ಮುಂಬೈ (ಪಿಟಿಐ): ಸುದ್ದಿ ಮಾಧ್ಯಮದಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಬೇಕೇ ಎನ್ನುವುದರ ಕುರಿತು ಅದಕ್ಕೆ ಸಂಬಂಧಿಸಿದವರಿಂದ ತಮ್ಮ ಸಚಿವಾಲಯ ಅಭಿಪ್ರಾಯ ಕೇಳುತ್ತಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌್ ತಿಳಿಸಿದ್ದಾರೆ.
‘ಈ ವಿಷಯವಾಗಿ ಅಂತಿಮ ನಿರ್ಧಾರ ತಳೆಯುವುದಕ್ಕೆ ಮುನ್ನ ಅದಕ್ಕೆ ಸಂಬಂಧಿಸಿದವರಿಂದ ಅನಿಸಿಕೆ ಕೇಳಲು ಬಯಸಿದ್ದೇವೆ. ಆದರೆ ಇದನ್ನು ಜಾರಿಗೊಳಿಸಲು ಆತುರ ಮಾಡುತ್ತಿಲ್ಲ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಸ್ತುತ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನ ಮಾಧ್ಯಮಗಳಿಗೆ ಶೇ 26ರಷ್ಟು ಎಫ್‌ಡಿಐ ಮಿತಿ ಇದೆ. ಸುದ್ದಿಯೇತರ ಮಾಧ್ಯಮಗಳಾದ ಪ್ರಕಾಶನ ಸಂಸ್ಥೆಗಳು ಹಾಗೂ ಸಾಮಾನ್ಯ ಮನರಂಜನಾ ವಾಹಿನಿಗಳಲ್ಲಿ (ಜಿಇಸಿ) ಶೇ 100ರಷ್ಟು ಎಫ್‌ಡಿಐಗೆ ಅವಕಾಶ ಇದೆ.