ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಗೆ ಕೇಂದ್ರಕ್ಕೆ ಶಿಫಾರಸು

ದಲಿತ ಬಾಲಕಿಯರ ಅತ್ಯಾಚಾರ, ಕೊಲೆ ಪ್ರಕರಣ
Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ಬದಾಯೂಂ (ಪಿಟಿಐ): ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಇಬ್ಬರು ದಲಿತ ಬಾಲಕಿಯರ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಾಲಕಿಯ ಸಂಬಂಧಿಕರು ಉತ್ತರ ಪ್ರದೇಶದ ಪೊಲೀಸರಿಗೆ ಪತ್ರ ಬರೆದಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ­ಕೊಡಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು  (ಡಿಜಿಪಿ) ಮಂಗಳವಾರ ಇಲ್ಲಿ ತಿಳಿಸಿದರು.

ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕೆಂದು ಬಾಲಕಿಯರ ಸಂಬಂಧಿಕರು ಈ ಹಿಂದೆ ಮಾಡಿದ್ದ ಮನವಿಯನ್ನು ಅಖಿಲೇಶ್‌ ಯಾದವ್‌ ನೇತೃತ್ವದ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು.

ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ನಿರ್ದೇಶನದ ಮೇರೆಗೆ ಡಿಜಿಪಿ ಎ.ಎಲ್‌. ಬ್ಯಾನರ್ಜಿ ಅವರು ಮಂಗಳವಾರ ಬದಾಯೂಂಗೆ ತೆರಳಿ ಬಾಲಕಿಯರ ಸಂಬಂಧಿಕರಿಂದ ಪತ್ರ ಸ್ವೀಕರಿಸಿದರು. ಬಳಿಕ ಆ ಪತ್ರವನ್ನು ಅವರು ಕೇಂದ್ರಕ್ಕೆ ಕಳುಹಿಸಿದರು.

ಬಾಲಕಿಯರ ಕುಟುಂಬ ಸದಸ್ಯರಿಗೆ ರಕ್ಷಣೆ ಒದಗಿಸಲು ಶಸ್ತ್ರಸಜ್ಜಿತ ಯೋಧರನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದಲ್ಲಿ ಅವರಿಗೆ ಶಸ್ತ್ರ ಪರವಾನಗಿ ಕೂಡ ನೀಡಲಾಗುವುದು ಎಂದು ಬ್ಯಾನರ್ಜಿ ತಿಳಿಸಿದರು.

‘ಪ್ರಕರಣದ ತನಿಖೆ ಮುಂದುವರಿದಿದೆ.   ಆರೋಪಿಗ­ಳೊಂದಿಗೆ ಬಾಲಕಿಯರನ್ನು ನೋಡಿರುವುದಾಗಿ ಬಾಲಕಿಯರ ಚಿಕ್ಕಪ್ಪ ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಅವರು ಆರೋಪಿಗಳೊಂದಿಗೆ ವಾಗ್ವಾದ ಕೂಡ ನಡೆಸಿದ್ದರು’ ಎಂದು  ಬ್ಯಾನರ್ಜಿ ವಿವರಿಸಿದರು.

ಆರೋಪಿಗಳು ಶಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದರಿಂದ ಬಾಲಕಿಯ ಚಿಕ್ಕಪ್ಪ ಅಲ್ಲಿಂದ  ಪರಾರಿಯಾದರು ಎಂದೂ ಹೇಳಿದರು.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ  ಪಾತ್ರವಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಬ್ಯಾನರ್ಜಿ, ಬಾಲಕಿಯರ ಕುಟುಂಬದವರು ಪೊಲೀಸ್‌ ಠಾಣೆಗೆ ಹೋಗಿದ್ದಾಗ ಅಲ್ಲಿ ಪೇದೆ ಸರ್ವೇಶ್‌ ಯಾದವ್‌ ಇದ್ದರು.

ಬದಾಯೂಂ ಗ್ರಾಮದ ಉಷೇತ್‌ ಪ್ರದೇಶದಲ್ಲಿ ಕ್ರಮವಾಗಿ 14 ಮತ್ತು 15 ವರ್ಷದ ಇಬ್ಬರು ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಮಾವಿನ ಮರಕ್ಕೆ ನೇಣು ಹಾಕಲಾಗಿತ್ತು. ಬಾಲಕಿಯರು ಮೇ 27ರಂದು ನಾಪತ್ತೆಯಾಗಿದ್ದರು. ಮರುದಿನ  ಅವರ ಶವ ಪತ್ತೆಯಾಗಿದ್ದವು.

ಬದಾಯೂಂ, ರಾಜಧಾನಿ ಲಖನೌದಿಂದ 300 ಕಿ.ಮೀ ದೂರದಲ್ಲಿದೆ. ಪ್ರಕರಣ ಸಂಬಂಧ ಮೂವರು ಸಹೋದರರಾದ ಪಪ್ಪು ಯಾದವ್‌, ಅವಧೇಶ್‌ ಯಾದವ್‌, ಉರ್ವೇಶ್‌ ಯಾದವ್‌ ಹಾಗೂ ಕಾನ್ಸ್‌ಟೆಬಲ್‌ಗಳಾದ ಛತ್ರಪಾಲ್‌ ಯಾದವ್‌, ಸರ್ವೇಶ್‌ ಯಾದವ್‌ ಅವರನ್ನು ಬಂಧಿಸಲಾಗಿದೆ. ಬಾಲಕಿಯರ ಚಿಕ್ಕಪ್ಪನ ನೆರವಿನಿಂದ ಇಬ್ಬರ ರೇಖಾಚಿತ್ರ ತಯಾರಿಸಲಾಗುತ್ತಿದೆ ಎಂದು ಡಿಜಿಪಿ ಹೇಳಿದರು.

ಸಮಿತಿ ರಚನೆ:  ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಪರಿಶೀಲನೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಎಡಿಜಿ ರ್‍ಯಾಂಕ್‌ ದರ್ಜೆಯ ಅಧಿಕಾರಿ ಸುತಪ ಸನ್ಯಾಲ್‌ ಅವರನ್ನು ಸಮಿತಿಯ ಮುಖ್ಯಸ್ಥರಾಗಿ ನೇಮಿಸ­ಲಾಗಿದೆ. ಐ.ಜಿ ರ್‍ಯಾಂಕ್‌ ದರ್ಜೆಯ ಅಧಿಕಾರಿಗಳಾದ ತಿಲೋತ್ತಮ ವರ್ಮಾ ಮತ್ತು ತನುಜಾ ಶ್ರೀವಾಸ್ತವ್‌ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.

ಪೊಲೀಸ್‌ ಅಡುಗೆಯವನ ಕೃತ್ಯ
ಬಹರೇಚ್‌ (ಪಿಟಿಐ): 15 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಲ್ಲಿನ  ಕೊತ್ವಾಲ್‌ ಬೆಗನಾಪುರ ಪೊಲೀಸ್‌ ಚೌಕಿಯ ಅಡುಗೆಯವನನ್ನು ಬಂಧಿಸಲಾಗಿದೆ. 

ಆರಂಭದಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲು ನಿರಾಕರಿಸಿದ ಇಬ್ಬರು ಕಾನ್ಸ್‌ಟೆಬಲ್‌ಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

‘ಪೊಲೀಸ್‌ ಚೌಕಿ ಬಳಿ ಸೋಮವಾರ ಬಾಲಕಿ ಕಟ್ಟಿಗೆ ಸಂಗ್ರಹಿಸುತ್ತಿದ್ದಳು. ಈ ವೇಳೆ ಅಡುಗೆಯವನು ಬಾಲಕಿಗೆ ಆಮಿಷ ತೋರಿಸಿ ಕೋಣೆಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.  ಆದರೆ, ಬಾಲಕಿ ಅಲ್ಲಿಂದ ಓಡಿ ಹೋಗಿ ಕುಟುಂಬ ಸದಸ್ಯರಿಗೆ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ಆಕೆಯ ಕುಟುಂಬದವರು ಪೊಲೀಸ್‌ ಚೌಕಿಗೆ ತೆರಳಿ ದೂರು ನೀಡಿದರು. ಆದರೆ, ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಳ್ಳಲು ನಿರಾಕರಿಸಿದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಿಕೊಳ್ಳುವುದನ್ನು ಬಿಟ್ಟು ಪೊಲೀಸರು ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿರುವ ಬಾಲಕಿಯ ಕುಟುಂಬದವರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೋಹಿತ್‌ ಗುಪ್ತಾ ಅವರ ಗಮನಕ್ಕೆ ತಂದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ. ಆರೋಪಿ ಛೇದಿ ಲಾಲ್‌ನನ್ನು ಬಂಧಿಸಿ, ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪಿಒಸಿಎಸ್‌ಒ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಫ್‌ಐಆರ್‌ ಪ್ರತಿಗೆ ನಿರ್ದೇಶನ
ಲಖನೌ (ಐಎಎನ್‌ಎಸ್‌):  ಬದಾಯೂಂ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ಮತ್ತು ಮರಣೋತ್ತರ ಪರೀಕ್ಷೆ ವರದಿಯ ಪ್ರತಿಗಳನ್ನು ಜೂನ್‌ 9ರಂದು  ಪ್ರಸ್ತುತಪಡಿ­ಸುವಂತೆ ಅಲಹಾಬಾದ್‌ ಹೈಕೋರ್ಟ್‌ ಮಂಗಳವಾರ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.

ಘಟನೆಯ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಕೇಂದ್ರಕ್ಕೆ ಬರೆದ ಶಿಫಾರಸು ಪತ್ರವನ್ನು ಜೂನ್‌ 9ರಂದು  ಉತ್ತರ ಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಹಾಜರುಪಡಿಸು­ವಂತೆಯೂ ಲಖನೌ ಪೀಠ ಸೂಚಿಸಿದೆ.

‘ವಿ ದ ಪೀಪಲ್‌’ ಸರ್ಕಾರೇತರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಿನ್ಸ್‌ ಲೆನಿನ್‌ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ನೀಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT