ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ಗಡಿಯಲ್ಲಿ ಸಿಕ್ಕಿಬಿದ್ದಿದ್ದ ಅಹದ್

Last Updated 23 ಜನವರಿ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು: ಎನ್‌ಐಎ ವಶದಲ್ಲಿರುವ ಬೆಂಗಳೂರಿನ ಮಹಮದ್ ಅಬ್ದುಲ್ ಅಹದ್ (46), 2014ರ ಡಿಸೆಂಬರ್‌ನಲ್ಲಿ ಸಂಸಾರ ಸಮೇತ ಸಿರಿಯಾ ಗಡಿಯಲ್ಲಿ ನುಸುಳುವಾಗ ಟರ್ಕಿ ಪೊಲೀಸರಿಗೆ ಸಿಕ್ಕಿ ಬಿದ್ದು ಗಡಿಪಾರಾಗಿದ್ದ.

ಚೆನ್ನೈ ಮೂಲದ ಅಹದ್, ಆತನ ಮಡದಿ, ಐವರು ಮಕ್ಕಳು, ತೆಲಂಗಾಣದ ಜಾವೇದ್ ಬಾಬ  ಹಾಗೂ ಹಾಸನದ ಇಬ್ರಾಹಿಂ ​ನೌಫಾಲ್ (24)  ಎಂಬುವರು ಪ್ರವಾಸಿ ವೀಸಾದಲ್ಲಿ ಬೆಂಗಳೂರಿನಿಂದ ಟರ್ಕಿಯ ಇಸ್ತಾಂಬುಲ್​ಗೆ ತೆರಳಿದ್ದರು. ಅಲ್ಲಿಂದ ಸಿರಿಯಾ ಗಡಿಯಲ್ಲಿ ನುಸುಳುತ್ತಿದ್ದಾಗ 2014ರ ಡಿ. 24ರಂದು ಪೊಲೀಸರು ಅವರನ್ನು ಬಂಧಿಸಿದ್ದರು.

35 ದಿನಗಳ ಕಾಲ ವಶದಲ್ಲಿಟ್ಟುಕೊಂಡು ಸುದೀರ್ಘ ವಿಚಾರಣೆ ನಡೆಸಿದ್ದ ಟರ್ಕಿ ಪೊಲೀಸರು, ನಂತರ 2015ರ ಜ.30ರಂದು ಭಾರತಕ್ಕೆ ಗಡಿಪಾರು ಮಾಡಿದ್ದರು. ಅಲ್ಲಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಬಂದಿಳಿಯುತ್ತಿದ್ದಂತೆಯೇ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಸಿಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.

‘ಸಂಬಂಧಿಕರ ಭೇಟಿಗೆ ಇಸ್ತಾಂಬುಲ್‌ಗೆ ತೆರಳಿದ್ದಾಗಿ ಅವರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ಒಂಬತ್ತೂ ಮಂದಿಯನ್ನು ಬಿಟ್ಟು ಕಳುಹಿಸಲಾಗಿತ್ತು. ಆದರೆ, ಅಂದಿನಿಂದಲೂ ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈತನೂ ಟೆಕ್ಕಿ:  ಕ್ಯಾಲಿಫೋರ್ನಿಯಾದ ‘ಕೆನಡಿ-ವೆಸ್ಟರ್ನ್’ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಹದ್, ಅಮೆರಿಕದಲ್ಲೇ 10 ವರ್ಷ ಕೆಲಸ ಮಾಡಿದ್ದ. ಈಗ ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲೇ ಕೆಲಸ ಮಾಡಿಕೊಂಡು, ಪತ್ನಿ–ಮಕ್ಕಳ ಜತೆ ಥಣಿಸಂದ್ರದಲ್ಲಿ ನೆಲೆಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಬ್ಬನೇ ಇರಲು ನಿರ್ಧರಿಸಿದ್ದ: ‘ಪತ್ನಿ–ಮಕ್ಕಳನ್ನು ಸಿರಿಯಾದಲ್ಲಿ ಬಿಟ್ಟು ಬಂದು, ತಾನೊಬ್ಬನೇ ಬೆಂಗಳೂರಿನಲ್ಲಿ ಇರಬೇಕೆಂದು ಅಹದ್ ನಿರ್ಧರಿಸಿದ್ದ. ಆದರೆ, ಟರ್ಕಿ ಪೊಲೀಸರು ಇಡೀ ಕುಟುಂಬವನ್ನು ದೇಶಕ್ಕೆ ವಾಪಸ್ ಕಳುಹಿಸುವ ಮೂಲಕ ಆತನ ಸಂಚನ್ನು ವಿಫಲಗೊಳಿಸಿದ್ದರು. ಆದರೂ ಕುಟುಂಬ ಸದಸ್ಯರಿಗೆ ತಿಳಿಯದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಐ.ಎಸ್ ಸಂಘಟನೆ ಸದಸ್ಯರ ಜತೆ ಸಂಪರ್ಕದಲ್ಲಿದ್ದ’ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

‘ವಾಟ್ಸ್‌ ಆ್ಯಪ್’ನಲ್ಲಿ ಪ್ರಚಾರ
‘ಅಹದ್‌ನಿಂದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಪೆನ್‌ಡ್ರೈವ್ ವಶಕ್ಕೆ ಪಡೆಯಲಾಗಿದೆ. ‘ವಾಟ್ಸ್‌ ಆ್ಯಪ್‌’ನಲ್ಲಿ ಹಲವು ಗ್ರೂಪ್‌ಗಳನ್ನು ಮಾಡಿಕೊಂಡಿರುವ ಈತ, ಅದರಲ್ಲಿ ಐ.ಎಸ್ ನಿಲುವುಗಳನ್ನು ಪಸರಿಸುವ ಕೆಲಸ ಮಾಡುತ್ತಿದ್ದ. ಅಲ್ಲದೆ, ಸಂಘಟನೆಯ ಮುಖಂಡರ ಹೇಳಿಕೆಗಳಿರುವ ವಿಡಿಯೊಗಳನ್ನು ಮುಸ್ಲಿಂ ಯುವಕರಿಗೆ ರವಾನಿಸಿ ಪ್ರಚೋದಿಸುತ್ತಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತರು
ಮಂಗಳೂರಿನ ನಜ್ಮುಲ್ ಹುದಾ (25), ತುಮಕೂರಿನ ಸೈಯದ್ ಮುಜಾಹಿದ್ (34), ಬೆಂಗಳೂರು ಸಾರೆಪಾಳ್ಯದ ಮಹಮದ್ ಅಫ್ಜಲ್ (35), ಬ್ಯಾಟರಾಯನಪುರದ ಆಸಿಫ್ ಅಲಿ ಅಲಿಯಾಸ್ ಅರ್ಮನ್ ಸಾನಿ (30), ಕಾಟನ್‌ಪೇಟೆಯ ಸುಹೇಲ್ ಅಹಮದ್ ಅಲಿಯಾಸ್ ಹಫೀಸ್ ಸಾಬ್ (23) ಹಾಗೂ ಥಣಿಸಂದ್ರದ ಮಹಮದ್ ಅಬ್ದುಲ್ ಅಹದ್ ಅಲಿಯಾಸ್ ಬಡೆ ಅಮೀರ್ (46).

4 ದಿನ ಎನ್‌ಐಎ ವಶಕ್ಕೆ
ಅಲ್‌ ಕೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ಸ್‌ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ರಾಜ್ಯದ ವಿವಿಧೆಡೆ ಬಂಧಿಸಲಾದ ಆರು ಶಂಕಿತರನ್ನು ಜ.27ರವರೆಗೆ ರಾಷ್ಟ್ರೀಯ ತನಿಖಾ ದಳದ  ವಶಕ್ಕೆ ಒಪ್ಪಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಬೆಂಗಳೂರಿನ ಅಫ್ಜಲ್ ಮಹಮದ್ ಹಾಗೂ ಮಂಗಳೂರಿನ ನಜ್ಮುಲ್ ಹುದಾ ಅವರ ಬಂಧನವನ್ನು ಶುಕ್ರವಾರವೇ ಅಧಿಕೃತಗೊಳಿಸಿದ್ದ ಎನ್‌ಐಎ, ಉಳಿದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದಷ್ಟೇ   ಹೇಳಿತ್ತು. ‘ಸುದೀರ್ಘ ವಿಚಾರಣೆ ಬಳಿಕ ಈ ನಾಲ್ಕೂ ಮಂದಿಯ ಪಾತ್ರವೂ ಖಚಿತವಾಗಿದೆ. ಹೀಗಾಗಿ ಇವರನ್ನು ಸಹ ಬಂಧಿಸಲಾಗಿದೆ’ ಎಂದು ಎನ್‌ಐಎ ಶನಿವಾರ ತಿಳಿಸಿದೆ.

ನೃಪತುಂಗ ರಸ್ತೆಯ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರೂ ಶಂಕಿತರನ್ನು ಕರೆತಂದ ಅಧಿಕಾರಿಗಳು, ‘ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾದ ಕಾರಣ ಇನ್ನೂ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಬಂಧಿತರನ್ನು ಕಸ್ಟಡಿಗೆ ನೀಡಬೇಕು’ ಎಂದು ಕೋರಿದರು. ಆ ಮನವಿಯನ್ನು ನ್ಯಾಯಾಧೀಶ ಮುರಳೀಧರ ಪೈ  ಪುರಸ್ಕರಿಸಿದರು. ಕಸ್ಟಡಿ ಅವಧಿ ವಿಸ್ತರಿಸುತ್ತಿದ್ದಂತೆಯೇ ಪುನಃ ಮಡಿವಾಳಕ್ಕೆ ಕರೆದೊಯ್ಯಲಾಯಿತು.

ಟ್ರಾನ್ಸಿಟ್ ವಾರಂಟ್: ‘ನ್ಯಾಯಾಧೀಶರು ‘ಟ್ರಾನ್ಸಿಟ್ ವಾರಂಟ್’ ನೀಡಿದ್ದಾರೆ. ಅಂದರೆ ಶಂಕಿತರನ್ನು ಬೆಂಗಳೂರಿನಲ್ಲೇ ವಿಚಾರಣೆ ನಡೆಸಬಹುದು ಅಥವಾ ಯಾವ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲಾಗುತ್ತದೆಯೋ ಆ ರಾಜ್ಯಕ್ಕೆ ಕರೆದೊಯ್ಯಬಹುದು.

‘ಕಸ್ಟಡಿ ಅವಧಿ ಮುಗಿದ ಬಳಿಕ ಆ ರಾಜ್ಯದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಯನ್ನು ವಿಸ್ತರಿಸುವಂತೆ ಮನವಿ ಮಾಡಬಹುದು ಆದರೆ, ಬಂಧಿತರು ವಿಚಾರಣೆಗೆ ಸ್ಪಂದಿಸುತ್ತಿರುವ ಕಾರಣ ಇಲ್ಲೇ ಮುಂದುವರಿಸಲು ನಿರ್ಧರಿಸಿದ್ದೇವೆ’ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದರು.

ಬಂಧಿತ ಖಲಿಫಾ ಸೇನೆ ಮುಖ್ಯಸ್ಥ
ನವದೆಹಲಿ (ಪಿಟಿಐ):
ಗಣರಾಜ್ಯೋತ್ಸವದಿನ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ ಶುಕ್ರವಾರ ಬಂಧಿಸಿದ 14 ಮಂದಿಯಲ್ಲಿ ‘ಜನೂದ್‌–ಉಲ್‌–ಖಲಿಫಾ–ಎ–ಹಿಂದ್‌ (ಭಾರತದ ಖಲಿಫಾ ಸೇನೆ) ಸಂಘಟನೆಯ ಸ್ವಯಂ ಘೋಷಿತ ಉಪ ಮುಖ್ಯಸ್ಥ ರಿಜ್ವಾನ್‌ ಅಲಿ ಸೇರಿದ್ದಾನೆ. 

ಈ ಸಂಘಟನೆ ಮತ್ತು ಐಎಸ್‌ ಉಗ್ರ ಸಂಘಟನೆಯ ವಿಚಾರಧಾರೆಗಳು ಬಹುತೇಕ ಒಂದೇ ಆಗಿವೆ.

ಬಾಂಬ್‌ಗಳನ್ನು ಸ್ಫೋಟಿಸಲು ಬಳಸಲಾಗುವ ಸರ್ಕ್ಯೂಟ್‌ಗಳನ್ನು ದಾಳಿ ವೇಳೆ ಎನ್‌ಐಎ  ವಶಕ್ಕೆ ಪಡೆದುಕೊಂಡಿದೆ.
ಪ್ರಚೋದನಾಕಾರಿ ಲೇಖನಗಳು, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ದಾಖಲೆಗಳಿಲ್ಲದ ಹಣ, ಜಿಹಾದಿ ಸಾಹಿತ್ಯ, ವಿಡಿಯೊ ಮತ್ತು ಬಾಂಬ್‌ ಸಿದ್ಧಪಡಿಸಲು ಬಳಸುವ ಕೆಲ ಕಚ್ಚಾವಸ್ತುಗಳನ್ನು ದಾಳಿ ನಡೆಸಿದ ಸ್ಥಳಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸುವ ಮತ್ತು ಸ್ಫೋಟಕ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡುವ ಯೋಜನೆಯಲ್ಲಿ ಬಂಧಿತರು ತೊಡಗಿದ್ದರು ಎಂದು ತನಿಖಾ ದಳ ಹೇಳಿದೆ. ಪೊಲೀಸ್‌ ಅಧಿಕಾರಿಗಳು ಹಾಗೂ ವಿದೇಶಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಕ್ಕಾಗಿ ಮುಂದಾಗಿದ್ದರು ಎನ್ನಲಾಗಿದೆ.

ಮತ್ತಿಬ್ಬರು ಸೆರೆ
ಐಎಸ್‌ನೊಂದಿಗೆ ಸಂಪರ್ಕ ಹೊಂದಿ­ರುವ ಆರೋಪದ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್‌) ಶನಿವಾರ ಹುಸೇನ್‌ ಖಾನ್‌ ಮತ್ತು   ಇಮ್ರಾನ್‌ ಪಠಾಣ್‌  ಎಂಬುವವರನ್ನು ಬಂಧಿಸಿದೆ. ಐಎಸ್‌ಗೆ ಯುವಕರನ್ನು ನೇಮಕ ಮಾಡುವ ಕಾರ್ಯಯದಲ್ಲಿ ಇವರು ಶಾಮೀಲಾಗಿದ್ದು,  ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT