ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನ್ಹಾಗೆ ನೈತಿಕ ಹಕ್ಕಿಲ್ಲ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

2ಜಿ ತರಂಗಾಂತರ ಹಗರಣದ ತನಿಖೆಯಿಂದ ಹಿಂದೆ ಸರಿಯುವಂತೆ ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಅವರಿಗೆ ಸುಪ್ರೀಂಕೋರ್ಟ್‌  ನಿರ್ದೇಶಿ­ಸಿರುವುದರಿಂದ, ಈ ಉನ್ನತ ಅಧಿಕಾರಿಯ ಸ್ಥಾನ ದುರ್ಬಳಕೆ ಆರೋಪಗಳಿಗೆ ಬಲ ಬಂದಿದೆ. ಹಗರಣದ ಆರೋಪಿಗಳಾಗಿರುವ ಅನಿಲ್‌ ಧೀರೂಭಾಯಿ ಅಂಬಾನಿ ಸಮೂಹದ (ಎಡಿಎಜಿ) ಅಧಿಕಾರಿಗಳನ್ನು 15 ತಿಂಗಳ ಅವಧಿ­ಯಲ್ಲಿ ಸಿನ್ಹಾ ಕನಿಷ್ಠ 50 ಬಾರಿಯಾದರೂ ಭೇಟಿಯಾಗಿರುವುದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ. ಸಿನ್ಹಾ ಅವರ ನಿವಾಸದಲ್ಲಿ ಈ ಭೇಟಿ­ಗಳು ನಡೆದಿರುವುದರಿಂದ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ತನಿಖೆಯ ವಿಶ್ವಾ­ಸಾರ್ಹತೆಗೆ ಧಕ್ಕೆ ಬಂದಿತ್ತು.

ದೂರಸಂಪರ್ಕ ಖಾತೆಯ ಮಾಜಿ ಸಚಿವ ದಯಾ­ನಿಧಿ ಮಾರನ್‌ ಮತ್ತು ಇತರ ಪ್ರಮುಖರನ್ನು ಒಳಗೊಂಡ ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ಸಿನ್ಹಾ ತಡ ಮಾಡಿದ್ದ ಆಘಾತಕಾರಿ ಸಂಗತಿಯನ್ನೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಆನಂದ್‌ ಗ್ರೋವರ್‌ ಹೊರಗೆಡವಿದ್ದರು. ಸಿನ್ಹಾ ಸದ್ಯದಲ್ಲೇ ನಿವೃತ್ತಿ ಆಗಲಿರುವುದನ್ನು ಸಹ ಗಣನೆಗೆ ತೆಗೆದುಕೊಳ್ಳದೆ ಕೋರ್ಟ್‌ ಕಟ್ಟುನಿಟ್ಟಾಗಿ ವರ್ತಿಸಿರುವುದು ಅವರ ಮೇಲಿನ ಆರೋಪಗಳು ಎಷ್ಟು ಗಂಭೀರವಾದವು ಎಂಬುದನ್ನು ಸೂಚಿಸುತ್ತದೆ.

ಸಿಬಿಐ ಮುಖ್ಯಸ್ಥರಾಗಿ ಈ ಹಿಂದೆ ಅವರು ಕೈಗೊಂಡಿದ್ದ ಕೆಲವು ನಿರ್ಧಾರ­ಗಳು ಸಹ ಹುಬ್ಬೇರಿಸುವಂತೆ ಇದ್ದವು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ­ದಲ್ಲಿ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಮತ್ತು ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಪಿ.ಸಿ. ಪಾರಖ್‌ ಅವರ ವಿರುದ್ಧದ ಪ್ರಕರಣಗಳನ್ನು ಪರಿಸಮಾಪ್ತಿಗೊಳಿಸಿದ್ದು ಇದಕ್ಕೊಂದು ಉದಾಹರಣೆ. ೧೯೯೬ರಲ್ಲಿ ಸಿಬಿಐನಲ್ಲಿ ಡಿಐಜಿ ಆಗಿದ್ದ ಸಿನ್ಹಾ ಮೇವು ಹಗರ­ಣದ ಆರೋಪಿ ಲಾಲು ಪ್ರಸಾದ್‌ ಅವರ ವಿರುದ್ಧದ ತನಿಖೆ ದುರ್ಬಲ­ಗೊಳಿಸಲು ಯತ್ನಿಸಿ ಕೋರ್ಟ್‌ನಿಂದ ಟೀಕೆಗೊಳಗಾಗಿದ್ದರು. ಇಷ್ಟೆಲ್ಲ ಆದರೂ ಸಿಬಿಐ ಮುಖ್ಯಸ್ಥ ಹುದ್ದೆಗೆ ಬರಲು ಅವರು ಯಶಸ್ವಿಯಾಗುತ್ತಾರೆ ಮತ್ತು ಅಧಿಕಾರ ಅವಧಿಯ ಕೊನೆಯವರೆಗೂ ಎಗ್ಗಿಲ್ಲದೇ ಮುಂದುವರಿಯುತ್ತಾರೆ ಎಂದರೆ ಅದು ನಮ್ಮ ವ್ಯವಸ್ಥೆಯಲ್ಲಿನ ಲೋಪವಲ್ಲದೆ ಬೇರೇನೂ ಅಲ್ಲ.

ಕೇಂದ್ರ ಜಾಗೃತ ಆಯೋಗದ ಶಿಫಾರಸುಗಳನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರ, ಸಿನ್ಹಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ ಎಂಬ ಆರೋಪಗಳು ಹಿಂದೆ ಕೇಳಿಬಂದಿದ್ದವು. ಆಡಳಿತ ಯಂತ್ರ ತನ್ನ ತಪ್ಪುಗಳನ್ನು ಸ್ವಯಂ ಸರಿಪಡಿಸಿಕೊಳ್ಳುತ್ತಿಲ್ಲ ಎಂದಾದರೆ ಕೊಳಕು ಆಳವಾಗಿಯೇ ಬೇರು­ಬಿಟ್ಟಿದೆ ಎಂದರ್ಥ. ಅದನ್ನು ತೊಡೆಯಲು ರಾಜಕೀಯ ಇಚ್ಛಾಶಕ್ತಿಯಂತಹ ಮಹತ್ವದ ಬದ್ಧತೆಯೇ ಬೇಕಾಗುತ್ತದೆ.

ಸರ್ವೋಚ್ಚ ನ್ಯಾಯಾಲಯ ಕೇವಲ 2ಜಿ ಹಗರಣದಿಂದ ದೂರ ಉಳಿಯುವಂತೆ ಸಿನ್ಹಾ ಅವರಿಗೆ ಸೂಚಿಸಿದ್ದರೂ ಇದೊಂದು ಮಹತ್ವದ ನಿರ್ಧಾರ. ಹೀಗಾಗಿ ಒಂದು ನಿಮಿಷ ಕೂಡ ಸಿಬಿಐ ನಿರ್ದೇಶಕರಾಗಿ ಉಳಿಯುವ ನೈತಿಕ ಹಕ್ಕು ಸಿನ್ಹಾ ಅವರಿಗೆ ಇಲ್ಲ. ಅವರು ಹೊರಹೋದ ಮಾತ್ರಕ್ಕೆ ಎಲ್ಲವೂ ಒಂದೇ ಬಾರಿಗೆ ಸರಿಹೋಗದು. ಆದರೆ ಹದಗೆಟ್ಟ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವವರು ತಮ್ಮ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಳ್ಳುತ್ತಾರೆ ಎಂಬ ಸಂದೇಶವನ್ನಾದರೂ ಇದರಿಂದ ನೀಡಿದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT