ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತಾ ಮಾರ್ಗಸೂಚಿ: ಆದೇಶಕ್ಕಷ್ಟೇ ಸೀಮಿತ

Last Updated 5 ಅಕ್ಟೋಬರ್ 2015, 20:36 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರ, ದರೋಡೆ, ಹಲ್ಲೆಯಂತಹ ಪ್ರಕರಣ ನಡೆದಾಗ ಸಾರ್ವಜನಿಕರ ಸುರಕ್ಷತೆಗೆ ಮಾರ್ಗಸೂಚಿ ಗಳನ್ನು ಪ್ರಕಟಿಸುವ ನಗರ ಪೊಲೀಸರು, ಅಂಥ ಮತ್ತೊಂದು ಕೃತ್ಯ ನಡೆಯುವ ವರೆಗೂ ‘ಮಾರ್ಗಸೂಚಿಗಳ ಪಾಲನೆ’ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಪರಾಧ ಕೃತ್ಯಗಳ ನಿಯಂತ್ರಣ ಹಾಗೂ ನಾಗರಿಕರ ಸುರಕ್ಷತೆ ದೃಷ್ಟಿ ಯಿಂದ ಎಟಿಎಂ ಘಟಕ, ಶಾಲಾ–ಕಾಲೇಜು, ಪೇಯಿಂಗ್ ಗೆಸ್ಟ್‌ ಕಟ್ಟಡ, ಶಾಲಾ ವಾಹನಗಳು, ಟ್ಯಾಕ್ಸಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಪೊಲೀಸರು ‌ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದ್ದರು. ಅವುಗಳನ್ನು ಪಾಲಿಸಲು ಒಂದೆರಡು ತಿಂಗಳು ಗಡುವನ್ನು ಸಹ ಕೊಟ್ಟಿದ್ದರು. ಆದರೆ, ಯಾವ ಸೇವೆಯಲ್ಲೂ ಆ ಮಾರ್ಗಸೂಚಿ ಸಂಪೂರ್ಣ ಪಾಲನೆಯಾಗಿಲ್ಲ. ಎಷ್ಟರ ಮಟ್ಟಿಗೆ ಆದೇಶ ಪಾಲನೆಯಾಗಿದೆ ಎನ್ನುವ  ಬಗ್ಗೆ ಪೊಲೀಸರಿಗೂ ಸ್ಪಷ್ಟ ಚಿತ್ರಣ ಇಲ್ಲ.

ಅಪರಾಧ ಕೃತ್ಯಗಳ ಬಗ್ಗೆ ನಾಗರಿಕರು ಪ್ರತಿಭಟಿಸಿದಾಗ, ‘ಮತ್ತೆ ಇಂಥ ಪ್ರಕರಣ ಮರುಕಳಿಸಿದಂತೆ ಎಚ್ಚರ ವಹಿಸುತ್ತೇವೆ’ ಎಂಬ ಸಿದ್ಧ ಉತ್ತರ ಪೊಲೀಸರಿಂದ ಸಿಗುತ್ತದೆ. ಆದರೆ, ಕಾರ್ಯರೂಪದ ಬಗ್ಗೆ ಪೊಲೀಸರನ್ನು ಕೇಳಿದರೆ, ‘ಬಂದೋಬಸ್ತ್‌, ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣ ಭೇದಿಸುವುದು ಸೇರಿದಂತೆ ವಿಶೇಷ ಕೆಲಸಗಳೇ ಸಾಕಷ್ಟಿರುತ್ತವೆ’ ಎಂಬ ಸಬೂಬು ಸಿಗುತ್ತಿದೆ.

ವರ್ತೂರಿನ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ 2014ರ ಜುಲೈ 29ರಂದು ಸಾಮೂಹಿಕ ಅತ್ಯಾಚಾರ ನಡೆಯಿತು. ಈ ಸಂಬಂಧ ಪೊಲೀಸ್‌ ಕಮಿಷನರ್‌ ತಲೆದಂಡ ಕೂಡ ಆಯಿತು. ಆ ನಂತರ ನಗರ ಪೊಲೀಸ್ ಮುಖ್ಯಸ್ಥರ ಸ್ಥಾನಕ್ಕೆ ಬಂದ ಎಂ.ಎನ್. ರೆಡ್ಡಿ, ‘ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ’ಗೆ 14 ಅಂಶಗಳ ಮಾರ್ಗಸೂಚಿಯನ್ನು  ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಪ್ರಕಟಿಸಿದ್ದರು. ಆದರೆ, ಅವರ ಅಧಿಕಾರಾವಧಿ ಮುಗಿದು ಎನ್‌.ಎಸ್‌. ಮೇಘರಿಕ್‌ ಅವರು ಕಮಿಷನರ್‌ ಆಗಿ ಬಂದರೂ ಸಿ.ಸಿ ಕ್ಯಾಮೆರಾ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆ ಹೊರತುಪಡಿಸಿ ಮಾರ್ಗಸೂಚಿಯ ಬಹುತೇಕ ಅಂಶಗಳು  ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 

ದೆಹಲಿಯಲ್ಲಿ  2014 ಡಿ.8ರಂದು ಟ್ಯಾಕ್ಸಿಯಲ್ಲಿ ಯುವತಿ ಮೇಲೆ ಲೈಂಗಿಕ ಕಿರುಕುಳ ನಡೆದಾಗ, ನಗರದಲ್ಲೂ ಟ್ಯಾಕ್ಸಿಗಳ ಮೇಲೆ ಗದಾಪ್ರಹಾರ ಮಾಡಲಾಯಿತು. ಡಿ.11ರಂದು ಪತ್ರಿಕಾಗೋಷ್ಠಿ ಕರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪೊಲೀಸರ ಸಲಹೆ ಪಡೆದು ಟ್ಯಾಕ್ಸಿಗಳಿಗೆ 25 ಅಂಶಗಳ ಮಾರ್ಗಸೂಚಿ ವಿಧಿಸಿದರು. ಜತೆಗೆ ತಮ್ಮ ವಾಹನಗಳ ಚಾಲಕರ ವಿವರಗಳನ್ನು ಸಂಗ್ರಹಿಸಿಕೊಳ್ಳಲು ಇದೇ ಜ.30ರವರೆಗೆ ಗಡುವು ನೀಡಿದ್ದರು. 

ಆದರೆ, ಸಿಟಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಟಿಎಂ ಯಂತ್ರಕ್ಕೆ ತುಂಬಲು  66 ಲಕ್ಷ ತಂದಿದ್ದ ಚಾಲಕ, ವಾಹನದೊಂದಿಗೆ ಪರಾರಿಯಾಗಿದ್ದ. ಆತನ ಪೂರ್ವಾಪರದ ಬಗ್ಗೆ ಸಂಸ್ಥೆ ಬಳಿ ಮಾಹಿತಿಯೇ ಇರಲಿಲ್ಲ. ಕೋನಪ್ಪನ ಅಗ್ರಹಾರದಲ್ಲಿ ಜೂನ್‌ 7ರ ರಾತ್ರಿ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ನುಗ್ಗಿದ್ದ ಶಿವರಾಮರೆಡ್ಡಿ ಎಂಬಾತ, ಚಾಕುವಿನಿಂದ ಬೆದರಿಸಿ ಯುವತಿಯ ಚಿನ್ನದ ಸರ ದೋಚಿದ್ದ. ಮರುದಿನ ಬೇಗೂರಿನ ಪಿ.ಜಿ.ಕಟ್ಟಡಕ್ಕೆ ನುಗ್ಗಿದ್ದ ಅದೇ ಆರೋಪಿ, ಸಾಫ್ಟ್‌ವೇರ್ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದ.

ಈ ಪ್ರಕರಣಗಳ ನಂತರ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ ಸೇರಿದಂತೆ ಸುರಕ್ಷತಾ ಕ್ರಮ ಪಾಲಿಸಲು ನಗರದ ಎಲ್ಲ ಪಿ.ಜಿ.ಕಟ್ಟಡಗಳ ಮಾಲೀಕರಿಗೂ ಸೂಚಿಸಿದರು. ನಂತರ ತಮ್ಮ ಠಾಣಾ ವ್ಯಾಪ್ತಿಯ ಪಿ.ಜಿ.ಕಟ್ಟಡಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಇದೂ ಸಮರ್ಪಕವಾಗಿ ನಡೆಯಲಿಲ್ಲ.

*
ಔರಾದ್‌ಕರ್‌ ತಲೆದಂಡ ಆಗಿತ್ತು
ನಗರದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ನಿರ್ವಹಣೆಯಲ್ಲಿ ವಿಫಲರಾದ ಕಾರಣ ಕಳೆದ ವರ್ಷ ಜುಲೈಯಲ್ಲಿ ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಅವರ ತಲೆದಂಡ ಆಗಿತ್ತು.

ಕಳೆದ ವರ್ಷದ ಆರಂಭದಿಂದ ಜೂನ್‌ 30 ರವರೆಗೆ ನಗರದಲ್ಲಿ ಒಟ್ಟು 60 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಮದುವೆಯಾಗುವುದಾಗಿ ನಂಬಿಸಿ ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಗಳು 44. ಪರಿಚಿತರೇ ನಡೆಸಿ­ರುವ ಅತ್ಯಾಚಾರ ಪ್ರಕರಣಗಳು ಎಂಟು. ಅಪರಿಚಿತರಿಂದ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾದ ನಾಲ್ಕು  ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್‌ ವೈಫಲ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮುಗಿ ಬಿದ್ದಿದ್ದವು. ಜುಲೈಯಲ್ಲಿ ಔರಾದ್‌ಕರ್ ಅವರನ್ನು ವರ್ಗಾಯಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT