ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ

ಅಸ್ಖಲಿತ ಮಾತುಗಾರಿಕೆಯ ‘ಸಿದ್ಧ’
Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

2002ರಲ್ಲಿ ಮಂಗಳೂರು ಪುರಭವನದಲ್ಲಿ ಮಳೆಗಾಲದ ಯಕ್ಷಗಾನ. ‘ಕಾರ್ತವೀರ್ಯಾರ್ಜುನ’, ‘ಲಂಕಾ ದಹನ’, ‘ರಾವಣ ವಧೆ’ ಎಂಬ ಮೂರು ಪ್ರಸಂಗಗಳ ಪ್ರದರ್ಶನ. ರಾವಣ ವಧೆಯಲ್ಲಿ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ‘ರಾವಣ’, ಮಲ್ಪೆ ವಾಸುದೇವ ಸಾಮಗರ ‘ರಾಮ’ನ ಪಾತ್ರ. ಇಬ್ಬರೂ ಮಾತಿನ ಮಲ್ಲರು. ಬೆಳಗಿನ ಜಾವ ನಾಲ್ಕಕ್ಕೆ ಈ ಪ್ರಸಂಗ ಶುರು. ಇಬ್ಬರೂ ಅಪ್ರತಿಮ ವಾಕ್ಚಾತುರ್ಯದ ಮೂಲಕ ಪ್ರಸಂಗಕ್ಕೆ ಕಳೆ ಏರಿಸಲಾರಂಭಿಸಿದರು. ರಾಮನ ಮಾತಿನ ಬಾಣಕ್ಕೆ ರಾವಣನ ತರ್ಕದ ಉತ್ತರ. ರಾವಣನಿಂದ ತನ್ನ ನಿಲುವೇ ಸರಿ ಎಂಬ ವಾದ. ‘ಇವತ್ತಿನ ಪ್ರಸಂಗದಲ್ಲಿ ರಾವಣ ವಧೆ ಆಗುವುದಿಲ್ವಾ’ ಎಂದು ಪ್ರೇಕ್ಷಕರ ಕಡೆಯಿಂದ ಪಿಸು ಮಾತು ಕೇಳಿ ಬರಲಾರಂಭಿಸಿತು. ಅರ್ಧ ಗಂಟೆಯಲ್ಲಿ ಮುಗಿಯಬೇಕಿದ್ದ ಇಬ್ಬರ ಮಾತಿನ ಬಾಣ, ಪ್ರತಿಬಾಣ ಗಂಟೆಯಾದರೂ ಮುಗಿಯಲಿಲ್ಲ. ಗಂಟೆ ಆರು ದಾಟಿತ್ತು. ಕೊನೆಗೆ ಪ್ರತಿ ತರ್ಕದ ಮೂಲಕವೇ ಗೆದ್ದು ಅನಂತರ ರಾವಣನನ್ನು ರಾಮ ವಧೆ ಮಾಡಬೇಕಾಯಿತು!

ಹಿರಿಯ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ವೈಶಿಷ್ಟ್ಯವೇ ಅದು. ಮಾತಿನ ಪಟ್ಟು ಹಾಗೂ ತರ್ಕದ ಮೂಲಕವೇ ಪಾತ್ರವನ್ನು ಗೆಲ್ಲಿಸುತ್ತಿದ್ದರು. ಯಕ್ಷ ರಂಗಸ್ಥಳದಲ್ಲಿ ‘ಮಾತಿನ ತೋರಣ’ ಕಟ್ಟಿದವರು ಅವರು. ಅಧ್ಯಯನ ಶೀಲತೆ, ಪ್ರತ್ಯುತ್ಪನ್ನಮತಿಗೆ ಮತ್ತೊಂದು ಹೆಸರಾಗಿದ್ದರು. ಸ್ಪಷ್ಟ ಉಚ್ಚಾರ, ಪ್ರಖರ ಅರ್ಥಗಾರಿಕೆ, ಪುರಾಣದಿಂದ ಹೆಕ್ಕಿ ತಂದ ಉಕ್ತಿಗಳು, ಸಂಸ್ಕೃತ ಶ್ಲೋಕಗಳನ್ನು ಬಳಸಿ ಅವರು ಕಟ್ಟುತ್ತಿದ್ದ ‘ಮಾತಿನ ಹಾರ’ ಯಕ್ಷಾಭಿಮಾನಿಗಳನ್ನು ಮೋಡಿ ಮಾಡುತ್ತಿತ್ತು.

ವಾಕ್ಪಟುತ್ವದ ಹಿರಿಮೆಯಿಂದ ಯಕ್ಷಗಾನ ರಂಗಸ್ಥಳದ ಪ್ರಭೆಯನ್ನು ಹೆಚ್ಚಿಸಿದ ಚೆನ್ನಪ್ಪ ಶೆಟ್ಟಿ (62) ಅವರು ಅನಾರೋಗ್ಯದಿಂದ ಮಾರ್ಚ್‌ 22ರಂದು ನಿಧನರಾದರು. ‘ದೀಪವೊಂದು ಉಜ್ವಲವಾಗಿ ಉರಿದು ಥಟ್ಟನೆ ಆರಿದ ರೀತಿಯಲ್ಲಿ ಅವರು ದಿಢೀರ್‌ ಆಗಿ ಕಣ್ಮರೆಯಾಗಿದ್ದಾರೆ. ಅವರೆಂದೂ ಇನ್ನೊಬ್ಬರ ಮನಸ್ಸು ನೋಯಿಸಿದವರಲ್ಲ’ ಎಂದು ಹಿರಿಯ ಯಕ್ಷಗಾನ ಕಲಾವಿದರು ನೆನಪಿಸಿಕೊಳ್ಳುತ್ತಾರೆ.

ಯಕ್ಷಗಾನದ ಉಭಯ ತಿಟ್ಟುಗಳಲ್ಲಿ (ತೆಂಕು ಹಾಗೂ ಬಡಗು) ಮಿಂಚಿದವರು ಬೆರಳೆಣಿಕೆಯ ಮಂದಿ. ಕುಣಿತದ ಶೈಲಿ, ಪ್ರಸಂಗ ವೈವಿಧ್ಯ ಮತ್ತಿತರ ಕಾರಣಗಳಿಂದ ಒಂದು ತಿಟ್ಟುವಿನಿಂದ ಮತ್ತೊಂದು ತಿಟ್ಟುವಿನ ಕಡೆಗೆ ಮುಖ ಮಾಡುವವರು ಕಡಿಮೆ. ಆದರೆ, ಚೆನ್ನಪ್ಪ ಶೆಟ್ಟರು ಎರಡೂ ತಿಟ್ಟುಗಳಲ್ಲಿ ಒಂದೇ ರೀತಿಯ ಪ್ರಖ್ಯಾತಿ ಗಳಿಸಿದವರು. ಅವರು ಬಡಗಿನ ಕಡೆಗೆ ಮುಖ ಮಾಡಿದ್ದು 40 ವರ್ಷ ದಾಟಿದ ಮೇಲೆಯೇ. ಆ ಬಳಿಕ ಬಡಗು ಹೆಜ್ಜೆಗಳನ್ನು ಕಲಿತು ಬಡಗಿನ ಕಲಾವಿದರಿಗೆ ಸರಿಸಾಟಿಯಾಗಿ ಹೆಜ್ಜೆ ಹಾಕಿದರು.

ರಂಗದಲ್ಲಿ ಸಹಕಲಾವಿದ ತಪ್ಪೆಸಗಿದರೆ, ಅದನ್ನು ನಿರ್ಭಿಡೆಯಿಂದ ಅಲ್ಲೇ ಸರಿಪಡಿಸುವಂತಹ ಛಾತಿಯನ್ನು ಅವರು ಉಳಿಸಿಕೊಂಡಿದ್ದರು. ‘ಹುಡುಗ, ಅರ್ಥ ಹೇಳುವುದಕ್ಕೆ ಬಾಲಮಂಗಳದಿಂದ ಭಗವದ್ಗೀತೆವರೆಗೆ ಅಧ್ಯಯನ ಮಾಡಬೇಕು’ ಎಂಬ ಶೇಣಿ ಗೋಪಾಲಕೃಷ್ಣ ಭಟ್‌ ಅವರ ಮಾತನ್ನು ರಂಗಸ್ಥಳದಲ್ಲಿ ಪದೇ ಪದೇ ಉಲ್ಲೇಖಿಸುತ್ತಿದ್ದರು. (ಬಾಲಮಂಗಳ ಮಕ್ಕಳ ಪತ್ರಿಕೆ) ತಮ್ಮ ಅಸ್ಖಲಿತ ಮಾತುಗಾರಿಕೆ ಮೂಲಕ ಅವರು ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದರು. ಅವರು ರಂಗದಲ್ಲಿ ನೀಡುತ್ತಿದ್ದ ಉಪಮೆಗಳು, ಉದಾಹರಣೆಗಳು ಅವರ ಪ್ರತಿಭೆಗೆ ಕಲಶಪ್ರಾಯವಾಗಿರುತ್ತಿದ್ದವು. ಅವರಿಗೆ ನೂರಕ್ಕೂ ಅಧಿಕ ಕಡೆ ಸನ್ಮಾನಗಳು ಸಂದಿವೆ.

ಅರ್ಥಗಾರಿಕೆ ಕ್ಷೇತ್ರದಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡ ಕಲಾವಿದರಲ್ಲಿ ಚೆನ್ನಪ್ಪ ಶೆಟ್ಟಿ ಅವರೂ ಒಬ್ಬರಾಗಿದ್ದರು. ಹೊಸನಗರ ಮೇಳದ ಪ್ರಧಾನ ಕಲಾವಿದರಾಗಿದ್ದ ಅವರು, ಬಿಡುವು ಮಾಡಿಕೊಂಡು ವರ್ಷಕ್ಕೆ ನೂರಕ್ಕೂ ಅಧಿಕ ತಾಳಮದ್ದಲೆಗಳಲ್ಲಿ ಭಾಗವಹಿಸುತ್ತಿದ್ದರು.

ರಾಮ, ಕೃಷ್ಣ, ವಿಷ್ಣು, ಭೀಷ್ಮ ವಿಜಯದ ಭೀಷ್ಮ, ಶ್ವೇತಕುಮಾರನ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದ ಚೆನ್ನಪ್ಪ ಶೆಟ್ಟಿ ಅವರಿಗೆ ಯಾವುದೇ ಪಾತ್ರಕ್ಕೆ ಜೀವ ತುಂಬಬಲ್ಲ ಪ್ರತಿಭೆ ಇತ್ತು. ವೈರುಧ್ಯದ ಪಾತ್ರಗಳನ್ನೂ ಒಪ್ಪಿಕೊಳ್ಳುತ್ತಿದ್ದರು. ಸಂಧಾನಕ್ಕೆ ಮುಂದಾದ ಕೃಷ್ಣನ ಪಾತ್ರದಷ್ಟೇ ಚೆನ್ನಾಗಿ ಕೌರವನ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಹೊಸ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿದ್ದರೂ ಅವರಿಗೆ ಹೆಚ್ಚು ಒಲವು ಇದ್ದುದು ಪೌರಾಣಿಕ ಪಾತ್ರಗಳ ಬಗ್ಗೆಯೇ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ರಾಯಿ ಗ್ರಾಮದ ವಾಸು–ಲಲಿತಮ್ಮ ದಂಪತಿಯ ಪುತ್ರನಾಗಿ ಜನಿಸಿದ ಅವರು ಓದಿದ್ದು ಐದನೇ ತರಗತಿವರೆಗೆ ಮಾತ್ರ. ಆದರೆ ಗಳಿಸಿದ ಪಾಂಡಿತ್ಯಕ್ಕೆ ಮೇರೆ ಇರಲಿಲ್ಲ. ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ತೆಂಕುತಿಟ್ಟಿನ ನಾಟ್ಯವನ್ನು ಅಭ್ಯಸಿಸಿದರು. ಸಿದ್ಧಕಟ್ಟೆ ವಾಸುದೇವ ಶೆಟ್ಟಿ, ಕುರಿಯ ವಿಠಲ ಶಾಸ್ತ್ರಿ, ಪಡ್ರೆ ಚಂದ್ರು, ಶಿಮಂತೂರು ನಾರಾಯಣ ಶೆಟ್ಟಿ, ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ ಅವರಂತಹ ಹೆಸರಾಂತ ಕಲಾವಿದರ ಬಳಿ ಕಲಿತ ಅವರು ಆ ವಿದ್ವತ್ ಪರಂಪರೆಯ ಮುಂದುವರಿದ ಭಾಗದಂತಿದ್ದರು.

ಕಳೆದ ನಾಲ್ಕು ದಶಕಗಳಲ್ಲಿ ಕಟೀಲು, ಧರ್ಮಸ್ಥಳ, ಕದ್ರಿ, ಮಧೂರು, ಕುಂಬ್ಳೆ. ಇರಾ, ಬಪ್ಪನಾಡು, ಪೆರ್ಡೂರು, ಸಾಲಿಗ್ರಾಮ, ಹೊಸನಗರ ಮೇಳಗಳಲ್ಲಿ ಬೇಡಿಕೆಯ ಕಲಾವಿದರಾಗಿದ್ದವರು. ಒಟ್ಟು 43 ವರ್ಷಗಳ ಯಕ್ಷ ಕಲಾಸೇವೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್‌, ಮಲ್ಪೆ ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ಟರ್‌, ಪೆರ್ಲ ಕೃಷ್ಣ ಭಟ್‌, ಮೂಡಂಬೈಲು ಶಾಸ್ತ್ರಿ, ಬೋಳಾರ ನಾರಾಯಣ ಶೆಟ್ಟಿ, ಅಳಕೆ ರಾಮಯ್ಯ ರೈ ಮೊದಲಾದ ಘಟಾನುಘಟಿಗಳೊಡನೆ ವೇಷಧಾರಿಯಾಗಿ ಬೆಳೆದವರು ಅವರು. ಸುಮಾರು 15 ವರ್ಷಗಳ ಕಾಲ ಬಡಗು ತಿಟ್ಟಿನಲ್ಲಿ, 28 ವರ್ಷಗಳ ಕಾಲ ತೆಂಕುತಿಟ್ಟಿನಲ್ಲಿ ಕಲಾಸೇವೆ ಸಲ್ಲಿಸಿದ್ದರು.

ಅವರ ಅಭಿಮಾನಿಗಳ ಹರವು ಕರಾವಳಿ ಹಾಗೂ ಅದರ ಆಸುಪಾಸಿನ ನಾಲ್ಕೈದು ಜಿಲ್ಲೆಗಳು ಮಾತ್ರವಲ್ಲ, ರಾಜ್ಯದ ರಾಜಧಾನಿಯಾಚೆಯೂ ವ್ಯಾಪಿಸಿತ್ತು. ಅದೇ ಅವರ ಜನಪ್ರಿಯತೆ ಯನ್ನು, ಯಕ್ಷಗಾನದಲ್ಲಿನ ಅವರ ‘ಸಿದ್ಧಿ’ಯನ್ನು ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT