ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮನಾ ಹೆಗಡೆ ಪದಚ್ಯುತಿಗೆ ಆಗ್ರಹ

Last Updated 7 ಸೆಪ್ಟೆಂಬರ್ 2015, 19:48 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪರ ಹಾಗೂ ಸಂತ್ರಸ್ತೆಯ ವಿರುದ್ಧ ಸಾರ್ವಜನಿಕ ಹೇಳಿಕೆ ನೀಡಿದ ಮಹಿಳಾ ಆಯೋಗದ ಸದಸ್ಯೆ ಸುಮನಾ ಹೆಗಡೆ ಅವರನ್ನು  ಪದಚ್ಯುತಿಗೊಳಿಸಬೇಕು ಎಂದು ಜನವಾದಿ ಸಂಘಟನೆ ಆಗ್ರಹಿಸಿದೆ.

ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಜನವಾದಿ ಸಂಘಟನೆ, ಸೆಪ್ಟೆಂಬರ್ 4ರಂದು ಬೆಂಗಳೂರಿನಲ್ಲಿ   ಕಾರ್ಯಕ್ರಮವೊಂದರಲ್ಲಿ  ಭಾಗವಹಿಸಿದ್ದ  ಸುಮನಾ ಹೆಗಡೆ, ‘ಮಾಧ್ಯಮದಲ್ಲಿ ಸುದ್ದಿಯಾಗಲು, ಪ್ರತಿಷ್ಠಿತರ ಚಾರಿತ್ರ್ಯ ವಧೆ ಮಾಡಲು ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದರಿಂದ ಮಠದ ಭಕ್ತರಿಗೆ ನೋವಾಗಿದೆ.  ದೂರು ನೀಡುವ  ಮಹಿಳೆಯರು  ಸುದ್ದಿಯಾಗುವ ಹಪಾಹಪಿಯಿಂದ ಈ ಕೆಲಸಕ್ಕೆ ಮುಂದಾಗುತ್ತಾರೆ’ ಎಂದು ಹೇಳಿಕೆ ನೀಡಿರುತ್ತಾರೆ.

ಇದೇ ವೇದಿಕೆಯಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿಯವರು,  ಸಂತ್ರಸ್ತ ಮಹಿಳೆಯರು ಹಾಗೂ ಅವರ ಪರ ಹೋರಾಟ ನಡೆಸುವ ಮಹಿಳಾ ಸಂಘಟನೆಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಸಂತ್ರಸ್ತ ಮಹಿಳೆಯರ ಪರ ನಿಂತವರನ್ನು ‘ಶೂರ್ಪನಖಿಯರು’ ಎಂದು ನಿಂದಿಸಿದ್ದಾರೆ.

ಆಯೋಗದ  ಸದಸ್ಯೆಯಾಗಿರುವ ಸುಮನಾ ಹೆಗಡೆಯವರು ಈ ಮಾತುಗಳನ್ನು ಖಂಡಿಸಿಲ್ಲ.  ಇಂತಹ ಮಹಿಳಾವಿರೋಧಿ ಚಿಂತನೆಯುಳ್ಳ ಸುಮನಾ ಹೆಗಡೆಯವರ ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸದಸ್ಯ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದು  ಸಂಘಟನೆ ಒತ್ತಾಯಿಸಿದೆ.

ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ
‘ಮಹಿಳಾ ಆಯೋಗದ ಸದಸ್ಯರಾರೂ ಇಂಥ ಸಂಸ್ಥೆಗಳ ವೇದಿಕೆ ಹಂಚಿಕೊಳ್ಳಬಾರದು ಎಂಬ ನಿರ್ದೇಶನವನ್ನು ಮೊದಲೇ ನೀಡಲಾಗಿತ್ತು. ಆದರೂ, ಸುಮನ್‌ ಹೆಗಡೆಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿ  ಮಹಿಳಾ ವಿರೋಧಿ ಹೇಳಿಕೆ ನೀಡಿರುವುದು ನನಗೂ ಅಚ್ಚರಿ ತಂದಿದೆ.

ಅವರ ಹೇಳಿಕೆಯನ್ನು ಖಂಡಿಸಿ ಅನೇಕರು ಆಯೋಗಕ್ಕೆ ಕರೆ ಮಾಡಿದ್ದಾರೆ. ಜನವಾದಿ ಸಂಘಟನೆಯವರು ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುವುದು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT