ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

' ಸುಪ್ರೀಂ' ಕದತಟ್ಟಿದ ‘ಮಡೆ ಸ್ನಾನ’

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಮಡೆ ಸ್ನಾನ ಆಚರಣೆಗೆ ಅನುಮತಿ ನೀಡಿರುವ ಹೈಕೋರ್ಟ್‌ ಮಧ್ಯಾಂತರ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಮಲೆಕುಡಿಯ ಜನಾಂಗ­ದವರಿಗೆ ‘ಷಷ್ಠಿ’ ಉತ್ಸವದ ಸಂದರ್ಭದಲ್ಲಿ ಮಡೆ ಮಡೆ ಸ್ನಾನ ಆಚರಿಸಲು ಅನುಮತಿ ನೀಡಿದರೆ ಅಹಿತಕರ ಘಟನೆ­ಗಳು ನಡೆದು ಕಾನೂನು ಸುವ್ಯವಸ್ಥೆಗೆ ಭಂಗವಾಗ­ಬಹುದು ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಸರ್ಕಾರದ ಪರವಾಗಿ ವಕೀಲ ಜೋಸೆಫ್‌ ಅರಿಸ್ಟಾಟಲ್‌ ಈ ಅರ್ಜಿ ದಾಖಲಿಸಿದ್ದಾರೆ. ‘ಮಡೆ ಮಡೆ ಸ್ನಾನ’ ಆಚರಣೆ­ಯಲ್ಲಿ  ಮೇಲ್ವರ್ಗದ ಭಕ್ತರ ಭೋಜನದ ನಂತರ ಎಲೆ­ಗಳಲ್ಲಿ ಉಳಿಯುವ ಆಹಾರದ ಮೇಲೆ ಮಲೆಕುಡಿ­ಯರು ಉರುಳುಸೇವೆ  ಮಾಡುತ್ತಾರೆ. ಇದರಿಂದ ಚರ್ಮದ ಕಾಯಿಲೆ­ಗಳು ಹಾಗೂ ಸಂತಾನ ಪ್ರಾಪ್ತಿ ಇಲ್ಲದ ಮಹಿಳೆ­ಯರ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ಕುರುಡು­ನಂಬಿಕೆ­ಗಳನ್ನು ಆಧರಿಸಿ  ನಡೆಯುವ ಈ ಆಚರಣೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೋರಲಾಗಿದೆ.

ಈಗ ಆಚರಿಸಲಾಗುತ್ತಿರುವ ಸ್ವರೂಪದ ಮಡೆ ಮಡೆ ಸ್ನಾನ ಪಂಕ್ತಿ ಭೇದ ಎಸಗುವ ಜತೆಗೆ ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಗೆ ವಿರೋಧಿಯಾಗಿದೆ. ಅಲ್ಲದೇ ಇದು ಆರೋಗ್ಯಕರ ಆಚರಣೆಯೂ ಅಲ್ಲ ಎಂದು ದೂರಲಾಗಿದೆ.

‘ಸಂವಿಧಾನದ ೫೧ (ಎ) ಮತ್ತು (ಎಚ್‌) ವಿಧಿಗಳು ವೈಜ್ಞಾ­­ನಿಕ ನಿಲುವು, ಮಾನವೀಯತೆ, ಪ್ರಶ್ನಿಸುವ ಮನೋ­ಭಾವ ಮತ್ತು ಸುಧಾರಣಾ ಧೋರಣೆ ಬೆಳೆಸಿ­ಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಹೇಳುತ್ತವೆ. ಮಡೆಸ್ನಾನ ಆಚರಣೆಯನ್ನು ನಿಷೇಧಿಸಬೇಕು ಎಂಬ ನಮ್ಮ ಮನವಿಯು ಈ ವಿಧಿಯ ಆಶಯಕ್ಕೆ ಅನು­ಗುಣವಾಗಿಯೇ ಇದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಧಾರ್ಮಿಕ ನಂಬಿಕೆಗಳ ಆಚರಣೆಯ ಹಕ್ಕು ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ‘ಮಡೆ ಮಡೆ ಸ್ನಾನ’ ಆಚರಣೆಯು ಸಂವಿಧಾನದ ೧೩, ೧೪, ೧೭ ಮತ್ತು ೨೧ನೇ ವಿಧಿಗಳಡಿ ನಾಗರಿಕರಿಗೆ ಕೊಡಮಾಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದೂ ಅದು ಹೇಳಿದೆ.

ಹೈಕೋರ್ಟ್‌ ಹೇಳಿದ್ದೇನು?
ಸುಬ್ರಹ್ಮಣ್ಯದ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಈ ಸಂಬಂಧ ನ.೧೯ರಂದು ಆದೇಶ ನೀಡಿ ‘ನ.೧೯ರಿಂದ ಡಿ.೩ರ ವರೆಗೆ ‘ಷಷ್ಠಿ’ ಆಚರಣೆ ಅವಧಿ­ಯಲ್ಲಿ ಈ ಹಿಂದಿನಿಂದ ನಡೆದುಕೊಂಡು ಬಂದಿ­ರುವ ಪದ್ಧತಿ ಮುಂದುವರಿಸಬಹುದು’ ಎಂದು  ಹೇಳಿತ್ತು. ಅಲ್ಲದೇ ಈ ಆಚರಣೆಯಲ್ಲಿ ಯಾವುದೇ ಬದ­ಲಾ­ವಣೆ ಮಾಡಲು ಅದು ಅನುಮತಿ ಕೊಟ್ಟಿರಲಿಲ್ಲ. ದೇವ­ಸ್ಥಾನ­ದೊಂದಿಗೆ ಸಂಬಂಧ ಹೊಂದಿರುವ ಸ್ಥಳೀಯರ ಭಾವನೆಗಳನ್ನು ಉದಾಸೀನ ಮಾಡಲಾಗದು ಎಂದೂ ಅದು ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT