ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ನಿರೀಕ್ಷೆಯಲ್ಲಿ ‘ಕಹಿ’

Last Updated 27 ಆಗಸ್ಟ್ 2015, 19:52 IST
ಅಕ್ಷರ ಗಾತ್ರ

ಮಣಿಪಾಲದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಯುವಕನ ಮನಸ್ಸು ಬೇರೆಯದ್ದನ್ನೇ ಧ್ಯಾನಿಸುತ್ತಿತ್ತು. ಈ ಕ್ಷೇತ್ರ ತನ್ನದಲ್ಲ, ಅದರಿಂದಾಚೆಗೆ ಇನ್ನೇನನ್ನೋ ಅಪ್ಪಿಕೊಳ್ಳಬೇಕು ಎಂಬ ತುಡಿತ. ಎರಡನೇ ವರ್ಷಕ್ಕೆ ಕಾಲಿಡುವಾಗ ತನ್ನನ್ನು ಕಾಡುತ್ತಿರುವ ಗೊಂದಲಗಳಿಗೆ ಉತ್ತರ ಕಂಡುಕೊಳ್ಳಲು ಸಿನಿಮಾ ಮಾಧ್ಯಮವೇ ಸರಿ ಎಂದೆನಿಸಿತ್ತು. ಹೀಗಾಗಿ ಓದಿನೆಡೆಗೆ ಇದ್ದ ಆಸಕ್ತಿ ಅಷ್ಟಕ್ಕಷ್ಟೇ. ಶಾಸ್ತ್ರಕ್ಕೆ ಎಂಬಂತೆ ಪದವಿ ಪೂರೈಸಿದವರು ಕಂಪೆನಿಯೊಂದರಲ್ಲಿ ಉದ್ಯೋಗಕ್ಕೂ ಸೇರಿಕೊಂಡರು.

ಓದಿದ್ದು ಒಂದಾದರೆ ಉದ್ಯೋಗ ಮಾಡಿದ್ದು ಅದಕ್ಕೆ ಸಂಬಂಧಿಸದ ವಿಷಯದಲ್ಲಿ. ಕೆಲ ಕಾಲದ ಬಳಿಕ ಕೆಲಸ ಬೇಸರ ಹುಟ್ಟಿಸಿತು. ಕಾಲೇಜಿನಲ್ಲಿ ಕಂಡ ಕನಸನ್ನು ನನಸಾಗಿಸಿಕೊಳ್ಳಲು ಸೂಕ್ತ ಸಮಯ ಎಂದು ರಾಜೀನಾಮೆ ನೀಡಿ ರಾಮೋಜಿ ಸಿನಿಮಾ ಮತ್ತು ಟೆಲಿವಿಷನ್‌ ತರಬೇತಿ ಅಕಾಡೆಮಿಗೆ ಸೇರಿಕೊಂಡರು. ಸಿನಿಮಾದ ಕಲ್ಪನೆಗಳಿಗೆ ಅಲ್ಲಿ ಸ್ಪಷ್ಟ ರೂಪ ದೊರಕಿತು. ಕೋರ್ಸ್‌ ಮುಗಿಸಿ ಮರಳಿದವರು ಮನದಲ್ಲಿದ್ದ ವಸ್ತುವನ್ನು ವಿಸ್ತರಿಸಿ ಚಿತ್ರಕಥೆಯನ್ನಾಗಿಸಿದರು. ಸಿದ್ಧತೆ ಪೂರ್ಣಗೊಂಡ ಬಳಿಕವೇ ಅವರು ನಿರ್ಮಾಪಕರ ಹುಡುಕಾಟಕ್ಕೆ ಇಳಿದಿದ್ದು.

‘ಕಹಿ’ ಎಂಬ ಚಿತ್ರದ ಟ್ರೇಲರ್‌ನಲ್ಲಿ ಕಸುಬುದಾರಿಕೆ ತೋರುವ ಮೂಲಕ ಅಪಾರ ನಿರೀಕ್ಷೆ ಮೂಡಿಸಿರುವ ನಿರ್ದೇಶಕ ಅರವಿಂದ್‌ ಶಾಸ್ತ್ರಿ ಅವರ ಸಿನಿಮಾ ಪಯಣದ ಸಂಕ್ಷಿಪ್ತ ಪರಿಚಯವಿದು. ತಮ್ಮ ಸಿನಿಮಾದ ಕುರಿತು ‘ಲೂಸಿಯಾ’ ನಿರ್ದೇಶಕ ಪವನ್‌ ಕುಮಾರ್‌ ಅವರಿಗೆ ಫೇಸ್‌ಬುಕ್‌ನಲ್ಲಿ ಎಂದಿಗೋ ಸಂದೇಶ ಕಳುಹಿಸಿದ್ದರು ಅರವಿಂದ್‌. ಪವನ್ ಅದನ್ನು ಗಮನಿಸಿಯೇ ಇರಲಿಲ್ಲ.

ಯೂಟ್ಯೂಬ್‌ನಲ್ಲಿ ಆಕಸ್ಮಿಕವಾಗಿ ‘ಕಹಿ’ ಚಿತ್ರದ ಟ್ರೇಲರ್ ಅವರಿಗೆ ಕಂಡಿತು. ಅದನ್ನು ಮೆಚ್ಚಿದ ಪವನ್ ಖುದ್ದು ಅರವಿಂದ್‌ ಅವರಿಗೆ ಕರೆ ಮಾಡಿ ಮಾತನಾಡಿದರು. ಬಳಿಕ ಅವರದೊಂದು ಸಂದರ್ಶನವನ್ನೂ ಮಾಡಿ ಯೂಟ್ಯೂಬ್‌ನಲ್ಲಿ ಹಾಕಿದರು. ಸಾಮಾಜಿಕ ಜಾಲ ತಾಣಗಳಲ್ಲಿ ‘ಕಹಿ’ ಚಿತ್ರದ ಟ್ರೇಲರ್‌ ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿತು.

ನಗರ ಸಂವೇದನೆಯನ್ನು ನಾಲ್ಕು ವಿಭಿನ್ನ ವ್ಯಕ್ತಿತ್ವ ಮತ್ತು ಹಿನ್ನೆಲೆಯ ಪಾತ್ರಗಳಲ್ಲಿ ಕಟ್ಟಿಕೊಡುವ ಪ್ರಯತ್ನ ‘ಕಹಿ’ ಚಿತ್ರದ್ದು. ಈ ನಾಲ್ಕು ಪಾತ್ರಗಳೂ ತಮ್ಮದೇ ಹಾದಿಯಲ್ಲಿ ಸಾಗುತ್ತವೆ. ಸಿನಿಮಾದಲ್ಲಿನ ಪ್ರೀತಿ ಪ್ರೇಮ, ಆ್ಯಕ್ಷನ್‌, ಹಾಸ್ಯ ಮುಂತಾದ ವರ್ಗೀಕರಣ ಇಲ್ಲಿ ನಾಲ್ಕು ಪಾತ್ರಗಳ ಮೂಲಕ ವಿವಿಧ ಆಯಾಮಗಳಲ್ಲಿ ಚಿತ್ರಿತವಾಗಿದೆ. ಈ ನಾಲ್ಕೂ ಪಾತ್ರಗಳು ಅಂತಿಮವಾಗಿ ಒಂದೆಡೆ ಸಂಧಿಸುತ್ತವೆ. ‘ಕಹಿ’ ಎಂಬ ಶೀರ್ಷಿಕೆ ಇದಕ್ಕೆ ಅರ್ಥಪೂರ್ಣ ಎನಿಸಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರೂ ಅದನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ಅರವಿಂದ್‌.

‘ತರ್ಕಗಳನ್ನೆಲ್ಲಾ ಮನೆಯಲ್ಲೇ ಬಿಟ್ಟು ಬಂದು ಸಿನಿಮಾ ನೋಡಿ’ ಎನ್ನುವುದು ಹಣಕೊಡುವ ಪ್ರೇಕ್ಷಕನಿಗೆ ನೀಡುವ ಮರ್ಯಾದೆ ಅಲ್ಲ. ಯಾವುದನ್ನೇ ಹೇಳಿದರೂ ಅದಕ್ಕೆ ತಾರ್ಕಿಕ ಮಹತ್ವ ಇರಲೇಬೇಕು ಎನ್ನುವುದು ಅರವಿಂದ್‌ ಅಭಿಪ್ರಾಯ. ‘ಕಹಿ’ ಸಿನಿಮಾ ಅಂತಹ ವಾಸ್ತವಿಕತೆ ಹಿನ್ನೆಲೆ ಮತ್ತು ತಾರ್ಕಿಕ ಅಂಶಗಳೊಂದಿಗೇ ಸಾಗುತ್ತದೆ. ಇದರಲ್ಲಿ ಗೊಂದಲ ಉಂಟುಮಾಡುವ ಸಂಗತಿಗಳೂ ಇಲ್ಲ ಎನ್ನುತ್ತಾರೆ ಅವರು.

ಸಿನಿಮಾಗಳ ಯಾವುದೇ ಸೂತ್ರಗಳನ್ನು ನೆಚ್ಚಿಕೊಳ್ಳದೆಯೇ ತಮ್ಮದೇ ಶೈಲಿಯಲ್ಲಿ ಪೂರ್ಣಗೊಳಿಸಿದ ತೃಪ್ತಿ ಅವರಲ್ಲಿದೆ. ಮೊದಲ ಸಿನಿಮಾದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಧೈರ್ಯ ಅವರಲ್ಲಿ ಹೊಸ ಪ್ರಯತ್ನಗಳನ್ನು ಅಳವಡಿಸಿಕೊಳ್ಳಲು ಉತ್ತೇಜವನ್ನೂ ನೀಡಿದೆ. ‘ಬಹಳ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಆ ಪ್ರಾಮಾಣಿಕತೆಗೆ ತಕ್ಕಂತೆ ಫಲಿತಾಂಶ ದೊರಕುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.

ಟ್ರೇಲರ್‌ಗಾಗಿಯೇ ಎರಡೂವರೆ ತಿಂಗಳು ಅವರ ತಂಡ ಶ್ರಮಿಸಿದೆ. ಒಂದೇ ಒಂದು ಚಿಕ್ಕ ತಾಂತ್ರಿಕ ಲೋಪವೂ ಕಾಣಿಸಬಾರದು ಎಂಬ ಎಚ್ಚರಿಕೆಯಲ್ಲಿ ಟ್ರೇಲರ್‌ ಸಿದ್ಧಪಡಿಸಿದ್ದಾರಂತೆ. ಸೂಕ್ಷ್ಮವಾಗಿ ಪರಿಶೀಲಿಸಿ ತಿದ್ದಿ ತೀಡಿದ ಬಳಿಕವಷ್ಟೇ ಅವರು ಟ್ರೇಲರ್‌ ಬಿಡುಗಡೆ ಮಾಡಿದ್ದು. ಅಲ್ಪಾವಧಿಯಲ್ಲಿಯೇ ಟ್ರೇಲರ್‌ಅನ್ನು 35 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಕಥೆ ತೆರೆದಿಡುವ ಬಗೆ ವಿಭಿನ್ನ. ಆದರೆ ಈ ಬಗೆಯ ಸಿನಿಮಾ ಬಂದಿರಲಾರದು ಎಂದು ಹೇಳಲಾರೆ. ಆದರೆ ನಗರವನ್ನು ಒಂದು ರೀತಿ ಅಧ್ಯಯನಕ್ಕೆ ಒಳಪಡಿಸುತ್ತಾ, ಅದನ್ನೂ ಪಾತ್ರವನ್ನಾಗಿಸಿಕೊಂಡ ಪ್ರಯತ್ನ ಹೊಸತು. ಬೆಂಗಳೂರಿನ ಒಂದು ಟ್ರಾಫಿಕ್‌ ಜಾಮ್‌ನಿಂದ ಎಷ್ಟೊಂದು ಜನರ ಬದುಕಿನಲ್ಲಿ ಏನೇನೋ ಸಂಭವಿಸಬಹುದು. ಪ್ರತಿ ಜನರಲ್ಲೂ ಒಂದೊಂದು ಬಗೆಯ ಎಮೋಷನ್‌ಗಳು  ಇರುತ್ತವೆ. ಅಂತಹ ಸೂಕ್ಷ್ಮ ಸಂಗತಿಗಳು ಸಿನಿಮಾದಲ್ಲಿವೆ. ಮುಖ್ಯವಾಗಿ ಇಲ್ಲಿ ಕಥೆ ಹೇಳುವ  ಉದ್ದೇಶವಿದೆ. ಹಾಸ್ಯ, ಅಪರಾಧ, ಪ್ರೀತಿ, ಮನರಂಜನೆ ಎಲ್ಲವೂ ಇದೆ. ಅದನ್ನು ಅಷ್ಟೇ ವಾಸ್ತವಕ್ಕೆ ಹತ್ತಿರವಾಗಿ ಚಿತ್ರಿಸಿದ್ದೇನೆ ಎಂದು ಅರವಿಂದ್‌ ಹೇಳುತ್ತಾರೆ.

ರಮೇಶ್‌ ಭಟ್‌, ಕಿಶೋರಿ ಬಲ್ಲಾಳ್‌ ಅವರಂತಹ ಕೆಲವು ನಟರನ್ನು ಹೊರತುಪಡಿಸಿದರೆ ‘ಕಹಿ’ಯ ತಾರಾಬಳಗ ಮತ್ತು ತಾಂತ್ರಿಕ ವರ್ಗ ಸಂಪೂರ್ಣ ಹೊಸತು. ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದ ನಾಯಕರಾಗಿರುವ ಸೂರಜ್‌ಗೆ ಇದು ಮೊದಲ ಚಿತ್ರ. ಉಳಿದ ಮೂವರು ಪಾತ್ರಧಾರಿಗಳಾದ ಕೃಷಿ, ಮಾತಂಗಿ ಪ್ರಸನ್ನ ಮತ್ತು ಹರೀಶ್‌ ಅವರಿಗೂ ಸಿನಿಮಾಗಳಲ್ಲಿ ಮೊದಲ ಅನುಭವ.

‘ಈ ಸಿನಿಮಾಕ್ಕೆ ಎರಡು ವರ್ಷ ಶ್ರಮ ಹಾಕಿದ್ದೇನೆ. ಮನರಂಜನೆಯನ್ನು ಕಥೆ ತೆರೆದಿಡುವ ಮೂಲಕ ನೀಡುವ ಉದ್ದೇಶ ನನ್ನದು. ಆ ಹೇಳುವ ಶೈಲಿ ವಿಭಿನ್ನವಾಗಿರಬೇಕು. ಪ್ರೇಕ್ಷಕರ ತಲೆಗೂ ಕೆಲಸ ಕೊಡಬೇಕು. ತರ್ಕಬದ್ಧವೂ ಆಗಿರಬೇಕು. ಅದು ಇಲ್ಲಿ ಸಾಧ್ಯವಾಗಿದೆ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎನ್ನುತ್ತಾರೆ ಅರವಿಂದ್‌. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಬಿಡುಗಡೆ ವೇಳೆ ಕುರಿತು ಚಿತ್ರತಂಡ ಇನ್ನೂ ಯೋಜನೆ ಹಾಕಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT