ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ. ಇಬ್ರಾಹಿಂ ವಿರುದ್ಧ ಭೂಕಬಳಿಕೆ ಆರೋಪ

Last Updated 9 ಫೆಬ್ರುವರಿ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕಾನೂನು ಬಾಹಿರವಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಗ್ರಾಮದಲ್ಲಿ 19 ಎಕರೆ 33 ಗುಂಟೆ ಜಮೀನು ಹೊಂದಿದ್ದಾರೆ. ರಾಜ್ಯ ಸರ್ಕಾರ ಅದನ್ನು ಕೂಡಲೇ ತನ್ನ ವಶಕ್ಕೆ ತೆಗೆದುಕೊಳ್ಳಬೇಕು’ ಎಂದು ಪಾಲಿಕೆಯ ಮಾಜಿ ಸದಸ್ಯ ಎನ್‌.ಆರ್‌.ರಮೇಶ್‌ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಗವಾರ ಗ್ರಾಮದಲ್ಲಿ ವೈಯಾಲಿ ಕಾವಲ್‌ ಗೃಹ ನಿರ್ಮಾಣ ಸಹಕಾರ ಸಂಘದ ಪರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 1985ರಲ್ಲಿ 165 ಎಕರೆ 30 ಗುಂಟೆ ಜಮೀನನ್ನು ರೈತರಿಂದ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಅದಕ್ಕೆ ಪರಿಹಾರ ಧನ ಕೂಡ ವಿತರಿಸಿತ್ತು. ಆ ಪೈಕಿ 13 ರೈತರನ್ನು ಇಬ್ರಾಹಿಂ ಅವರು ಸಂಘ ಮತ್ತು ಬಿಡಿಎ ವಿರುದ್ಧ ಎತ್ತಿಕಟ್ಟಿದರು’ ಎಂದು ಆರೋಪಿಸಿದರು.

‘ರೈತರಿಂದ ಸುಪ್ರೀಂ ಕೋರ್ಟ್‌ವರೆಗೆ ವಿವಿಧ ಹಂತಗಳಲ್ಲಿ ದಾವೆಗಳನ್ನು ಹೂಡಿಸಿದ ಇಬ್ರಾಹಿಂ ಅವರು, ಬಿಡಿಎದಿಂದ ಭೂಮಿ ವಾಪಸ್‌ ಪಡೆದವರ ಪೈಕಿ 8 ರೈತರಿಗೆ ಸೇರಿದ 13 ಎಕರೆ 23 ಗುಂಟೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ತಮ್ಮ ಹೆಸರಿಗೆ ಕಾನೂನು ಬಾಹಿರವಾಗಿ ಕ್ರಯಕ್ಕೆ ಪಡೆದಿದ್ದಾರೆ’ ಎಂದರು.

‘ಇಬ್ರಾಹಿಂ ಅವರು ತಮ್ಮಿಂದ ಬಲವಂತವಾಗಿ ಭೂಮಿಯ ಕ್ರಯ ಪತ್ರ ಬರೆಯಿಸಿಕೊಂಡಿದ್ದಾರೆ. ಹಣ ಕೂಡ ನೀಡಿಲ್ಲ ಎಂದು ಎಂಟು ರೈತರ ಪೈಕಿ ಎನ್‌.ಆಂಜಿನಪ್ಪ ಮತ್ತು ಎಸ್‌.ಮುನಿಯಪ್ಪ ಎಂಬ ರೈತರು ಈಗಾಗಲೇ ಇಬ್ರಾಹಿಂ ಅವರ ವಿರುದ್ಧ ದೂರು ದಾಖಲಿಸಿದ್ದಾರೆ’ ಎಂದರು.

‘ರೈತರಿಂದ ಬರೆಯಿಸಿಕೊಂಡ ಕ್ರಯಪತ್ರದಲ್ಲಿ ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವ ಇಬ್ರಾಹಿಂ ಅವರು ನಂತರ ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ಅವರ ಮೇಲೆ ತಮ್ಮ ರಾಜಕೀಯ ಪ್ರಭಾವ ಬೀರಿ ಸಿ.ಎಂ. ಇಬ್ರಾಹಿಂ ಅಧ್ಯಕ್ಷರು, ಕರ್ನಾಟಕ ಸ್ಟೇಟ್‌ ಮುಸ್ಲಿಂ ಫೆಡರೇಷನ್‌ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ’ ಎಂದರು.

‘ಇಬ್ರಾಹಿಂ ಅವರು ಅಭಿವೃದ್ಧಿ ಶುಲ್ಕ ಮತ್ತು ಸುಧಾರಣಾ ಶುಲ್ಕ ಪಾವತಿಸದೆ ಬ್ಯಾಟರಾಯನಪುರ ನಗರಸಭೆಯ ಕಂದಾಯ ಅಧಿಕಾರಿಗಳಿಂದ 13 ಎಕರೆ ಭೂಮಿಗೆ ‘ಎ’ ಖಾತಾ ಮಾಡಿಸಿಕೊಂಡಿದ್ದರು. ಅವರ ಬಳಿ ಇರುವ ಪಹಣಿ ಪತ್ರಗಳೆಲ್ಲವೂ(ಆರ್‌ಟಿಸಿ) ನಕಲಿ ಎಂದು ಬೆಂಗಳೂರು ಜಿಲ್ಲಾಧಿಕಾರಿಗಳು ಮತ್ತು ಉತ್ತರ ತಾಲ್ಲೂಕಿನ ತಹಶೀಲ್ದಾರ್ ಅವರು 2000ರ ಏ.13 ರಂದು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

‘13 ಎಕರೆ 23 ಗುಂಟೆ ಭೂಮಿಯಲ್ಲಿ ನಿರ್ಮಿಸಿರುವ ಎಚ್‌ಕೆಬಿಕೆ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡಗಳು ಅನಧಿಕೃತವಾಗಿವೆ. ಅವುಗಳಿಗೆ ನಕ್ಷೆ ಮಂಜೂ
ರಾತಿ ಪಡೆದಿಲ್ಲ ಎಂದು 2001ರಲ್ಲಿ ಬ್ಯಾಟರಾಯನಪುರ ನಗರ ಸಭೆಯ ಆಯುಕ್ತರು ಇಬ್ರಾಹಿಂ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದರು. ಜತೆಗೆ, ಕಾಲೇಜಿನ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಆದೇಶಿಸಿದ್ದರು’ ಎಂದು ಹೇಳಿದರು.

‘ಇಬ್ರಾಹಿಂ ಅವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ ನಿಯಮ ಉಲ್ಲಂಘಿಸಿ ವ್ಯವಸಾಯದ ಜಮೀನನ್ನು ಖರೀದಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಉತ್ತರ ವಿಭಾಗದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು 2009ರಲ್ಲಿ ಇಬ್ರಾಹಿಂ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿ, ಕಾಲೇಜು ಕಟ್ಟಡ ನೆಲಸಮಗೊಳಿಸುವಂತೆ ಆದೇಶಿಸಿದೆ’ ಎಂದರು.

‘ಇಬ್ರಾಹಿಂ ಅವರು 2015ರ ಮೇ 7 ರಂದು ಬಿಬಿಎಂಪಿ ಆಡಳಿತಾಧಿಕಾರಿಗಳಿಗೆ   ಈ 13 ಎಕರೆ 23 ಗುಂಟೆ ಭೂಮಿಯನ್ನು  ಸಿ.ಎಂ.ಇಬ್ರಾಹಿಂ, ಅಧ್ಯಕ್ಷರು ಕರ್ನಾಟಕ ಸ್ಟೇಟ್‌ ಮುಸ್ಲಿಂ ಫೆಡರೇಷನ್‌ ಹೆಸರಿನಲ್ಲಿ ಖಾತಾ ನೋಂದಣಿ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದರು’ ಎಂದು ಆರೋಪಿಸಿದರು.

‘ಈ ವಿಚಾರವಾಗಿ ಕಳೆದ ಡಿಸೆಂಬರ್‌ನಲ್ಲಿ ಪಾಲಿಕೆಯ ಆಯುಕ್ತರು ಬಿಡಿಎ ಆಯುಕ್ತರಿಗೆ ಪತ್ರ ಬರೆದು ಅಭಿಪ್ರಾಯ ಕೋರಿದ್ದಾರೆ. ಈ ವಿಚಾರದಲ್ಲಿ ಆಯುಕ್ತರ ನಡೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ’ಎಂದರು.

‘ಇಬ್ರಾಹಿಂ ಅವರು ರೈತರಿಂದ ₹400 ಕೋಟಿ ಮೌಲ್ಯದ ಭೂಮಿ ಲಪಟಾಯಿಸಿದ್ದಲ್ಲದೆ, ಬಿಬಿಎಂಪಿಗೆ ಸೇರಿದ ₹175 ಕೋಟಿ ಮೌಲ್ಯದ 6 ಎಕರೆ 10 ಗುಂಟೆ ಭೂಮಿಯನ್ನು ಸಹ ಒತ್ತುವರಿ ಮಾಡಿಕೊಂಡು ಅದರಲ್ಲಿ ಕಾಂಪೌಂಡ್‌ ನಿರ್ಮಿಸಿದ್ದಾರೆ’ ಎಂದು ಆರೋಪ ಮಾಡಿದರು.

‘ಈ ವಿಚಾರವಾಗಿ ನಾನು ಜಿಲ್ಲಾಧಿಕಾರಿ, ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌), ಸಿಎಂಎಂ ನ್ಯಾಯಾಲಯ ಮತ್ತು ಮುಖ್ಯಮಂತ್ರಿಗ
ಳಿಗೆ ದೂರು ನೀಡಿರುವೆ. ಸಿದ್ದರಾಮಯ್ಯ ಅವರಿಗೆ ನೆಲಗಳ್ಳರ ವಿರುದ್ಧ ಕ್ರಮಕೈಗೊಳ್ಳುವ ಇಚ್ಛಾಶಕ್ತಿ ಇದ್ದರೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು, ಎಚ್‌ಕೆಬಿಕೆ ಕಾಲೇಜಿನ ಒಟ್ಟು 19 ಎಕರೆ 33 ಗುಂಟೆ ಭೂಮಿಯನ್ನು ಸರ್ವೆ ಮಾಡಿಸಲು ಆದೇಶ ನೀಡಬೇಕು’ ಎಂದು ಸವಾಲು ಹಾಕಿದರು.

‘ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ’
‘ಊರಿನಲ್ಲಿದ್ದ ಭೂಮಿಯನ್ನು ಅನೇಕ ರೈತರಿಗೆ ಕೊಟ್ಟು ಬೆಂಗಳೂರಿಗೆ ಬಂದವನು ನಾನು. ನಾನೇನಾದರೂ ಇಲ್ಲಿ ಒಂದು ಅಡಿ ಜಾಗ ಒತ್ತುವರಿ ಮಾಡಿಕೊಂಡಿರುವೆ ಎಂದು ಯಾರಾದರೂ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಸಿ.ಎಂ. ಇಬ್ರಾಹಿಂ ಅವರು ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿದರು.

‘ಕಾಲೇಜು ಕಟ್ಟಬೇಕಾದರೆ ನಾನು ಸರ್ಕಾರದಿಂದಲೇ ಭೂಮಿ ಪಡೆಯಬಹುದಿತ್ತು. ಆದರೆ, ನನಗೆ ಚಂದಾ ಬೇಡುವ ಅಭ್ಯಾಸವಿಲ್ಲ. ಹೀಗಾಗಿ, ಪರಿಶ್ರಮದ ದುಡ್ಡಿನಿಂದ  ನ್ಯಾಯಬದ್ಧವಾಗಿ ರೈತರಿಂದ ಭೂಮಿ ಖರೀದಿಸಿ, ಕಾಲೇಜು ಕಟ್ಟಲಾಗಿದೆ’ ಎಂದು ತಿಳಿಸಿದರು.

‘ಕಾಲೇಜು ನನ್ನ ಸ್ವಂತ ಆಸ್ತಿ ಅಲ್ಲ. ಅದು ಸಂಸ್ಥೆಗೆ ಸೇರಿದ್ದು. ಅಲ್ಲಿ 1800 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎನ್‌.ಆರ್.ರಮೇಶ್‌ ಅವರು ಕಾಲೇಜು ಬಳಿಯ ಆಟದ ಮೈದಾನ ಕಬಳಿಸಲು ಪ್ರಯತ್ನಿಸಿದ್ದರು. ಅದರಲ್ಲಿ ಅವರು ಯಶಸ್ವಿಯಾಗದ ಕಾರಣ ಹೀಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT