ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುವ ಸಿಗರೇಟ್‌

ಅರಿವು ಹರಿವು
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಕಳೆದ ಬಾರಿ ತಂಬಾಕಿನ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿತ್ತು. ಭಾನುವಾರ (ಮೇ 31) ವಿಶ್ವ ತಂಬಾಕು ವಿರೋಧಿ ದಿನ. ಹಾಗಾಗಿ, ಈ ಸಲ ತಂಬಾಕು ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಸಿಗರೇಟ್‌ ಬಗ್ಗೆಯೇ ಮಾತನಾಡೋಣ. ಲವಂಗದ ಮೊಗ್ಗು, ಸುಗಂಧಕಾರಕ ಹೂಗಳ ಮೊಗ್ಗು ಮತ್ತು ಗಿಡಮೂಲಿಕೆಗಳಿಂದ ಮಾಡಿದ ಸಿಗರೇಟ್‌ಗಳೂ ಮಾರುಕಟ್ಟೆಯಲ್ಲಿ ಇವೆ. ಆದರೆ, ಇಲ್ಲಿ ನಮ್ಮ ಮಾತು ತಂಬಾಕು ಸಿಗರೇಟ್‌ಗೆ ಮಾತ್ರ ಮೀಸಲು.

ತಂಬಾಕಿಗೆ ಹಲವು ಸಹಸ್ರ ವರ್ಷಗಳ ಇತಿಹಾಸ ಇದ್ದರೂ, ಆಧುನಿಕ ಸಿಗರೇಟ್‌ ಜಗತ್ತಿಗೆ ಪರಿಚಯಗೊಂಡಿದ್ದು ಇತ್ತೀಚೆಗೆ. ಅಂದರೆ 19ನೇ ಶತಮಾನದ ಅಂತ್ಯಕ್ಕೆ. ಅದಕ್ಕಿಂತಲೂ ಮೊದಲು 9ನೇ ಶತಮಾನದಲ್ಲೇ ಮೆಕ್ಸಿಕೊ, ಕೇಂದ್ರ ಅಮೆರಿಕಗಳಲ್ಲಿ ಸಿಗರೇಟ್‌ನ ಮೂಲರೂಪ ಬಳಕೆಯಲ್ಲಿತ್ತು.

ಜೊಂಡು ಹುಲ್ಲು, ಲಾಳದ ಕಡ್ಡಿಯಂತಹ ವಸ್ತುಗಳಲ್ಲಿ ಟೊಳ್ಳಾದ ತಂಬಾಕನ್ನು ತುಂಬಿ ಸೇದಲಾಗುತ್ತಿತ್ತು. ಸಿಗರೇಟ್‌ಗಿಂತಲೂ ಮೊದಲು ಬಳಕೆಯಲ್ಲಿದ್ದುದು ಸಿಗಾರ್‌. ಈಗಿನ ಸಿಗರೇಟ್‌ಗೆ ಹೋಲಿಸಿದರೆ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದ ಸಿಗಾರ್‌, ಕೆರೆಬಿಯನ್‌ ದ್ವೀಪ ಸಮೂಹ ಹಾಗೂ ಅಮೆರಿಕ ಖಂಡಗಳಲ್ಲಿ ಬಳಕೆಯಲ್ಲಿತ್ತು. ನಂತರ ಎಲೆಗಳಲ್ಲಿ ತಂಬಾಕು ಹಾಕಿ ಸುರುಳಿ ಸುತ್ತಿದ ಸಿಗರೇಟ್‌ ಬಳಕೆಗೆ ಬಂತು. ಸ್ಪೇನ್‌ನಲ್ಲಿ ಜೋಳದ ಎಲೆಯನ್ನು ಬಳಸುತ್ತಿದ್ದರಂತೆ.

ಸಿಗರೇಟ್‌ಗೆ ಆಧುನಿಕ ಸ್ಪರ್ಶ ಸಿಕ್ಕಿದ್ದು 17ನೇ ಶತಮಾನದಲ್ಲಿ. ಎಲೆಯ ಜಾಗವನ್ನು ಕಾಗದ ಆಕ್ರಮಿಸಿತು. ಕಾಗದದಲ್ಲಿ ತಂಬಾಕು ಹಾಕಿ ಸುರುಳಿ ಸುತ್ತಿ ಸಿಗರೇಟ್‌ ತಯಾರಿಸುವ ಪರಿಪಾಠ ಬೆಳೆಯಿತು. ಕುತೂಹಲದ ಸಂಗತಿಯೆಂದರೆ, 19ನೇ ಶತಮಾನದ ಮಧ್ಯದವರೆಗೂ ಇದಕ್ಕೆ ಸಿಗರೇಟ್‌ ಎಂಬ ಹೆಸರಿರಲಿಲ್ಲ.  ಉತ್ತರ ಅಮೆರಿಕ, ದಕ್ಷಿಣ ಅಮೆರಿಕಗಳಲ್ಲಿ ಚಾಲ್ತಿಯಲ್ಲಿದ್ದ ಸಿಗರೇಟ್‌ 1830ರಲ್ಲಿ ಫ್ರಾನ್ಸ್‌ಗೆ ಕಾಲಿಟ್ಟಿತು. ಫ್ರಾನ್ಸ್‌ನ ಜನ ಅದನ್ನು ಸಿಗರೇಟ್‌ ಎಂದು ಕರೆದರು.

1845ರಲ್ಲಿ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಗರೇಟ್‌ ತಯಾರಿಕೆ ಆರಂಭವಾಯಿತು. ಸಿಗರೇಟ್‌ ಮತ್ತೊಂದು ಮಜಲಿಗೆ ತೆರೆದುಕೊಂಡಿದ್ದು 1880ರ ದಶಕದಲ್ಲಿ. ಅಮೆರಿಕದ ಜೇಮ್ಸ್‌ ಆಲ್ಬರ್ಟ್‌ ಬೋನ್ಸಾಕ್‌ ಎಂಬುವವರು ಸಿಗರೇಟ್ ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಅಲ್ಲಿವರೆಗೂ ಕೈಯಲ್ಲೇ ಸಿಗರೇಟ್‌ ಅನ್ನು ಮಾಡಲಾಗುತ್ತಿತ್ತು. ಅದುವರೆಗೂ ಪ್ರತಿ ದಿನ 40 ಸಾವಿರ ಸಿಗರೇಟ್‌ಗಳು ತಯಾರಾಗುತ್ತಿದ್ದವು. ಜೇಮ್ಸ್‌ ಅವರ ಯಂತ್ರ ಸಿಗರೇಟ್‌ ತಯಾರಿಕೆಯನ್ನು ಇನ್ನಷ್ಟು ಸುಲಭಗೊಳಿಸಿತು. ಯಂತ್ರದಿಂದಾಗಿ ಪ್ರತಿ ದಿನ 40 ಲಕ್ಷ ಸಿಗರೇಟ್‌ಗಳು ತಯಾರಾದವು.

20ನೇ ಶತಮಾನದಲ್ಲಿ ಸಿಗರೇಟ್‌ ಬಳಕೆ ಸಾಮಾನ್ಯವಾಯಿತು. ಪುರುಷರು ಮಹಿಳೆಯರು ಎಂಬ ಭೇದವಿಲ್ಲದೇ ಎಲ್ಲರೂ ಧೂಮಪಾನಿಗಳಾದರು. ಎರಡೂ ವಿಶ್ವ ಮಹಾ ಸಮರಗಳಲ್ಲಿ ಸಿಗರೇಟ್‌, ಯೋಧರಿಗೆ ನೀಡುತ್ತಿದ್ದ ಪಡಿತರ ವಸ್ತುಗಳ ಭಾಗವಾಗಿತ್ತು!

1940ರವರೆಗೂ ಈ ಸಿಗರೇಟ್‌ನಿಂದ ಆರೋಗ್ಯಕ್ಕೆ ಉಂಟಾಗುವ ಹಾನಿಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಮೊದಲ ಬಾರಿಗೆ ಜರ್ಮನಿಯ ವೈದ್ಯರು, ತಂಬಾಕು ಸೇವನೆಯಿಂದ ಶ್ವಾಸಕೋಶ ಕ್ಯಾನ್ಸರ್‌ ಬರುತ್ತದೆ ಎಂದು ಹೇಳಿದರು. ಇದರ ಆಧಾರದಲ್ಲಿ ಜರ್ಮನಿಯಲ್ಲಿದ್ದ ನಾಝಿ ಸರ್ಕಾರ ತಂಬಾಕು ವಿರೋಧಿ ಅಭಿಯಾನವನ್ನೂ ಆರಂಭಿಸಿತು. 1975ರಲ್ಲಿ ಅಮೆರಿಕ ಸರ್ಕಾರ ಸೈನಿಕರಿಗೆ ಸಿಗರೇಟ್‌ ಪೂರೈಸುವುದನ್ನು ನಿಲ್ಲಿಸಿತು.

ಧೂಮಪಾನಿಗಳಿಗೆ ಮಾತ್ರವಲ್ಲದೇ, ಪರೋಕ್ಷ ಧೂಮಪಾನಿಗಳ ಆರೋಗ್ಯದ ಮೇಲೂ ಹಾನಿ ಉಂಟುಮಾಡುವ ಕುಖ್ಯಾತಿ ಸಿಗರೇಟ್‌ಗಿದೆ. ಇದರ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಅರಿತ ಜಗತ್ತಿನ ರಾಷ್ಟ್ರಗಳು ಅವುಗಳ ನಿಯಂತ್ರಣಕ್ಕೆ ಕಾನೂನು ಕ್ರಮಗಳನ್ನು ಕೈಗೊಂಡವು. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಸಿಗರೇಟ್‌ ಬೆಲೆ ಹೆಚ್ಚಾಗುತ್ತಿದ್ದರೂ, ಖರೀದಿಸುವ ಗ್ರಾಹಕರ ಸಂಖ್ಯೆ ಕಡಿಮೆ ಆಗಿಲ್ಲ. ಅಂದಾಜಿನ ಪ್ರಕಾರ ಜಗತ್ತಿನ 100 ಕೋಟಿ ಜನರು ಸಿಗರೇಟ್‌ಗೆ ದಾಸರಾಗಿದ್ದಾರೆ.

ಬಡವರ ಸಿಗರೇಟ್‌
ಅತ್ತ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಿಗರೇಟ್‌ ಜನಪ್ರಿಯವಾಗುವ ಹೊತ್ತಿಗೆ ಇತ್ತ ಭಾರತದಲ್ಲಿ ಬೀಡಿ ಪ್ರಸಿದ್ಧಿಗೆ ಬಂದಿತ್ತು. ಅಗ್ಗದ ದರದಲ್ಲಿ ದೊರೆಯುವ ಬೀಡಿ ಬಡವರ ಸಿಗರೇಟ್‌ ಎಂದೇ ಖ್ಯಾತಿ. ಉತ್ತರ ಭಾರತದ ಅರಣ್ಯದಲ್ಲಿ ಲಭ್ಯವಿರುವ ತೆಂಡು ಎಲೆಗಳಿಂದ ಮಾಡುವ ಬೀಡಿ ದೇಶಕ್ಕೆ ಪರಿಚಯಗೊಂಡಿದ್ದು 1902ರಲ್ಲಿ. ಮೊದಲಿಗೆ ಬೀಡಿ ತಯಾರಾಗಿದ್ದು ಗುಜರಾತ್‌ನಲ್ಲಿ. ಆರಂಭದ ದಿನಗಳಲ್ಲಿ ಕಾಚ್‌ನಾರ್‌ ಹೂವಿನ ಗಿಡದ ಎಲೆಗಳಿಂದ ಕೂಡ ಬೀಡಿ ತಯಾರಿಸುತ್ತಿದ್ದರು.

30 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿರುವ ಬೀಡಿ ತಯಾರಿಕೆ ಈಗ ದೇಶದಲ್ಲಿ ಬಹುದೊಡ್ಡ ಉದ್ಯಮ. ತಂಬಾಕು ಉತ್ಪನ್ನಗಳ ಮೇಲೆ ಸರ್ಕಾರ ನಿಯಂತ್ರಣ ಹೇರಲು ಮುಂದಾಗಿರುವುದರಿಂದ ಬೀಡಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಪರ್ಯಾಯ ದಾರಿಗಳತ್ತ ಮುಖ ಮಾಡುತ್ತಿದ್ದಾರೆ.

ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT