ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಮನೆ ತಲುಪಿದ ಮ್ಯಾಡಿಸನ್ ಚಪ್ಪಾಳೆ

ಅಂಕಲ್ ಸ್ಯಾಮ್ ಅಂಗಳದಲ್ಲಿ ಮೋದಿ ಮೋಡಿ...- 5
Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಅನೇಕ ಕಾರಣಗಳಿಂದ ವಿಶೇಷ ಎನಿ­ಸಿಕೊಂಡಿತು. ಭಾರತದ ಪ್ರಮುಖ ಸುದ್ದಿ­­ವಾಹಿನಿಗಳ, ಪತ್ರಿಕೆಗಳ ಪತ್ರ­ಕರ್ತರು ತಮ್ಮ ತಂಡದೊಂದಿಗೆ ನಾಲ್ಕಾರು ದಿನಗಳ ಮೊದಲೇ ನ್ಯೂಯಾರ್ಕ್ ನಗರದಲ್ಲಿ ಮೊಕ್ಕಾಂ ಹೂಡಿ ಪ್ರಧಾನಿ ಭೇಟಿಯ ವಿವರ­ಗ­ಳನ್ನು ಇಂಚಿಂಚೂ ಬಿಡದೆ ವರದಿ ಮಾಡಿದರು.

ಆದರೆ, ಅಮೆರಿಕದ ಮಾಧ್ಯಮ­ಗ­ಳಿಗೆ ಭಾರ­ತದ ಪ್ರಧಾನಿಯ ಅಮೆರಿಕ ಭೇಟಿ ಮಹತ್ವದ್ದು ಎನಿಸಿದಂತೆ ಕಾಣ­ಲಿಲ್ಲ. ಈ ಹಿಂದೆ ಭಾರತದಲ್ಲಿ ಚುನಾ­ವ­ಣೆಯ ಕಾವು ಏರತೊಡಗಿದಾಗ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್, ಯುಎಸ್ಎ ಟುಡೆ, ನ್ಯೂಯಾರ್ಕ್ ಟೈಮ್ಸ್, ಷಿಕಾಗೊ ಟ್ರಿಬ್ಯೂನ್, ವಾಷಿಂ­ಗ್ಟನ್ ಪೋಸ್ಟ್ ಪತ್ರಿಕೆಗಳು ಚುನಾ­ವ­ಣೆಯ ಬಗ್ಗೆ ವಿಸ್ತೃತವಾಗಿ ವರದಿ ಮಾಡಿ­­­ದ್ದ­ಲ್ಲದೇ, ಮೋದಿಯವರ ಅಭೂ­­ತ­­­ಪೂರ್ವ ಗೆಲು­ವಿನ ಬಗ್ಗೆ ವಿಶೇಷ ಲೇಖನ­ಗ­ಳನ್ನೂ ಪ್ರಕಟಿಸಿದ್ದವು.

‘Modi Means Business’, ‘Narendra Modi: New Face of India’ ಎಂಬ ಮುಖ­ಪುಟ ಲೇಖನ­ಗಳೂ ಬಂದಿದ್ದವು. ‘ಟೈಮ್ಸ್’ ಪತ್ರಿಕೆ ಜನ­ಪ್ರಿಯ ವ್ಯಕ್ತಿಗಳ ಸಮೀ­ಕ್ಷೆಗೆ ಇಳಿ­ದಾಗ  ನರೇಂದ್ರ ಮೋದಿ ಅವ­ರನ್ನೂ ಆ ಪಟ್ಟಿಯಲ್ಲಿ ಸೇರಿಸಿಕೊಂಡಿತ್ತು.
ಆದರೆ, 120ಕೋಟಿ ಜನರನ್ನು ಪ್ರತಿ­ನಿ­ಧಿ­ಸುವ ಜಗತ್ತಿನ ಅತಿದೊಡ್ಡ ಪ್ರಜಾ­ಪ್ರಭುತ್ವ ರಾಷ್ಟ್ರದ ಹೊಸ ನಾಯಕನ ಮೊದಲ ಅಮೆರಿಕ ಭೇಟಿ ಅಮೆರಿಕ ಮಾಧ್ಯ­ಮಗಳ ಗಮನವನ್ನು ಸೆಳೆಯ­ಲಿಲ್ಲ. ಪ್ರಧಾನಿ ಭೇಟಿಯ ಆರಂಭದ ದಿನ ಮೂರ್ನಾಲ್ಕು ಪ್ಯಾರಾದಲ್ಲಿ ಒಳ­ಪುಟ­­­ಗ­ಳಲ್ಲಿ ಸುದ್ದಿ ಪ್ರಕಟವಾಗಿತ್ತು.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಡೆರೆಕ್ ವಿಲ್ಲಿಸ್ ‘ನರೇಂದ್ರ  ಮೋದಿ, ಸೋಷಿ­ಯಲ್ ಮೀಡಿಯಾ ಪೊಲಿಟಿಷಿ­ಯನ್’ ಎಂಬ ಲೇಖನ ಬರೆದು ಮೋದಿ ಸಾಮಾ­ಜಿಕ ಜಾಲ­ತಾಣದ ಓರ್ವ ದೈತ್ಯ ರಾಜ­ಕಾರಣಿ. ಸಾಮಾ­ಜಿಕ ಜಾಲ­ತಾಣ­ಗ­­ಳಲ್ಲಿ ಒಬಾಮ ನಂತರ ಜನಪ್ರಿ­ಯತೆ­ಯಲ್ಲಿ ದ್ವಿತೀಯ ಸ್ಥಾನ­ದಲ್ಲಿರುವ ರಾಜ­ಕಾರಣಿ ಎಂದರೆ ನರೇಂದ್ರ ಮೋದಿ ಎಂದು ಬಣ್ಣಿಸಿ ಒಂದಿಷ್ಟು ಅಂಕಿ ಅಂಶ­ಗ­ಳನ್ನು ನೀಡಿ­ದ್ದರು.

ಉಳಿದಂತೆ, ಮೋದಿ ಅಪಾರ ಸಂಖ್ಯೆಯ ಭಾರತೀಯ ಅಮೆರಿ­ಕ­ನ್ ರನ್ನು ಉದ್ದೇಶಿಸಿ ಭಾನುವಾರ ಮಾತ­­­ನಾ­ಡ­ಲಿದ್ದಾರೆ ಎಂಬ ವಿಷಯಕ್ಕೆ ಸೀಮಿತ­­ವಾಗಿ ಎಲ್ಲ ಪತ್ರಿಕೆಗಳು ಒಳ­ಪುಟ­ಗ­ಳಲ್ಲಿ ವರದಿ ಮಾಡಿದ್ದವು. ಕೆಲವು ಪತ್ರಿ­ಕೆ­­ಗಳು ಮೋದಿ ಅವರಿಗೆ ಅಮೆ­ರಿಕವು ಈ ಹಿಂದೆ ವೀಸಾ ನಿರಾ­ಕರಿ­ಸಿದ್ದ ಸಂಗತಿ, ಅದಕ್ಕೆ ಕಾರಣವಾದ ಅಂಶ­ಗಳಿಗೇ ಹೆಚ್ಚು ಮಹತ್ವ ನೀಡಿ ಸುದ್ದಿ ಮುಗಿಸಿದ್ದವು.

ಮೋದಿ, ವಿಶ್ವಸಂಸ್ಥೆಯ ಅಧಿವೇಶನ ಉದ್ದೇ­­ಶಿಸಿ ಮಾಡಿದ ಭಾಷಣವೂ ಯಾವ ಪ್ರಮುಖ ಪತ್ರಿಕೆಯಲ್ಲೂ ಮೊದಲ ಪುಟದಲ್ಲಿ ವರದಿ­ಯಾ­ಗ­ಲಿಲ್ಲ. ‘ನ್ಯೂಯಾರ್ಕ್ ಟೈಮ್ಸ್’, ಮೋದಿ ಭಾಷಣವನ್ನು ನಾಲ್ಕನೆಯ ಪುಟದಲ್ಲಿ ಪ್ರಕ­ಟಿಸಿತು. ಸಿಎನ್ಎನ್, ಎಬಿಸಿ ಮತ್ತಿ­ತರ ಸುದ್ದಿವಾಹಿನಿಗಳು ಮೋದಿ ಮಂಡಿ­ಸಿದ ವಿಷಯಗಳನ್ನು ಚರ್ಚೆಗೆ ತೆಗೆದು­ಕೊ­ಳ್ಳದೇ ಸುಮ್ಮನಾದವು. ಆದರೆ, ಪ್ರಧಾನಿ ಅಮೆರಿಕ ಭೇಟಿಯ ಮೊದಲ ದಿನದಿಂದಲೂ ಕ್ಷಣಕ್ಷಣದ ಮಾಹಿತಿ ಹರಿದಾಡಿದ್ದು ಸಾಮಾಜಿಕ ಜಾಲತಾಣ­ಗ­ಳಲ್ಲಿ ಮಾತ್ರ. ಮೋದಿ ಇನ್ ಅಮೆ­ರಿಕ, ಮೋದಿ ಅಟ್ ಮ್ಯಾಡಿಸನ್ ಎಂಬ ಹ್ಯಾಷ್‌ ಟ್ಯಾಗ್ ಅಂಟಿಸಿಕೊಂಡ ಲಕ್ಷಾಂ­ತರ ಟ್ವೀಟ್ ಗಳು ಟ್ವಿಟರ್ ನಲ್ಲಿ ರವಾನೆಯಾದವು. 

ನಿರ್ಲಕ್ಷ್ಯಕ್ಕೆ ಆಕ್ರೋಶ: ಅಮೆರಿಕದ ಸುದ್ದಿ­ಮನೆ ಮೋದಿ­ಯವರತ್ತ ತಿರು­ಗಿದ್ದೇ ಮ್ಯಾಡಿಸನ್ ಸ್ಕ್ವೇರ್ ಪಾರ್ಕ್ ಸಮಾ­ರಂಭದ ನಂತರ. ಆ ಸಮಾ­ರಂ­ಭದ ವರದಿಗಳು ಎಲ್ಲ ಪತ್ರಿಕೆಗಳಲ್ಲೂ ಅಚ್ಚಾ­ದವು. ಅನೇಕ ಸುದ್ದಿವಾಹಿನಿಗಳು ಭಾಷಣದ ತುಣುಕು­ಗಳನ್ನು ಪ್ರಸಾರ ಮಾಡಿ­ದವು. ಅಂತ­ರ್ಜಾಲದ ಪುಟಗ­ಳಲ್ಲಿ ಸಮಾ­ರಂಭದ ವರದಿಗಳು, ಛಾಯಾ­­ಚಿತ್ರ ಸಹಿತ ಪ್ರಕಟವಾದವು.

  ಟ್ವಿಟರ್‌­ನಲ್ಲಿ ಮೋದಿ ಅಭಿಮಾನಿಗಳು, ಸಮಾ­­ರಂಭದಲ್ಲಿ ಭಾಗವಹಿಸಿದ್ದ ಅನೇ­ಕರು ಹಂಚಿಕೊಂಡ ಅನಿಸಿಕೆಗಳನ್ನು ಹೆಕ್ಕಿ ವಾಲ್ ಸ್ಟ್ರೀಟ್ ಜರ್ನಲ್ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿತು. ಮೋದಿ ಅಮೆರಿಕ ಭೇಟಿ­ಯೆಡೆಗೆ ಅಮೆರಿಕ ಮಾಧ್ಯಮಗಳು ತೋರಿದ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲ­ತಾಣಗಳಲ್ಲಿ ಆಕ್ರೋಶ ವ್ಯಕ್ತ­ವಾಯಿತು. ಅಂತೂ ಅಮೆರಿಕ ಭೇಟಿಯುದ್ದಕ್ಕೂ, ತಮ್ಮ ಉಪವಾಸ ವ್ರತದ ನಡುವೆಯೂ ಪ್ರಧಾನಿ ಮೋದಿ ಲವಲವಿಕೆಯಿಂದಲೇ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿ­ಸಿದರು.

ಮೋದಿ ಉದಾತ್ತ ನಿಲುವು: ಭಾಷಣ ಮಾಡಿದ ಎಲ್ಲೆಡೆ, ಕೇಳುಗರನ್ನು ಹುರಿ­ದುಂ­ಬಿಸಿದರು. ಅಮೆರಿಕ ಈ ಹಿಂದೆ ತಮಗೆ ವೀಸಾ ನಿರಾಕರಿಸಿದ್ದನ್ನು ಪ್ರಸ್ತಾ­ಪಿ­ಸದೇ ಅದೆಲ್ಲ­ವನ್ನೂ ದಾಟಿ ಬಂದಾ­ಗಿದೆ, ಇನ್ನೇನಿದ್ದರು ಭವಿಷ್ಯದ ಬಗ್ಗೆ ಚಿಂತಿ­ಸೋಣ, ಭಾರತದ ಅಭಿವೃದ್ಧಿಯ ಬಗ್ಗೆ ಯೋಚಿಸೋಣ ಎಂಬ ಉದಾತ್ತ ನಿಲು­ವನ್ನು ತಮ್ಮ ನಡೆಯಿಂದಲೇ ತೋರಿ­ದರು. ಪ್ರಧಾನಿ­ಯವರ ಈ ನಡೆ ಅವರ ಅಭಿ­ಮಾ­ನಿ­ಗಳಲ್ಲದ  ಸಾಮಾನ್ಯ ಅಮೆರಿ­ಕ­ನ್ನರೂ ಅವರತ್ತ ಬೆರಗುಗಣ್ಣಿನಿಂದ ನೋಡು-­ವಂತೆ ಮಾಡಿತು.

ಸಫಲತೆಯ ಮಾನದಂಡ: ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಮೆ­ರಿಕ ಭೇಟಿಯ ಯಶಸ್ಸನ್ನು, ದ್ವಿಪ­ಕ್ಷೀಯ ಮಾತುಕತೆಯ ಪರಿಣಾಮ, ಬಂಡ­ವಾಳ ಆಕರ್ಷಿಸುವಲ್ಲಿ ದೊರೆತ ಗೆಲುವು, ಭಾರತೀಯ ಅಮೆರಿಕನ್ನರ ಮನ­ಗೆಲ್ಲಲು ಮೋದಿ ಸಫಲರಾದರೆ ಎನ್ನುವ ಮೂರು ಮಾನದಂಡಗಳನ್ನು ಇಟ್ಟು­ಕೊಂಡು ಅಳೆಯಬೇಕು ಎನಿಸುತ್ತದೆ.

ಬದಲಾವಣೆಯ ಕನಸು: ಮೊದಲ ಎರ­ಡರ ಫಲಿತಾಂಶ ತಿಳಿ­ಯಲು ಇನ್ನೂ ನಾಲ್ಕಾರು ತಿಂಗಳುಗಳೇ ಕಾಯಬೇಕು. ಆದರೆ, ಅನಿವಾಸಿ ಭಾರ­ತೀಯರಂತೂ, ಬದ­ಲಾವಣೆ ಸಾಧ್ಯವೇ ಇಲ್ಲ ಎಂದು ತಾವು ಬಿಟ್ಟುಬಂದ ದೇಶವನ್ನು ಮೋದಿ ಬದ­ಲಾಯಿ­ಸಬಲ್ಲರು ಎಂಬ ಕನ­ಸ­ನ್ನಂತೂ ಕಾಣುತ್ತಿದ್ದಾರೆ ಎಂಬುದು ಮೋದಿ ಅಮೆರಿಕ ಭೇಟಿಯಲ್ಲಿ ಸ್ಪಷ್ಟ­ವಾಗಿ ಕಾಣುತ್ತಿದೆ.
(ಈ ಲೇಖನ ಸರಣಿ ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT