ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತಾಟ ತಂದ ಪೀಕಲಾಟ

ನೂರೊಂದು ನೆನಪು
Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚಾಮಯ್ಯ ಮೇಷ್ಟರ ಮನೆಯ ಹೊರಭಾಗದ ಸೆಟ್‌. ಅಲ್ಲಿ ರಾಮಾಚಾರಿ ಕಿಟಕಿ ಗಾಜಿಗೆ ಕಲ್ಲು ಹೊಡೆಯುವ ದೃಶ್ಯ. ಕಿಟಕಿಯ ಗಾಜುಗಳು ಸರಿಯಾಗಿ ಇಲ್ಲವೆಂದು ಮೊದಲೇ ಪುಟ್ಟಣ್ಣನವರು ಕುದಿಯುತ್ತಿದ್ದರು. ವಿಷ್ಣು ಬೇರೆ ಹೊತ್ತಿಗೆ ಸರಿಯಾಗಿ ಅಲ್ಲಿ ಇರಲಿಲ್ಲ. ಪ್ರೊಡಕ್ಷನ್‌ನವರು ವಿಷ್ಣು ಇಲ್ಲದ ವಿಷಯ ಹೇಳಿದ್ದೇ ಅವರ ಕೋಪಕ್ಕೆ ಕೊಸರು ಹಾಕಿದಂತಾಯಿತು.

ಸೂಕ್ಷ್ಮವನ್ನು ಅರಿತ ನಾನು ಮೆಲ್ಲಗೆ ಏನೂ ಗೊತ್ತಿಲ್ಲದವನಂತೆ ಅಲ್ಲಿಗೆ ಹೋದೆ. ಪುಟ್ಟಣ್ಣನವರ ಕಣ್ಣಿಗೆ ಬೀಳದೆ, ಸೆಟ್‌ನ ಹಿಂದಿನ ಜಾಗ ತಲುಪಿದೆ. ಅಷ್ಟರಲ್ಲಿ ಸಹಾಯಕ ನಿರ್ದೇಶಕ ದತ್ತು, ವಿಷ್ಣುವನ್ನು ಹುಡುಕುತ್ತಿದ್ದುದು ಕಣ್ಣಿಗೆ ಬಿದ್ದಿತು. ವಿಷ್ಣು ಮೇಕಪ್‌ ಹಾಕಿಕೊಂಡು ಕೋಣೆಯೊಳಗೆ ಏನೂ ಗೊತ್ತಿಲ್ಲದವನಂತೆ ಕುಳಿತಿದ್ದ. ಪುಟ್ಟಣ್ಣನವರು ಹುಡುಕುತ್ತಿದ್ದಾರೆ ಎಂಬ ಸಂಗತಿ ಗೊತ್ತಾದದ್ದೇ, ಬೆಳಿಗ್ಗೆಯಿಂದ ಅಲ್ಲಿಯೇ ಕುಳಿತಿರುವುದಾಗಿ ಬೂಸಿ ಬಿಟ್ಟು ಬಚಾವಾದ. ಕಿಟಕಿ ಗಾಜಿಗೆ ಕಲ್ಲು ಹೊಡೆಯುವ ದೃಶ್ಯದ ಚಿತ್ರೀಕರಣ ಸಾಂಗವಾಗಿ ನೆರವೇರಿತು.

ಚಿತ್ರೀಕರಣದ ನಡುವೆ ಹೀಗೆಯೇ ಬಿಡುವು ಮಾಡಿಕೊಂಡು ಮೈಸೂರು ಸುತ್ತುವುದು ನಮಗೆ ಚಟವಾಯಿತು. ರಾಜು ಹೋಟೆಲ್‌, ಸಯ್ಯಾಜಿ ರಾವ್‌ ರಸ್ತೆ, ಕೃಷ್ಣಮೂರ್ತಿಪುರದಲ್ಲಿ ಸುತ್ತಾಡುತ್ತಾ ಇದ್ದೆವು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗದೇ ಇರುತ್ತದೆಯೇ? ನಾವೂ ಆ ಬೆಕ್ಕುಗಳಂತೆಯೇ ಇದ್ದೆವೆನ್ನಿ.

ತೋಪೇಗೌಡ ಅಲಿಯಾಸ್‌ ರಮೇಶ್‌ ಎಂಬ ನನ್ನ ಒಬ್ಬ ಸ್ನೇಹಿತ ಸಿನಿಮಾ ಹುಚ್ಚಿನಿಂದಾಗಿ ನಮ್ಮ ಮನೆಯಲ್ಲಿಯೇ ಇದ್ದ. ಅವನೂ ನನ್ನ ಜೊತೆ ಸಿನಿಮಾ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದ. ಅವನದ್ದು ಕೃಷ್ಣನ ಲೆಕ್ಕ ಹೇಳುವ ಬುದ್ಧಿ. ಈಶ್ವರಿ ಪ್ರೊಡಕ್ಷನ್ಸ್‌ನ ದುಡ್ಡನ್ನು ಅವನಿಗೆ ಕೊಟ್ಟು, ಕೆಲಸಗಳನ್ನು ಹೇಳುತ್ತಾ ಇದ್ದೆ. ಒಂದು ದಿನ ‘ಎಲೆ– 100 ರೂಪಾಯಿ’ ಎಂದು ಲೆಕ್ಕ ಬರೆದಿದ್ದ. ಗಂಗಪ್ಪನವರು ಚಕ್ಕನೆ ಹಿಡಿದರು. ‘ನೂರು ವೀಳ್ಯದೆಲೆಗೆ ಮೈಸೂರಿನಲ್ಲಿ ನೂರು ರೂಪಾಯಿಯೇನಪ್ಪಾ’ ಎಂದು ನನ್ನನ್ನು ಪ್ರಶ್ನಿಸಿದರು. ತಕ್ಷಣವೇ ಏನೋ ಲೆಕ್ಕ ತಪ್ಪಾಗಿ ಬರೆದಿರಬೇಕು ಎಂದು ನಾನೇ ತಿದ್ದಿ ಸರಿಪಡಿಸಿದೆ. ಅಲ್ಲಿಂದಾಚೆಗೆ ತೋಪೇಗೌಡನಿಗೆ ಹಣ ಕೊಡುವುದನ್ನು ನಿಲ್ಲಿಸಿದೆ. ವೀರಾಸ್ವಾಮಿಯವರಿಗೂ ವಿಷಯ ಗೊತ್ತಾಗಿ, ಯಾರಿಗೂ ದುಡ್ಡು ಕೊಡಬೇಡ ಎಂದು ನನಗೆ ಎಚ್ಚರಿಸಿದರು.
ನಾನು, ವಿಷ್ಣು ಕದ್ದು ಓಡಾಡುವುದು ಪ್ರೊಡಕ್ಷನ್‌ ಯೂನಿಟ್‌ನ ಹುಡುಗರ ಮೂಲಕ ಪುಟ್ಟಣ್ಣ, ವೀರಾಸ್ವಾಮಿಯವರ ಕಿವಿಗೂ ಬಿದ್ದಿತ್ತು. ಒಂದು ದಿನ ವಿಷ್ಣು ಹಟ ಮಾಡಿ ರಾಜು ಹೋಟೆಲ್‌ಗೆ ಕರೆದುಕೊಂಡು ಹೋದ. ದಿಢೀರನೆ ಶೂಟಿಂಗ್‌ ಮಾಡಬೇಕೆಂದು ಪುಟ್ಟಣ್ಣ ಹಾಗೂ ವೀರಾಸ್ವಾಮಿ ನಿರ್ಧರಿಸಿದರಂತೆ. ಒಂದಿಷ್ಟು ಹೊತ್ತು ಕಾದ ನಂತರ ಪ್ಯಾಕಪ್‌ ಮಾಡಿದ್ದರಂತೆ. ಆಗ ಮೊಬೈಲ್‌ ಫೋನ್‌ ಇರಲಿಲ್ಲವಾದ್ದರಿಂದ ಕದ್ದು ಓಡಾಡುವವರನ್ನು ಹಿಡಿಯುವುದೂ ಕಷ್ಟವಿತ್ತು.

ರಾಜು ಹೋಟೆಲ್‌ನಿಂದ ಅಲ್ಲಿಗೆ ಮರಳಿದ ಮೇಲೆ ಪರಿಸ್ಥಿತಿ ಮಾಮೂಲಿನಂತೆ ಇಲ್ಲ ಎಂಬ ವಾಸನೆ ಹೊಡೆಯಿತು. ಚಿತ್ರದ ನಾಯಕಿ ಶುಭಾ ಇದ್ದ ರೂಮ್‌ನೊಳಗೆ ಅವಿತುಕೊಳ್ಳುವುದಾಗಿ ಹೇಳಿದ ವಿಷ್ಣು, ಏನಾಗಿದೆ ಎಂದು ತಿಳಿದುಕೊಂಡು ಬರುವಂತೆ ನನ್ನನ್ನು ಕಳುಹಿಸಿದ. ನಾನು ಏನೂ ಗೊತ್ತಿಲ್ಲದವನಂತೆ ವೀರಾಸ್ವಾಮಿಯವರ ರೂಮ್‌ಗೆ ಹೋದೆ. ಅಲ್ಲಿ ಚಿತ್ರೀಕರಣ ನಿಲ್ಲಿಸಿ, ಪ್ಯಾಕಪ್‌ ಮಾಡಿದ ವಿಷಯವನ್ನೇ ಚರ್ಚಿಸುತ್ತಾ ಇದ್ದರು. ಅದಾಗಲೇ ವೀರಾಸ್ವಾಮಿಯವರು ಮೂರು ಪೆಗ್‌ ತೆಗೆದುಕೊಂಡು ಆಗಿತ್ತು. ನನ್ನನ್ನು ಕಂಡವರೇ, ‘ಏನೋ ಭಡವಾ... ಎಲ್ಲೋ ಹೋಗಿದ್ದೆ. ಎಲ್ಲೋ ಅವನು ರ್‍್ಯಾಸ್ಕಲ್‌’ ಎಂದು ತರಾಟೆಗೆ ತೆಗೆದುಕೊಂಡರು. ಶ್ರೀರಂಗಪಟ್ಟಣಕ್ಕೆ ಶೂಟಿಂಗ್‌ಗಾಗಿ ಅನುಮತಿ ಪಡೆಯಲು ಹೋಗಿದ್ದೆನೆಂದೂ, ವಿಷ್ಣು ವಿಷಯ ಗೊತ್ತಿಲ್ಲವೆಂದೂ ಸುಳ್ಳು ಹೇಳಿ ನುಣುಚಿಕೊಂಡೆ.

ವಿಷ್ಣುವಿನ ರೂಮ್‌ಗೆ ಹೋಗಿ, ಅವನಿದ್ದರೆ ಕರೆದುಕೊಂಡು ಬರುವಂತೆ ಗಂಗಪ್ಪನವರಿಗೆ ಸೂಚಿಸಿದರು. ಗಂಗಪ್ಪನವರನ್ನು ಅವರು ‘ಕೌರ್‌’ ಎಂದು ಕರೆಯುತ್ತಿದ್ದರು. ವಿಷ್ಣು ಅವನ ರೂಮ್‌ನಲ್ಲಿ ಇರಲಿಲ್ಲ ಎಂದು ಗಂಗಪ್ಪ ಹೇಳಿದರು. ಅಷ್ಟರಲ್ಲಿ ಪ್ರೊಡಕ್ಷನ್‌ನ ಇನ್ನೊಬ್ಬ ಹುಡುಗ ಬಂದು, ನಾಯಕಿ ಶುಭಾ ರೂಮ್‌ನಲ್ಲಿ ವಿಷ್ಣು ಇದ್ದ ವಿಚಾರವನ್ನು ತಿಳಿಸಿಬಿಟ್ಟ.

ವೀರಾಸ್ವಾಮಿಯವರ ರಕ್ತದೊತ್ತಡ ಏರಿತು. ‘ಅದ್ಯಾವುದು ರೂಮ್‌ ಅಂತ ತೋರಿಸಿ. ಅವನಿಗೆ ಕಾದಿದೆ’ ಎನ್ನುತ್ತಾ ಮೇಲೆದ್ದರು. ನನ್ನ ಹೃದಯ ಭಯದಲ್ಲಿ ಡವಡವ ಹೊಡೆದುಕೊಳ್ಳಲಾರಂಭಿಸಿತು. ಹೇಗೋ ಸಮಾಧಾನ ಮಾಡಿ ಅವರನ್ನು ಕೂರಿಸಿ, ನಾನೇ ಹೋಗಿ ವಿಷ್ಣುವನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೊರಟೆ. ಅವರ ಗ್ಲಾಸ್‌ ಖಾಲಿಯಾಗಿದ್ದರಿಂದ ಇನ್ನೊಂದು ಪೆಗ್‌ ಹಾಕುವಂತೆ ಸೂಚಿಸಿದರು. ನನಗೂ ಅದೇ ಬೇಕಿತ್ತು. ಲೋಟಕ್ಕೆ ಮದ್ಯವನ್ನು ಬಗ್ಗಿಸಿ ಕೊಟ್ಟು, ಮೆಲ್ಲಗೆ ಅಲ್ಲಿಂದ ಹೊರಟೆ. ವಿಷ್ಣುವನ್ನು ಹೇಗಾದರೂ ಮಾಡಿ ಬಚಾವ್ ಮಾಡಬೇಕೆಂಬುದು ನನ್ನ ಉದ್ದೇಶವಾಗಿತ್ತು.

ಶುಭಾ ಇದ್ದ ರೂಮ್‌ ತಲುಪಿ, ಅಲ್ಲಿಂದ ವಿಷ್ಣುವನ್ನು ಹೊರಗೆ ಕರೆತರೋಣ ಎಂದುಕೊಂಡು ಓಡಿದೆ. ವೀರಾಸ್ವಾಮಿಯವರ ಕೈಗೆ ಸಿಕ್ಕಿದರೆ ಬಿಸಿಬಿಸಿ ಕಜ್ಜಾಯ ಸಿಗುವುದು ಗ್ಯಾರಂಟಿ ಎಂದು ಎಚ್ಚರಿಸಿದೆ. ಆ ರೂಮ್‌ನಿಂದ ಹೊರಗೆ ಇಣುಕಿದರೆ ಕಾರಿಡಾರ್‌ನಲ್ಲಿ ವೀರಾಸ್ವಾಮಿಯವರು ನಡೆದುಕೊಂಡು ಬರುತ್ತಿದ್ದುದು ಕಾಣಿಸಿತು. ಅಲ್ಲಿಂದ ಪಾರಾಗಲು ಬೇರೆ ದಾರಿಯೇ ಇರಲಿಲ್ಲ. ಶುಭಾಗೆ ವಿಷ್ಣು ಮೇಲೆ ಒಂದು ತರಹ ಪ್ರೀತಿ ಇತ್ತು. ನಾನು, ವಿಷ್ಣು ಇಬ್ಬರೂ ಶುಭಾ ಇದ್ದ ರೂಮ್‌ನ ಬಾತ್‌ರೂಮ್‌ ಸೇರಿಕೊಂಡೆವು. ರೂಮ್‌ನ ದೀಪಗಳನ್ನೆಲ್ಲಾ ಆರಿಸುವಂತೆ ಹೇಳಿದೆವು. ಪುಣ್ಯಕ್ಕೆ ಶುಭಾ ಇಲ್ಲ ಎನ್ನಲಿಲ್ಲ. ಬಾಗಿಲು ಬಡಿದ ಸದ್ದಾಯಿತು. ಕೋಣೆಯ ದೀಪ ಹಾಕಿ, ಶುಭಾ ಬಾಗಿಲನ್ನು ತೆಗೆದಳು. ವೀರಾಸ್ವಾಮಿ ಒಳಗೆ ಬಂದರೆಂಬುದು ಅವರ ದನಿಯಿಂದಲೇ ಗೊತ್ತಾಯಿತು. ಯಾರೂ ತನ್ನ ರೂಮ್‌ಗೆ ಬಂದಿಲ್ಲ ಎಂದು ಶುಭಾ ಒಂದು ಸಣ್ಣ ಸುಳ್ಳನ್ನು ಹೇಳಿದಳು. ವಿಷ್ಣುವನ್ನು ವೀರಾಸ್ವಾಮಿಯವರು ಬೈಯ್ದುಕೊಳ್ಳುತ್ತಲೇ ಇದ್ದರು.

ಆಗ ದಾಸ್‌ಪ್ರಕಾಶ್‌ ಹೋಟೆಲ್‌ನ ಬಾತ್‌ರೂಮ್‌ನಿಂದ ಹೊರಗೆ ಹೋಗಲು ಒಂದು ಬಾಗಿಲು ಇರುತ್ತಿತ್ತು. ಕ್ಲೀನ್‌ ಮಾಡುವ ಹುಡುಗರಿಗೆ ಅನುಕೂಲವಾಗಲಿ ಎಂದು ಇದ್ದ ವ್ಯವಸ್ಥೆ ಅದು. ಆ ಬಾಗಿಲಿನ ಬೋಲ್ಟ್‌ ತೆಗೆದೆವು. ಅದೃಷ್ಟವಶಾತ್‌ ಬಾಗಿಲು ತೆರೆದುಕೊಂಡಿತು; ಹೊರಗಿನಿಂದ ಅದಕ್ಕೆ ಯಾರೂ ಚಿಲಕ ಹಾಕಿರಲಿಲ್ಲ. ನಾನು, ವಿಷ್ಣು ಅದರಿಂದ ಹೊರಗೆ ಓಡಿದೆವು. ನನ್ನ ಬೈಕ್‌ನಲ್ಲೇ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಹೋದೆ. ಅಮ್ಮ ಅಡುಗೆ ಮಾಡಿದ್ದರು. ಊಟ ಮಾಡಿ ಮಲಗಿದ ಇಬ್ಬರೂ, ಬೆಳಿಗ್ಗೆ ಎದ್ದು ಸಿದ್ಧರಾಗಿ ಏಳು ಗಂಟೆಗೆ ಸ್ಟುಡಿಯೊ ತಲುಪಿದೆವು.

ಪುಟ್ಟಣ್ಣನವರು ಯಾವುದೋ ದೃಶ್ಯದ ಕುರಿತು ತಲೆಬಿಸಿ ಮಾಡಿಕೊಂಡಿದ್ದರು. ನಮ್ಮಿಬ್ಬರನ್ನೂ ಕಂಡಿದ್ದೇ, ‘ಇಬ್ಬರೂ ಬೈಕ್‌ ಮೇಲೆ ಸುತ್ತುತ್ತಿದ್ದೀರಾ? ನೆನ್ನೆ ನೀನು ಎಲ್ಲಿ ಹೋಗಿದ್ದೆ?’ ಎಂದು ವಿಷ್ಣುವನ್ನು ಪ್ರಶ್ನಿಸಿದರು. ಮೈಸೂರಿನಲ್ಲಿ ತನ್ನ ಅಜ್ಜಿ ಮನೆ ಇದೆ ಎಂದು ಇನ್ನೊಂದು ಸುಳ್ಳು ಹೇಳಿದ ವಿಷ್ಣು, ನಾವಿಬ್ಬರೂ ಅಲ್ಲಿಗೆ ಹೋಗಿದ್ದಾಗಿ ಸಬೂಬು ಹೇಳಿದ. ನಾನೂ ಹೌದು ಎನ್ನುತ್ತಾ ‘ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ’ಯಾದೆ. ಅವರು ಒಂದು ಎಚ್ಚರಿಕೆ ಕೊಟ್ಟು, ಸುಮ್ಮನಾದರು. ವೀರಾಸ್ವಾಮಿಯವರು ಬಂದು, ‘ಎಲ್ಲೋ ನಿನ್ನ ಅಜ್ಜಿ ಮನೆ... ಭಡವಾ... ರಾಸ್ಕಲ್‌’ ಎನ್ನುತ್ತಾ ಇನ್ನೊಂದು ಸುತ್ತು ತರಾಟೆಗೆ ತೆಗೆದುಕೊಂಡರು. ಹೇಗೋ ನಾವಿಬ್ಬರೂ ಬೀಸುವ ದೊಣ್ಣೆಯಿಂದ ಪಾರಾದೆವು ಎಂದುಕೊಂಡು ನೆಮ್ಮದಿಯ ನಿಟ್ಟುಸಿರಿಟ್ಟೆವು.

ಮುಂದಿನ ವಾರ: ಚಿತ್ರದುರ್ಗದಲ್ಲಿ ನಾನು, ವಿಷ್ಣು ಅಂಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT