾದರು.

ಇನ್ನು ನಾಲ್ಕು ತಿಂಗಳಲ್ಲಿ ಮಹಾರಾಷ್ಟ್ರ ವಿಧಾನ­ಸಭೆಗೆ ನಡೆಯಲಿರುವ ಚುನಾವಣೆ ಸಿದ್ಧತೆ ನಡೆಸಿದ್ದ ಬಿಜೆಪಿಗೆ ಮುಂಡೆ ಅಕಾಲಿಕ ಮರಣ ಭಾರಿ ಪೆಟ್ಟು ನೀಡಿದೆ. ಮಹಾ­ರಾಷ್ಟ್ರ­ದಲ್ಲಿ  ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಹೊಣೆಯನ್ನು ಬಿಜೆಪಿ ಅವರಿಗೆ ವಹಿಸಿತ್ತು.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಜತೆ ಕೈಜೋಡಿಸಿ ‘ಮಹಾಯುತಿ’ ಎಂಬ ಹೊಸ ಸಾಮಾಜಿಕ ಸಮೀಕರಣ ಹುಟ್ಟು ಹಾಕುವ ಮೂಲಕ ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ 42 ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಅವರು ಯಶಸ್ವಿ­ಯಾಗಿದ್ದರು.

ಬಿಜೆಪಿಯ ಪ್ರಭಾವಿ  ಹಿಂದುಳಿದ ವರ್ಗಗಳ ನಾಯಕರಾಗಿದ್ದ 64 ವರ್ಷದ ಮುಂಡೆ ಹಿಂದುಳಿದ ಮರಾಠಾವಾಡಾ ಪ್ರದೇಶದ ಭೀಡ್‌ ಜಿಲ್ಲೆಯವರು. ಬಡ ವಂಜಾರಾ ರೈತ ಕುಟುಂಬ­ದಲ್ಲಿ ಜನಿಸಿದ ಅವರು ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿದ್ದರು.

ಐದು ಬಾರಿ ಶಾಸಕರಾಗಿದ್ದ ಅವರು ಈ ಬಾರಿ ಪ್ರತಿಷ್ಠಿತ ಭೀಡ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ­ಯಾಗಿದ್ದರು. ವಾರದ ಹಿಂದೆಯಷ್ಟೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸೇರಿ ಪ್ರಮುಖ ಗ್ರಾಮೀಣಾಭಿವೃದ್ಧಿ  ಖಾತೆ ಪಡೆದಿದ್ದರು.

ಬಿಜೆಪಿಯ ಮತ್ತೊಬ್ಬ ಪ್ರಭಾವಿ ನಾಯಕ­ರಾಗಿದ್ದ ಪ್ರಮೋದ್‌ ಮಹಾಜನ್‌ ಅವರ ಸಹೋದರಿ ಪ್ರಜ್ಞಾ ಮಹಾಜನ್‌ ಅವರನ್ನು ಮದುವೆ­ಯಾಗಿದ್ದ ಮುಂಡೆ ಆ ನಂತರ 
ರಾಜ್ಯ ರಾಜಕೀಯದಲ್ಲಿ ಪ್ರಭಾವ ಬೆಳೆಸಿಕೊಂಡಿ­ದ್ದರು.ಉಪ ಮುಖ್ಯಮಂತ್ರಿಯಾಗಿದ್ದ ಅವರು ಈ ಬಾರಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿ­ದ್ದರು. ಆದರೆ, ಅದೃಷ್ಟ ಅವರ ಜತೆಗಿರಲಿಲ್ಲ.

ಬಿಜೆಪಿ ಕಚೇರಿಗೆ ರಾಹುಲ್‌!
ನವದೆಹಲಿ: ರಾಜಕೀಯ ಭಿನ್ನಾಭಿಪ್ರಾಯ ಬದಿಗಿರಿಸಿ  ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅಗಲಿದ ಬಿಜೆಪಿ ನಾಯಕ ಗೋಪಿನಾಥ್‌ ಮುಂಡೆ ಅವರಿಗೆ ಗೌರವ ಸಲ್ಲಿಸಲು  ಇದೇ ಮೊದಲ ಬಾರಿಗೆ ಇಲ್ಲಿಯ ಬಿಜೆಪಿ ಪ್ರಧಾನ ಕಚೇರಿಗೆ ಬಂದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮುಂಡೆ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ತೆರಳಿದ ಕೆಲವೇ ಕ್ಷಣಗಳಲ್ಲಿ ರಾಹುಲ್‌ ಅಲ್ಲಿ ಪ್ರತ್ಯಕ್ಷರಾದರು. ಅವರೊಂದಿಗೆ ಉತ್ತರಾ­ಖಂಡದ ಮುಖ್ಯಮಂತ್ರಿ ಹರೀಶ್‌ ರಾವತ್‌ ಕೂಡ ಇದ್ದರು.

ಇಂಡಿಕಾ ಕಾರು ಚಾಲಕನಿಗೆ ಜಾಮೀನು
ಗೋಪಿನಾಥ್‌ ಮುಂಡೆ ಅವರ ಕಾರಿಗೆ (ಮಾರುತಿ ಸುಜುಕಿ Sx4) ಡಿಕ್ಕಿ ಹೊಡೆದ ಕಾರಿನ (ಟಾಟಾ ಇಂಡಿಕಾ) ಚಾಲಕ ಗುರ್ವಿಂದರ್‌ ಸಿಂಗ್‌ಗೆ (32) ದೆಹಲಿ ಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

ಮೆಟ್ರೊಪಾಲಿನ್‌ ಮ್ಯಾಜಿಸ್ಟ್ರೇಟ್‌ ಪುನೀತ್‌ ಪಹವಾ ಅವರ ಮುಂದೆ ಗುರ್ವಿಂದರ್‌ನನ್ನು ಹಾಜರು ಪಡಿಸಲಾಯಿತು.

ಸಚಿವರ ಕಾರು ಅಪಘಾತಕ್ಕೀಡಾ­ಗಿದ್ದರ ಹಿಂದೆ ಏನಾದರೂ ಸಂಚು ಇದೆಯೇ ಎಂಬ ಬಗ್ಗೆ ಗುಪ್ತಚರ ದಳ ಮತ್ತು ದೆಹಲಿ ವಿಶೇಷ ಪೊಲೀಸ್‌ ಘಟಕ ತನಿಖೆ ನಡೆಸುತ್ತಿದೆ. ಶಂಕಿತರನ್ನು ಗುರುತಿಸಲು ಪರೇಡ್‌ ನಡೆಸಲಾ­ಗುವುದು. ಆದ್ದರಿಂದ ಗುರ್ವಿಂದರ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಧೀಶರನ್ನು ಕೋರಿದರು.

‘ಆರೋಪಿಯ ವಿರುದ್ಧ ಹೊರಿಸಲಾಗಿ­ರುವ ಪ್ರಕರಣದಲ್ಲಿ ಜಾಮೀನು ನೀಡಲು ಅವಕಾಶ ಇದೆ. ತನಿಖೆಗೆ ಅಗತ್ಯವಿದ್ದರೆ ಪೊಲೀಸರು ಆರೋಪಿಯನ್ನು ಪುನಃ ವಶಕ್ಕೆ ತೆಗೆದುಕೊಳ್ಳಬಹುದು’ ಎಂದು ನ್ಯಾಯಾಧೀಶ ಪುನೀತ್‌ ಪಹವಾ ಹೇಳಿದರು.

ಗುರ್ವಿಂದರ್‌ ಸಿಂಗ್‌ನನ್ನು ಮತ್ತೆ ಬಂಧಿಸಿದ ಪೊಲೀಸರು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಿದರು. ಆದರೆ, ಇದನ್ನು ಕೋರ್ಟ್‌ ಮಾನ್ಯ ಮಾಡಲಿಲ್ಲ. ₨30 ಸಾವಿರದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಖಾತರಿಯನ್ನು ಭದ್ರತೆಯಾಗಿ ಸಲ್ಲಿಸಿ ಆರೋಪಿ ಜಾಮೀನು ಪಡೆಯಬಹುದು ಎಂದು ಹೇಳಿತು.

ಗುರ್ವಿಂದರ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 279 (ಅತಿ ವೇಗ ಮತ್ತು ಅಜಾಗರೂಕ ಚಾಲನೆ) ಮತ್ತು 304ಎ (ಸಾವಿಗೆ ಕಾರಣ­ವಾಗುವ ರೀತಿಯ ಅತಿ ವೇಗ ಮತ್ತ ಅಜಾಗರೂಕ ಚಾಲನೆ) ಕಲಂ ಅನ್ವಯ ತುಘಲಕ್‌ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪ ಸಾಬೀತಾದರೆ ಗರಿಷ್ಠ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಇಲ್ಲವೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.

‘ಆರೋಪಿ ಚಾಲಕ ಅತಿವೇಗದಲ್ಲಿದ್ದ’
‘ಇಂಡಿಕಾ ಕಾರಿನ ಚಾಲಕ ಗುರ್ವಿಂದರ್‌ ಸಿಂಗ್‌ ಅತಿವೇಗದಲ್ಲಿದ್ದ ಮತ್ತು  ಸಿಗ್ನಲ್‌ ತಪ್ಪಿಸಿ ಕಾರು ಓಡಿಸಿಕೊಂಡು ಬಂದಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ ನಡೆದ ಕೂಡಲೇ ಸಿಂಗ್‌ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದ. ‘ಕೆಂಪು ಗೂಟದ ಕಾರೊಂದು ನನ್ನ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಯಿತು’ ಎಂದು ಹೇಳಿಕೊಂಡಿದ್ದ. ತನ್ನದೇ ತಪ್ಪು ಎಂದು ತನಿಖಾಧಿಕಾರಿಗಳ ಮುಂದೆ
ಬಾಯಿಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT