ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಿ ಎಂಬ ದೇಗುಲಗಳ ತವರು

Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ದೇಶದ ಚಿನ್ನದ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಕೋಲಾರ ಜಿಲ್ಲೆಯಲ್ಲಿ ಇಂದು ಚಿನ್ನಕ್ಕೆ ಅಭಾವ ಇರಬಹುದು, ಅತ್ತ ಪ್ರತಿವರ್ಷವೂ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ನೀರಿಗೆ ಕೊರತೆ ಇದೆ.

ಆದರೆ ಇತಿಹಾಸ ಪ್ರಸಿದ್ಧ ದೇಗುಲಗಳಿಗಂತೂ ಜಿಲ್ಲೆಯಲ್ಲಿ ಖಂಡಿತ ಕೊರತೆ ಇಲ್ಲ. ಇಲ್ಲಿ ಶತಮಾನಗಳ ಹಿಂದೆ ನಿರ್ಮಾಣವಾದ ಹಲವಾರು ದೇವಸ್ಥಾನಗಳಿವೆ.  ಈ ಭಾಗದ ಹಲವು ದೇಗುಲಗಳು ಹಲವಾರು ವೈಶಿಷ್ಟಗಳಿಂದ ರಾಜ್ಯವ್ಯಾಪಿ ಹೆಸರು ಮಾಡಿವೆ. ಕೋಲಾರದಲ್ಲಿ ಇತ್ತೀಚೆಗೆ ಜನಪ್ರಿಯತೆ ಹೊಂದಿ ಜನಮೆಚ್ಚುಗೆ ಪಡೆಯುತ್ತಿರುವ ದೇವಾಲಯ ಒಂದಿದೆ. ಅದು ವೇಮಗಲ್ ಹೋಬಳಿ ವ್ಯಾಪ್ತಿಗೆ ಬರುವ ಸೀತಿ ಗ್ರಾಮದಲ್ಲಿನ ದೇಗುಲ.

ಸೀತಿ ಸೊಬಗು
ವೇಮಗಲ್ಲಿನಿಂದ ಸ್ವಲ್ಪ ದೂರದಲ್ಲಿ ಇರುವ ಪುಟ್ಟದಾದ ಊರು ಸೀತಿ. ಪತೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳು ಈ ಊರಿನ ಪ್ರಮುಖ ಕೇಂದ್ರ ಬಿಂದುಗಳು.  ಬೆಟ್ಟದ ಮಧ್ಯಭಾಗದಲ್ಲಿರುವ ಈ ದೇಗುಲದ ನಿರ್ಮಾಣ ಶೈಲಿ ವಿಶೇಷವಾದದ್ದು. ದೊಡ್ಡ ಗಾತ್ರದ ಕಲ್ಲು ಬಂಡೆಗಳು ಬೆಟ್ಟವನ್ನು ಸುತ್ತುವರೆದಿದ್ದು, ಮಧ್ಯದಲ್ಲಿ ದೇವಾಲಯವಿದೆ.  ಕಲ್ಲು ಬಂಡೆಗಳ ರಮಣೀಯ ದೃಶ್ಯ ದೇವಾಲಯಕ್ಕೆ ಮತ್ತಷ್ಟು ಕಳೆ ನೀಡಿ ಸೌಂದರ್ಯವನ್ನು ಹೆಚ್ಚಿಸಿದೆ.

ಇಲ್ಲಿನ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಪ್ರದೇಶದಲ್ಲಿ ಈಶ್ವರ ಬಂದು ನೆಲೆಸಿರುವ ಪೌರಾಣಿಕ ನಂಬಿಕೆ ಇದೆ.  ರಾಕ್ಷಸನಾದ ಭಸ್ಮಾಸುರ ಕಠೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿದ. ವರ ಕೇಳೆಂದು ಶಿವ ಸೂಚಿಸಲು, ‘ಸ್ವಾಮಿ ನಾನು ಕೇಳಿದ ವರವನ್ನು ತಪ್ಪದೇ ನೀಡುತ್ತೇನೆಂದರೆ ಮಾತ್ರ ಕೇಳುತ್ತೇನೆ’ ಎಂದು ಭಸ್ಮಾಸುರ  ಹೇಳಿದ. ಅದಕ್ಕೆ ಶಿವ ಒಪ್ಪಿದ. ‘ನಾನು ಯಾವುದರ ಮೇಲೆ ಕೈ ಇಟ್ಟರೂ ಅದು ಕ್ಷಣಾರ್ಧದಲ್ಲಿ ಭಸ್ಮವಾಗುವಂತಹ ಶಕ್ತಿ ಕೊಡು’ ಎಂದು ಕೋರಿದ. ಶಿವನು ಭಸ್ಮಾಸುರನಿಗೆ ತಥಾಸ್ತು ಎಂದ.

ತನಗೆ ಸಿಕ್ಕ ಶಕ್ತಿಯಿಂದ ತನಗೆ ಇಷ್ಟವಿಲ್ಲದವರ ಮೇಲೆ, ಸ್ಥಳಗಳ ಮೇಲೆ ಕೈ ಇಟ್ಟು ಭಸ್ಮಾಸುರನು ಭಸ್ಮ ಮಾಡಿದ. ವರ ಕೊಟ್ಟ ಶಿವನ ಮೇಲೂ ಕೈ ಇಟ್ಟು ಭಸ್ಮ ಮಾಡಲು ಹೋದಾಗ, ಶಿವನು ಸೀತಿ ಗ್ರಾಮದ ಬೆಟ್ಟದ ಮೇಲಿನ ಗುಹೆಯಲ್ಲಿ ಬಂದು ನೆಲೆಸಿದ ಎನ್ನುವುದು ಪ್ರತೀತಿ.

ಭಸ್ಮಾಸುರನ ಉಪಟಳ ಕಂಡು ರೋಸಿಹೋದ ದೇವತೆಗಳೆಲ್ಲ ಮಹಾವಿಷ್ಣುವಿನ ಬಳಿ ಅಳಲನ್ನು ತೋಡಿಕೊಂಡಾಗ, ಭಸ್ಮಾಸುರನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ಮಹಾವಿಷ್ಣು ಚಿಂತಿಸಿ ಉಪಾಯ ಹುಡುಕಿದ.

ಅದರಂತೆ ವಿಷ್ಣುವು ಜಗನ್ಮೋಹಿನಿ ಅವತಾರ ತಾಳಿ ಭಸ್ಮಾಸುರನ ಮನ ಸೆಳೆದ. ಅದನ್ನರಿಯದ ಭಸ್ಮಾಸುರ ಮೋಹಿನಿಯ ಸೌಂದರ್ಯಕ್ಕೆ ಮಾರುಹೋಗಿ ಮದುವೆಯಾಗುವಂತೆ ಕೇಳಿ ಕೊಳ್ಳುತ್ತಾನೆ. ಆಗ ಜಗನ್ಮೋಹಿನಿ ನಾನು ನಿನ್ನನ್ನು ಮದುವೆಯಾಗಬೇಕಾದರೆ ಕೆಲ ಷರತ್ತುಗಳನ್ನು ಅನುಸರಿಸಬೇಕು ಎಂದು ಭಸ್ಮಾಸುರನಿಗೆ ಹೇಳುತ್ತಾನೆ.  ಇದಕ್ಕೆ ಹಿಂದೆ ಮುಂದೆ ಯೋಚಿಸದ ಭಸ್ಮಾಸುರ ಒಪ್ಪಿಗೆ ಸೂಚಿಸುತ್ತಾನೆ.

ಜಗನ್ಮೋಹಿನಿಯು ನಾಟ್ಯ ಮಾಡಿ, ನನ್ನಂತೆಯೇ ನೀನು ನಾಟ್ಯ ಮಾಡಬೇಕು ಎಂದಾಗ ಭಸ್ಮಾಸುರ ತನ್ನ ಶಕ್ತಿ ಮರೆತು ನಾಟ್ಯ ಮಾಡುತ್ತ ಮಾಡುತ್ತ ತನ್ನ ತಲೆ ಮೇಲೆ ತಾನೇ ಕೈ ಇಟ್ಟುಕೊಂಡು ಸ್ಥಳದಲ್ಲಿಯೇ ಭಸ್ಮವಾಗುತ್ತಾನೆ. ಆ ಮೂಲಕ ರಾಕ್ಷಸ ಭಸ್ಮಾಸುರನ ಹತವಾಗುತ್ತದೆ.

ಭಸ್ಮಾಸುರ ಭಸ್ಮವಾದ ಬೃಹತ್ ಬೆಟ್ಟ ಭೈರವೇಶ್ವರ ದೇಗುಲ ಮುಂಭಾಗದಲ್ಲಿ ಇದೆ ಎಂದೇ ಜನ ನಂಬಿದ್ದಾರೆ. ವಿಚಿತ್ರವೆಂದರೆ ಈ ಬೆಟ್ಟದ ಮೇಲೆ ಮಳೆ ಬಿದ್ದರೂ ನೀರು ಕೆಳಗೆ ಬರದೆ ಬೆಟ್ಟದ ಮೇಲ್ಭಾಗದಲ್ಲೇ ಭಸ್ಮವಾಗುತ್ತದೆ ಎಂಬ ನಂಬಿಕೆ ಇದೆ.

ಶಿವನನ್ನು ಹುಡುಕಿಕೊಂಡು ಭಸ್ಮಾಸುರ ಸೀತಿಗೆ ಬಂದಾಗ ರೈತನೊಬ್ಬ ಶಿವನು ಅಡಗಿದ್ದ ಸ್ಥಳವನ್ನು ಹೆಬ್ಬೆರಳಿಂದ ತೋರಿಸಿದ. ಇದರಿಂದ ಕೋಪಗೊಂಡ ಶಿವ, ಆ ವ್ಯಕ್ತಿಗೆ ಶಾಪ ಹಾಕಿ ಹೆಬ್ಬೆರಳನ್ನು ನೀಡುವಂತೆ ಹೇಳಿದ. ಶಿವನ ಶಾಪದಿಂದ ಕಂಗಾಲಾದ ಆ ವ್ಯಕ್ತಿ ಹಾಗೂ ಇತರರು ಇಲ್ಲಿನ ಪಥೇಶ್ವರ ದೇವರ ಬಳಿ ಬಂದು ತಮ್ಮ ನೋವನ್ನು ತೋಡಿಕೊಂಡರು.

ಆಗ ಪಥೇಶ್ವರನು,  ಶಿವನ ಶಾಪದಿಂದ ಪಾರಾಗಬೇಕಾದರೆ ಶಿವನ ಜಾಡನ್ನು ತಿಳಿಸಿದ ವ್ಯಕ್ತಿ ತನ್ನ ಹೆಬ್ಬೆರಳನ್ನು ನೀಡಬೇಕೆಂದು ಸೂಚಿಸಿದ. ಆ ಆಜ್ಞೆಗೆ ತಲೆಬಾಗಿ ಆ ವ್ಯಕ್ತಿ ತನ್ನ ಹೆಬ್ಬೆರಳನ್ನು ಸಮರ್ಪಿಸಿದ. ಹಲವು ವರ್ಷಗಳ ಕಾಲ ಆ ವ್ಯಕ್ತಿಯ ಜನಾಂಗದವರು ತಮ್ಮ ಹೆಬ್ಬೆರಳನ್ನು ಈಶ್ವರನಿಗೆ ಸಮರ್ಪಿಸುವ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿತ್ತು. ಆಮೇಲೆ ಹೆಬ್ಬೆರಳು ನೀಡುವ ಬದಲು ದೇವರ ಬೆರಳಿಗೆ ಹೂ ಮೂಡಿಸುವ ಪದ್ಧತಿ ಬೆಳೆದು ಬಂತು.

ಸೀತಿಯಲ್ಲಿ ಪಥೇಶ್ವರ, ಭೈರವೇಶ್ವರ ದೇವಾಲಯಗಳ ಜೊತೆಗೆ ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಮತ್ತಿತರ ದೇವಸ್ಥಾನಗಳನ್ನು ಕಾಣಬಹುದು. ಶಿವನ ವಿಗ್ರಹ ಗುಹೆ ಒಳಗೆ ಪ್ರತಿಷ್ಠಾಪಿತವಾಗಿರುವುದು ವಿಶೇಷ. ದೇವಾಲಯಕ್ಕೆ ತೆರಳುವವರಿಗೆ ಹತ್ತಲು ವ್ಯವಸ್ಥಿತವಾಗಿ ಮೆಟ್ಟಿಲು ಹಾಗೂ ಮೇಲ್ಚಾವಣಿ ನಿರ್ಮಿಸಲಾಗಿದೆ.
ಭಕ್ತರ ಸಂಖ್ಯೆ ಹೆಚ್ಚಾಗಿ, ಪ್ರಸಿದ್ಧಿಯಾದಂತೆ ದೇವಾಲಯವನ್ನು ಸಾಕಷ್ಟು ರೀತಿಯಲ್ಲಿ ಅಭಿವೃದ್ದಿ ಮಾಡಲಾಗಿದೆ. ಈಗ ಪ್ರತಿದಿನವೂ ಅನ್ನ ದಾಸೋಹ ನಡೆಯುತ್ತಿದ್ದು, ಹಸಿದು ಬಂದ ಭಕ್ತರ ಹೊಟ್ಟೆ ತುಂಬುತ್ತಿದೆ.ಸೀತಿಯಲ್ಲಿ ಯುಗಾದಿ ಹಬ್ಬ ಮುಗಿದ ನಂತರ ನಡೆಯುವ ದೇವರ ರಥೋತ್ಸವ ಅಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಸೀತಿಯ ಹಾದಿ
ಒಂದು ದಿನ ಪ್ರವಾಸ ಹೋಗಲು ಬಯಸುವವರಿಗೆ ರಾಜಧಾನಿಯ ಸಮೀಪವಿರುವ ಸೀತಿ ಸೂಕ್ತ ಸ್ಥಳ.  ಈ ದೇಗುಲದ ಅಂದ ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಚಿಂತಾಮಣಿ ರಸ್ತೆಯಲ್ಲಿ ಸಾಗಿದರೆ ಎಚ್. ಕ್ರಾಸ್ ಸಿಗಲಿದೆ. ಅಲ್ಲಿಂದ ಬಲ ತಿರುವು ಪಡೆದರೆ ವೇಮಗಲ್.

ಆಮೇಲೆ ಎಡ ತಿರುವು ಪಡೆದು ಮುಂದೆ ಹೋದರೆ ಸೀತಿ ತಲುಪಬಹುದು. ಬೆಂಗಳೂರಿನಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಲಾರ ತಲುಪಿ ಅಲ್ಲಿಂದ ವೇಮಗಲ್‌ಗೆ ಹೋಗಿ ಸೀತಿ ತಲುಪಬಹುದು.
ಸಮಯವಿದ್ದರೆ ಸೀತಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಕೈವಾರ ತಾತಯ್ಯನ ಸನ್ನಿಧಿ ಹಾಗೂ ಬೃಹತ್ ಗುಹೆಯಲ್ಲಿ ನಿರ್ಮಾಣವಾಗಿರುವ ಶಿವಲಿಂಗಗಳನ್ನು ಹೊಂದಿರುವ ಕೈಲಾಸಗಿರಿಯನ್ನು ಕೂಡ ನೋಡಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT