ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡ್ನಿಯಲ್ಲಿ ಕರಗಿದ ಟ್ರೋಫಿಯ ಕನಸು

ಸ್ಟೀವನ್‌ ಸ್ಮಿತ್‌ ಶತಕ, 95 ರನ್‌ ಗೆಲುವು ಪಡೆದ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ; ಆತಿಥೇಯರ ತಿರುಗೇಟು
Last Updated 26 ಮಾರ್ಚ್ 2015, 19:58 IST
ಅಕ್ಷರ ಗಾತ್ರ

ಸಿಡ್ನಿ: ನಾಲ್ಕು ಬಾರಿ  ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಶಿಸ್ತುಬದ್ಧ ಆಟದ ಮುಂದೆ ಹಾಲಿ ಚಾಂಪಿಯನ್‌ ಭಾರತ ತಂಡ ತಲೆ ತಗ್ಗಿಸಬೇಕಾಯಿತು. ಮಹತ್ವದ ಪಂದ್ಯದಲ್ಲಿ ಕೆಟ್ಟ ಆಟವಾಡಿದ ದೋನಿ ಪಡೆ ಸೆಮಿಫೈನಲ್‌ನಲ್ಲಿ ಸೋಲು ಕಂಡು 2015ನೇ ವಿಶ್ವಕಪ್‌ ಟೂರ್ನಿಯಿಂದ ಹೊರ ಬಿದ್ದಿತು.

ಸಿಡ್ನಿ ಕ್ರಿಕೆಟ್‌ ಅಂಗಳದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯರು 95 ರನ್‌ಗಳ ಜಯ ಪಡೆದರು. ಭಾರತ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದು ಇದು ಮೂರನೇ ಬಾರಿ. ಈ ಹಂತದಲ್ಲಿ ಒಮ್ಮೆಯೂ ಸೋಲು ಕಂಡಿರದಿದ್ದ ಕಾಂಗರೂ ನಾಡಿನ ಪಡೆ ತನ್ನ ಅಜೇಯ ಓಟವನ್ನು ಮುಂದುವರಿಸಿತು.

ಸವಾಲಿನ ಗುರಿ ನೀಡಿ ಹಾಲಿ ಚಾಂಪಿಯನ್ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಆತಿಥೇಯ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಲೆಕ್ಕಾಚಾರಕ್ಕೆ ಬೇಗನೆ ಫಲ ಲಭಿಸಿತು. ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 328 ರನ್‌ ಕಲೆ ಹಾಕಿತು. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇದುವರೆಗೂ ಯಾವ ತಂಡವೂ 300ಕ್ಕಿಂತ ಹೆಚ್ಚು ರನ್‌ ಗಳಿಸಿರಲಿಲ್ಲ. ಎರಡು ದಿನಗಳ ಹಿಂದೆ  ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನ್ಯೂಜಿಲೆಂಡ್ ಗಳಿಸಿದ್ದ 299 ರನ್‌ ಹಿಂದಿನ ಅತ್ಯಧಿಕ ಮೊತ್ತವೆನಿಸಿತ್ತು.

ಈ ಸಲದ ವಿಶ್ವಕಪ್‌ನಲ್ಲಿ ಭಾರತ ಏಳು ಪಂದ್ಯಗಳನ್ನು ಆಡಿದೆ. ದೋನಿ ಪಡೆಯ ಎದುರು ಯಾವ ತಂಡವೂ ಪೂರ್ಣ 50 ಓವರ್‌ಗಳನ್ನು ಆಡಿರಲಿಲ್ಲ. ಈ ಅಂಶವನ್ನು ಚೆನ್ನಾಗಿ ಗಮನಿಸಿದ್ದ ಆಸ್ಟ್ರೇಲಿಯಾ ತಂಡ ಪೂರ್ಣ ಓವರ್‌ಗಳನ್ನು ಆಡವಲ್ಲಿ ಗಮನ ಹರಿಸಿತ್ತು.  ಆದರೆ, ಈ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಡೇವಿಡ್ ವಾರ್ನರ್‌ (12) ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಉಮೇಶ್‌ ಯಾದವ್ ಬೌಲಿಂಗ್‌ನಲ್ಲಿ ಕೊಹ್ಲಿ ಕೈಗೆ ಕ್ಯಾಚ್‌ ನೀಡಿದರು.

ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿಯೇ ಆಘಾತ ನೀಡಿದ ಖುಷಿ ದೋನಿ ಪಾಳೆಯದಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್‌ ಮತ್ತು ಸ್ಟೀವನ್‌ ಸ್ಮಿತ್‌ ಎರಡನೇ ವಿಕೆಟ್‌ಗೆ 31 ಓವರ್‌ಗಳಲ್ಲಿ 182 ರನ್ ಕಲೆ ಹಾಕಿದರು. ಇದರಿಂದ ಆತಿಥೇಯ ತಂಡಕ್ಕೆ ಸವಾಲಿನ ಗುರಿ ನೀಡಲು ಸಾಧ್ಯವಾಯಿತು.

ಬಲಗೈ ಬ್ಯಾಟ್ಸ್‌ಮನ್‌ ಫಿಂಚ್‌ 116 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 81 ರನ್ ಗಳಿಸಿದರು. ಎರಡು ಗಂಟೆ 50 ನಿಮಿಷ ಕ್ರೀಸ್‌ನಲ್ಲಿದ್ದು ಸ್ಮಿತ್‌ಗೆ ಉತ್ತಮ ಬೆಂಬಲ ನೀಡಿದರು. ಭಾರತ ಎದುರು ಉತ್ತಮ ದಾಖಲೆ ಹೊಂದಿರುವ ಸ್ಮಿತ್‌ ಮಹತ್ವದ ಪಂದ್ಯದಲ್ಲಿ ಅಬ್ಬರಿಸಿದರು.

ಮೂರು ತಿಂಗಳ ಹಿಂದೆ ಭಾರತ ತಂಡ ಕಾಂಗರೂಗಳ ನಾಡಿನ ನೆಲದಲ್ಲಿ ಟೆಸ್ಟ್‌ ಸರಣಿ ಆಡಿ ಸೋತಿತ್ತು. ಕ್ಲಾರ್ಕ್‌ ಗಾಯಗೊಂಡಿದ್ದ ಕಾರಣ ಸ್ಮಿತ್‌ ತಂಡವನ್ನು ಮುನ್ನಡೆಸಿದ್ದರು. ಜೊತೆಗೆ, ದೋನಿ ಪಡೆಯ ಬೌಲರ್‌ಗಳನ್ನು ಚೆನ್ನಾಗಿಯೇ ಕಾಡಿದ್ದರು. ಅವರ ಸೊಗಸಾದ ಆಟ ಏಕದಿನ ಕ್ರಿಕೆಟ್‌ನಲ್ಲೂ ಮುಂದುವರಿಯಿತು. 93 ಎಸೆತಗಳನ್ನು ಎದುರಿಸಿದ ಸ್ಮಿತ್‌ 105 ರನ್‌ ಬಾರಿಸಿದರು. ಬೌಂಡರಿ (11) ಮತ್ತು ಸಿಕ್ಸರ್‌ಗಳ (2) ಮೂಲಕವೇ 56 ರನ್‌ ಕಲೆ ಹಾಕಿದರು.

53 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸ್ಮಿತ್‌ 89 ಎಸೆತಗಳಲ್ಲಿ ಮೂರಂಕಿ ಮುಟ್ಟಿದರು. 33ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಗಳಿಸಿದ್ದರು. ಇದೇ ವರ್ಷ ಹೋಬರ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಈ ಮೊದಲು ಶತಕ ಬಾರಿಸಿದ್ದರು. ಸ್ಮಿತ್‌ ಭಾರತದ ಎದುರು ಗಳಿಸಿದ ಚೊಚ್ಚಲ ಶತಕವಿದು. ಇವರ ಆಟದ ಬಲದಿಂದ ತವರಿನ ತಂಡಕ್ಕೆ ಆರಂಭದಿಂದಲೇ ವೇಗವಾಗಿ ರನ್‌ ಗಳಿಸಲು ಸಾಧ್ಯವಾಯಿತು. ಮೊದಲ 15 ಓವರ್‌ಗಳು ಪೂರ್ಣಗೊಂಡಾಗ ಆಸ್ಟ್ರೇಲಿಯಾ 82 ರನ್‌ಗಳನ್ನು ಗಳಿಸಿತ್ತು.

ನಾಗಪುರದ ಉಮೇಶ್‌ ಯಾದವ್‌  ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಕ್ಲಾರ್ಕ್‌ ಪಡೆ 36 ರನ್‌ ಕಲೆ ಹಾಕುವ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಎರಡು ವಿಕೆಟ್‌ಗಳು ಯಾದವ್ ಪಾಲಾದವು. ಗಟ್ಟಿ ಬುನಾದಿ ನಿರ್ಮಿಸಿದ್ದ ಫಿಂಚ್‌ ಮತ್ತು ಸ್ಮಿತ್‌ ಔಟಾಗುತ್ತಿದ್ದಂತೆ ತಂಡದ ರನ್‌ ವೇಗವೂ ಕುಸಿಯಿತು. ಈ ತಂಡ 66 ರನ್‌ ಗಳಿಸುವ ಅಂತರದಲ್ಲಿ ಐದು ವಿಕೆಟ್‌ ಕಳೆದುಕೊಂಡಿತು. ಮ್ಯಾಕ್ಸ್‌ವೆಲ್‌ (23), ಶೇನ್ ವಾಟ್ಸನ್‌ (28) ಮತ್ತು ನಾಯಕ ಕ್ಲಾರ್ಕ್‌ (10) ಬೇಗನೆ ಪೆವಿಲಿಯನ್‌ ಸೇರಿದರು. ಮೋಹಿತ್‌ ಶರ್ಮ ಎರಡು ವಿಕೆಟ್‌ ಪಡೆದರೆ, ಸ್ಪಿನ್ನರ್‌ ಅಶ್ವಿನ್‌ ಪಾಲಿಗೆ ಒಂದು ವಿಕೆಟ್‌ ಲಭಿಸಿತು.

ವೈಫಲ್ಯ: ಆಸ್ಟ್ರೇಲಿಯಾದ ಇನಿಂಗ್ಸ್‌ ಪೂರ್ಣಗೊಳ್ಳುತ್ತಿದ್ದಂತೆಯೇ ‘ಭಾರತಕ್ಕೆ ಗೆಲುವು ಕಷ್ಟ’ ಎನ್ನುವ ಸಂದೇಶಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡ ತೊಡಗಿದವು. ಟಿವಿ ಚರ್ಚೆಯಲ್ಲಿ ತೊಡಗಿದ್ದ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್ ಕೂಡ ಇದೇ ಮಾತು ಹೇಳಿದ್ದರು. ‘ಆಸ್ಟ್ರೇಲಿಯಾ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. 300ಕ್ಕಿಂತಲೂ ಹೆಚ್ಚು ರನ್‌ ಗುರಿ ಮುಟ್ಟುವುದು ಭಾರತಕ್ಕೆ ಕಷ್ಟ’ ಎಂದು ದ್ರಾವಿಡ್‌ ನುಡಿದಿದ್ದರು. ನಂತರದ ಮೂರೂವರೆ ಗಂಟೆಯಲ್ಲೇ ಭಾರತದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಬಯಲಾಯಿತು.

ರೋಹಿತ್‌ ಶರ್ಮ (34, 48ಎಸೆತ, 1 ಬೌಂಡರಿ, 2 ಸಿಕ್ಸರ್‌) ಮತ್ತು ಶಿಖರ್‌ ಧವನ್ (45, 41ಎಸೆತ, 6ಬೌಂ., 1 ಸಿ.,) ರನ್‌ ಗಳಿಸಿ ಮೊದಲ ವಿಕೆಟ್‌ಗೆ 76 ರನ್  ಕಲೆ ಹಾಕಿದರು. ಇವರು ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಭಾರತ ಉತ್ತಮ ರನ್‌ ರೇಟ್‌ ಹೊಂದಿತ್ತು. ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ ಗಳಿಸಿದ್ದ 55 ರನ್‌ಗಳೇ ಇದಕ್ಕೆ ಸಾಕ್ಷಿ.

13ನೇ ಓವರ್‌ನಲ್ಲಿ ಧವನ್‌ ಔಟಾಗುತ್ತಿದ್ದಂತೆಯೇ ಭಾರತದ ಕುಸಿತ ಆರಂಭವಾಯಿತು. ಭಾರಿ ಭರವಸೆ ಮೂಡಿಸಿದ್ದ ವಿರಾಟ್‌ ಕೊಹ್ಲಿ (1), ಸುರೇಶ್ ರೈನಾ (7), ರವೀಂದ್ರ ಜಡೇಜ (16), ಆರ್‌. ಅಶ್ವಿನ್ (5) ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿದರು. ಆದರೆ, ದೋನಿ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿ ಇದ್ದ ಕಾರಣ ಭಾರತದ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಹಸಿರಾಗಿತ್ತು. ಈ ಜೋಡಿ ಐದನೇ ವಿಕೆಟ್‌ಗೆ 70 ರನ್‌ ಕಲೆ ಹಾಕಿತು. ದೋನಿ ಆರನೇ ವಿಕೆಟ್‌ಗೆ ಜಡೇಜ ಜೊತೆ 30 ರನ್‌ ಗಳಿಸಿದರು.

ಜಾರ್ಖಂಡ್‌ನ ಬ್ಯಾಟ್ಸ್‌ಮನ್‌ 43ನೇ ಓವರ್‌ನ ಮೊದಲ ಎರಡೂ ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದಾಗಲಂತೂ ‘ಭಾರತ ಗೆದ್ದೇ ಗೆಲ್ಲುತ್ತದೆ’ ಎನ್ನುವ ಭರವಸೆ ಅಭಿಮಾನಿಗಳಲ್ಲಿ ಗಟ್ಟಿಯಾಗತೊಡಗಿತು. ಆದರೆ, ಮಿಡ್‌ವಿಕೆಟ್‌ ಬಳಿ ಫೀಲ್ಡಿಂಗ್‌ ನಿಂತಿದ್ದ ಮ್ಯಾಕ್ಸ್‌ವೆಲ್‌ ಅಮೋಘವಾಗಿ ಚೆಂಡನ್ನು ಹಿಡಿದು ವಿಕೆಟ್‌ಗೆ ನೇರ ಥ್ರೋ ಎಸೆದು ದೋನಿ ಅವರನ್ನು ರನ್‌ ಔಟ್‌ ಬಲೆಗೆ ಸಿಲುಕಿಸಿದರು. ಆಗ, ಆಸ್ಟ್ರೇಲಿಯಾ ಪಂದ್ಯ ಗೆದ್ದಷ್ಟೇ ಸಂಭ್ರಮಿಸಿತು. ಗ್ಯಾಲರಿಯಲ್ಲಿದ್ದ ಭಾರತ ತಂಡದ ಅಭಿಮಾನಿಗಳ ದುಖಃ ಕಣ್ಣೀರಾಗಿ ಹರಿಯಿತು. ಟಿವಿ ಮುಂದೆ ಕುಳಿತಿದ್ದ ಅದೆಷ್ಟೋ ಕ್ರಿಕೆಟ್‌ ಪ್ರೇಮಿಗಳು ಎದ್ದು ಹೋದರು.

ಗೆಲುವಿನ ದಡ ಸೇರಿಸಲಾಗದ ಬೇಸರದಲ್ಲಿದ್ದ ದೋನಿ ತಲೆ ತಗ್ಗಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರದ 20 ಎಸೆತಗಳಲ್ಲಿ ಭಾರತದ ಹೋರಾಟ ಅಂತ್ಯ ಕಂಡಿತು. ಅಶ್ವಿನ್‌, ಮೋಹಿತ್‌ ಶರ್ಮ ಮತ್ತು ಯಾದವ್ ಯಾವ ಹೋರಾಟವನ್ನೂ ತೋರದೆ ಔಟಾದರು.
ಜೇಮ್ಸ್‌ ಫಾಕ್ನರ್‌ 46ನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತದಲ್ಲಿ ಅಶ್ವಿನ್ ಮತ್ತು ಮೋಹಿತ್‌ ಅವರ ವಿಕೆಟ್‌ ಪಡೆದರು.

ಮಿಷೆಲ್‌ ಸ್ಟಾರ್ಕ್‌ (28ಕ್ಕೆ2), ಮಿಷೆಲ್‌ ಜಾನ್ಸನ್‌ (50ಕ್ಕೆ2) ಮತ್ತು ಫಾಕ್ನರ್‌ (59ಕ್ಕೆ3) ವಿಕೆಟ್‌ ಉರುಳಿಸಿ ಭಾರತದ ಫೈನಲ್‌ ಪ್ರವೇಶದ ಕನಸನ್ನು ನುಚ್ಚು ನೂರು ಮಾಡಿದರು. ಜೊತೆಗೆ, ಆತಿಥೇಯ ತಂಡ 2011ರ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೂ ಸೇಡು ತೀರಿಸಿಕೊಂಡಿತು.

ಏಕದಿನ ಕ್ರಿಕೆಟ್‌ನಲ್ಲಿ ಕೆಲ ಬದಲಾ ವಣೆಗಳ ಅಗತ್ಯವಿದೆ.  ಇಲ್ಲದಿದ್ದರೆ   ಇದು ಕೂಡಾ  ಚುಟುಕು ಕ್ರಿಕೆಟ್‌ ಎನಿಸುವ ಸಾಧ್ಯತೆಯಿದೆ.

- ಎಂ.ಎಸ್‌. ದೋನಿ, ಭಾರತ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT