ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟ್‌ ಪ್ಯಾಕ್‌ಗಳ ಮೇಲೆ ಶೇ 85 ಚಿತ್ರಸಹಿತ ಎಚ್ಚರಿಕೆ ಸಂದೇಶ ಇರಲಿ

Last Updated 26 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಗರೇಟ್‌ ಪ್ಯಾಕ್‌ಗಳ ಮೇಲೆ ಶೇ 85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶ ಇರಬೇಕು ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶದಿಂದ ಹಿಂದೆ ಸರಿಯಬಾರದು ಎಂದು ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯ ಡಾ. ಯು.ಎಸ್‌. ವಿಶಾಲ್‌ ರಾವ್‌ ಒತ್ತಾಯಿಸಿದರು.

ಈ ಸಂಬಂಧ ಕೇಂದ್ರ ಸರ್ಕಾರ 2014ರ ಅಕ್ಟೋಬರ್‌ 15ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ ಇತ್ತೀಚೆಗೆ ಸಂಸದೀಯ ಸಮಿತಿಯೊಂದು ಸಿಗರೇಟ್ ಪ್ಯಾಕ್‌ಗಳ ಎರಡೂ ಬದಿ ಶೇ.50ರಷ್ಟು ಎಚ್ಚರಿಕೆ ಸಂದೇಶ ಚಿತ್ರಸಹಿತ ಮುದ್ರಿಸಬಹುದು ಎಂದು ಹೇಳಿದೆ. ಈ ನಿರ್ಧಾರ ಸರಿಯಲ್ಲ ಎಂದು ಅವರು ಶನಿವಾರ ಭಾರತೀಯ ವಿದ್ಯಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಂಸದೀಯ ಸಮಿತಿ ಸಭೆಯಲ್ಲಿ ನಾನೂ ಪಾಲ್ಗೊಂಡು ಆರೋಗ್ಯ ಹಕ್ಕಿನ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಹೇಳಿದ್ದೆ. ತಂಬಾಕು ಉತ್ಪನ್ನ ಕಂಪನಿಗಳು ಜಾಹೀರಾತು ಪ್ರಮಾಣ ಗಣನೀಯವಾಗಿ ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಹೇಳಿದ್ದೆ’ ಎಂದರು.

ಲೋಕಸತ್ತಾ ಪಕ್ಷದ ಸದಸ್ಯ ಡಾ. ಭಾನುಪ್ರಕಾಶ್, ‘ಸಮಿತಿ ನೀಡಿರುವ ವರದಿ ತಂಬಾಕು ಉತ್ಪನ್ನ ಕಂಪನಿಗಳೊಂದಿಗೆ ರಾಜಿ ಮಾಡಿಕೊಂಡಂತಿದೆ. ಇದು ಬಡ ವರ್ಗದ ಜನರ ಸಾವಿಗೆ ಸಬ್ಸಿಡಿ ನೀಡಿದಂತಿದೆ’ ಎಂದರು.

ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್ ಹೆಲ್ತ್‌ನ ಡಾ.ಉಪೇಂದ್ರ ಭೋಜಾನಿ, ‘ಬೀಡಿ ಉದ್ಯಮದ ದೊರೆ ಮತ್ತು ಸಂಸದ ಶ್ಯಾಂಚರಣ್‌ ಗುಪ್ತಾ ಅವರೇ ಸಂಸದೀಯ ಸಮಿತಿ ಸದಸ್ಯರಾಗಿರುವುದು ವಿವಾದಕ್ಕೆ ಎಡೆಮಾಡಿದೆ. ರಾಜಿ ಸೂತ್ರದ ಹಿಂದೆ  ಉದ್ಯಮದ ಪ್ರಭಾವ ಇದ್ದೇ ಇರುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT