ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಳೆ ನಿಂತ ಮೇಲೆ...

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸಿನಿಮೋತ್ಸವದ ಮಹಾಸುಗ್ಗಿ ಮುಗಿದಿದೆ. ಬೆಂಗಳೂರು ಮತ್ತು ಮೈಸೂರು ಎರಡೂ ನಗರಗಳಲ್ಲಿ ಏಳು ದಿನಗಳ ಕಾಲ ನಡೆದ ಈ ಚಿತ್ರಜಾತ್ರೆಯಲ್ಲಿ ಜಗತ್ತಿನ ಹಲವು ದೇಶಗಳ ಪ್ರಮುಖ ಸಿನಿಮಾಗಳನ್ನು ನೋಡಿದ ಪುಳಕದಲ್ಲಿ ಸಿನಿಪ್ರಿಯರು ನೆನೆದಿದ್ದಾರೆ. ಈ ವರ್ಷ ನಗರದ ಒರಾಯನ್‌ ಮಾಲ್‌ ಒಂದರಲ್ಲಿಯೇ ಹನ್ನೊಂದು ತೆರೆಗಳಲ್ಲಿ ಸಿನಿಮಾಗಳನ್ನು ಪ್ರದರ್ಶಿಸಿದ್ದು ವಿಶೇಷ.

ಸಾಮಾನ್ಯವಾಗಿ ಸಿನಿಮೋತ್ಸವ ಎಂದಾಕ್ಷಣ ಅಲ್ಲಿನ ವ್ಯವಸ್ಥೆ– ಸಿನಿಮಾಗಳ ಗುಣಮಟ್ಟ ಇವುಗಳ ಕುರಿತೇ ಮಾತನಾಡುತ್ತೇವೆಯೇ ವಿನಾ ಈ ಬೃಹತ್‌ ತೇರಿನ ಚಲನೆಗೆ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸಿದ ಸ್ವಯಂಸೇವಕರ ಕಡೆಗೆ ನಮ್ಮ ಲಕ್ಷ್ಯ ಹೋಗುವುದು ಅಪರೂಪವೇ. ಯಾವುದೋ ದೇಶಗಳಿಂದ ಬರುವ ಸಿನಿಮಾಗಳನ್ನು ಸಂಗ್ರಹಿಸಿ ಸಿನಿಮೋತ್ಸವದಲ್ಲಿ ಪ್ರದರ್ಶಿಸುವುದರಿಂದ ಹಿಡಿದು, ಅತಿಥಿಗಳ ದೇಖರೇಖಿ, ಪ್ರೇಕ್ಷಕರ ಸಂಭಾಳಿಸುವುದು, ಅಚಾನಕ್ಕಾಗಿ ತಲೆದೋರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವುದು, ಬದಲಾಗುವ ಸಿನಿಮಾ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಹೀಗೆ ಎಲ್ಲ ಕೆಲಸಗಳೂ ಸುಸೂತ್ರವಾಗಿ ನಡೆಯುವುದರಲ್ಲಿ ಸ್ವಯಂ ಸೇವಕರ ಪಾತ್ರ ಹಿರಿದು.

ಕಳೆದ ಒಂದೂವರೆ ತಿಂಗಳಿಂದ ಈ ಸಿನಿಮೋತ್ಸವಕ್ಕಾಗಿ ದುಡಿಯುತ್ತಿರುವ ಲೋಕೇಶ್‌ ಕನ್ನಡ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಹಲವಾರು ನಿರ್ದೇಶಕರೊಂದಿಗೆ ಕೆಲಸ ಮಾಡಿ ಅನುಭವ ಇರುವ ಅವರು ಇದೀಗ ತಮ್ಮದೇ ನಿರ್ದೇಶನದ ಚಿತ್ರವೊಂದರ ಸಿದ್ಧತೆಯಲ್ಲಿದ್ದಾರೆ. ಕಳೆದ ಏಳು ವರ್ಷಗಳಿಂದ ಪ್ರತಿವರ್ಷ ಬೆಂಗಳೂರು ಸಿನಿಮೋತ್ಸವದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ಅವರಿಗೆ, ಇದು ಯಾವಾಗಲೂ ಹೊಸ ಕಲಿಕೆಯನ್ನು ಕೊಡುವ ಅನುಭವಶಾಲೆಯಾಗಿಯೇ ಕಂಡಿದೆ.

ಮೊದಲ ನಾಲ್ಕು ವರ್ಷ ಪಾಸ್‌ ವಿತರಣೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಂತರದ ಮೂರು ವರ್ಷಗಳಿಂದ ಪ್ರಿಂಟ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳಿಂದ ತರಿಸಲಾದ ಸಿನಿಮಾಗಳ ಪ್ರಿಂಟ್‌ಗಳನ್ನು ಎಲ್ಲ ಚಿತ್ರಮಂದಿರಗಳಿಗೆ ತಲುಪಿಸಿ, ಪ್ರದರ್ಶನದ ನಂತರ ಮತ್ತೆ ಅವನ್ನು ಸುರಕ್ಷಿತವಾಗಿ ಸಂಗ್ರಹಿಸಿ ಆಯಾ ದೇಶಗಳ ನಿರ್ದೇಶಕರಿಗೆ ತಲುಪಿಸುವವರೆಗೆ ಇವರ ಕೆಲಸದ ವ್ಯಾಪ್ತಿ ಇದೆ. ಹಾಗಾಗಿ ಚಿತ್ರೋತ್ಸವ ಮುಗಿದು ನಾಲ್ಕೈದು ದಿನಗಳಾದರೂ ಇನ್ನೂ ಅವರ ಕೆಲಸ ಮುಗಿದಿಲ್ಲ. ‘ಇನ್ನೂ ಹಲವು ದೇಶಗಳ ಸಿನಿಮಾ ಪ್ರಿಂಟ್‌ಗಳು ನಮ್ಮಲ್ಲಿಯೇ ಇವೆ. ಅವುಗಳನ್ನೆಲ್ಲ ಮರಳಿಸಲು ಇನ್ನೂ ಹತ್ತು ಹದಿನೈದು ದಿನ ಬೇಕು’ ಎನ್ನುತ್ತಾರೆ ಲೋಕೇಶ್‌.

ಈ ಸಲ ಮೈಸೂರಿನಲ್ಲಿಯೂ ಸಿನಿಮಾಗಳ ಪ್ರದರ್ಶನ ಇದ್ದುದರಿಂದ ಲೋಕೇಶ್‌ ಪ್ರತಿದಿನವೂ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಸಿನಿಮಾಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದರು.

‘ಇದೊಂದು ಜಾತ್ರೆಯಿದ್ದಂತೆ. ಈ ದೊಡ್ಡ ಸಡಗರದಲ್ಲಿ ಪ್ರಪಂಚದಲ್ಲಿನ ಎಲ್ಲ ಸಿನಿಮಾಗಳ ಬಗ್ಗೆ ಮಾಹಿತಿ ಗೊತ್ತಾಗುತ್ತದೆ. ದೊಡ್ಡ ದೊಡ್ಡ ನಿರ್ದೇಶಕರುಗಳನ್ನು ಹತ್ತಿರದಿಂದ ಮಾತನಾಡಿಸಬಹುದು. ಆಮೇಲೆ ಅವರ ಅನುಭವಗಳನ್ನು ತಿಳಿದುಕೊಳ್ಳಬಹುದು. ಇಷ್ಟು ದೊಡ್ಡ ಸಿನಿಮೋತ್ಸವದ ಭಾಗವಾಗುವುದು ಹೆಮ್ಮೆ. ಈ ಏಳು ದಿನ ನಾವು ಸರಿಯಾಗಿ ನಿದ್ದೆಯನ್ನೇ ಮಾಡಿರಲಿಲ್ಲ. ಕಾರಿನಲ್ಲಿ ಎರಡೂವರೆ ಗಂಟೆ ಮೈಸೂರಿಗೆ ಹೋಗುವಾಗ ಮಾತ್ರ ನಿದ್ರಿಸಲು ಅವಕಾಶ ಸಿಗುತ್ತಿತ್ತು’ ಎನ್ನುವ ಲೋಕೇಶ್‌ಗೆ ಈ ಸಿನಿಮೋತ್ಸವದಲ್ಲಿ ನೋಡಲು ಸಾಧ್ಯವಾಗಿದ್ದು ಮೂರೇ ಸಿನಿಮಾಗಳನ್ನು.
ಚೆನ್ನೈನಲ್ಲಿ ಪತ್ರಿಕೋದ್ಯಮದ ಪಿ.ಜಿ ಡಿಪ್ಲೊಮಾ ಓದುತ್ತಿದ್ದಾರೆ ಮಾಧುರಿ. ಕಳೆದ ಎರಡು ವರ್ಷಗಳಿಂದಲೂ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿರುವ ಮಾಧುರಿ, ಈ ವರ್ಷ ಇದರಲ್ಲಿ ಭಾಗವಹಿಸಲಿಕ್ಕೆಂದೇ ಹತ್ತು ದಿನಗಳ ಮಟ್ಟಿಗೆ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವರ್ಷದ ಸಿನಿಮೋತ್ಸವದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು. ಈ ಕೆಲಸ ಅವರಿಗೆ ಸಾಕಷ್ಟು ಖುಷಿ ಕೊಟ್ಟಿದೆ.

‘ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳಲ್ಲಿ ಸಿನಿಮೋತ್ಸವದ ಸುದ್ದಿಗಳನ್ನು ಲಗತ್ತಿಸುವುದು, ಹಾಗೆಯೇ ಬದಲಾದ ವೇಳಾಪಟ್ಟಿಗಳನ್ನು ಪ್ರಕಟಿಸುವುದು ಎಲ್ಲವನ್ನೂ ಮಾಡುತ್ತಿದ್ದೆ. ಏಷ್ಯನ್‌ ಸಿನಿಮಾ, ಭಾರತೀಯ ಸಿನಿಮಾ, ಕನ್ನಡ ಸಿನಿಮಾ ಹೀಗೆ ವಿವಿಧ ವರ್ಗದ ಸಿನಿಮಾಗಳ ಕುರಿತು ಅಪ್‌ಡೇಟ್‌ ಮಾಡುತ್ತಿದ್ದೆ. ಫೇಸ್‌ಬುಕ್‌ ಪುಟವೊಂದನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಅದಷ್ಟೇ ಅಲ್ಲದೆ ಬೇರೆ ಬೇರೆ ಕೆಲಸಗಳನ್ನೂ ಮಾಡಬೇಕಾಗುತ್ತಿತ್ತು. ಒಟ್ಟಾರೆ ಸಿನಿಮೋತ್ಸವ ಒಂದು ಪಾಠಶಾಲೆಯಂತಿತ್ತು’ ಎನ್ನುತ್ತಾರೆ ಮಾಧುರಿ.

ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಂತಿಮ ವರ್ಷ ವಿದ್ಯಾರ್ಥಿಯಾಗಿರುವ ಹರ್ಷಪ್ರಿಯಾ, ಸಿನಿಮೋತ್ಸವದಲ್ಲಿ ವಿವಿಧ ತೆರೆಗಳಲ್ಲಿ ಸಿನಿಮಾ ಪ್ರಾರಂಭಕ್ಕೂ ಮುನ್ನ ಅದರ ವಿವರಗಳನ್ನು ನೀಡುವ ಉದ್ಘೋಷಕರ ನಡುವೆ ಸಂಯೋಜಕಿಯಾಗಿ ಕೆಲಸ ಮಾಡಿದರು.

ಸಿನಿಮೋತ್ಸವ ಆರಂಭವಾಗುವುದಕ್ಕೂ ಹತ್ತು ದಿನಗಳ ಹಿಂದೆಯೇ ಇದರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಹರ್ಷಪ್ರಿಯಾ, ‘ಸಿನಿಮೋತ್ಸವದಿಂದ ಕಲಿತಿದ್ದು ಸಾಕಷ್ಟಿದೆ. ಒಂದು ಸಿನಿಮೋತ್ಸವದ ಯಶಸ್ಸು ಮತ್ತು ವೈಫಲ್ಯಗಳ ಕಾರಣಗಳನ್ನು ಹತ್ತಿರದಿಂದ ಅದರ ಒಂದು ಭಾಗವಾಗಿ ಅರಿತುಕೊಳ್ಳುವ ಅವಕಾಶವಿದು. ಸಿನಿಮಾ ಜಗತ್ತಿನ ಅನೇಕರ ಪರಿಚಯವೂ ಆಗುತ್ತದೆ. ಇದೊಂದು ಉತ್ತಮ ಅವಕಾಶ’ ಎನ್ನುತ್ತಾರೆ.

ಹಿಂದಿನ ವರ್ಷವೂ ಸಿನಿಮೋತ್ಸವದ ಸ್ವಯಂಸೇವಕರಾಗಿ ಕೆಲಸ ಮಾಡಿರುವ ಅವರು ‘ಕಳೆದ ವರ್ಷ ಬೇರೆ ಬೇರೆ ಕಡೆ ಹಂಚಿಹೋಗಿದ್ದರಿಂದ ಒಟ್ಟೂ ಜನಸಂದಣಿಯನ್ನು ನೋಡಲಿಕ್ಕಾಗಲಿಲ್ಲ. ಈ ಸಲ ಒಂದೇ ಕಡೆ ಎಲ್ಲ ಸಿನಿಮಾಗಳೂ ಪ್ರದರ್ಶನವಾದ್ದರಿಂದ ಒಟ್ಟಾರೆ ಜನಸಂದಣಿಯನ್ನು ನೋಡಲು ಸಾಧ್ಯವಾಯಿತು. ಅದು ಬೇರೆ ರೀತಿಯದೇ ಅನುಭವ. ಸಂಘಟನಾ ತಂಡದವರೂ ಒಂದೇ ಕಡೆ ಇದ್ದುದರಿಂದ ಬೇರೆ ಬೇರೆ ವಿಭಾಗದವರು ಹೇಗೆ ಕೆಲಸ ಮಾಡುತ್ತಾರೆ ಎಂದೂ ತಿಳಿದುಕೊಳ್ಳಲು ಸಾಧ್ಯವಾಯಿತು. ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿರುವ ನನಗೆ ಇದು ಒಂದು ವಾರದ ಇಂಟರ್ನ್‌ಷಿಪ್‌ ತರಹ ಇತ್ತು’ ಎಂದು ಅವರು ಅನುಭವವನ್ನು ಹಂಚಿಕೊಳ್ಳುತ್ತಾರೆ.

ಚಿನ್ಮಯಿ ಕೂಡ ಪತ್ರಿಕೋದ್ಯಮ ವಿದ್ಯಾರ್ಥಿನಿಯೇ. ಸದ್ಯಕ್ಕೆ ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ಇಂಟರ್ನ್‌ಷಿಪ್‌ ಮಾಡುತ್ತಿರುವ ಅವರು ಸಿನಿಮೋತ್ಸವದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದರು.

‘ಸಿನಿಮೋತ್ಸವದಲ್ಲಿ ಕೆಲಸ ಮಾಡುವ ಅನುಭವವನ್ನು ವಿವರಿಸುವುದು ಕಷ್ಟ. ಅಲ್ಲಿ ಸಿಗುವ ಮಾನ್ಯತೆಯೇ ಬೇರೆ. ಬೇರೆ ಬೇರೆ ರಾಜ್ಯಗಳಿಂದ ಜನರು ಬರುತ್ತಾರೆ. ಯಾವ ಕಾರಣಕ್ಕೆ ಅವರು ಸಿನಿಮಾ ನೋಡಲಿಕ್ಕೆ ಬರುತ್ತಾರೆ, ಭಿನ್ನ ಸಿನಿಮಾಗಳಿಗೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಲ್ಲವನ್ನೂ ತಿಳಿದುಕೊಳ್ಳಲು ಇದೊಂದು ಉತ್ತಮ ಅವಕಾಶ’ ಎನ್ನುವುದು ಅವರ ಅಭಿಮತ.

ಈ ಸಲ ಒಂದೇ ಕಡೆಯಲ್ಲಿ ಎಲ್ಲ ಸಿನಿಮಾಗಳೂ ಪ್ರದರ್ಶಿತವಾಗಿರುವುದರ ಬಗೆಗೂ ಅವರಿಗೆ ಖುಷಿಯಿದೆ. ‘ಎಷ್ಟೆಲ್ಲ ಜನರನ್ನು ಒಟ್ಟಿಗೆ ನೋಡಲು ಸಾಧ್ಯವಾಯಿತು. ಚಿತ್ರಮಂದಿರಗಳು ತುಂಬಿರುತ್ತಿದ್ದವು. ಖಾಲಿ ಖಾಲಿಯಾಗಿದ್ದ ಚಿತ್ರಮಂದಿರಗಳಲ್ಲಿ ಉದ್ಘೋಷಣೆ ಮಾಡಬೇಕಾಗಿರಲಿಲ್ಲ. ತುಂಬಿದ ಚಿತ್ರಮಂದಿರದಲ್ಲಿ ಉದ್ಘೋಷಿಸುವ ಅನುಭವ ತುಂಬ ಖುಷಿಕೊಟ್ಟಿತು’ ಎನ್ನುತ್ತಾರೆ ಚಿನ್ಮಯಿ. ಒಂದು ವಾರದ ಸಿನಿಮೋತ್ಸವದಲ್ಲಿ ಜಗತ್ತನ್ನು ಕಂಡ ಅನುಭವವನ್ನು ಕಟ್ಟಿಕೊಂಡ ಪುಳಕ ಎಲ್ಲರ ಮಾತಿನಲ್ಲಿಯೂ ವ್ಯಕ್ತವಾಗುತ್ತಿತ್ತು. 

‘ಯಶಸ್ಸು ಎಲ್ಲರ ಪರಿಶ್ರಮದ ಫಲ’

ಕಳೆದ ಮೂರು ವರ್ಷಗಳಿಂದ ಸಿನಿಮೋತ್ಸವದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಮುರಳಿ ಅವರಿಗೆ ಈ ವರ್ಷ ಜವಾಬ್ದಾರಿ ಹೆಚ್ಚಿತ್ತು.
ಕಳೆದ ಮೂರು ತಿಂಗಳಿಂದಲೂ ಸಿನಿಮೋತ್ಸವದ ತಯಾರಿಯಲ್ಲಿದ್ದ ಅವರು, ವೇಳಾಪಟ್ಟಿ ತಯಾರಿಕೆಯಲ್ಲಿ, ಬೇರೆ ಬೇರೆ ದೇಶ–ರಾಜ್ಯಗಳಿಂದ ಸಿನಿಮಾಗಳನ್ನು ತರಿಸಿಕೊಂಡು ಅವುಗಳನ್ನು ಪರೀಕ್ಷಿಸಿ ನಂತರ ಪ್ರದರ್ಶನಕ್ಕೆ ತಲುಪಿಸುವ ಪ್ರಿಂಟ್‌ ವಿಭಾಗದಲ್ಲಿಯೂ ಕೆಲಸ ಮಾಡಿದ್ದಾರೆ. ಹಾಗೆಯೇ ಅಗತ್ಯ ಬಿದ್ದಾಗ ಚಿತ್ರಮಂದಿರಗಳಲ್ಲಿ ಸಿನಿಮಾ ವಿವರಗಳನ್ನು ಉದ್ಘೋಷಿಸಲೂ ಹಾಜರಿರುತ್ತಿದ್ದರು. ಜನರಿಗೆ ಸಿನಿಮಾಗಳನ್ನು ತೋರಿಸುವ ಗಡಿಬಿಡಿಯಲ್ಲಿ ಮುರಳಿ ಅವರಿಗೆ ಒಂದು ಸಿನಿಮಾವನ್ನೂ ನೋಡಲು ಸಾಧ್ಯವಾಗಿಲ್ಲ. ಈ ಸಲದ ಸಿನಿಮೋತ್ಸವ ಕಟ್ಟಿಕೊಟ್ಟ ಅನುಭವ ಬುತ್ತಿಯನ್ನು ಅವರು ಹಂಚಿಕೊಳ್ಳುವುದು ಹೀಗೆ:

‘ಬೆಂಗಳೂರು ಸಿನಿಮೋತ್ಸವ ಅತ್ಯುತ್ತಮ ಗುಣಮಟ್ಟದ ಚಲನಚಿತ್ರಗಳ ಆಯ್ಕೆ ಮತ್ತು ವ್ಯವಸ್ಥಿತ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಅಲ್ಲದೇ ಹೀಗೆ ಎರಡು ನಗರಗಳಲ್ಲಿ ಹದಿನೈದು ಪರದೆಗಳಲ್ಲಿ ಸಿನಿಮೋತ್ಸವವನ್ನು ಆಯೋಜಿಸಿದ್ದು ದೇಶದಲ್ಲಿ ಇದೇ ಮೊದಲು. ಈ ಸಲ ಸಮಯ ತುಂಬಾ ಕಡಿಮೆ ಇತ್ತು. ಕೆಲಸ ಜಾಸ್ತಿ ಇತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ ಎಂಬುದು ನಮ್ಮ ನಂಬಿಕೆ’ ಎನ್ನುವ ಅವರು, ‘ಇದು ಒಬ್ಬ–ಇಬ್ಬರಿಂದ ಆಗುವ ಕೆಲಸ ಅಲ್ಲವೇ ಅಲ್ಲ. ಒಟ್ಟಾರೆ ತಂಡ ಒಗ್ಗಟ್ಟಾಗಿ ಕೆಲಸ ಮಾಡಿದಾಗ, ಎಲ್ಲರೂ ಸಹಕಾರದಿಂದ ದುಡಿದಾಗ ಮಾತ್ರ ಸಾಧ್ಯವಾಗುವುದು. ಈ ಚಿತ್ರೋತ್ಸವದ ಯಶಸ್ಸು ಈ ಇಡೀ ತಂಡಕ್ಕೆ ಸಲ್ಲಬೇಕು’ ಎನ್ನಲು ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT