ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಗೆ ಆಹಾರವಾದ ಸಂಜಯ ಬಾರು

ವ್ಯಕ್ತಿ
Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅನೇಕರು ಅಧಿಕಾರದಲ್ಲಿದ್ದಾಗ ಸುದ್ದಿ ಮಾಡಿದರೆ ಇನ್ನು ಕೆಲವರು ಅಧಿಕಾರ ಬಿಟ್ಟ ಎಷ್ಟೋ ವರ್ಷಗಳ ನಂತರ ಸುದ್ದಿಯಲ್ಲಿರುತ್ತಾರೆ. ಪ್ರಧಾನಿ ಮನಮೋಹನ್ ಸಿಂಗ್‌ ಕುರಿತು ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌ – ದಿ ಮೇಕಿಂಗ್‌ ಅಂಡ್‌ ಅನ್‌ಮೇಕಿಂಗ್‌ ಆಫ್‌ ಮನಮೋಹನ್‌ ಸಿಂಗ್‌’ ಎಂಬ ವಿವಾದಿತ ಪುಸ್ತಕ ಬರೆದು ಸುದ್ದಿಯಲ್ಲಿರುವವರು ಸಂಜಯ ಬಾರು.

ಅವರು ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಪ್ರಧಾನಿ ಅವರಿಗೆ ಯುಪಿಎ ಸರಕಾರದ ಎರಡನೆಯ ಅವಧಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸೋನಿಯಾ ಗಾಂಧಿ ಅವರ ಪರಿವಾರ ಅವಕಾಶ ಕೊಡಲಿಲ್ಲ, ದೆಹಲಿಯಲ್ಲಿ ಪ್ರಧಾನಿ ಮತ್ತು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬ ಎರಡು ಅಧಿಕಾರ ಕೇಂದ್ರಗಳಿದ್ದವು ಎಂದು ಈ ವಿವಾದಿತ ಪುಸ್ತಕದಲ್ಲಿ ಬಾರು ವಾದಿಸಿದ್ದಾರೆ.

ಈ ಕುರಿತು ದೆಹಲಿಯ ರಾಜಕೀಯ ವಲಯದಲ್ಲಿ ಈ ಹಿಂದೆಯೇ ಈ ರೀತಿಯ ಮಾತುಗಳು ಕೇಳಿ ಬರುತ್ತಿದ್ದವು. ಅದನ್ನು ಒಂದು ದೃಷ್ಟಿಯಿಂದ ಈ ಹೊಸ ಇಂಗ್ಲಿಷ್‌ ಪುಸ್ತಕ ದೃಢಪಡಿಸಿದೆ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ವೇಳೆಗೆ ಮೋದಿ, ರಾಹುಲ್‌ ಗಾಂಧಿ, ಕೇಜ್ರಿವಾಲ್‌ ಸೇರಿದಂತೆ ಅನೇಕ ರಾಜಕೀಯ ಮುಖಂಡರ ಬಗ್ಗೆ ಪುಸ್ತಕಗಳು ಪ್ರಕಟವಾಗಿವೆ. ರಾಜಕೀಯದ ಗಾಳಿ ಜೋರಾಗಿ ಬೀಸಿ, ಜನ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳುವಾಗ ರಾಜಕೀಯದವರ ಬಗ್ಗೆ ಬರೆದರೆ ಪುಸ್ತಕ ಭರದಿಂದ ಮಾರಾಟವಾಗುತ್ತದೆ ಎನ್ನುವುದು ಪುಸ್ತಕ ಪ್ರಕಾಶಕರಿಗೆ ತಿಳಿಯದ ವಿಷಯವಲ್ಲ. ಬಾರು ಅವರ ಈ ಪುಸ್ತಕ ಸರಿಯಾದ ‘ಸಮಯ’ದಲ್ಲಿ ಬಂದಿರುವುದರಿಂದ ಎಂಟು ಸಾವಿರ ಪ್ರತಿಗಳು ಒಂದು ವಾರದಲ್ಲಿ ಖಾಲಿಯಾಗಿವೆ.

ಈ ಪುಸ್ತಕದಲ್ಲಿ ಅವರು ಬರೆದಿರುವುದೆಲ್ಲ ಬರೀ ‘ಮಸಾಲೆ’ ಅಲ್ಲ. ಪ್ರಧಾನಿ ಮಾಧ್ಯಮ ಸಲಹೆಗಾರರೆಂದರೆ ಅವರಿಗೆ ಸಕಲವೂ ತಿಳಿದಿರುತ್ತದೆ ಎಂದಲ್ಲ. ಆದರೆ ಸಾಕಷ್ಟು ವಿಷಯ ಗೊತ್ತಿರು­ತ್ತದೆ. ಕುತೂಹಲ ಕೆರಳಿಸುವ ವಿಷಯ ಮತ್ತು ಸ್ಫೋಟಕ ಮಾಹಿತಿ­ಗಳಿಂದಾಗಿ ಬಾರು ಸುದ್ದಿಯಲ್ಲಿದ್ದಾರೆ. ಇದೇ ಪುಸ್ತಕ ಈ ವರ್ಷದ ಮೇ ನಂತರ ಬಂದಿದ್ದರೆ ಇಂಥ ಗರಂ ಹವಾ ಸೃಷ್ಟಿಸುತ್ತಿರಲಿಲ್ಲ. ಈ ನಡುವೆ ಕಲ್ಲಿದ್ದಲು ಖಾತೆಯ ಮಾಜಿ ಕಾರ್ಯದರ್ಶಿ ಪಿ.ಸಿ.ಪಾರೇಖ್ ಪುಸ್ತಕ ಕೂಡ ಮನಮೋಹನ್‌ ಸಿಂಗ್‌ ಸರ್ಕಾರದ ಆಡಳಿತವನ್ನು ಜಾಲಾಡಿದೆ.
ಚುನಾವಣಾ ಪೂರ್ವ ಸಮೀಕ್ಷೆಯಿಂದ ಸ್ವಲ್ಪ ಮಂಕಾಗಿದ್ದ ಕಾಂಗ್ರೆಸ್‌ನ್ನು  ಬಾರು ಬರೆದ ಪುಸ್ತಕ ಪೇಚಿಗೆ ಸಿಲುಕಿಸಿರುವುದು ಸುಳ್ಳಲ್ಲ. ಅವರ ಪುಸ್ತಕಕ್ಕೆ ಪ್ರತಿಕ್ರಿಯೆಯಾಗಿ ಪ್ರಿಯಾಂಕ ಗಾಂಧಿ ‘ಮನಮೋಹನ್‌ ಸೂಪರ್‌ ಪ್ರಧಾನಿ’ ಎಂದು ಕರೆದಿದ್ದರೆ, ಪ್ರಧಾನಿಯವರ ಮಗಳು, ದೆಹಲಿ ವಿ.ವಿಯಲ್ಲಿ ಇತಿಹಾಸ ಬೋಧಿಸುವ ಉಪಿಂದರ್‌ ಸಿಂಗ್‌ ‘ಇದು ನಂಬಿಕೆಯ ಬಹುದೊಡ್ಡ ಉಲ್ಲಂಘನೆ’ ಮತ್ತು ‘ಬೆನ್ನಿಗೆ ಚೂರಿ’ ಎಂದು ಕೆಂಡಕಾರಿದ್ದಾರೆ.

ಪ್ರಧಾನಿ ಕಚೇರಿಯ ದುರ್ಬಳಕೆ ಮಾಡಲಾಗಿದೆ ಎಂದು ಆ  ಕಚೇರಿಯ ಪ್ರಕಟಣೆ ತಿಳಿಸಿದೆ. ಮನಮೋಹನ್‌ಸಿಂಗ್ ಅವರ ಎರಡನೇ ಅವಧಿಯಲ್ಲಿ ಬಾರು ಪ್ರಧಾನಿಯವರ ಮಾಧ್ಯಮ ಸಲಹೆಗಾರರಾಗಲಿಲ್ಲ. ಇದರಿಂದ ಹುಟ್ಟಿಕೊಂಡ ಅಸಂತೋಷವೇ ಈ ರೀತಿಯ ಪುಸ್ತಕದ ಹುಟ್ಟಿಗೆ ಕಾರಣ ಎಂದು ಕಾಂಗ್ರೆಸ್ ಪಕ್ಷದ ಒಳಗಿನವರು ಈಗ ಬಾರು ಮೇಲೆ ಆರೋಪದ ಮಳೆ ಸುರಿಸಿದ್ದಾರೆ.

ಹಾಗೆ ನೋಡಿದರೆ ಸಂಜಯ ಬಾರು ಬರವಣಿಗೆಗೆ ಹೊಸಬರಲ್ಲ. ಅವರು ಹಿಂದೆ ಬೇರೆ ಎರಡು ಪುಸ್ತಕಗಳನ್ನು ಬರೆದಿದ್ದರು. ಆದರೆ ಅದೇ ಬೇರೆ, ಈಗಿನ ವಿಷಯವೇ ಬೇರೆ. ಬಾರು ಅವರು ಎಚ್‌.ವೈ.ಶಾರದಾ ಪ್ರಸಾದ್‌ ಅವರ ದೊಡ್ಡ ಅಭಿಮಾನಿ. ಶಾರದಾ ಪ್ರಸಾದ್ ಅವರು ಇಂದಿರಾ ಗಾಂಧಿಯವರ ಮಾಧ್ಯಮ ಸಲಹೆಗಾರರಾಗಿ ದೀರ್ಘ ಕಾಲ ಕೆಲಸ ಮಾಡಿದವರು. ಅವರನ್ನು ಬಾರು ‘ಸಂಸ್ಥೆಗಳನ್ನು ಕಟ್ಟುವವರು’ ಮತ್ತು ‘ಪುನರುಜ್ಜೀವನದ ಮನುಷ್ಯ’ ಎಂದು ಕರೆದಿದ್ದಾರೆ.

ಆದರೆ ಶಾರದಾ ಪ್ರಸಾದ್‌ ಪ್ರಧಾನಿ ಕಚೇರಿಯ ಒಳಸುತ್ತಿನ ಪಿಸು ಮಾತುಗಳನ್ನು ಬರಹದಲ್ಲಿ ಬಿಚ್ಚಿಡಲಿಲ್ಲ. ಕೊನೆಗೆ ಮಿತ್ರರ ಒತ್ತಾಯ ತಾಳಲಾರದೆ ಅವರು, ‘ದಿ ಬುಕ್ ಐ ವೋಂಟ್‌ ಬಿ ರೈಟಿಂಗ್‌ ಅಂಡ್‌ ಅದರ್‌ ಎಸ್ಸೇಸ್’ ಎಂಬ 65 ಬಿಡಿ ಲೇಖನಗಳನ್ನು ಬರೆಯಬೇಕಾಗಿ ಬಂತು. ಒಂದು ಸಲ ಸ್ವತಃ ಬಾರು ಅವರೇ ಅವರಿಗೆ ತಮ್ಮ ಅನುಭವವನ್ನು ಬರೆಯಲು ಕೇಳಿದಾಗ ಶಾರದಾ ಪ್ರಸಾದ್ ಕೊಟ್ಟ ಉತ್ತರ ಮಾರ್ಮಿಕವಾಗಿದೆ.

‘ನೀವು ಪ್ರಧಾನ ಮಂತ್ರಿ ಕಚೇರಿಯಲ್ಲಿದ್ದರೂ ಒಂದು ವಿಷಯ ಅಥವಾ ಘಟನೆಯ ಎಲ್ಲಾ ಮುಖಗಳೂ  ನಿಮಗೆ ತಿಳಿಯುವುದಿಲ್ಲ. ಸತ್ಯಕ್ಕೆ ಹಲವು ಮುಖಗಳು ಇವೆ’ ಪಿ.ವಿ. ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ಅವರಿಗೆ ಸಂಜಯ್ ಬಾರು ಅವರ ತಂದೆ ವಿಠಲ್‌ ಬಾರು ಲೇಖನ ಮತ್ತು ಭಾಷಣ ಸಿದ್ಧಪಡಿಸಲು ನೆರವಾಗುತ್ತಿದ್ದರು.  ಸಂಜಯ ಬಾರು ಅವರು ಕಾಲೇಜು ದಿನಗಳಲ್ಲಿ ಮಾರ್ಕ್‌್ಸವಾದಿ ಕಮ್ಯುನಿಸ್ಟ್‌ ಪಕ್ಷದ ಸದಸ್ಯರಾಗಿದ್ದರು. ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅವರು ಅರ್ಥಶಾಸ್ತ್ರಜ್ಞ ಕೆ.ಎನ್‌.ರಾಜ್‌ ಅವರ ಶಿಷ್ಯರಾಗಿದ್ದರು. ಮನಮೋಹನ್‌ ಸಿಂಗ್‌ ಕೂಡ ಒಂದು ಕಾಲಕ್ಕೆ ಇದೇ ರಾಜ್‌ ಅವರ ಶಿಷ್ಯರಾಗಿದ್ದವರು. ಮುಂದೆ ಅರ್ಥಶಾಸ್ತ್ರದ ಅಧ್ಯಾಪಕರಾಗಿ, ರಾಜಕೀಯ, ಆರ್ಥಿಕ ವಿಶ್ಲೇಷಕರಾಗಿ, ವಿವಿಧ ಪತ್ರಿಕೆಗಳ ಸಂಪಾದಕರಾಗಿ ಬಾರು ಹೊಣೆ ನಿರ್ವಹಿಸಿದರು.

ಭಾರತಕ್ಕೆ ಕೊರಿಯಾ ಮೂಲದ ಆರ್ಥಿಕ ಮಾದರಿ ಹೊಂದುತ್ತದೆ ಎಂದು ಮೊದಲಿಗೆ ಪ್ರತಿಪಾದಿಸಿದವರು ಮನಮೋಹನ್‌ ಸಿಂಗ್‌.  ಇದನ್ನು ತಮ್ಮ ಕೃತಿಯಲ್ಲಿ ಬಾರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಹೇಗೆ ಮನಮೋಹನ್‌ ಸಿಂಗ್‌ರಂಥ ಒಬ್ಬ ಚಿಂತಕ, ಅರ್ಥಶಾಸ್ತ್ರಜ್ಞ ತನ್ನ ಅಧಿಕಾರಾವಧಿಯಲ್ಲಿ ಸರಿಯಾದ ರೀತಿಯಲ್ಲಿ ತನ್ನ ಶಕ್ತಿಯನ್ನು ತೋರಿಸಲು ಹೋಗದೆ ವಿನಾಕಾರಣ ಮೆದುವಾಗುತ್ತಾ ಹೋದರು ಎನ್ನುವುದನ್ನು ಬಾರು ಮತ್ತೆ ಮತ್ತೆ ತಮ್ಮ ಈ ಪುಸ್ತಕದಲ್ಲಿ ಹೇಳಿದ್ದಾರೆ. ಮನಮೋಹನ್‌ ಸಿಂಗ್‌ ಅವರಿಗೇ ಸಲ್ಲಬೇಕಾದ ಹೆಗ್ಗಳಿಕೆಗಳನ್ನು ಈ ಪುಸ್ತಕ ಅಲ್ಲಲ್ಲಿ ಸಲ್ಲಿಸಿದೆ. ಪಿ.ವಿ.ಎನ್. ಪ್ರಧಾನಿಯಾಗಿದ್ದ ಕಾಲದಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿಯನ್ನು ರೂಪಿಸುವುದರಲ್ಲಿ ಮನಮೋಹನ್ ಸಿಂಗ್‌ ಅವರ ಪಾತ್ರ ದೊಡ್ಡದಿದ್ದು ಅದನ್ನು ಅವರು ಸರಿಯಾಗಿ ಹೇಳಿಕೊಳ್ಳಲು ಸಂಕೋಚ ಪಡುವುದು ಬಾರು ಅವರಿಗೆ ಇಷ್ಟವಿಲ್ಲ.

ಮನಮೋಹನ್ ಸಿಂಗ್‌ ಅವರು ಒಬ್ಬ ರಾಜಕೀಯ ನಾಯಕರಾಗಿ ಬೆಳೆಯದೇ ಹೋದದ್ದರಿಂದಲೇ, ಕೇವಲ ಆರ್ಥಿಕ ಚಿಂತಕರಾಗಿ ಉಳಿಯಲು ನೋಡಿದ್ದರಿಂದಲೇ ಅವರು ಅನೇಕ ಗಂಭೀರ  ಆಪಾದನೆಗಳನ್ನು ಎದುರಿಸಬೇಕಾಗಿ ಬಂತು. ಇದು ಅವರ ಕೊರತೆ ಕೂಡ ಆಗಿತ್ತು ಎಂಬುದು ಬಾರು ಅವರ ವಾದ.

ನೋವಿನ ಪ್ರಸಂಗ: ‘ಒಂದು ಮುಖ್ಯ ವಿಷಯದ ಕುರಿತು ನಾವು ಸೋನಿಯಾ ಅವರ ಸಲಹೆ ಕೇಳಬೇಕೇ ಎಂದು ಪ್ರಧಾನಿಯವರನ್ನು ಕೇಳಿದರೆ ಅದಕ್ಕೆ ಅವರು ಕೊಟ್ಟ ಉತ್ತರ ‘ನಾನು ಪ್ರಧಾನಿ! ’ ಆದರೆ ಅದೇ ಮನಮೋಹನ್‌ ಸಿಂಗ್‌ ಅವರು ಬೇರೆ ಅನೇಕ ಸಂದರ್ಭಗಳಲ್ಲಿ  ಸೋನಿಯಾ ಅವರಿಗೆ ವಿಧೇಯವಾಗಿ ನಡೆದುಕೊಳ್ಳುತ್ತಿದ್ದರು’ ಎಂದು  ಬೇಸರ ತೋಡಿಕೊಂಡಿದ್ದಾರೆ. ಈ ಪುಸ್ತಕ ಬಂದ ಮೇಲೆ ಅನೇಕರು ವಿಶೇಷವಾಗಿ ಕಾಂಗ್ರೆಸ್‌ನವರು ಬಾರು ಅವರನ್ನು ಸಮಯಸಾಧಕ ಎನ್ನುತ್ತಿದ್ದಾರೆ. ಆದರೆ ಬಾರು ಹೇಳುವ ಪ್ರಕಾರ ಅವರು ಇದರಲ್ಲಿ ಯುಪಿಎ –1ರ ಸಾಧನೆಗಳ ನೈಜ ಚಿತ್ರಣ ಕೊಡಲು ಯತ್ನಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ಪ್ರಧಾನಿಯಾಗಿ ಸಾಧಿಸಿ ತೋರಿಸಿದ್ದ ಮನಮೋಹನ್‌ ಸಿಂಗ್‌ ಏಕೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಗೊಂಬೆಯಂತೆ ವರ್ತಿಸುವ ಒತ್ತಡಕ್ಕೆ ಒಳಗಾದರು ಎಂಬುದು ಈ ವಿವಾದಿತ ಪುಸ್ತಕದ ಉದ್ದಕ್ಕೂ ಬಾರು ಅವರನ್ನು ಕಾಡಿರುವ ಪ್ರಶ್ನೆ. ಬಾರು, ‘ನನಗೆ ಗೊತ್ತಿರುವುದರಲ್ಲಿ ಕೇವಲ ಶೇ 50 ಮಾತ್ರ ಹೇಳಿದ್ದೇನೆ’ ಎಂದಿದ್ದಾರೆ.

ಒಂದಂತೂ ನಿಜ, ಬಾರು ಅವರು ಮನಮೋಹನ್ ಸಿಂಗ್‌ ಅವರ ಹಿತಶತ್ರುವಲ್ಲ, ಹಿತೈಷಿ. ಆದರೆ ಅವರು ಬರಹಗಾರನಾಗಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ಬರಬಹುದು ಎಂದು ಈ ಪುಸ್ತಕ ಬರೆಯುವಾಗ ಪ್ರಧಾನಿ ಗಮನಕ್ಕೆ ತರುವ ಗೋಜಿಗೆ ಹೋಗಲಿಲ್ಲ. ಇತ್ತೀಚೆಗೆ ಟಿ.ವಿ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾರು ಅವರನ್ನು ಸಂದರ್ಶಕರು ‘ನೀವು ಪ್ರಧಾನಿಗೆ ಪುಸ್ತಕ ಕಳುಹಿಸಿದ್ದೀರಾ’ ಎಂದು ಕೇಳಿದಾಗ ಬಾರು ‘ಹೌದು’ ಎನ್ನುತ್ತಾರೆ. ‘ನೀವು ಅವರನ್ನು ಭೇಟಿ ಮಾಡುವಿರಾ?’ ಎಂದಾಗ ‘ಪ್ರಧಾನಿ ಅವರಿಂದ ದೂರವಾಣಿ ಕರೆ ಬರುವುದನ್ನು ಕಾಯುತ್ತಿದ್ದೇನೆ’ ಎಂದು ಉತ್ತರಿಸಿದರು.

ಅಧಿಕಾರ ಕೇಂದ್ರಕ್ಕೆ ಅನೇಕ ಬಾಗಿಲುಗಳು, ಹಲವು ಕಿಟಕಿಗಳು. ಪ್ರತಿಯೊಂದು ಗೋಡೆಗೂ ಕಿವಿಗಳು ಇರುತ್ತದೆ. ಕೆಲವು ಕಿವಿಗಳು ಮಾತನಾಡುತ್ತವೆ. ಬಾರು ಅಂಥ ಒಂದು ಜೋಡಿ ಕಿವಿ ಮತ್ತು ಬಾಯಿ. ಸೋನಿಯಾ ಮತ್ತು ರಾಹುಲ್‌ ಅವರು ಪ್ರಧಾನಿಗಿಂತ ಬಲವಾಗುತ್ತಾ ಹೋದರು ಎಂಬುದು ಬಾರು ಅವರ ನೋವು. ಲೋಕಸಭೆಗೆ  ಮನಮೋಹನ್ ಸಿಂಗ್ ಸ್ಪರ್ಧಿಸಿದಾಗ ಮನೆಮನೆಗೆ ತೆರಳಿ ಅವರ ಪರವಾಗಿ ಈ ಬಾರು ಮತ ಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT