ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾತೀತ ಸಸ್ಯ ಜಗತ್ತು

ಹೊಸ ಓದು
Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ಸೀಮಾತೀತ ಸಸ್ಯ ಜಗತ್ತು
ಲೇ: ಡಾ. ಎನ್.ಎಸ್. ಲೀಲಾ
ಪ್ರ: ವಸಂತ ಪ್ರಕಾಶನ, ನಂ. 360, ಹತ್ತನೇ ‘ಬಿ’ ಮುಖ್ಯರಸ್ತೆ, ಜಯನಗರ 3ನೇ ಬ್ಲಾಕ್,ಬೆಂಗಳೂರು
-560011

ಪ್ರಕೃತಿಯಲ್ಲಿ ಎಲ್ಲವೂ ಸೋಜಿಗವೇ. ತಿಮಿಂಗಿಲದಿಂದ ಹಿಡಿದು ಬ್ಯಾಕ್ಟಿರೀಯವರೆಗೆ. ಸಸ್ಯಗಳ ಲೋಕವೂ ಇದಕ್ಕೆ ಹೊರತಲ್ಲ. ಎಷ್ಟೋ ವೇಳೆ ಸಸ್ಯಜಗತ್ತಿನ ಸೋಜಿಗವೆಂದರೆ ಮುಟ್ಟಿದರೆ ಮುನಿ ಅಥವಾ ಕೀಟಾಹಾರಿ ಸಸ್ಯಗಳನ್ನು ಕುರಿತೇ ಲೇಖಕರು ಹೆಚ್ಚು ಹೆಚ್ಚು ಬರೆದಿದ್ದಾರೆ; ಅದಷ್ಟೇ ವಿಸ್ಮಯವೆಂಬಂತೆ. ‘ಸೀಮಾತೀತ ಸಸ್ಯ ಜಗತ್ತು’ ಕೃತಿಯಲ್ಲಿ ಡಾ. ಎನ್.ಎಸ್. ಲೀಲಾ ಸಸ್ಯ ಜಗತ್ತಿನ ಸೀಮೋಲ್ಲಂಘನ ಮಾಡಿ, ಓದುಗರಿಗೆ ವಿಭಿನ್ನ ಬಗೆಯ ಮಾಹಿತಿಯನ್ನು ನೀಡಿದ್ದಾರೆ. ಉದಾ: ಆಸ್ಟ್ರೇಲಿಯದಲ್ಲಿ ಹುಲ್ಲುಮರ ಹೆಚ್ಚು ಬೆಳೆಯುವುದುಂಟು. ಹುಲ್ಲು ಮರವಾಗುವುದುಂಟೆ? ಹೌದು. ನಮ್ಮ ಕುರುಚಲು ಕಾಡುಗಳಲ್ಲಿ ಬೆಳೆಯುವ ಈಚಲು ಮರಗಳಷ್ಟು ಎತ್ತರ, ವಿಶೇಷವೆಂದರೆ ಕಾಡಿಗೆ ಬೆಂಕಿ ಬಿದ್ದಾಗ ಹೂ ಬಿಡುವುದುಂಟು.

ಅದರ ಹೂವಿನಲ್ಲಿ ಮಕರಂದ ಪಡೆದು ಸಿಹಿ ಪಾನೀಯವನ್ನು ತಯಾರಿಸುತ್ತಾರೆ. ಮೆಣಸಿನಕಾಯಿಯಲ್ಲಿ ಬರಿ ಕಾರದ ಅಂಶವಷ್ಟೇ ಇರುವುದಿಲ್ಲ, ವಿಟಮಿನ್-ಸಿ, ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಪರಸ್ ಅಂಶವೂ ಇರುತ್ತದೆಂಬುದು ಸಾಮಾನ್ಯರಿಗೂ ಸೋಜಿಗ ತರುವ ವಿಚಾರ. ತತ್ತ್ವಜ್ಞಾನಿ ಸಾಕ್ರೆಟಿಸ್‌ಗೆ ಹೆಮ್ಲಾಕ್ ಸಸ್ಯದ ವಿಷ ಉಣಿಸಿದ್ದರಂತೆ. ನಾವು ಗೋಬಿ ಮಂಚೂರಿಗೆ ಬಳಸುವ ಹೂಕೋಸು ಒಂದು ಪುಷ್ಪಗುಚ್ಛ. ಈ ಬಗೆಯ ಅನೇಕ ವಿಸ್ಮಯಗಳು ಈ ಕೃತಿಯಲ್ಲಿವೆ.

ಹಿಂದೆ ಕ್ಯಾರೆಟ್‌ನ ಮೂಲಬಣ್ಣ ನೇರಳೆಯದಾಗಿತ್ತಂತೆ. ಮಿದುಳನ್ನು ಹೋಲುವ ಅಣಬೆಗಳಿವೆ, ಹಾಗೆಯೇ ಹವಳಗಳಿವೆ. ಮುಳ್ಳುಹಂದಿಯನ್ನು ಅಣಕಿಸುವಂತಹ ಅಣಬೆಗಳೂ ಉಂಟು. ನಾಗಲಿಂಗ ಪುಷ್ಟದ ಕಾಯಿ ಬಂದೂಕಿನ ಗುಂಡಿನಂತಿರುವುದರಿಂದ ನಸುಗೆಂಪು ಕೇಸರಗಳು ಹೂವಿನ ತಳಭಾಗದಿಂದ ಮೇಲೇರಿ, ಹಾವಿನ ಹೆಡೆಯಂತೆ ಬಾಗಿರುತ್ತದೆ. ಘನಾಕೃತಿಯ ಕಲ್ಲಂಗಡಿ ಹಣ್ಣನ್ನು ಬೆಳೆಯಲು ಹೀಚುಗಾಯಿಯನ್ನು ಗಾಜಿನ ಅಥವಾ ಸಿಂಡರ್ ಪೆಟ್ಟಿಗೆಯೊಳಗೆ ತೂರಿಸಿ ಬೆಳೆಯಲು ಬಿಡುತ್ತಾರೆ. ಹೀಚು ಬಲಿತಂತೆ ಅದು ಪೆಟ್ಟಿಗೆಯ ಆಕಾರವನ್ನು ಪಡೆಯುತ್ತದೆ. ವಿಕ್ಟೋರಿಯ ರೆಜಿಯ ಎಂಬ ಜಲಸಸ್ಯವನ್ನು ಮೊದಲಿಗೆ ಕೃಷಿ ಮಾಡಿದ ಕೀರ್ತಿ ಜೋಸೆಫ್ ಪಾಕ್ಸ್‌ಟನ್‌ಗೆ ಸೇರುತ್ತದೆ. ಸುಮಾರು ಒಂದೂವರೆ ಮೀಟರ್‌ನಷ್ಟು ಅಗಲ ಹರಡಿದ ಎಲೆಗಳ ದೃಢತೆಯನ್ನು ಪರೀಕ್ಷಿಸಲು ಆತ ಇಪ್ಪತ್ತು ಕಿಲೋ ಗ್ರಾಂ ತೂಕದ ಎಂಟು ವರ್ಷದ ಮಗಳನ್ನು ಅದರ ಮೇಲೆ ಕೂಡಿಸಿದ್ದನಂತೆ.

ಈ ಕೃತಿಯ ಪ್ರತಿ ಅಧ್ಯಾಯವೂ ವಿಸ್ಮಯಗಳಿಗೆ ತೆರೆದಿದೆ. ಡಾ. ಲೀಲಾ, ಸಸ್ಯಗಳ ವೈಶಿಷ್ಟ್ಯವನ್ನು ಪರಿಚಯಿಸುವಾಗ, ವೈಜ್ಞಾನಿಕ ವಿವರಗಳನ್ನು ಕೊಡುವುದರಿಂದಲೇ ಸೋಜಿಗಕ್ಕೆ ಒಂದು ಅರ್ಥಬರುತ್ತದೆ; ಮತ್ತಷ್ಟು ಓದಲು ಕುತೂಹಲ ಹುಟ್ಟುತ್ತದೆ. ಈ ಲೇಖಕಿ ಧಾರಾಳವಾಗಿ ‘ಮಂಕುತಿಮ್ಮನ ಕಗ್ಗ’, ವಚನಗಳು, ದಾಸರ ಕೀರ್ತನೆಗಳು, ಪುರಾಣೋಕ್ತಿಗಳನ್ನು ಇಲ್ಲಿನ ಅನೇಕ ಲೇಖನಗಳಲ್ಲಿ ಬಳಸಿದ್ದಾರೆ. ಅವು ವಿಷಯಕ್ಕೆ ಪೂರಕವಾಗಿವೆಯೇ ವಿನಾ ಭಾರವಾಗಿಲ್ಲ. ಬಹುಶಃ ವಿಜ್ಞಾನ ಲೇಖಕರು ತಮ್ಮ ಬರಹಗಳನ್ನು ಸಮೃದ್ಧಗೊಳಿಸಲು ತಮ್ಮ ಓದನ್ನು ಹೇಗೆ ವಿಸ್ತರಿಸಿಕೊಳ್ಳಬಹುದು ಎಂಬುದಕ್ಕೂ ಈ ಕೃತಿ ಉದಾಹರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT