ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌, ಮರಳಿಗೆ ಮರುಳಾಗದ ಮನೆ!

Last Updated 29 ಜುಲೈ 2014, 19:30 IST
ಅಕ್ಷರ ಗಾತ್ರ

ಒಂದೆಡೆ ಏರುತ್ತಿರುವ ಸಿಮೆಂಟ್‌, ಇಟ್ಟಿಗೆ, ಮರಳಿನ ಬೆಲೆ, ನೀರಿನ ಕೊರತೆ; ಇನ್ನೊಂದೆಡೆ ಕೂಲಿಯಾಳುಗಳು ಸಿಗದೇ ಪರದಾಟ;   ಮತ್ತೊಂದೆಡೆ ಮನೆ ಕಟ್ಟುವಾಗ ಅಕ್ಕಪಕ್ಕದವರು ಹಾಕುವ ಹಿಡಿಶಾಪ... ಇವೆಲ್ಲದಕ್ಕೂ ಉತ್ತರವಾಗಿ ಬಂದಿದೆ ಫಟಾಫಟ್‌ ಮನೆ. ಸಿಮೆಂಟ್‌, ಮರಳು, ಇಟ್ಟಿಗೆ, ನೀರು ಯಾವುದನ್ನೂ ಹೆಚ್ಚಿಗೆ ಬೇಡದ, ಕೂಲಿಯಾಳುಗಳ ಚಿಂತೆಯಿಂದಲೂ ಮುಕ್ತ ಮಾಡುವ, ಪರಿಸರ ಸ್ನೇಹಿಯಾಗಿರುವ ಆಸ್ಟ್ರೇಲಿಯಾ ತಂತ್ರಜ್ಞಾನದ ಮನೆಯೀಗ ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಿದೆ...

ಮನೆ ಕಟ್ಟಲು ಅತಿ ಅವಶ್ಯಕವಾಗಿ ಏನೇನು ಬೇಕು? ಇದೆಂಥ ಪ್ರಶ್ನೆ?
ಸಿಮೆಂಟ್‌, ಮರಳು,  ಇಟ್ಟಿಗೆಯಂತೂ ಬೇಕೇ ಬೇಕು.  ನೀರಿನ ಅವಶ್ಯಕತೆಯೂ ಅಷ್ಟೇ ಇದೆ. ಹಾಗೇನೇ, ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಮನೆ ಕಟ್ಟುವಾಗ ಉಂಟಾಗುವ ದೂಳಿನಿಂದಾಗಿ ಅಕ್ಕ ಪಕ್ಕದವರ ‘ಶಾಪ’ಕ್ಕೆ ಗುರಿಯಾಗಲೂ ತಯಾರಿರಬೇಕು!
ಇನ್ನು, ಕೂಲಿಯಾಳುಗಳನ್ನು ಮರೆಯಲು ಆದೀತೆ? ಅವರಿಲ್ಲದಿದ್ದರೆ ಕೆಲಸವೇ ಸಾಗದು.
ಆದರೆ, ಇದಾವುದನ್ನೂ ಹೆಚ್ಚಿಗೆ ಬಳಸದೇ ಮನೆ ಕಟ್ಟೋಕಾಗುತ್ತಾ...? ಎಲ್ಲಿ ಕನಸಿನಲ್ಲಾ...? ಅಲ್ಲ... ನಿಜವಾಗಿಯೂ!
ಹೌದು, ಈ ‘ಕನಸಿನ ಮನೆ’ ಈಗ ನನಸಾಗಿದೆ. ಈ ಮನೆಗೆ ಇಟ್ಟಿಗೆ, ಸಿಮೆಂಟ್ ಬಳಕೆ ಅತ್ಯಲ್ಪ. ಗೋಡೆ, ಮೇಲ್ಛಾವಣಿಗೆ ಕಲ್ಲು, ಸಿಮೆಂಟ್ ಮರಳು, ಕಬ್ಬಿಣವನ್ನೂ ಹೆಚ್ಚಿಗೆ ಇದು ಕೇಳದು. ಜಾಯಿಂಟ್‌ಗಷ್ಟೇ ಸಿಮೆಂಟ್, ಫಿಲ್ಲಿಂಗ್‌ಗೆ ಕ್ವಾರೆ ಜಲ್ಲಿ ಪುಡಿ ಬಳಸುವುದು ಬಿಟ್ಟರೆ ಮತ್ತೆಲ್ಲೂ ಇವು ಕಾಣಸಿಗದು.

ಸಿಮೆಂಟ್‌ ಬಳಕೆ ಹೆಚ್ಚಿದಷ್ಟೂ ನೀರಿನ ಅವಶ್ಯಕತೆ ಇರುತ್ತದೆ. ಆದರೆ ಇಲ್ಲಿ ಸಿಮೆಂಟ್‌ ಬಳಕೆ ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ, ನೀರಿನ ಬಳಕೆಯೂ ಕಡಿಮೆಯೇ.

ಮಾಲಿನ್ಯದ ಬಗ್ಗೆ ಹೇಳುವುದಾದರೆ ಇದರಿಂದಲೂ ಈ ಮನೆ ಮುಕ್ತ. ಏಕೆಂದರೆ ಇದು ಸಂಪೂರ್ಣ ಪರಿಸರಸ್ನೇಹಿ. ಕೂಲಿಯಾಳುಗಳನ್ನು ಹುಡುಕುತ್ತ, ಅವರನ್ನು ಕಾಯುತ್ತಾ ಮನೆ ನಿರ್ಮಾಣ ಕಾರ್ಯವನ್ನು ವಿಳಂಬ ಮಾಡುವ ಮಾತೂ ಇಲ್ಲಿಲ್ಲ. ಏಕೆಂದರೆ ಈ ಮನೆ ಹೆಚ್ಚಿನ ಕೂಲಿಗಳನ್ನು ಕೇಳುವುದಿಲ್ಲ.

ಬಿಸಿಲಿನ ತಾಪ ಮಾಮೂಲಿ ಮನೆಯಂತೆ ಇಲ್ಲ, ಬೇಸಿಗೆ ಯಲ್ಲೂ ಮನೆಯೊಳಗೆ ಕೂಲ್‌ ಕೂಲ್‌, ಮಳೆಗಾಲದಲ್ಲಿ ನೀರು ಬಿದ್ದರೂ ಗೋಡೆ ಹೀರಿಕೊಳ್ಳುವುದಿಲ್ಲ. ಮಳೆ ನೀರು ಸುಲಭವಾಗಿ ಜಾರಿ ಹರಿದುಹೋಗುತ್ತದೆ.

ಅಷ್ಟೇ ಅಲ್ಲ. ಕೈಯಲ್ಲಿ ದುಡ್ಡಿದ್ದರೂ ಹಲವು ಕಾರಣ ಗಳಿಂದ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗುತ್ತದೆ. ಆದರೆ ಈ ಮನೆಗೆ ಆ ಸಮಸ್ಯೆಯೂ ಇಲ್ಲ. ಏಕೆಂದರೆ ತಿಂಗಳೊಳಗೇ ಮನೆ ಸಿದ್ಧ!

ಇಷ್ಟೆಲ್ಲ ಸೌಕರ್ಯ ಇರುವ ಈ ಮನೆಯ ಹೆಸರು ‘ರ್‍ಯಾಪಿಡ್ ವಾಲ್‌ ಸಿಸ್ಟಮ್‌’. 1990ರ ದಶಕದ ಆಸ್ಟ್ರೇಲಿ ಯಾದ ಈ ತಂತ್ರಜ್ಞಾನ ಕೆಲ ವರ್ಷಗಳ ಹಿಂದೆಯಷ್ಟೇ ಭಾರತಕ್ಕೆ ಕಾಲಿಟ್ಟಿದೆ. ಇತ್ತೀಚೆಗೆ ರಾಜ್ಯದಲ್ಲೂ ಹೊಸ ಅಲೆ ಎಬ್ಬಿಸಿದೆ.

ಕೂಲಿಕಾರ್ಮಿಕರ ಸಮಸ್ಯೆ, ಏರುತ್ತಿರುವ ಸಿಮೆಂಟ್‌, ಮರಳಿನ ಬೆಲೆ, ನೀರಿನ ಕೊರತೆ... ಇವೆಲ್ಲವುಗಳಿಗೆ ಸವಾಲೊಡ್ಡಿ ಇದಾವುದನ್ನೂ ಹೆಚ್ಚಿಗೆ ಬೇಡದೇ ಈ ಮನೆಗಳೀಗ ಅಲ್ಲಲ್ಲಿ ತಲೆ ಎತ್ತಿ ನಿಂತಿವೆ.

ಆಸ್ಟ್ರೇಲಿಯಾ ತಂತ್ರಜ್ಞರು ಕಂಡುಕೊಂಡಿದ್ದ ಈ ವಿಧಾನವನ್ನು ಕರ್ನಾಟಕಕ್ಕೆ ಪರಿಚಯಿಸಿದವರು ಉಡುಪಿ ಜಿಲ್ಲೆ ಬ್ರಹ್ಮಗಿರಿ ಮೂಲದ ವಾಸ್ತುಶಿಲ್ಪಿ  ‘ಸೃಷ್ಟಿ ಎಂಜಿನಿಯ ರಿಂಗ್ ಬ್ಯೂರೊ’ ಮುಖ್ಯಸ್ಥ ಸುಧೀರ್ ಆಚಾರ್ಯ. ಮುಂಬೈನಲ್ಲಿನ ಕೇಂದ್ರ ಸರ್ಕಾರದ ಉದ್ಯಮ ‘ಪ್ರಾದೇಶಿಕ ರಾಸಾಯನಿಕ ಕಾರ್ಖಾನೆ (ಆರ್‌ಸಿಎಫ್) ಮೂಲಕ ರಾಜ್ಯ ದಲ್ಲೇ ಮೊದಲ ಬಾರಿಗೆ ಮಣಿಪಾಲದಲ್ಲಿ ಈ ವಿನೂತನ ತಂತ್ರಜ್ಞಾನದಡಿ ಮನೆ ನಿರ್ಮಾಣ ಮಾಡಿದ್ದಾರೆ. ಇದೀಗ ಬೆಂಗಳೂರು, ಮಣಿಪಾಲ, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಹಲವಾರು  ‘ರ್‍ಯಾಪಿಡ್’ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಸುಧೀರ್‌, ಈಗ ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯೋಗಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ.

ಮನೆ ನಿರ್ಮಾಣ ವೆಚ್ಚ

‘ಶೆಲ್‌ ಅಂಡ್‌ ಕೋರ್’ ವಿಧಾನದಡಿ ರ್‍ಯಾಪಿಡ್ ವಾಲ್‌ ಮಾದರಿಯಲ್ಲಿ ಮನೆಯ ನಿರ್ಮಾಣ ಮಾಡಿದರೆ ಚದರ ಅಡಿಗೆ ರೂ800ರಿಂದ ರೂ1000ದವರೆಗೆ ಖರ್ಚು ಬರುತ್ತದೆ. ಅಂದರೆ, 10 ಅಡಿ ಉದ್ದ, 10 ಅಡಿ ಅಗಲದ ಮನೆ ನಿರ್ಮಾಣಕ್ಕೆ ಕನಿಷ್ಠ ರೂ80 ಸಾವಿರದಿಂದ  ಗರಿಷ್ಠ ರೂ1 ಲಕ್ಷದವರೆಗೆ ವೆಚ್ಚವಾಗುತ್ತದೆ.

‘ಶೆಲ್‌ ಅಂಡ್‌ ಕೋರ್‌’  ಪದ್ಧತಿ ಎಂದರೆ ಇದರಲ್ಲಿ ಗೋಡೆ, ತಾರಸಿ ಎಲ್ಲವೂ ಸಿದ್ಧಗೊಂಡಿರು ತ್ತವೆ. ಆದರೆ ಕಿಟಕಿ ಹಾಗೂ ಬಾಗಿಲಿನ ಚೌಕಟ್ಟನ್ನು ಮಾತ್ರ ಇರಿಸಲಾಗುವುದು (ಮಾಲೀಕರು ತಮಗೆ ಇಷ್ಟವಾದ ಮಾದರಿಯ ಕಿಟಕಿ, ಬಾಗಿಲು ಹಾಕಿ ಕೊಳ್ಳಬಹುದು). ಅದೇ ರೀತಿ ಈ ಮಾದರಿ ಯಲ್ಲಿ ನೆಲವನ್ನೂ ಸಿದ್ಧಪಡಿಸಿಕೊಡಲಾಗುವುದು. ಆದರೆ ಫ್ಲೋರಿಂಗ್ (ಟೈಲ್ಸ್ ಇತ್ಯಾದಿ) ಒಳಗೊಂಡಿರುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ರೆಡಿಮೇಡ್‌ ಮನೆ’  ನಿರ್ಮಾಣಕ್ಕೆ ಇದಕ್ಕಿಂತಲೂ ಕಡಿಮೆ ಖರ್ಚು ಆಗಲಿದೆ.

ಮನೆ ಕಟ್ಟಲು ಹಣ ಸಿದ್ಧವಿದ್ದರೆ ತಳಮಹಡಿ ಮಾತ್ರ ಇರುವ ಒಂದು ಮನೆಯನ್ನು 30 ದಿನಗಳ ಒಳಗೆ ಸಿದ್ಧ ಪಡಿಸಿಕೊಳ್ಳಬಹುದು. ‘ಶೆಲ್‌ ಅಂಡ್‌ ಕೋರ್’ ವಿಧಾನ ವನ್ನೇ ಅಳವ ಡಿಸಿ ಉತ್ತಮ ಗುಣಮಟ್ಟದ ಸಿಮೆಂಟ್‌ ಬಳಸಿ ಮನೆ ಕಟ್ಟುವುದಾದರೆ ಪ್ರತಿ ಚದರ ಅಡಿಗೆ ಸುಮಾರು ರೂ1200 ಖರ್ಚಾಗುತ್ತದೆ.
-ಸುಧೀರ್‌ ಆಚಾರ್ಯ

ಏನಿದರ ಗುಟ್ಟು...?
‘ರ್‍ಯಾಪಿಡ್ ವಾಲ್‌’... ಹೆಸರೇ ಹೇಳುವಂತೆ ಈ ಮನೆಯ ಮುಖ್ಯ ಅಂಶ ಅಂದರೆ ರೆಡಿಮೇಡ್‌ ಗೋಡೆ. ಈ ಗೋಡೆಯನ್ನು ನಿರ್ಮಿಸುವುದು ರಸಗೊಬ್ಬರದ  ತ್ಯಾಜ್ಯ ವನ್ನು ಬಳಸಿ. ಇದನ್ನು ಕೊಚ್ಚಿಯಲ್ಲಿ ತಯಾರಿಸಲಾಗುತ್ತದೆ. ಅಲ್ಲಿರುವ ‘ಎಫ್‌ಎಸಿಟಿ’ ರಸಗೊಬ್ಬರ ಕಂಪೆನಿ,  ಯೂರಿಯಾ ತಯಾರಿಸುವ ಸಂದರ್ಭದಲ್ಲಿ ಬರುವ ತ್ಯಾಜ್ಯ ವನ್ನು ಒಂದೆಡೆ ಶೇಖರಿಸಿ ಇಡಲಾಗುತ್ತದೆ. ಇದನ್ನು ಏನು ಮಾಡುವುದು ಎಂಬ ಪ್ರಶ್ನೆಗೆ ಉತ್ತರವಾಗಿ ಕಂಡುಕೊಂಡಿ ರುವುದು ಈ ರೀತಿ ಮನೆಯ ನಿರ್ಮಾಣ.

ಈ ತ್ಯಾಜ್ಯಗಳಿಂದ  ಮೊದಲು ಪ್ಯಾನೆಲ್‌‌ಗಳನ್ನು ತಯಾ ರಿಸಲಾಗುತ್ತದೆ. ಮನೆಯ ಅಳತೆಗೆ ತಕ್ಕಂತೆ ಎಷ್ಟು ಪ್ಯಾನೆಲ್‌‌ಗಳು ಬೇಕೋ ಅಷ್ಟನ್ನು ತಯಾರು ಮಾಡಿ ಕೊಳ್ಳಲಾಗುತ್ತದೆ.

ಆದ್ದರಿಂದ ಮನೆ ಮಾಲೀಕರು ಮೊದಲು ಮನೆಯ ಸ್ಕೆಚ್‌ ನೀಡಬೇಕು. ಅದರ ಅಳತೆಗೆ ತಕ್ಕಂತೆ ಪ್ಯಾನೆಲ್‌ ತರಿಸಿಕೊಳ್ಳಲಾಗುತ್ತದೆ. ಮನೆಯ ತಳಪಾಯ ಹಾಕಿದ ನಂತರ ಕಬ್ಬಿಣದ ರಾಡ್ ಒಂದನ್ನು ಅದರ ಮೂಲೆ ಮತ್ತು ಮಧ್ಯದಲ್ಲಿ ಇಡಲಾಗುವುದು. ಕ್ರೇನ್ ಮೂಲಕ  ಗೋಡೆಯ ಪ್ಯಾನೆಲ್ ಗಳನ್ನು ಈ ರಾಡ್ ನಡುವೆ ಜೋಡಿಸಲಾಗುತ್ತದೆ. ಇಲ್ಲಿಗೆ ಗೋಡೆ ಸಿದ್ಧಗೊಳ್ಳುತ್ತದೆ. ಗೋಡೆ ಮೊದಲೇ ಸಿದ್ಧ ಇರುವ ಕಾರಣ ಪ್ಲಾಸ್ಟರಿಂಗ್ ಅಗತ್ಯವಿಲ್ಲ, ನಟ್- ಬೋಲ್ಟ್ ಜೋಡಣೆಯೂ ಬೇಕಿಲ್ಲ. ಗೋಡೆಯಂತೆಯೇ ತಾರಸಿಯನ್ನೂ ಮೊದಲೇ ಸಿದ್ಧಗೊಳಿಸಿ ಇಟ್ಟುಕೊಳ್ಳಲಾಗುವುದು. ಗೋಡೆಯನ್ನು ಹಾಕಿದ ತಕ್ಷಣ ಅದರ ಮೇಲೆ ತಾರಸಿಯನ್ನು ಕ್ರೇನ್‌ ಮೂಲಕ ಕುಳ್ಳಿರಿಸಬಹುದು.

ಪ್ಯಾನೆಲ್‌‌ಗಳು ಹೀಗಿವೆ...
12/3 ಮೀಟರ್ ವಿನ್ಯಾಸದಲ್ಲಿ ಒಂದೊಂದು ಪ್ಯಾನೆಲ್‌‌ಗಳಿರುತ್ತವೆ. ಇದು 1.6 ಮೆಟ್ರಿಕ್‌ ಟನ್ನಿನ್ನಷ್ಟು ಭಾರವಾಗಿದ್ದು, 5 ಇಂಚಿನಷ್ಟು ದಪ್ಪ ಇರುತ್ತದೆ. ಅದೇ ಸಿಮೆಂಟಿನಿಂದ ಮಾಡಿರುವ ಪ್ಯಾನೆಲ್‌‌ಗಳಾಗಿದ್ದಲ್ಲಿ 10 ಮೆಟ್ರಿಕ್‌ ಟನ್‌ಗಳಷ್ಟು ಭಾರವಾಗಿದ್ದು 9 ಇಂಚು ದಪ್ಪ ಇರುತ್ತದೆ. ಇವೆರಡನ್ನೂ ಹೋಲಿಸಿ ನೋಡಿದರೆ ‘ರ್‍ಯಾಪಿಡ್‌ ವಾಲ್‌ ಸಿಸ್ಟಮ್‌’ನಿಂದ ಮಾಡಿರುವ ಮನೆಗಳು, ಸಿಮೆಂಟ್‌ ಮನೆಗಳಿಂದ ಎಷ್ಟರ ಮಟ್ಟಿಗೆ ಕಡಿಮೆ ತೂಗಬಲ್ಲದು ಎಂಬುದನ್ನು ಗಮನಿಸಬಹುದು.

150/150 ಮೀಟರ್‌ ಮನೆಯ ಗೋಡೆಯನ್ನು 35 ಗಂಟೆಯಲ್ಲಿ ಕೇವಲ ಮೂರು ಜನ ಹಾಗೂ ಒಂದು ಕ್ರೇನ್‌ನ ನೆರವಿನಿಂದ ಕಟ್ಟಬಹುದು. ಒಂದು ಗಂಟೆಗೆ ಸುಮಾರು 34 ಗೋಡೆಗಳನ್ನು ನಿರ್ಮಿಸಬಹುದು. ಮೂರು ಮೀಟರ್ ಅಳತೆ ಇರುವ ರ್‍ಯಾಪಿಡ್ ವಾಲನ್ನು ಕ್ರೇನ್‌ ಸಹಾಯವಿಲ್ಲದೇ ಬಳಸಬಹುದು.

ಉಷ್ಣದಿಂದಲೂ ಮುಕ್ತಿ
ಈ ತಂತ್ರಜ್ಞಾನ ಅಧಿಕ ಉಷ್ಣದಿಂದ ಮನೆಯನ್ನು ಕಾಪಾಡಬಲ್ಲದು ಎನ್ನುತ್ತಾರೆ ಸುಧೀರ್‌ ಆಚಾರ್ಯ. ‘ಈ ಮನೆ ಚೆನ್ನೈನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಯವರಿಂದ ಪರೀಕ್ಷೆಗೆ ಒಳಗಾಗಿದೆ. ಮನೆಯ ಒಂದು ಕಡೆಯ ಹೊರಭಾಗದಲ್ಲಿ ಒಂದು ಸಾವಿರ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವನ್ನು ಇಟ್ಟು ಪರೀಕ್ಷೆ ಮಾಡಲಾಗಿತ್ತು. ನಾಲ್ಕು ಗಂಟೆಯ ಅವಧಿಯಲ್ಲಿ ಕೇವಲ 57 ಡಿಗ್ರಿ ಸೆಲ್ಸಿಯಸ್ ಉಷ್ಣ ಮಾತ್ರ ಮನೆಯ ಒಳಭಾಗ ಪ್ರವೇಶಿಸಿತ್ತು. ಸಿಮೆಂಟ್‌ ಮನೆಗಳಿಗೆ ಹೋಲಿಸಿದರೆ ಶೇ 50ಕ್ಕಿಂತ ಅಧಿಕ ಉಷ್ಣವನ್ನು ತಡೆದುಕೊಳ್ಳುವ ಶಕ್ತಿ ಈ ಮನೆಗೆ ಇದೆ. ಆದ್ದರಿಂದ ಅತ್ಯಧಿಕ ಬಿಸಿಲು ಇರುವ ದಿನಗಳಲ್ಲೂ ಮನೆಯ ಒಳಗಡೆ ನೆಮ್ಮದಿಯಿಂದ ಇರಬಹುದು’ ಎನ್ನುತ್ತಾರೆ ಅವರು.
ಇದರ ಪ್ಯಾನೆಲ್‌‌ಗಳು ಬಿಳಿ ಬಣ್ಣದಲ್ಲಿ ಬರುತ್ತವೆ. ಆದ್ದರಿಂದ ಪ್ಲಾಸ್ಟರ್‌ ಆಗಲೀ ಪೇಂಟಿಂಗ್‌ ಆಗಲಿ ಅಗತ್ಯ ಬೀಳುವುದಿಲ್ಲ. ಹಾಗೆಂದು ಬಣ್ಣ ಪ್ರಿಯರು ಚಿಂತಿಸುವ ಅಗತ್ಯವೂ ಇಲ್ಲ. ತಮಗೆ ಬೇಕಾದ ಬಣ್ಣದ ಪೇಂಟಿಂಗ್‌ ಮಾಡಿಕೊಳ್ಳುವ ಅವಕಾಶವೂ ಇಲ್ಲಿದೆ.

ಎಲೆಕ್ಟ್ರಿಕಲ್‌ ವೈಯರಿಂಗ್‌ ಮತ್ತು ಪ್ಲಂಬಿಂಗ್‌ ಕೆಲಸಗಳನ್ನು ‘ರ್‍ಯಾಪಿಡ್ ವಾಲ್‌’ನಲ್ಲಿ ಇರುವ ರಂಧ್ರದಲ್ಲಿಯೇ ಜೋಡಿಸಬಹುದು. ಇದರಿಂದ ಹೆಚ್ಚುವರಿಯಾಗಿ ಇವುಗಳ ಜೋಡಣೆ ಕೆಲಸವಿಲ್ಲ. ರೆಡಿಮೇಡ್ ಗೋಡೆಗಳೇ ಆಗಿದ್ದರೂ ಮೇಲ್ಮೈ ಬಹಳ ನಯವಾಗಿಯೇ ಇರುತ್ತವೆ. ಇನ್ನು, ಮಾಲೀಕರು ತಮ್ಮಿಷ್ಟದ ಟೈಲ್ಸ್, ಗ್ರಾನೈಟ್‌, ಮೊಸಾಯಿಕ್‌ಗಳನ್ನು ಹಾಕಿಕೊಳ್ಳುವ ಅವಕಾಶವೂ ಇದೆ.

ಈ ಮನೆಯ ಇನ್ನೊಂದು ವಿಶೇಷ ಎಂದರೆ, ಮನೆ ಕೆಡವಿ ಬೇರೊಂದು ಮನೆ ಕಟ್ಟಬೇಕೆಂದರೆ ರ್‍ಯಾಪಿಡ್ ಪ್ಯಾನೆಲ್‌‌ಗಳನ್ನು ಕುಟ್ಟಿ ಪೌಡರ್‌ನಂತೆ ಪುಡಿ ಮಾಡಬಹುದು. ಆ ಪುಡಿಯನ್ನೂ ಸಹ ಮತ್ತೆ ಕಟ್ಟಡ ನಿರ್ಮಾಣ ಸಾಮಾಗ್ರಿಯಾಗಿ ಬಳಸಬಹುದಾಗಿದೆ.

ಅಧಿಕ ಬಾಳಿಕೆ
ಇಷ್ಟೆಲ್ಲ ಅವಕಾಶ ಇದ್ದ ಮೇಲೆ ಇದು ಬಹಳ ಬಾಳಿಕೆ ಬರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸುಲಭ. ಅದಕ್ಕೂ ಸುಧೀರ್‌ ಅವರು ಉತ್ತರಿಸುವುದು ಹೀಗೆ: ‘ಸಿಮೆಂಟ್‌ ನಿಂದ ಕಟ್ಟಿದ ಮನೆಗಳೇ ಆಗಲೀ, ಇಟ್ಟಿಗೆಯದ್ದೇ ಆಗಲೀ ಅಥವಾ ಕೇವಲ ಮಣ್ಣಿನಿಂದ ನಿರ್ಮಿಸಿದ ಮನೆಗಳೇ ಆಗಲಿ... ಕಟ್ಟಿದ ಒಂದೇ ವರ್ಷದೊಳಗೆ ಕುಸಿದು ಬಿದ್ದ ಉದಾಹರಣೆ ನಮ್ಮ ಮುಂದಿದ್ದರೆ ನೂರಾರು  ವರ್ಷ ಬಾಳಿದ ಉದಾಹರಣೆಗಳೂ ಇವೆ. ಎಲ್ಲವೂ ಗುಣಮಟ್ಟದ ಮೇಲೆ ನಿರ್ಧರಿತ ವಾಗುವಂಥದ್ದು. ಆದರೆ ರ್‍ಯಾಪಿಡ್ ವಾಲ್‌ ತಂತ್ರಜ್ಞಾನದಲ್ಲಿ  ಬೇರೆ ಬೇರೆ ಭಾಗಗಳಲ್ಲಿ ಇಲ್ಲಿಯವರೆಗೆ ಕಟ್ಟಿರುವ ಮನೆಗಳ ವಿರುದ್ಧ ಇದುವರೆಗೆ ದೂರುಗಳು ಬಂದಿಲ್ಲ. ವಿದೇಶ ಗಳಲ್ಲೂ ಇದು ಈಗಾಗಲೇ ಸಾಕಷ್ಟು ಪ್ರಸಿದ್ಧಿ ಹೊಂದಿದೆ.

ಈ ಮಾದರಿಯ ಮನೆ ಕಟ್ಟಿಕೊಂಡಿರುವ ಅನೇಕ ಮಂದಿ ಸಂತಸ ಹಂಚಿಕೊಂಡಿದ್ದಾರೆ. ‘ರ್‍ಯಾಪಿಡ್ ವಾಲ್‌ ಬಳಸಿ ಬೆಂಗಳೂರಿನ ಸಮೀಪದ ಕನಕಪುರದಲ್ಲಿ ಮಳಿಗೆ ನಿರ್ಮಾಣ ಮಾಡಿದ್ದೇನೆ. ಮಾಮೂಲಿ ಮನೆಗಿಂತ ಕಡಿಮೆ ವೆಚ್ಚದಲ್ಲಿ ಮಳಿಗೆ ನಿರ್ಮಾಣವಾಗಿದೆ. ಮಳಿಗೆ ಒಳಗೆ ಸ್ಥಳಾವಕಾಶವೂ ಸಾಕಷ್ಟು ಸಿಕ್ಕಿದೆ. ಕಾರ್ಮಿಕರನ್ನು ಹುಡುಕುವ ಕಷ್ಟ ಇಲ್ಲದ ಕಾರಣ, ನಿಶ್ಚಿಂತೆಯಿಂದ ಕಟ್ಟಡ ನಿರ್ಮಾಣವಾ ಗಿದೆ. ಆದ್ದರಿಂದ ನನ್ನ ಮನೆಯನ್ನೂ ಇದೇ ತಂತ್ರಜ್ಞಾನ ಬಳಸಿ ಕಟ್ಟಬೇಕೆಂದಿರುವೆ’ ಎನ್ನುತ್ತಾರೆ ಉದ್ಯಮಿ ಮಂಜುನಾಥ ಕೆ.ಜಿ.

ಇದಕ್ಕೆ ದನಿಗೂಡಿಸುವ  ಗೋದ್ರೆಜ್ ಕಂಪೆನಿಯ ಉದ್ಯೋಗಿ ಪ್ರಕಾಶ್ ಆಚಾರ್ಯ, ‘ಮಣಿಪಾಲದಲ್ಲಿ ನಾನು ಮನೆ ಕಟ್ಟಿಸಿದ್ದೇನೆ. ನನಗೆ ಸಿಮೆಂಟ್‌, ಮರಳು, ಇಟ್ಟಿಗೆ ಎಲ್ಲದರ ಲ್ಲಿಯೂ ಉಳಿತಾಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಯದ ಉಳಿತಾಯವಾಗಿದೆ. 1,000 ಚದರಡಿ ವಿಸ್ತೀರ್ಣದ ಮನೆ ನಮ್ಮದು. ಯಥೇಚ್ಛ ನೈಸರ್ಗಿಕ ಬೆಳಕಿದೆ. ಮನೆಯೊಳಗೆ ಹೊಕ್ಕರೆ ಉಷ್ಣಾಂಶ 4-ರಿಂದ 6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇದೆ’ ಎನ್ನುತ್ತಾರೆ.

ರೆಡಿಮೇಡ್‌ ಮನೆ
ಇದೇ ಮಾದರಿಯಲ್ಲೀಗ ರೆಡಿಮೇಡ್‌ ಮನೆ ನಿರ್ಮಾಣ ಕಾರ್ಯದಲ್ಲಿ ಸುಧೀರ್‌ ಆಚಾರ್ಯ ನಿರತರಾಗಿದ್ದಾರೆ. ನಿಮಗೆ ಎಷ್ಟು ಬಜೆಟ್‌ ನಲ್ಲಿ ಮನೆಯಾಗಬೇಕು, ಆ ಬಜೆಟ್‌ಗೆ ತಕ್ಕಂತೆ ಯಾವ್ಯಾವ ಅನುಕೂಲ ಗಳು ಬೇಕು ಎಂದು ಸುಧೀರ್‌ ಅವರ ಬಳಿ ಹೇಳಿದ್ದೇ ಆದಲ್ಲಿ, ಅದನ್ನು ಸಿದ್ಧಗೊಳಿಸಿ ನಿಮ್ಮ ನಿವೇಶನ ಇರುವಲ್ಲಿ ಆ ಮನೆಯನ್ನು ತಂದು ಅಲ್ಲಿಯೇ ಆ ಮನೆಯನ್ನು ಫಿಕ್ಸ್ ಮಾಡಿ ಕೊಡಲಾಗುತ್ತದೆ.
‘ಈ ಮನೆಗೆ 15 ವರ್ಷಗಳ ಗ್ಯಾರಂಟಿ ಕೂಡ ನೀಡಲಾಗುವುದು. ಅಷ್ಟೇ ಅಲ್ಲದೇ, ಮನೆಯ ವಿನ್ಯಾಸವನ್ನು ಅವರ ಅಗತ್ಯಕ್ಕೆ ತಕ್ಕಂತೆ ಬದಲಿಸುವ, ಇಷ್ಟಪಟ್ಟ ಪೇಂಟಿಂಗ್‌ ಗಳನ್ನು ಮಾಡಿಕೊಳ್ಳುವ ಅವಕಾಶವೂ ಮಾಲೀಕರಿಗೆ ಇದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT