ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ಇನ್‌ಸ್ಪೆಕ್ಟರ್‌, ಸಚಿವ ಚಿಂಚನಸೂರ್‌ ವಿರುದ್ಧ ದೂರು

Last Updated 30 ಮೇ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಚೆಕ್‌ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಇನ್‌ಸ್ಪೆಕ್ಟರ್‌  ತಾವು ಸಂಗ್ರಹಿಸಿದ ದಾಖಲೆಗಳನ್ನು ಸಚಿವ ಬಾಬೂರಾವ್ ಚಿಂಚನಸೂರ್‌ಗೆ ನೀಡುತ್ತಿದ್ದಾರೆ. ಅವರ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಾಗರಬಾವಿಯ ಅಂಜನಾ ಎಂಬುವರು ಹಲಸೂರು ಗೇಟ್‌ ಮಹಿಳಾ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ. 

‘ಸಚಿವ ಚಿಂಚನಸೂರ್ ಅವರು ನೀಡಿರುವ ದೂರಿನ ವಿಚಾರಣೆಯನ್ನು ಇನ್‌ಸ್ಪೆಕ್ಟರ್‌್ ಆನಂದ್‌ ಎಂಬುವರು ನಡೆಸುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ನನ್ನ ಬಳಿ ಪಡೆದು ಸಚಿವರಿಗೆ ನೀಡಿದ್ದಾರೆ. ಜತೆಗೆ ಸಚಿವರು ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರಿಬ್ಬರ ವಿರುದ್ಧವೂ ತನಿಖೆ ನಡೆಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಚಿಂಚನಸೂರ್‌ ಹಾಗೂ ನನ್ನ ಮಧ್ಯೆ ಹಣಕಾಸಿನ ವ್ಯವಹಾರವಿತ್ತು. ಅವರಿಗೆ ಸಾಲ ಕೊಟ್ಟಿದ್ದೆ. ಅದನ್ನು ಮರಳಿ ನೀಡಿರಲಿಲ್ಲ. ನನಗೆ ಕೊಡಬೇಕಾದ ₹11.88 ಕೋಟಿ ಚೆಕ್‌್ ಕಚೇರಿಯಿಂದ ಕಳುವಾಗಿದೆ ಎಂದು ಚಿಂಚನಸೂರ್‌ ಅವರು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಈಗ ಸಚಿವರ ಆಮಿಷಕ್ಕೆ ಒಳಗಾಗಿರುವ ತನಿಖಾಧಿಕಾರಿಯು ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಅಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಕುರಿತು ಪತ್ರಿಕ್ರಿಯಿಸಿರುವ ಅಂಜನಾ, ‘ತನಿಖಾಧಿಕಾರಿ ಆನಂದ್‌, ಸಚಿವ ಚಿಂಚನಸೂರ್‌ ವಿರುದ್ಧ ಪೊಲೀಸ್‌ ಠಾಣೆ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ. ಜತೆಗೆ ಪೊಲೀಸ್‌ ಕಮಿಷನರ್‌ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸದ್ಯದಲ್ಲೇ ದೂರು ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಬಿಜೆಪಿ ಆರೋಪದಲ್ಲಿ ಹುರುಳಿಲ್ಲ’
ಬೆಂಗಳೂರು: ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಬ್ರೇಕ್‌ ವಾಟರ್‌ ಕಾಮಗಾರಿಯ ಟೆಂಡರ್‌  ಮಂಜೂರು ಮಾಡಿಸಲು ಗುತ್ತಿಗೆದಾರರಿಂದ  ಲಂಚ ಪಡೆದ ಆರೋಪವನ್ನು ಬಂದರು ಸಚಿವ ಬಾಬೂರಾವ್‌ ಚಿಂಚನಸೂರು ಅಲ್ಲಗಳೆದಿದ್ದಾರೆ.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಧ್ವನಿ ತುಣುಕುಗಳಲ್ಲಿರುವ ಧ್ವನಿ ನನ್ನದಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕರು ಮಾಡಿರುವ ಆರೋಪ ಸುಳ್ಳು. ಕಂಪ್ಯೂಟರ್‌ ಯುಗದಲ್ಲಿ ಏನು ಬೇಕಾದರೂ ಮಾಡಬಹುದು’ ಎಂದರು.  

‘ಬ್ರೇಕ್‌ವಾಟರ್‌ ಕಾಮಗಾರಿಗೆ ₹ 124 ಕೋಟಿ ಟೆಂಡರ್‌ ಕರೆಯಲಾಗಿತ್ತು. ಆ ವೆಚ್ಚವನ್ನು ಕಡಿಮೆ ಮಾಡಿ ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್‌ ಕೋರಿದ್ದರು.

ಹಾಗಾಗಿ ಗುತ್ತಿಗೆದಾರರನ್ನು ಕರೆಸಿ ಮಾತನಾಡಿ ಟೆಂಡರ್‌ ಮೊತ್ತವನ್ನು ಇಳಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹ 24 ಕೋಟಿ ಉಳಿತಾಯ ಮಾಡಿದ್ದೇನೆ’ ಎಂದರು.‘ಕೆಬಿಆರ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕನ ಜೊತೆ ಮಾತನಾಡಿದ ಧ್ವನಿಯೂ  ನನ್ನದಲ್ಲ’ ಎಂದರು.

‘ಗಂಗೊಳ್ಳಿ ಬಂದರಿನಲ್ಲಿ ಬ್ರೇಕ್‌ ವಾಟರ್ (ಸಮುದ್ರದ ಅಲೆಗಳ ಅಬ್ಬರ ಕಡಿಮೆ ಮಾಡುವ ತಡೆಗೋಡೆ) ಕಾಮಗಾರಿ ಸಂಬಂಧ ಸಚಿವ ಚಿಂನಸೂರು ಅವರು ಗುತ್ತಿಗೆದಾರರಿಂದ ₹ 2 ಕೋಟಿ ಲಂಚ ಪಡೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿ ಸಲುವಾಗಿ ಕೆಬಿಆರ್‌ ಕಂಪೆನಿಯಿಂದ ಸಚಿವರು ಹಣ ಪಡೆದಿದ್ದಾರೆ’ ಎಂದು ಜಗದೀಶ ಶೆಟ್ಟರ್‌ ಇತ್ತೀಚೆಗೆ ಆರೋಪ ಮಾಡಿದ್ದರು. ಇದಕ್ಕೆ ಚಿಂಚನಸೂರು ಅವರದ್ದೇ ಧ್ವನಿ ಎನ್ನಲಾದ ಆಡಿಯೊ  ಸಿಡಿ ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT