ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಪೂರಕ ಸೌಕರ್ಯ: ನಾರಾಯಣಮೂರ್ತಿ

ವಿಪ್ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ
Last Updated 24 ನವೆಂಬರ್ 2014, 10:04 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಇನ್ಫೊಸಿಸ್‌ ಆರಂಭಿಸುವ ಮತ್ತು ಮಾಹಿತಿ ತಂತ್ರಜ್ಞಾನದ ವ್ಯಾಪ್ತಿಯನ್ನು ಎಲ್ಲೆಡೆ ವಿಸ್ತರಿಸುವ ಉದ್ದೇಶವಿದ್ದರೂ ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸೌಕರ್ಯಗಳಿಲ್ಲ ಎಂದು ಇನ್ಫೊಸಿಸ್‌ ಸಂಸ್ಥೆ ಸಂಸ್ಥಾಪಕ ಎನ್‌.ಆರ್‌.ನಾರಾ­ಯ­ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ಮತ್ತು ಮಂಗಳೂರಿನಲ್ಲಿ ಇನ್ಫೊಸಿಸ್‌ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಹುಬ್ಬಳ್ಳಿಯಲ್ಲೂ ಕೂಡ ಆರಂಭವಾಗಲಿದೆ. ಆದರೆ ಬೆಂಗಳೂರು ಹೊರತುಪಡಿಸಿ ಅಲ್ಲಿ ಎಲ್ಲಿಯೂ  ನಿರೀಕ್ಷಿತ ಮಟ್ಟದ ಸೌಕರ್ಯಗಳಿಲ್ಲ. ಸಂಸ್ಥೆಯ ಕಾರ್ಯ­ನಿರ್ವಹಣೆ ಮತ್ತು ಉದ್ಯೋಗಿಗಳ ಇರುವಿಕೆಗೆ ಪೂರಕವಾದ ವಾತಾವರಣವಿಲ್ಲ ಎಂದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪಂಚ­ತಾರಾ ಹೋಟೆಲ್‌ ಮತ್ತು ಇನ್ನಿತರ ಅತ್ಯಾಧುನಿಕ ಸೌಕರ್ಯಗಳು ಇರದಿದ್ದರೆ ಇನ್ಫೊಸಿಸ್‌ನಂತಹ ಸಂಸ್ಥೆಯ ಕಾರ್ಯ ನಿರ್ವಹಣೆ ಕಷ್ಟವಾಗುತ್ತದೆ. ತಿರುವನಂತಪುರಂ, ಭುವನೇಶ್ವರದಲ್ಲೂ ಇಂತ­ಹದ್ದೇ ಸಮಸ್ಯೆಗಳಿವೆ. ವಿದೇಶದಿಂದ ಬಂದು ಹೋಗುವ ಜನರಿಗೆ ಇಲ್ಲಿ ತಂಗಲು ಅಚ್ಚುಕಟ್ಟಾದ ವ್ಯವಸ್ಥೆಯಿರಬೇಕು ಮತ್ತು ಇತರೆ ಸೌಕರ್ಯಗಳು ದೊರೆಯುವಂತಿರಬೇಕು ಎಂದು ಅವರು ತಿಳಿಸಿದರು.

ಪ್ರಶಸ್ತಿ ಪ್ರದಾನ: ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಐವರು ಸಾಧಕರನ್ನು ಕೂಡ ಅಭಿನಂದಿಸಲಾಯಿತು.  ನಾರಾಯಣಮೂರ್ತಿ ಮತ್ತು ಪತ್ನಿ ಸುಧಾಮೂರ್ತಿ ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.

ಅಂತರರಾಷ್ಟ್ರೀಯ ಸಂಬಂಧಗಳ ತಜ್ಞ ಡಾ.ಕೃಷ್ಣ­ಮೂರ್ತಿ ವೆಂಕಟರಾಮ್, ವ್ಯಂಗ್ಯ­ಚಿತ್ರ­ಕಾರ ಬಿ.ವಿ.ಪಾಂಡುರಂಗರಾವ್‌, ವಿಜ್ಞಾನಿ ಎನ್‌.ಆರ್‌.ಸಮರ್ಥರಾಮ್‌, ಇಂಡಿಯಾ ಇನ್ಫೊ­ಲೈನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಕ್ರಮಧಾತಿ ಶ್ರೀಧರ್ ಮತ್ತು ಭಾರತೀಯ ಸೇನೆಯ ಎಲೆಕ್ಟ್ರಾ­ನಿಕ್‌ ಎಂಜಿನಿಯರ್ ಕ್ಯಾಪ್ಟನ್‌ ಎಂ.ವಿ.ಸುನೀಲ್ ಕುಮಾರ್‌ ಅವರನ್ನು ಅಭಿನಂದಿಸಲಾಯಿತು. ಹಣ್ಣುಹಂಪಲು, ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.

ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳಾದ ಎಸ್‌.­ಆದಿತ್ಯಾ, ಎನ್‌.ಎಸ್‌.ರೇವತಿ, ಎ.ಯು.ವರ್ಷಾ, ಅಭಯ್‌ ಇನಾಮದಾರ್, ಚಂದನಾ, ಎನ್‌.ಮೇಘನಾ, ಎಂ.ಅನೂಪ್‌ ಕೃಷ್ಣನ್‌ ಮತ್ತು ಎಸ್‌.ಆರ್‌.ಲಕ್ಷ್ಮಿ. ಪಿಯುಸಿ ವಿದ್ಯಾರ್ಥಿಗಳಾದ ಕೆ.ಅನ್ನಪೂರ್ಣಾ, ಎ.ಎಸ್‌.ಸ್ನೇಹಾ, ಬಿ.ಕೆ.ಪ್ರಕೃತಿ, ಎಚ್‌.ವಿ.ಅಕ್ಷತಾ, ಸಿ.ಎಸ್‌.ಭಾರ್ಗವ ಕಸ್ತೂರಿ ಮತ್ತು ಎಸ್‌.ದೀಪ್ತಿ. ಬೆಂಗಳೂರು ವಿಶ್ವವಿದ್ಯಾಲ­ಯದ ಗಣಿತ ಎಂ.ಎಸ್ಸಿ ವಿದ್ಯಾರ್ಥಿನಿ ಎಚ್‌.ಆರ್‌.­ಶ್ವೇತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಾಲ್ಲೂಕಿನ ಅಭಿವೃದ್ಧಿಗೆ ಮನವಿ: ಎನ್‌.ಆರ್‌.­­ನಾರಾಯಣಮೂರ್ತಿ ಅವರಿಗೆ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಜನರ ಪರವಾಗಿ ಮನವಿಪತ್ರ ನೀಡಿದ ಶಾಸಕ ಎಂ.ರಾಜಣ್ಣ ಅವರು ಜನರ ಆಶಯ ಈಡೇರಿಸುವಂತೆ ಕೋರಿದರು.
ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಬೃಹತ್‌ ಇನ್ಫೊಸಿಸ್‌ ಸಭಾಂಗಣ ಇಲ್ಲವೇ ಕಲಾಭವನ ನಿರ್ಮಿಸಬೇಕು. ತಾಲ್ಲೂಕಿನ ಜನರಿಗೆ ಉದ್ಯೋಗಾವಕಾಶ ಮತ್ತು ಮಾರ್ಗದರ್ಶನ ನೀಡಬಲ್ಲ ಉನ್ನತ ಮಟ್ಟದ ಇನ್ಫೊಸಿಸ್‌ ಕೌಶಲಾಭಿವೃದ್ಧಿ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಇನ್ಫೊಸಿಸ್‌ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಆದಾಯ ಗಳಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.

ತಾಲ್ಲೂಕು, ಪಟ್ಟಣ ಇಲ್ಲವೇ ಪಂಚಾಯಿ­ತಿಯೊಂದನ್ನು ದತ್ತು ತೆಗೆದುಕೊಂಡು ಅಂತರ­ರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು. ಅಂತರರಾಷ್ಟ್ರೀಯ ಮಟ್ಟದ ಶಾಲೆ ಆರಂಭಿ­ಸ­ಬೇಕು. ಇಲ್ಲಿನ ಜನರಿಗೆ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಬಲ್ಲ ಮತ್ತು ಚಿಕಿತ್ಸೆ ನೀಡಬಲ್ಲ ಅತ್ಯಾಧುನಿಕ ಮಾದರಿಯ ಆಸ್ಪತ್ರೆ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.

ಮನವಿಪತ್ರ ಸ್ವೀಕರಿಸಿದ ಎನ್‌.ಆರ್‌.ನಾರಾಯಣಮೂರ್ತಿ ಮಾತನಾಡಿ, ಬಾಯಿಯಿಂದ ಹೇಳುವುದಕ್ಕಿಂತ ಅದನ್ನು ಕಾರ್ಯಗತಗೊಳಿಸುವಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲ ಮನವಿಗಳನ್ನು ಈಡೇರಿಸುತ್ತೇನೆಂದು ಈಗಲೇ ಭರವಸೆ ನೀಡುವುದಿಲ್ಲ. ನಿಮ್ಮ ಎಲ್ಲ ಮನವಿಗಳನ್ನು ಇನ್ಫೊಸಿಸ್‌ ಸಂಸ್ಥೆ ಮುಂದಿಡುತ್ತೇನೆ. ಸ್ಥಳೀಯ ಮಟ್ಟದಲ್ಲಿ ಯಾವುದೆಲ್ಲ ಸೌಕರ್ಯಗಳು ಲಭ್ಯ ಇವೆ ಎಂಬುದನ್ನು ಪರಿಶೀಲಿಸಿ ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು.

ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣ ರಾವ್‌, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ವಿ.ಕೃಷ್ಣ, ಖಜಾಂಚಿ ಎನ್.ಶ್ರೀಕಾಂತ್, ರಾಜ್ಯ ಚುನಾವಣಾ ಆಯೋ­ಗದ ಕಾರ್ಯದರ್ಶಿ ಎಸ್‌.ಪಿ.ಕುಲಕರ್ಣಿ, ಹಿರಿಯ ವಕೀಲ ಬಿ.ಸಿ.ಸೀತಾರಾಮರಾವ್‌, ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನಕುಮಾರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಕೆ.ಗುರುರಾಜ್‌ರಾವ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT