ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಯತ್ನ

ಸರಣಿ ಅತ್ಯಾಚಾರ ಖಂಡಿಸಿ ಮುಂದುವರಿದ ಪ್ರತಿಭಟನೆ: 22 ಮಂದಿ ಬಂಧನ
Last Updated 23 ಜುಲೈ 2014, 20:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾ­ಚಾರ ಪ್ರಕರಣಗಳನ್ನು ಖಂಡಿಸಿ ವಿವಿಧ ಸಂಘಟನೆ­ಗಳ ನಗರ­ದಲ್ಲಿ ಬುಧ­ವಾ­ರವೂ ಪ್ರತಿಭಟನೆ ನಡೆಸಿದವು. ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 22 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಬೆಳಿಗ್ಗೆ 11.30ರ ಸುಮಾರಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿದ ಎಬಿವಿಪಿ ಕಾರ್ಯ­ಕರ್ತರು, ಕುಮಾರ­ಕೃಪ ರಸ್ತೆಯಲ್ಲಿರುವ ಮುಖ್ಯ­ಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಜಾಥಾ ಹೊರಟರು. ಆದರೆ, ಆನಂದ್‌­ರಾವ್‌ ವೃತ್ತದ ಬಳಿ ಪೊಲೀಸರು ಬ್ಯಾರಿ­ಕೇಡ್‌ಗಳನ್ನು ಹಾಕಿ ಅವರನ್ನು ಅಡ್ಡಗ­ಟ್ಟಿ­ದರು. ಇದರಿಂದಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕ­ಮಕಿ ನಡೆಯಿತು. ಆಗ ಮುಂಜಾ­ಗ್ರತಾ ಕ್ರಮವಾಗಿ ಪೊಲೀಸರು 22  ಪ್ರತಿಭಟನಾಕಾರರನ್ನು ಬಂಧಿಸಿದರು.

ಇದರಿಂದ ಆಕ್ರೋಶಗೊಂಡ ಪ್ರತಿಭಟ­ನಾ­ಕಾರರು, ‘ಅತ್ಯಾಚಾರ ಪ್ರಕರಣದ ಆರೋಪಿ­ಗಳನ್ನು ಪತ್ತೆ ಮಾಡುವಲ್ಲಿ ವಿಫಲ­ವಾಗಿರುವ ಪೊಲೀಸರು, ಪ್ರತಿಭಟ­ನಾ­ಕಾರರ ಮೇಲೆ ಬಲ­ಪ್ರಯೋಗ ಮಾಡು­ತ್ತಿರುವುದು ವಿಪರ್ಯಾಸ. ಬಂಧಿ­­ತ­ರನ್ನು ಕೂಡಲೇ ಬಿಡುಗಡೆ ಮಾಡಿ. ಇಲ್ಲವೇ, ನಮ್ಮನ್ನೂ  ಬಂಧಿಸಿ’ ಎಂದು ಪಟ್ಟು ಹಿಡಿದು ಆನಂದ್‌­ರಾವ್‌ ವೃತ್ತದಲ್ಲೇ ಧರಣಿ ಕುಳಿತರು.

ಈ ವೇಳೆ ಸ್ಥಳಕ್ಕೆ ಬಂದ ಹಿರಿಯ ಪೊಲೀಸ್‌ ಅಧಿ­ಕಾರಿಗಳು, ಸುಮಾರು ಅರ್ಧ ತಾಸು ಮಾತು­ಕತೆ  ನಡೆಸಿ ಪ್ರತಿಭ­ಟ­ನಾಕಾರರ ಮನವೊ­ಲಿ­ಸು­ವಲ್ಲಿ ಯಶ­ಸ್ವಿ­ಯಾದರು. ಬಳಿಕ 10 ಮಂದಿ ಸದ­ಸ್ಯರ ನಿಯೋಗ ಕಾನೂನು ಸುವ್ಯವಸ್ಥೆ ವಿಭಾ­ಗದ ಹೆಚ್ಚು­ವರಿ ಪೊಲೀಸ್ ಕಮಿಷ­ನರ್ ಅಲೋಕ್ ಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

‘ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಶಾಲಾ­–­ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿನಿ­ಯರ ರಕ್ಷಣೆಗೆ ಪ್ರತ್ಯೇಕ ಸಮಿತಿ ರಚಿಸು­ವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡ­ಲಾಗುವುದು ಎಂದು ಅಲೋಕ್‌­ಕುಮಾರ್ ಅವರು ಭರವಸೆ ನೀಡಿದರು. ಹೀಗಾಗಿ ಹೋರಾಟವನ್ನು ತಾತ್ಕಾಲಿಕ­ವಾಗಿ ಹಿಂಪಡೆಯಲಾಯಿತು’ ಎಂದು ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಪ್ರಶಾಂತ್ ತಿಳಿಸಿದರು.

ಅದೇ ರೀತಿ ದಲಿತ ಸಂಘರ್ಷ ಸಮಿತಿ, ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಸೇರಿ­ದಂತೆ ವಿವಿಧ ಸಂಘಟನೆಗಳ ಸದಸ್ಯರು ಸಹ ನಗರದಲ್ಲಿ ಮಂಗಳವಾರ ಪ್ರತಿಭ­ಟನೆ ಮಾಡಿ, ಗೃಹ ಸಚಿವ ಕೆ.ಜೆ. ಜಾರ್ಜ್‌ ಮತ್ತು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಭದ್ರತೆಗೆ 100 ಪೊಲೀಸರು
‘ಎಬಿವಿಪಿ ಜಾಥಾ ಕಾರಣ ಆನಂದ್‌­ರಾವ್‌ ವೃತ್ತದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ, ಭದ್ರತೆಗೆ ನೂರು ಮಂದಿ ಪೊಲೀಸ­ರನ್ನು ನಿಯೋಜಿ­ಸಲಾಗಿತ್ತು. ಈ ವೇಳೆ ಕೆಲ ಪ್ರತಿಭಟ­ನಾ­ಕಾರರು ಬ್ಯಾರಿಕೇಡ್‌ಗಳನ್ನು ಬೀಳಿಸಿ ಮುನ್ನು­ಗ್ಗಲು ಯತ್ನಿಸಿದರು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು 22 ಮಂದಿ­ಯನ್ನು ಬಂಧಿಸಿ, ಸಂಜೆ 4 ಗಂಟೆಗೆ ಅವ­ರನ್ನು ಬಿಡುಗಡೆ ಮಾಡಲಾಯಿತು’ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.­ರವಿಕಾಂತೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT