ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮನ್‌ ಹೆಗಡೆ ಪದಚ್ಯುತಿಗೆ ಆಗ್ರಹ

Last Updated 10 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ವಿರುದ್ಧವಾಗಿ ಹೇಳಿಕೆ ನೀಡಿರುವ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಸುಮನ್‌ ಹೆಗಡೆ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆಗಳು ಆಯೋಗದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದವು.

ಈ ವೇಳೆ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ‘ಸ್ವಾಮೀಜಿ ವಿರುದ್ಧ ದಾಖಲಾಗಿರುವ ಒಂದು ಪ್ರಕರಣ ನ್ಯಾಯಾಲಯದಲ್ಲಿದೆ. ಇನ್ನೊಂದು ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಹೀಗಿರುವಾಗ ಸುಮನ್‌, ಆರೋಪಿಯ ಪರವಾಗಿ ಮತ್ತು ಸಂತ್ರಸ್ತೆಯ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಇಂತಹವರು ಮಹಿಳಾ ಆಯೋಗದಲ್ಲಿ ಇರಲು ಅರ್ಹರಲ್ಲ’ ಎಂದು ದೂರಿದರು.

ಮಹಿಳಾ ಸಂವೇದನೆಗಳೇ ಇಲ್ಲದ ಇಂತಹವರನ್ನು ಯಾವ ಕಾರಣಕ್ಕೂ ಮಹಿಳಾ ಆಯೋಗದಲ್ಲಿ ಮುಂದುವರಿಸಬಾರದು. ಕೂಡಲೇ  ಅವರನ್ನು ಸದಸ್ಯತ್ವ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಿ  ಮಾತನಾಡಿ, ‘ಸಂತ್ರಸ್ತ ಮಹಿಳೆ ಗಿರಿನಗರದ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೂ ಮುನ್ನ ಮಹಿಳಾ ಆಯೋಗದ ಮುಂದೆ ಹೋಗಿದ್ದರು.  ಆದರೆ, ಸುಮನ್ ಮಠದ ಏಜೆಂಟರಂತೆ ವರ್ತಿಸಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಆಯೋಗದ ಇಂತಹ ಸದಸ್ಯರಿಂದ  ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದರು.

ಸುಮನ್‌ ಅವರನ್ನು ಕೂಡಲೇ ಮಹಿಳಾ ಆಯೋಗದ ಸದಸ್ಯತ್ವ ಸ್ಥಾನದಿಂದ ಪದಚ್ಯುತಿಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸಮತಾ ಸೈನಿಕ ದಳದ ಮಹಿಳಾ ಘಟಕ, ವುಮೆನ್ಸ್‌ ವಾಯ್ಸ್‌, ಮಹಿಳಾ ಸಾಂಸ್ಕೃತಿಕ ಸಂಘಟನೆ, ಭಾರತೀಯ ಮಹಿಳಾ ಒಕ್ಕೂಟ, ಮಹಿಳಾ ಮುನ್ನಡೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ನಗರದಲ್ಲಿ ಇತ್ತೀಚೆಗೆ  ‘ನಾರಿ ಸುರಕ್ಷಾ ಸಮಿತಿ’ ಏರ್ಪಡಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ ಆಯೋಗದ ಸದಸ್ಯೆ ಸುಮನ್‌, ‘ಮಾಧ್ಯಮದಲ್ಲಿ ಸುದ್ದಿಯಾಗಲು, ಪ್ರತಿಷ್ಠಿತರ ಚಾರಿತ್ರ್ಯ ವಧೆ ಮಾಡಲು ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ.  ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದರಿಂದ ಮಠದ ಭಕ್ತರಿಗೆ ನೋವಾಗಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT