ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ಬುಲಕ್ಷ್ಮಿ ನೆನೆಯುತ್ತಾ...

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸೆಪ್ಟೆಂಬರ್‌ 16 ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 99ನೇ ಜನ್ಮದಿನ. ಕರ್ನಾಟಕ ಶಾಸ್ತ್ರೀಯ ಮಾತ್ರವಲ್ಲದೆ ಅವರ ದನಿ ದೇಶದ ಹತ್ತಾರು ಭಾಷೆಗಳಲ್ಲಿ, ಗಡಿಯಾಚೆಗೂ ಸಂಗೀತದ ಹೊನಲು ಹರಿಸಿತ್ತು. ಸಂಗೀತ ಲೋಕಕ್ಕೆ ಅವರ ಕೊಡುಗೆಯನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ‘ರಿಮೆಂಬರಿಂಗ್‌ ಸುಬ್ಬುಲಕ್ಷ್ಮಿ’.

ಎಂ.ಎಸ್‌. ಸುಬ್ಬುಲಕ್ಷ್ಮಿ ಕರ್ನಾಟಕ ಶಾಸ್ತ್ರೀಯದ ಜತೆಗೆ, ತಮಿಳು, ಉರ್ದು, ತಮಿಳು, ಮಲಯಾಳಂ, ಬೆಂಗಾಲಿ, ಸಂಸ್ಕೃತ, ಗುಜರಾತಿ, ಕನ್ನಡ, ತೆಲುಗು ಮತ್ತು ಮರಾಠಿ ಭಾಷೆಗಳಲ್ಲಿಯೂ ಹಾಡಿದವರು. ‘ರಿಮೆಂಬರಿಂಗ್‌ ಸುಬ್ಬುಲಕ್ಷ್ಮಿ’ ಅವರು ಎಲ್ಲಾ ಭಾಷೆಗೂ ನೀಡಿರುವ ಕೊಡುಗೆಗಳನ್ನು ಒಂದೇ ವೇದಿಕೆಯಲ್ಲಿ ನೆನಪಿಸಿಕೊಳ್ಳುವ ಪ್ರಯತ್ನ. ಎಂ.ಎಸ್‌. ಅವರ ಹತ್ತೂ ಭಾಷೆಯ ಆಯ್ದ ಪ್ರಮುಖ ಗೀತೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವವರು ಡಾ. ದೀಪ್ತಿ ನವರತ್ನ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಡಾ. ದೀಪ್ತಿ ನವರತ್ನ ಅವರು ನೆಲೆಸಿರುವುದು ಅಮೆರಿಕದ ಬಾಸ್ಟನ್‌ನಲ್ಲಿ. ನಾಲ್ಕನೇ ವಯಸ್ಸಿನಿಂದಲೇ ಶಾಸ್ತ್ರೀಯ ಸಂಗೀತದ ಕಲಿಕೆಗೆ ತೊಡಗಿದ ಅವರು ನರವಿಜ್ಞಾನ ವಿಭಾಗದಲ್ಲಿ ಪದವಿ ಪಡೆಯಲೆಂದು ಅಮೆರಿಕಕ್ಕೆ ತೆರಳಿದವರು. ರೋಹಿಣಿ ಮಂಜುನಾಥ್‌ ಮತ್ತು ಟಿ.ವಿ. ಗೋಪಾಲಕೃಷ್ಣನ್‌ ಅವರ ಬಳಿ ಶಾಸ್ತ್ರೀಯ ಸಂಗೀತ ಕಲಿಕೆ. ಅವರು ಆಕಾಶವಾಣಿ ಕಲಾವಿದೆಯೂ ಹೌದು. 1999 ಮತ್ತು 2000ದಲ್ಲಿ ಆಕಾಶವಾಣಿ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಲಘು ಶಾಸ್ತ್ರೀಯ ಸಂಗೀತ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದವರು. ಭಾರತ ಸರ್ಕಾರದ ರಾಷ್ಟ್ರೀಯ ಯುವ ಉತ್ಸವದಲ್ಲಿ ಕಲಾ ವಿಭಾಗದ ಯುವ ರಾಯಭಾರಿ ಗರಿಯೂ ಅವರ ಮುಡಿಗೇರಿತ್ತು. ಕೇಂಬ್ರಿಡ್ಜ್ ಆರ್ಟ್ಸ್‌ ಆ್ಯಂಡ್‌ ಕೌನ್ಸಿಲ್‌ ಗ್ರ್ಯಾಂಟ್‌, ಸೈಂಟ್‌ ಬೊಟೊಲ್ಫ್‌ ಫೌಂಡೇಷನ್‌ನ ಎಮರ್ಜಿಂಗ್ ಆರ್ಟಿಸ್ಟ್‌ ಅವಾರ್ಡ್‌, ಉತಾಹ್‌ ಆರ್ಟ್ಸ್‌ ಕೌನ್ಸಿಲ್‌ನಿಂದ ಟ್ರೆಡಿಷನ್‌ ಆಂಡ್‌ ಎತ್ನಿಕ್‌ ಆರ್ಟ್ಸ್‌ ಫೆಲೋಶಿಪ್‌ಗಳನ್ನು ಪಡೆದಿದ್ದಾರೆ.

ನ್ಯೂಯಾರ್ಕ್‌ನ ಏಷ್ಯಾ ಸೊಸೈಟಿ, ಬಾಸ್ಟನ್‌ನ ಮ್ಯೂಸಿಯಂ ಆಫ್‌ ಫೈನ್‌ ಆರ್ಟ್ಸ್‌, ನ್ಯೂ ಹೆವೆನ್‌ನ ಯಾಲೆ ಸ್ಕೂಲ್‌ ಆಫ್‌ ಮ್ಯೂಸಿಕ್‌ ಮುಂತಾದೆಡೆ ಕಛೇರಿಗಳನ್ನು ನಡೆಸಿದ್ದಾರೆ. ಅವರ ಮೊದಲ ಸಂಗೀತ ಆಲ್ಬಮ್‌ ‘ಆರೋಹಮ್‌’ 2010ರಲ್ಲಿ ಹೊರಬಂದಿದೆ. ಓದಿಗೆಂದು ಅಮೆರಿಕಕ್ಕೆ ತೆರಳಿದ್ದಾಗ ಸಂಗೀತ ಕಲಿಯುವ ಸಲುವಾಗಿ ರಜೆಯ ಅವಧಿಯಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ಪ್ರಸ್ತುತ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನಲ್ಲಿ ಸಂಗೀತದ ಮೂಲಕ ಆಟಿಸಂಗೆ ಚಿಕಿತ್ಸೆ ನೀಡುವುದರ ಕುರಿತು ಸಂಶೋಧನೆ ನಡೆಸುತ್ತಿರುವ ಅವರು ಸೆ. 23ರಂದು ನಗರದ ಅಲೈನ್ಸ್‌ ಫ್ರಾನ್ಸೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇದೇ ವಿಷಯದ ಕುರಿತು ಉಪನ್ಯಾಸವನ್ನೂ ನೀಡಲಿದ್ದಾರೆ. ಎಂ.ಎಸ್‌. ಅವರನ್ನು ನೆನಪಿಸಿಕೊಳ್ಳುವ ಅವರ ಪ್ರಯತ್ನ ಈ ಕಾರ್ಯಕ್ರಮಕ್ಕೆ ಸೀಮಿತವಲ್ಲ. ಮೈಸೂರು, ಅಮೆರಿಕದ ಬಾಸ್ಟನ್‌ ಮತ್ತು ನ್ಯೂಯಾರ್ಕ್‌ಗಳಲ್ಲಿಯೂ ಈ ಕಾರ್ಯಕ್ರಮ ನಡೆಯಲಿದೆ.

ಅಮೆರಿಕನ್ನರಿಗೆ ರವಿಶಂಕರ್‌, ಜಾಕೀರ್‌ ಹುಸೇನ್‌ ಮುಂತಾದವರ ಮೂಲಕ ಹಿಂದೂಸ್ತಾನಿ ಸಂಗೀತ ಚಿರಪರಿಚಿತ. ಆದರೆ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಶಾಸ್ತ್ರೀಯ ಅಷ್ಟಾಗಿ ಪರಿಚಿತವಲ್ಲ ಎನ್ನುವ ಅವರು, ಕರ್ನಾಟಕ ಶಾಸ್ತ್ರೀಯವನ್ನು ಅಲ್ಲಿನ ಜನರಿಗೆ ತಲುಪಿಸುವ ಸಲುವಾಗಿ ‘ಕರ್ನಾಟಿಕ್‌ ಆಲ್ಕೆಮಿ ಪ್ರಾಜೆಕ್ಟ್‌’ ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ.

‘ಎಂ.ಎಸ್‌. ಅವರ ಸಂಗೀತ ದಕ್ಷಿಣ ಭಾರತಕ್ಕೆ ಸೀಮಿತವಾಗಿರಲಿಲ್ಲ. ಅವರಲ್ಲಿ ಸಂಪ್ರದಾಯದ ಕಟ್ಟುಪಾಡುಗಳೂ ಇರಲಿಲ್ಲ. ತಮ್ಮ ಎಲ್ಲಾ ಸಮಕಾಲೀನ ಸಂಗೀತಗಳ ಮೇಲೆ ಪ್ರಯೋಗಗಳನ್ನು ಮಾಡಿದರು. ರವೀಂದ್ರನಾಥ ಟ್ಯಾಗೋರರ ಪ್ರೇಮಗೀತೆಗಳನ್ನು ಹಾಡಿದರು, ಗುಜರಾತಿ ಭಜನೆಗಳಿಗೂ ದನಿಯಾದರು. ಕನ್ನಡದಲ್ಲಿ ‘ಅಂತಃಪುರ ಗೀತೆ’ಗಳನ್ನೂ ಹಾಡಿದರು. ಇಂಗ್ಲಿಷ್‌ ಹಾಗೂ ಜಪಾನಿ ಹೈಕುಗಳನ್ನು ಸಹ ಹಾಡಿದರು. ಅವುಗಳನ್ನು ತಮ್ಮದೇ ನಿರ್ಮಾಣದ ಆಲ್ಬಮ್‌ಗಳನ್ನಾಗಿ ಹೊರತಂದರು. 1950ರ ದಶಕದಲ್ಲಿಯೇ ಅಮೆರಿಕದಲ್ಲಿ ಅವರ ಕಂಠ ಜನಪ್ರಿಯವಾಗಿತ್ತು. ಗಡಿಯಾಚೆಗೆ ನಮ್ಮ ಸಂಗೀತವನ್ನು ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿ ಅವರು. ಅವರ ನೆನಪಿನಲ್ಲಿ ಅದನ್ನು ಮುಂದುವರಿಸುವ ಪುಟ್ಟ ಪ್ರಯತ್ನ ನನ್ನದು’ ಎಂದು ಹೇಳುತ್ತಾರೆ ದೀಪ್ತಿ ನವರತ್ನ.

‘ಶಾಸ್ತ್ರೀಯ ಸಂಗೀತದ ಮೂಲವಾದರೂ, ಎಲ್ಲಾ ಮಾದರಿಯ ಸಂಗೀತಗಳನ್ನೂ ಅವರು ಗೌರವಿಸುತ್ತಿದ್ದರು. ಬಹುಭಾಷೆಯ ಸಂಗೀತಕ್ಕೆ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಅಪರೂಪದ ಅವಕಾಶವಿದು. ಇದನ್ನು ಗಡಿಯಾಚೆಗೂ ಕೊಂಡೊಯ್ಯುವ ಇರಾದೆ’ ಎನ್ನುತ್ತಾರೆ ಅವರು. ಎಂ.ಎಸ್‌. ಸುಬ್ಬುಲಕ್ಷ್ಮಿ ಅವರನ್ನು ನೆನಪಿಸಿಕೊಳ್ಳುವ ‘ರಿಮೆಂಬರಿಂಗ್‌ ಸುಬ್ಬುಲಕ್ಷ್ಮಿ’, ಇಂದಿರಾಗಾಂಧಿ ನ್ಯಾಷನಲ್‌ ಸೆಂಟರ್‌ ಫಾರ್‌ ಆರ್ಟ್ಸ್‌ನ ಸಹಯೋಗದಲ್ಲಿ ನಡೆಯಲಿದೆ.

ದಿನಾಂಕ: ಸೆಪ್ಟೆಂಬರ್‌ 22
ಸಮಯ: ಸಂಜೆ 6.30ರಿಂದ8.30
ಸ್ಥಳ: ಅಲೈನ್ಸ್‌ ಫ್ರಾನ್ಸೆ, ವಸಂತನಗರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT