ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಮನೆಯಿಂದ ಜನಮನಕ್ಕೆ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನೀಳಮೈಕಟ್ಟಿನ ಸ್ಫುರದ್ರೂಪಿ, ಮುಗುಳ್ನಗೆಯಿಂದಲೇ ಮನಸೆಳೆವ ಕನಸು ಕಂಗಳ ಹುಡುಗ, ಅರಳು ಹುರಿದಂತೆ ಮಾತನಾಡಬಲ್ಲ ಚತುರ, ಸುದ್ದಿಮನೆಯಿಂದ ಜನಮನಕ್ಕೆ ಲಗ್ಗೆಯಿಟ್ಟ ಮೋಡಿಗಾರ. ಹೌದು, ರೆಹಮಾನ್ ಹಾಸನ್ ಅಂದರೆ ಹಾಗೆ. ಯಾವುದೇ ಸ್ನೇಹಿತರನ್ನು ಇವರ ಬಗ್ಗೆ ಕೇಳಿದರೆ ಹೇಳೋದು ಡೌನ್ ಟು ಅರ್ಥ್‌ ಹುಡುಗ ಅಂತ.ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ರೆಹಮಾನ್ ಗಳಿಸಿರೋ ಸಂಪತ್ತು ಅಂದರೆ ಇದೇನೇ.

ಟಿವಿ9 ವಾಹಿನಿಯಲ್ಲಿ 10 ವರ್ಷ ಸುದ್ದಿ ನಿರೂಪಕರಾಗಿದ್ದ ರೆಹಮಾನ್ ಕರ್ನಾಟಕದ ಮನೆ ಮಾತಾಗಿದ್ದು ಬಿಗ್ ಬಾಸ್‌  ರಿಯಾಲಿಟಿ ಷೋ ಮೂಲಕ. ಪತ್ರಿಕೋದ್ಯಮದಲ್ಲಿ ಅದಾಗಲೇ ಹೆಸರು ಮಾಡಿದ್ದ ರೆಹಮಾನ್, ಅದನ್ನು ಬಿಟ್ಟು, ಹೊಸ ಜವಾಬ್ದಾರಿ ಹೊತ್ತುಕೊಳ್ಳುವ ನಿರ್ಧಾರ ಮಾಡಿದ್ದು ಇವರ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು.

ಏನಾದರೂ ಹೊಸತು ಸಾಧಿಸಬೇಕು ಎಂಬ ತುಡಿತ ಇವರನ್ನು ಹೊಸ ಮಜಲಿಗೆ ಕೊಂಡೊಯ್ದಿದೆ. ಸುದ್ದಿ ನಿರೂಪಣೆ ಹೊರತಾಗಿ ರೆಹಮಾನ್ ಏನನ್ನಾದರೂ ಮಾಡಬಲ್ಲರು ಎಂದು ಗುರುತಿಸುವಂತಾಗಿದ್ದು ಬಿಗ್ ಬಾಸ್‌ನಿಂದ.

ರೆಹಮಾನ್ ದಾರಿ ಸ್ಪಷ್ಟವಾಗಿತ್ತು. ರಿಯಾಲಿಟಿ ಷೋ ನಡೆಸಿಕೊಡಬೇಕು ಎಂಬುದು ಅವರ ಬಯಕೆಯಾಗಿತ್ತು. ಆಗ ಸಿಕ್ಕಿದ್ದೇ  ‘ಚಾಂಪಿಯನ್’. 'ಚಾಂಪಿಯನ್'... ಒಂದು ಥ್ರಿಲ್ಲಿಂಗ್ ಅನುಭವ ನೀಡುವ ರಿಯಾಲಿಟಿ ಷೋ. ಗೋವಾದ ಕಡಲು, ಪಶ್ಚಿಮಘಟ್ಟದ ದಟ್ಟ ಕಾನನ, ಮರುಭೂಮಿ ಹಾಗೂ ಅರಮನೆ– ಈ ನಾಲ್ಕು ವಿಭಿನ್ನ ಸ್ತರದ ಪ್ರದೇಶಗಳಲ್ಲಿ ‘ಚಾಂಪಿಯನ್’ ಚಿತ್ರೀಕರಣ ನಡೆದಿದೆ.

15 ಹುಡುಗಿಯರು ಈ ಸ್ಪರ್ಧೆಯಲ್ಲಿ ಬೆವರು ಹರಿಸುತ್ತಿದ್ದಾರೆ. ಭಿನ್ನ ಹವಾಗುಣಗಳಲ್ಲಿ ಬದುಕುವುದು (ಸರ್ವೈವ್ ಆಗೋದು) ಹೇಗೆ ಎಂಬ ಪರಿಕಲ್ಪನೆಯೊಂದಿಗೆ ಚಾಂಪಿಯನ್ ರಿಯಾಲಿಟಿ ಷೋ ರಚಿತವಾಗಿದೆ. ಕಷ್ಟಕರವೆನಿಸೋ ಟಾಸ್ಕ್‌ಗಳೇ ಈ ಷೋನ ಹೈಲೈಟ್ ಎನ್ನುತ್ತಾರೆ ರೆಹಮಾನ್.

ಸಿನಿಮಾ, ಸೀರಿಯಲ್
ಪತ್ರಿಕೋದ್ಯಮ ಆಯ್ತು, ರಿಯಾಲಿಟಿ ಷೋ ಆಯ್ತು... ಮುಂದೇನು ಅಂತಾ ಕೇಳಿದರೆ ರೆಹಮಾನ್ ಕೊಡುವ ಉತ್ತರ ಸಿಂಪಲ್. ‘ಎಲ್ಲವನ್ನೂ ಒಮ್ಮೆಲೇ ಮೈ ಮೇಲೆ ಎಳೆದುಕೊಂಡು ಕಷ್ಟಪಡುವ ಬದಲು ಸೆಷನ್ ಬೈ ಸೆಷನ್ ಕೈಗೆತ್ತಿಕೊಳ್ಳುತ್ತೀನಿ’ ಎಂದು ಕ್ರಿಕೆಟ್ ಧಾಟಿಯಲ್ಲಿ ಉತ್ತರಿಸುತ್ತಾರೆ.

ಒಂದರೆಡು ಸಿನಿಮಾಗಳಿಗೆ ಆಫರ್ ಬಂದಿದೆ. ಮಾತುಕತೆಯೂ ನಡೆಯುತ್ತಿದೆ. ಸೀರಿಯಲ್‌ಗಳಿಗೂ ಆಹ್ವಾನ ಬಂದಿತ್ತಂತೆ. ಆದರೆ ಸದ್ಯಕ್ಕೆ ಧಾರಾವಾಹಿಗಳಿಂದ ದೂರವಿರುವ ನಿರ್ಧಾರ ಮಾಡಿದ್ದಾರೆ. ಲೀಡ್ ರೋಲ್ ಅನ್ನೇ ಮಾಡಬೇಕೆಂಬ ಹಂಬಲವೇನಿಲ್ಲ. ಆದರೆ ನಟನೆಗೆ ಪ್ರಾಮುಖ್ಯತೆಯಿರುವ ಗಟ್ಟಿತನದ ಪಾತ್ರಗಳನ್ನು ಮಾಡುವ ಇಚ್ಛೆ ವ್ಯಕ್ತಪಡಿಸುತ್ತಾರೆ ಹಾಸನದ ಈ ಹುಡುಗ.

ಒಂದಿಡೀ ದಶಕ ಸುದ್ದಿ ಚಾನೆಲ್‌ನಲ್ಲಿ ಕೆಲಸ ಮಾಡಿದ್ದನ್ನು ಎಂದಿಗೂ ಮರೆಯಲಾರೆ ಎನ್ನುವ ರೆಹಮಾನ್ ಅಲ್ಲಿ ಆಫೀಸ್ ಬಾಯ್‌ನಿಂದ ಹಿಡಿದು ನಿರ್ದೇಶಕರವರೆಗೆ ಎಲ್ಲರನ್ನೂ ಸ್ಮರಿಸುತ್ತಾರೆ. ಕೆಲಸಕ್ಕೆ ವಿದಾಯ ಹೇಳಿದ ಕೊನೆಯ ದಿನದ ಬೀಳ್ಕೊಡುಗೆಯಂತೂ ಅವರ ಪಾಲಿಗೆ ಚಿರಸ್ಮರಣೀಯ. ಪ್ರತಿ ಕೆಲಸದಲ್ಲಿ ತೋರುವ ಶ್ರದ್ಧೆ ಹಾಗೂ ಖುಷಿಯಿಂದ ಅದನ್ನು ನಿರ್ವಹಿಸುವ ರೀತಿಯೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಇದಕ್ಕೆ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸುದ್ದಿ ವಾಹಿನಿಯ ಗೆಳೆಯರ ಬೆಂಬಲ, ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಈ ಹಸನ್ಮುಖಿ.

ನಿರೂಪಿಸಿ ಗೆದ್ದ ಗಟ್ಟಿಗ
ನಾಲ್ಕು ಗೋಡೆಗಳ ಮಧ್ಯೆ ಸುದ್ದಿ ನಿರೂಪಣೆ ಮಾಡುವುದಕ್ಕೂ ಬೃಹತ್ ವೇದಿಕೆ ಮೇಲೆ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ರೆಹಮಾನ್ ಅವರಿಗೆ ಈ ದಾರಿಯಲ್ಲಿ ಎದುರಾದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಮ್ಮೆಯಿದೆ. ಕಲರ್ಸ್‌ ಸೂಪರ್ ಚಾನೆಲ್ ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ರೆಹಮಾನ್ ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ನಿರೂಪಣೆಯನ್ನು ನೀವೇ ಮಾಡಿ ಅಂತಾ ಗೋವಾದಲ್ಲಿ ರಿಯಾಲಿಟಿ ಷೋ ಚಿತ್ರೀಕರಣದಲ್ಲಿದ್ದ ರೆಹಮಾನ್‌ಗೆ ದಿಢೀರ್ ಕರೆ ಬಂತು. ತಕ್ಷಣ ಬೆಂಗಳೂರಿಗೆ ಬಂದ ಅವರು ಯಾವುದೇ ಪೂರ್ವಸಿದ್ಧತೆ ಇಲ್ಲದಿದ್ದರೂ ವೇದಿಕೆ ಮೇಲೆ ಮೋಡಿ ಮಾಡಿದರು.

ಇದು ಚಾನೆಲ್ ಮುಖ್ಯಸ್ಥರಾದ ಪರಮ್, ವೈಷ್ಣವಿ ಅವರು ರೆಹಮಾನ್ ಮೇಲೆ ಇಟ್ಟಿದ್ದ ನಂಬಿಕೆಗೆ ಸಾಕ್ಷಿ. ವಹಿಸಿದ ಜವಾಬ್ದಾರಿಯನ್ನು ಲೀಲಾಜಾಲವಾಗಿ ಮಾಡಿ ಮುಗಿಸುವುದು ರೆಹಮಾನ್ ಅವರ ಬದ್ಧತೆಯನ್ನು ತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT