ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆ ಕಾಪಾಡಿ

Last Updated 26 ಜೂನ್ 2014, 19:30 IST
ಅಕ್ಷರ ಗಾತ್ರ

ದೆಹಲಿಯಿಂದ ಅಸ್ಸಾಂನ ದಿಬ್ರುಗಡಕ್ಕೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಬುಧವಾರ ಹಳಿತಪ್ಪಿದ ಕಾರಣ ನಾಲ್ವರು ಸತ್ತಿದ್ದಾರೆ. ಅದೇ ದಿನ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆ­ಯಲ್ಲಿ ಸರಕು ಸಾಗಣೆ ರೈಲಿನ 18 ವ್ಯಾಗನ್‌ಗಳು ಹಳಿತಪ್ಪಿವೆ.

ಕಳೆದ ಒಂದು ತಿಂಗ­ಳಲ್ಲಿ ರೈಲು ಅಪಘಾತ ಸಂಭವಿಸುತ್ತಿರುವುದು ಇದು ಎರ­ಡನೇ ಬಾರಿ. ಮೇ 26ರಂದು ಗೋರಖ್ ಧಾಮ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಸುಮಾರು 25 ಜನ ಸತ್ತಿದ್ದರು. ಈಗ ಬಿಹಾರದಲ್ಲಿ ನಡೆ­ದಿರುವ ಈ ಅಪ­ಘಾತಗಳ ಹಿಂದೆ ನಕ್ಸಲೀಯರ ವಿಧ್ವಂಸಕ ಕೃತ್ಯದ ಶಂಕೆ ವ್ಯಕ್ತವಾಗಿದ್ದು ಅದು ತನಿ­ಖೆಯಿಂದ ದೃಢಪಡಬೇಕಿದೆ. ಸರಕು ಸಾಗಣೆ ರೈಲು ಹಳಿ ತಪ್ಪಿದಾಗ ಸ್ಫೋಟ ಕೂಡ ಸಂಭವಿಸಿರುವುದು ಈ ಅನುಮಾನವನ್ನು ಹೆಚ್ಚಿಸಿದೆ. ಅಪ­ಘಾತ ಸಂಭವಿಸಿದಾಗಲೆಲ್ಲ ಪರಿಹಾರದ ಘೋಷಣೆ, ಗಾಯ­ಗೊಂಡವರಿಗೆ ಸಾಂತ್ವನ, ತನಿಖೆ ಇವೆಲ್ಲ ಮಾಮೂಲಿ ಕ್ರಮಗಳಾಗಿವೆ. ಆದರೆ ಅಪ­ಘಾತಗಳನ್ನು ತಡೆಯಬೇಕಾದುದು ಮುಖ್ಯ. ಇದಕ್ಕಾಗಿ ಹೆಚ್ಚಿನ ಮುನ್ನೆಚ್ಚರಿಕೆಗಳು ಅಗತ್ಯ.

ನಕ್ಸಲೀಯರು ಸಕ್ರಿಯವಾಗಿರುವಂತಹ ಸ್ಥಳಗಳಲ್ಲಿ ರೈಲ್ವೆಯಂತಹ ಸಾರ್ವ­ಜನಿಕ ಸಾರಿಗೆ ವ್ಯವಸ್ಥೆಗೆ ಬಲವಾದ ಭದ್ರತೆ ಅತ್ಯಗತ್ಯ. ಅತಿ ಗಣ್ಯ ವ್ಯಕ್ತಿ ರೈಲಿ­ನಲ್ಲಿ ಪ್ರಯಾಣಿಸುವಾಗ ಮುಂಚಿತವಾಗಿ ಪೈಲಟ್ ಎಂಜಿನ್ ಓಡಿಸಿ ಹಳಿಗಳ ಸುರಕ್ಷತೆ ಪರೀಕ್ಷಿಸುವ ಕ್ರಮ ಇದೆ. ಈ ಘಟನೆಗೆ ಸಂಬಂಧಿಸಿದಂತೆ ಹೇಳು­ವುದಾ­ದಲ್ಲಿ ರೈಲ್ವೆ ಆಸ್ತಿಪಾಸ್ತಿಗಳ ಮೇಲೆ ನಕ್ಸಲೀಯರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ಗುಪ್ತಚರ ಮಾಹಿತಿ ಇತ್ತು ಎನ್ನಲಾಗಿದೆ.  ಹೀಗಾಗಿ ಪೈಲಟ್ ಎಂಜಿನ್ ಓಡಿಸಿ ಮುನ್ನೆಚ್ಚರಿಕೆ ವಹಿಸಬೇಕೆಂದು ಪೊಲೀಸ್ ಅಧಿ­ಕಾರಿ­ಯೊಬ್ಬರು ಆಗ್ರಹಪಡಿಸಿದ್ದರು. ಆದರೂ ಈ ಸಲಹೆ­ಯನ್ನು ನಿರ್ಲ­ಕ್ಷಿಸಿರುವುದು ಖಂಡನೀಯ.

ಹಳಿ ತಪ್ಪುವುದು, ಡಿಕ್ಕಿ, ಅಗ್ನಿ ಆಕ­ಸ್ಮಿಕ ಅಥವಾ ಕಾವಲುಗಾರನಿಲ್ಲದ ಲೆವೆಲ್ ಕ್ರಾಸಿಂಗ್ ಬಳಿ ಆಕಸ್ಮಿಕ ಘಟನೆಗಳು ರೈಲು ಅಪಘಾತಗಳಿಗೆ ಸಾಮಾನ್ಯವಾಗಿ ಕಾರಣವಾಗುತ್ತವೆ.  ಆದರೆ ಇಂತಹ ಅಪಘಾತಗಳಾಗದಂತೆ ಮುನ್ನೆಚ್ಚರಿಕೆಗಳನ್ನು ವಹಿಸುವುದು ಸಾಧ್ಯ.  ಈ ಬಗ್ಗೆ  ರೈಲ್ವೆ ಸಚಿವರು ತುರ್ತು ಪರಿಶೀಲನೆ ನಡೆಸುವುದು ಒಳ್ಳೆ­ಯದು. ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ, ಕಟ್ಟುನಿಟ್ಟಿನ ಕ್ರಮಗಳಾಗಲಿ ಸತ್ತ­ವರನ್ನು ವಾಪಸ್ ಕರೆತರಲಾಗದು ಎಂಬುದು ನೆನಪಿ­ರ­ಬೇಕು.

ರೈಲು ಪ್ರಯಾಣ ಸುರಕ್ಷಿತ ಎಂಬ ಭಾವನೆ ಜನರಲ್ಲಿ ತುರ್ತಾಗಿ ಮೂಡಿಸಲು ಅಗತ್ಯ ಕ್ರಮ­ಗಳನ್ನು ಕೈಗೊಳ್ಳಬೇಕು. ದಿನನಿತ್ಯ ಅತಿ ಹೆಚ್ಚಿನ ಪ್ರಯಾಣಿಕರು ಭಾರತ­ದಲ್ಲಿ ರೈಲುಗಳಲ್ಲೇ ಸಂಚರಿಸುತ್ತಾರೆ. ಭಾರತ­ದಲ್ಲಿ­ರುವ 64,000 ಕಿ.ಮೀ. ವ್ಯಾಪ್ತಿಯ ರೈಲ್ವೆ ಜಾಲದ ರಕ್ಷಣೆ ಕ್ಲಿಷ್ಟಕರ ಎಂಬುದು ನಿಜ. ಆದರೆ ರೈಲ್ವೆ ಪ್ರಯಾಣ ಸುರಕ್ಷತೆಗೆ ತಂತ್ರಜ್ಞಾನ ಸೇರಿದಂತೆ ಎಲ್ಲಾ ಬಗೆಯ ಕ್ರಮಗಳೂ ಬಳಕೆಯಾಗಬೇಕಾದುದು ಅತ್ಯವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT