ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ಖರಿಗೆ ಪಾಠ ಕಲಿಸಲೆಂದೇ ದಂಗೆ

ಕೋಬ್ರಾಪೋಸ್ಟ್‌ ಮಾರುವೇಷದ ಕಾರ್ಯಾಚರಣೆಯಿಂದ ಬಹಿರಂಗ
Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 1984ರಲ್ಲಿ ಅಂದಿನ ಪ್ರಧಾನಿ ಇಂದಿ­ರಾ­ಗಾಂಧಿ ಅವರ ಹತ್ಯೆ ನಂತರ ದೆಹಲಿ­ಯಲ್ಲಿ ನಡೆದ ಸಿಖ್‌ ವಿರೋಧಿ ಗಲಭೆ ಸಂದರ್ಭದಲ್ಲಿ ಸರ್ಕಾರ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು, ‘‘ಸಿಖ್ಖರಿಗೆ ಪಾಠ ಕಲಿಸುವ’’ ಉದ್ದೇಶ­­­ದಿಂದಲೇ  ನಿಷ್ಕ್ರಿಯವಾಗಿದ್ದರು ಎಂಬ ಸತ್ಯವನ್ನು ಸುದ್ದಿ ಅಂತರ್ಜಾಲ ತಾಣ ಕೋಬ್ರಾ­ಪೋಸ್ಟ್  ದೃಢಪಡಿಸಿದೆ.

ಈ ಸತ್ಯವನ್ನು ಬಯಲಿಗೆಳೆಯಲು ಕೋಬ್ರಾ­ಪೋಸ್ಟ್, ಮಾರುವೇಷದ ಕಾರ್ಯಾಚರಣೆ ನಡೆಸಿದ್ದು, ಆ ಸಂದರ್ಭ­ದಲ್ಲಿ ದೆಹಲಿ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿ­ಗಳಾಗಿ­ದ್ದವರು  ನೀಡಿರುವ ಹೇಳಿಕೆಗಳನ್ನು  ಪ್ರಕಟಿಸಿದೆ.

ಸಿಖ್‌ ವಿರೋಧಿ ಗಲಭೆಗಳಲ್ಲಿ ಭಾಗಿ­ಯಾದ ಅಪರಾಧಿಗಳ ವಿರುದ್ಧ ತಾವು ಕ್ರಮ ಕೈಗೊಳ್ಳಲು ವಿಫಲವಾಗಿದ್ದನ್ನು ಈ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಆಗ ರಾಜಧಾನಿಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಠಾಣಾ­ಧಿಕಾರಿ­ಗಳಾಗಿದ್ದವರೊಂದಿಗೆ ನಡೆಸಿದ ಸಂದರ್ಶನ­ಗಳನ್ನು ಅಂತರ್ಜಾಲ ತಾಣವು ಧ್ವನಿಮುದ್ರಿಸಿಕೊಂಡಿದೆ.

ಗಲಭೆ ಸಮಯದಲ್ಲಿ ದೆಹಲಿಯಲ್ಲಿ ಪೊಲೀಸ್‌ ಮುಖ್ಯಸ್ಥ­ರಾಗಿದ್ದ ಎಸ್‌.ಸಿ.­ಟಂಡನ್‌ ಯಾವುದೇ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸದೆ ನುಣುಚಿ­ಕೊಂಡರೆ, ಹೆಚ್ಚುವರಿ ಪೊಲೀಸ್‌ ಆಯುಕ್ತ­ರಾಗಿದ್ದ ಗೌತಮ್‌ ಕೌಲ್‌ ಗಲಭೆಗಳ ಬಗ್ಗೆ ತಮಗೆ ನೇರವಾಗಿ ಮಾಹಿತಿ ಲಭ್ಯವಿತ್ತು ಎಂಬ ವರದಿಗಳನ್ನು ಬಲ­ವಾಗಿ ಅಲ್ಲಗಳೆದರೆಂದುಕೋಬ್ರಾ­ಪೋಸ್ಟ್ ವರದಿ ಹೇಳಿದೆ.

ಸಿಖ್ಖರನ್ನು ಗುರಿಯಾಗಿಸಿಕೊಂಡು ನಡೆದ ಗಲಭೆಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ನಿರ್ಲಕ್ಷಿಸಿದ್ದರು. ಇದೇ ವೇಳೆ ಬೆಂಕಿ ಹಚ್ಚುವಿಕೆ, ಗಲಭೆಗಳ ಕುರಿತು ಪೊಲೀಸ್‌ ನಿಯಂತ್ರಣ ಕೊಠಡಿಗೆ ಬಂದ ಮಾಹಿತಿಗಳ ಪೈಕಿ ಕೇವಲ ಶೇ 2ರಷ್ಟನ್ನು ಮಾತ್ರ ದಾಖಲಿಸಿಕೊಳ್ಳಲಾಗಿತ್ತು ಎಂಬ ಸಂಗತಿ­ಗಳು ವರದಿಯಲ್ಲಿವೆ.

ರಾಜಕೀಯ ಸ್ವರೂಪ: 1984ರ ಸಿಖ್‌ ವಿರೋಧಿ ಗಲಭೆಗಳನ್ನು ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳಗಳು ಸೇರಿ ರಾಜಕೀಕರಣಗೊಳಿಸುತ್ತಿವೆ ಎಂದು ಕಾಂಗ್ರೆಸ್‌ ಆಪಾದಿಸಿದೆ.

ಈ ಗಲಭೆಗಳಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ಒಬ್ಬ ಚುನಾವಣಾ ಏಜೆಂಟ್‌ ಕೂಡ ಭಾಗಿಯಾಗಿದ್ದರು ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT