ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ದುರ್ಬಳಕೆ: ಗೋಪಾಲ್‌ ಕಿಡಿ

ನ್ಯಾಯಮೂರ್ತಿ ಹುದ್ದೆಗೆ ನೇಮಕ ವಿವಾದ
Last Updated 25 ಜೂನ್ 2014, 20:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ತಮ್ಮ ಹೆಸರು ಪರಿಗಣಿಸಲು ನಿರಾಕರಿಸಿ­ರುವ ಕೇಂದ್ರ ಸರ್ಕಾರ ಮತ್ತು ಸುಪ್ರೀಂ­ಕೋರ್ಟ್‌ ನಡೆಯಿಂದ ಬೇಸರ­ಗೊಂಡಿ­ರುವ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ, ತಮ್ಮ ಹೆಸರನ್ನು ಶಿಫಾ­ರಸು ಪಟ್ಟಿಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯ­ಮೂ­ರ್ತಿ­ಯವರನ್ನು (ಸಿಜೆಐ) ಕೋರಿದ್ದಾರೆ.

ಈ ಕುರಿತು ಅವರು ಮುಖ್ಯ ನ್ಯಾಯ­ಮೂರ್ತಿ ಆರ್‌.ಎಂ.ಲೋಧಾ ಅವರಿಗೆ ಒಂಬತ್ತು ಪುಟಗಳ ಪತ್ರ­ವೊಂದನ್ನು ಬರೆದಿದ್ದಾರೆ. ತಾವು ಸುಪ್ರೀಂಕೋರ್ಟ್‌ ನ್ಯಾಯ­ಮೂರ್ತಿಯಾಗಿ ನೇಮಕವಾಗು­ವು­ದನ್ನು ತಡೆಯುವ ಉದ್ದೇಶದಿಂದಲೇ ನರೇಂದ್ರ ಮೋದಿ ಸರ್ಕಾರ, ತಮ್ಮ ಚಾರಿತ್ರ್ಯದಲ್ಲಿ ತಪ್ಪು ಹುಡುಕುವಂತೆ ಸಿಬಿಐಗೆ ನೇರವಾಗಿ ಆದೇಶಿಸಿದೆ ಎಂದೂ ಅವರು ಆರೋಪಿಸಿದ್ದಾರೆ.

‘ಮಾಧ್ಯಮಗಳಲ್ಲಿ ಹರಿಬಿಡಲಾದ ಹಲವು ಕಥೆಗಳಿಗೆ ನಾನು ಆಹಾರ­ವಾಗಿ­ದ್ದೇನೆ. 30 ವರ್ಷ ನನ್ನ ಸಲಹೆ ಪಡೆ­ಯು­ತ್ತಿದ್ದ ಗುಪ್ತಚರ ದಳ (ಐಬಿ), ಸಿಬಿಐ ಹಾಗೂ ಸಂಪುಟ ಸಚಿವಾಲಯ­ಗಳು  ನನ್ನ ಚಾರಿತ್ರ್ಯ ಪ್ರಶ್ನಿ­ಸು­ವುದನ್ನು ನಾನು ಸಹಿಸುವುದಿಲ್ಲ’ ಎಂದಿದ್ದಾರೆ.

2ಜಿ ಹಗರಣದ ಆರೋಪಿ ಎ. ರಾಜಾ ಹಾಗೂ ನೀರಾ ರಾಡಿಯಾ ಪ್ರಕರಣದ ಜತೆ ತಮ್ಮ ಹೆಸರು ತಳಕು ಹಾಕಿರುವುದಕ್ಕೆ ಅವರು ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ರಾಜಾ ಅವರನ್ನು ನಾನು   ಜೀವನ­ದಲ್ಲಿ ಒಂದು ಬಾರಿ ಮಾತ್ರ ಭೇಟಿಯಾ­ಗಿದ್ದೇನೆ. ಆಗಿನ್ನೂ ಅವರು 2ಜಿ ಹಗರಣದಲ್ಲಿ ಆರೋಪಿಯಾಗಿ­ರಲಿಲ್ಲ. ರಾಜಾ ಜತೆ ನಾನು ಕೈಜೋಡಿಸಿದ್ದೆ ಎಂದು ಆರೋಪಿಸ­ಲಾಗಿದೆ. ಆದರೆ, ಸಾಲಿಸಿಟರ್‌ ಜನರಲ್‌ ಆಗಿದ್ದಾಗ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ರಾಜಾ ವಿರುದ್ಧದ ತನಿಖೆ ಹಾಗೂ ಕಾನೂನು ಕ್ರಮ ಕೈಬಿಡಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದ್ದೆ.

  ‘ನೀರಾ ರಾಡಿಯಾ ಟೇಪ್‌ಗಳನ್ನು ಸುಪ್ರೀಂಕೋರ್ಟ್‌ ನನಗೆ ಹಸ್ತಾಂತ­ರಿಸಿತ್ತು. ಈ ಟೇಪ್‌ಗಳಲ್ಲಿ ಏನಿದೆ ಎಂದು ತನಿಖೆ ಮಾಡಬೇಕು ಎಂದೂ ನಾನೇ ಪಟ್ಟುಹಿಡಿದಿದ್ದೆ’ ಎಂದೂ ಅವರು ಹೇಳಿದ್ದಾರೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲಿಸಿಟರ್‌ ಜನರಲ್‌ ಆಗಿ ಜವಾಬ್ದಾರಿ ನಿರ್ವಹಿಸಿದ್ದ 56 ವರ್ಷದ ಸುಬ್ರಮಣಿಯಂ ಹಾಗೂ ಇನ್ನಿತರ ಕೆಲವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಬ­ಹುದು ಎಂದು ನೇಮಕಾತಿ ಸಮಿತಿ ಶಿಫಾರಸು ಮಾಡಿತ್ತು.

ರೋಹಿಂಟನ್‌ ನಾರಿಮನ್‌, ಹೈಕೋರ್ಟ್‌ಗಳ ಮುಖ್ಯ ನ್ಯಾಯ­ಮೂರ್ತಿ­ಗಳಾದ ಅರುಣ್‌ ಮಿಶ್ರಾ, ಆದರ್ಶ ಕುಮಾರ್‌ ಗೋಯಲ್‌ ಅವರ ಹೆಸರುಗಳನ್ನು ಪರಿ­ಗ­ಣಿ­ಸಿ­ರುವ  ಸರ್ಕಾರ ಸುಬ್ರಮಣಿ­ಯಂ ಅವರ ಕಡತವನ್ನು ಮಾತ್ರ ವಾಪಸ್‌ ಕಳುಹಿಸಿದೆ.

ಸುಬ್ರಮಣಿಯಂ ಅವರ ಹೆಸರನ್ನು ತಿರಸ್ಕರಿಸಿರುವ ಬಗ್ಗೆ ಸರ್ಕಾರ ಅಧಿಕೃತ­ವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ.

ಆದರೆ, ಸಿಬಿಐ ಪರ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿ­ಯಲ್ಲೇ ‘2ಜಿ’ ಹಗರಣದ ಆರೋಪಿ­ಗಳ ಪರ ವಕೀಲರೊಂದಿಗೆ ಮಾತುಕತೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದ­ರಲ್ಲಿ ಅವರ ಪಾತ್ರದ ಬಗ್ಗೆ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು ಎಂಬ ವರದಿಯನ್ನು ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ.

ಮತ್ತೊಂದು ಅನುಮಾನ: ಸೊಹ್ರಾಬುದ್ದೀನ್‌ ನಕಲಿ ಎನ್‌­ಕೌಂಟರ್‌ ಪ್ರಕರಣದ ವಿಚಾರಣೆಯಲ್ಲಿ  ಸುಪ್ರೀಂ ಕೋರ್ಟ್‌ನ ಸಹಾಯಕರಾಗಿದ್ದ (ಅಮಿಕಸ್‌ ಕ್ಯೂರಿ) ಸುಬ್ರಮಣಿಯಂ, ನರೇಂದ್ರ ಮೋದಿ ಅವರ ನೇತೃತ್ವದ ಗುಜರಾತ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.  ಸುಬ್ರಮಣಿಯಂ ಅವರ ವಾದ­ದಿಂದಾಗಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿ­ಸಿತ್ತು. ಇದು ಗುಜರಾತ್‌ ಸರ್ಕಾರಕ್ಕೆ ಕಂಟಕವಾಗಿ ಪರಿಣ­ಮಿಸಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣಿಯಂ ಅವರ ಹೆಸರನ್ನು ತಿರಸ್ಕರಿಸಿದೆ ಎಂಬ ಗುಮಾನಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT