ನವದೆಹಲಿ (ಪಿಟಿಐ): ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಂ ಅವರು ಗುರುವಾರ ಸಿಬಿಐ ಹೆಚ್ಚುವರಿ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಈ ತನಿಖಾ ಸಂಸ್ಥೆಯಲ್ಲಿ ಈ ದರ್ಜೆಗೆ ಏರಿದ ಮೊದಲ ಮಹಿಳೆ ಎಂಬ ಹಿರಿಮೆಯೂ ಅವರದ್ದಾಗಿದೆ.
1980ನೇ ತಂಡದ ತಮಿಳುನಾಡು ಶ್ರೇಣಿಯ ಅಧಿಕಾರಿಯಾದ ಅವರು ಈ ಮುಂಚೆ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಡಿಐಜಿಯಾಗಿ, ನಂತರ ಮೊತ್ತ ಮೊದಲ ಮಹಿಳಾ ಜಂಟಿ ನಿರ್ದೇಶಕಿ ಯಾಗಿ ಸೇವೆ ಸಲ್ಲಿಸಿದ್ದರು.
1999ರಿಂದ 2006ರ ಅವಧಿಯಲ್ಲಿ ತೆಲಗಿ ಛಾಪಾ ಕಾಗದ ಹಗರಣ ಸೇರಿದಂತೆ ಹಲವು ಆರ್ಥಿಕ ಅಪರಾಧಗಳ ತನಿಖೆಯನ್ನು ನಿರ್ವಹಿಸಿದ ಅನುಭವ ಅವರಿಗಿದೆ.
56 ವರ್ಷದ ಅರ್ಚನಾ ಅವರನ್ನು ಈ ಹುದ್ದೆಗೆ ನೇಮಿಸುವಂತೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಶಿಫಾರಸು ಮಾಡಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ‘ನೇಮಕಾತಿ ಸಂಪುಟ ಸಮಿತಿ’ ಅದನ್ನು ಅನುಮೋದಿಸಿತ್ತು.